ಹೈದರಾಬಾದ್: ಅಪ್ರಾಪ್ತ ವಯಸ್ಸಿನ ಮಕ್ಕಳೂ ಲೈಂಗಿಕ ಅಪರಾಧಗಳನ್ನು ಭಾಗಿಯಾಗುವ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿದೆ. ಹೈದರಾಬಾದ್‌ನಲ್ಲಿ ನಡೆದ ಒಂದು ಘಟನೆಯಂತೂ ಮಕ್ಕಳ ಮನಸ್ಥಿತಿಯ ಬಗ್ಗೆ ಇನ್ನಷ್ಟು ಆತಂಕವನ್ನು ಸೃಷ್ಟಿಸುತ್ತದೆ. 17 ವರ್ಷದ ಒಬ್ಬ ಬಾಲಕಿಯ ಮೇಲೆ ಪಿಯುಸಿ ಓದುತ್ತಿರುವ ಹುಡುಗರ ತಂಡವೊಂದು ಸಾಮೂಹಿಕ ಅತ್ಯಾಚಾರ ಮಾಡಿದೆ. ಮರ್ಸಿಡಿಸ್ ಕಾರಿನಲ್ಲಿ ನಡೆದ ಈ ಕೃತ್ಯದಲ್ಲಿ ಭಾಗಿಯಾದ ಆರೋಪಿಗಳಲ್ಲಿ ಒಬ್ಬ ಶಾಸಕರ ಪುತ್ರನೂ ಇದ್ದಾನೆ. ಉಳಿದವರು ಕೂಡಾ ಪ್ರಭಾವಿಗಳು, ಶ್ರೀಮಂತರ ಮಕ್ಕಳೇ.
ಹದಿನೇಳರ ಹರೆಯದ ಈ ಬಾಲಕಿ ಶನಿವಾರ ತನ್ನ ಗೆಳೆಯನೊಬ್ಬನ ಜತೆ ಪಬ್‌ಗೆ ಹೋಗಿದ್ದಳು. ಈ ನಡುವೆ ಯಾವುದೋ ಕಾರಣಕ್ಕೆ ಗೆಳೆಯ ಬೇಗನೆ ಅಲ್ಲಿಂದ ಹೊರಟಿದ್ದ. ಅಲ್ಲೇ ಉಳಿದ ಬಾಲಕಿಗೆ ಅಲ್ಲಿ ಬಾಲಕರ ತಂಡವೊಂದು ಪರಿಚಯವಾಗಿದೆ. ಅವರು ಆಕೆಯನ್ನು ಮನೆಗೆ ಬಿಡುವುದಾಗಿ ಹೇಳಿದ್ದಾರೆ. ಆಕೆಯೂ ಒಪ್ಪಿದ್ದಾಳೆ. ಮರ್ಸಿಡಿಸ್ ಕಾರಿನಲ್ಲಿ ಅವರೆಲ್ಲರೂ ಹೊರಟಿದ್ದು, ಮೊದಲು ಒಂದು ಪೇಸ್ಟರಿ ಅಂಗಡಿಗೆ ಹೋಗಿದ್ದಾರೆ. ಅಲ್ಲಿಂದ ಮುಂದೆ ಕಾರು ಪ್ರತಿಷ್ಠಿತ, ಶ್ರೀಮಂತರ ಮನೆಗಳೇ ಇರುವ ಜ್ಯುಬಿಲಿ ಹಿಲ್ಸ್ ಕಡೆಗೆ ಹೋಗಿದೆ. ಅಲ್ಲಿ ಒಂದಿಷ್ಟು ಕತ್ತಲಿರುವ ಜಾಗದಲ್ಲಿ ಕಾರನ್ನು ನಿಲ್ಲಿಸಿದ ಹುಡುಗರು ಒಬ್ಬರಾದ ಮೇಲೊಬ್ಬರಂತೆ ಅತ್ಯಾಚಾರ ಮಾಡಿದ್ದಾರೆ ಎನ್ನಲಾಗಿದೆ. ಒಬ್ಬರು ದೌರ್ಜನ್ಯ ನಡೆಸುವಾಗ ಉಳಿದವರು ಹೊರಗಡೆ ಕಾವಲು ಕಾಯುತ್ತಿದ್ದರು ಎನ್ನಲಾಗಿದೆ.
ಕೊನೆಗೆ ಆಕೆ ಹೇಗೋ ಮನೆಗೆ ತಲುಪಿದ್ದಾಳೆ. ಆಕೆ ತುಂಬ ಬಸವಳಿದಿರುವುದು ಮತ್ತು ಕತ್ತಿನ ಭಾಗದಲ್ಲಿ ಗಾಯಗಳಿರುವುದನ್ನು ಗಮನಿಸಿದ ತಂದೆ ಏನಾಗಿದೆ ಎಂದು ವಿಚಾರಿಸಿದ್ದರು. ಪಬ್‌ನಲ್ಲಿ ಕೆಲವು ಹುಡುಗರು ತನ್ನ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆಕೆ ಹೇಳಿದ್ದಾಳೆ. ಕೂಡಲೇ ತಂದೆ ಪೊಲೀಸರಿಗೆ ದೂರು ನೀಡಿದರು. ಮೊದಲು ಅಪ್ರಾಪ್ತ ಬಾಲಕಿಯ ಮಾನಭಂಗ ಎಂಬ ಕೇಸನ್ನು ದಾಖಲಿಸಿಕೊಳ್ಳಲಾಯಿತಾದರೂ ಬಳಿಕ ಆಕೆಯನ್ನು ವಿಚಾರಿಸಿದಾಗ ಅದು ಸಾಮೂಹಿಕ ಅತ್ಯಾಚಾರ ಎನ್ನುವುದು ಸ್ಪಷ್ಟವಾಯಿತು.
ಬಾಲಕಿಗೆ ಇವರೆಲ್ಲರ ಸ್ಪಷ್ಟ ಪರಿಚಯ ಇಲ್ಲ. ಆದರೆ, ಒಬ್ಬ ಹುಡುಗನ ಹೆಸರು ಹೇಳಿದ್ದಾಳೆ ಎನ್ನಲಾಗಿದೆ. ಆದರೆ, ಸಿಸಿಟಿವಿ ಫೂಟೇಜ್ ಮತ್ತು ತಾಂತ್ರಿಕ ಸಾಕ್ಷ್ಯಗಳ ಆಧಾರದಲ್ಲಿ ಆರೋಪಿಗಳನ್ನು ಬಂಧಿಸಲಾಗುವುದು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ.
ಎಂಐಎಂ ಶಾಸಕರ ಪುತ್ರ ಭಾಗಿ?
ಈ ಘಟನೆಯಲ್ಲಿ ಅಸಾದುದ್ದೀನ್ ಓವೈಸಿ ನೇತೃತ್ವದ ಮಜ್ಲಿಸ್ – ಇ- ಇತ್ತೆಹಾದುಲ್ ಮುಸ್ಲಿಮೀನ್ (ಎಂಐಎಂ) ಪಕ್ಷದ ಶಾಸಕನ ಪುತ್ರ ಶಾಮೀಲಾಗಿದ್ದಾನೆ ಎಂದು ಬಿಜೆಪಿ ಆರೋಪಿಸಿದೆ. ದೌರ್ಜನ್ಯಕ್ಕೆ ಒಳಗಾದ ಬಾಲಕಿಯ ತಂದೆಯೇ ದೂರು ನೀಡಿದ್ದರೂ ಪೊಲೀಸರು ಇನ್ನೂ ಕ್ರಮ ಕೈಗೊಂಡಿಲ್ಲ ಎಂದು ಆಕ್ಷೇಪಿಸಿರುವ ಬಿಜೆಪಿ, ಅವರೇನೂ ಸಿಎಂ ಚಂದ್ರಶೇಖರ್ ಅಥವಾ ಅಸಾದುದ್ದೀನ್ ಓವೈಸಿಯ ಅನುಮತಿಗಾಗಿ ಕಾಯುತ್ತಿದ್ದಾರೆಯೇ ಎಂದು ಪ್ರಶ್ನಿಸಿದ್ದಾರೆ. ಇದನ್ನೂ ಓದಿ| ಬಾಂಗ್ಲಾ ಯುವತಿ ಸಾಮೂಹಿಕ ಅತ್ಯಾಚಾರ ಆರೋಪಿಗಳಿಗೆ ಶಿಕ್ಷೆ ಪ್ರಕಟ