ನವ ದೆಹಲಿ: ಖ್ಯಾತ ಪಂಜಾಬಿ ಗಾಯಕ, ಕಾಂಗ್ರೆಸ್ ನಾಯಕ ಸಿಧು ಮೂಸೆ ವಾಲಾ ಅವರನ್ನು ಮೇ 29ರಂದು ಮಾನಸ ಜಿಲ್ಲೆಯ ಜವಾಹರ್‌ಕಿಯಲ್ಲಿ ಗುಂಡಿಕ್ಕಿ ಕೊಲೆ ಮಾಡಿದ ಎಂಟು ದುಷ್ಕರ್ಮಿಗಳ ಗುರುತು ಪತ್ತೆಯಾಗಿದೆ. ಪಂಜಾಬ್ ಪೊಲೀಸರು ಅವರ ಚಿತ್ರ ಮತ್ತು ಕೆಲವು ಮಾಹಿತಿಗಳನ್ನು ಬಿಡುಗಡೆ ಮಾಡಿದ್ದಾರೆ. ಈ ಆರೋಪಿಗಳು ಪಂಜಾಬ್, ಹರಿಯಾಣ, ರಾಜಸ್ಥಾನ ಮತ್ತು ಮಹಾರಾಷ್ಟ್ರ ರಾಜ್ಯದವರಿಗೆ ಸೇರಿದವರಾಗಿದ್ದು, ಅವರಿಗಾಗಿ ಹುಡುಕಾಟ ನಡೆಯುತ್ತಿದೆ.
ಮೇ 29ರಂದು ಸಿಧು ಮೂಸೆ ವಾಲಾ ಅವರು ತಮ್ಮ ಎಂದಿನ ಗುಂಡು ನಿರೋಧಕ ಫಾರ್ಚುನರ್ ಕಾರನ್ನು ಬಿಟ್ಟು ಮಹೇಂದ್ರ ಥಾರ್ ವಾಹನದಲ್ಲಿ ತಮ್ಮ ತಂದೆಯ ಊರಾದ ಜವಾಹರ್‌ಕಿಗೆ ತೆರಳಿದ್ದರು. ಈ ವೇಳೆ ಹಿಂಬಾಲಿಸಿ ಬಂದ ದುಷ್ಕರ್ಮಿಗಳು ರಷ್ಯಾ ನಿರ್ಮಿತ ಎಕೆ-94 ರೈಫಲ್‌ನಿಂದ ಗುಂಡು ಹಾರಿಸಿದ್ದರು. ಒಟ್ಟು ಮೂವತ್ತು ಗುಂಡುಗಳನ್ನು ಹಾರಿಸಲಾಗಿದ್ದು, ಅದರಲ್ಲಿ 24 ಗುಂಡುಗಳು ಮೂಸೆ ವಾಲಾ ಅವರ ದೇಹವನ್ನು ಹೊಕ್ಕಿದ್ದವು.
ಕೆನಡಾದಲ್ಲಿರುವ ಗೋಲ್ಡಿ ಬ್ರಾರ್ ಮತ್ತು ತಿಹಾರ್ ಜೈಲಿನಲ್ಲಿರುವ ಲಾರೆನ್ಸ್ ಬಿಷ್ಣೋಯಿ ಎಂಬ ಗ್ಯಾಂಗ್ ಸ್ಟರ್‌ಗಳ ಸೂಚನೆಯಂತೆ ಈ ಕೊಲೆ ನಡೆದಿದೆ ಎಂದು ಈಗಾಗಲೇ ಸ್ಪಷ್ಟವಾಗಿದೆ. ಬ್ರಾರ್ ಮತ್ತು ಬಿಷ್ಣೋಯಿ ಅವರೇ ಇದನ್ನು ಅಧಿಕೃತವಾಗಿ ಒಪ್ಪಿಕೊಂಡಿದ್ದಾರೆ. ಈ ನಡುವೆ, ಪಂಜಾಬ್ ಸರಕಾರ 400ಕ್ಕೂ ಅಧಿಕ ಗಣ್ಯರಿಗೆ ನೀಡಿದ್ದ ಭದ್ರತೆಯನ್ನು ಹಿಂಪಡೆದುದೇ ಕೊಲೆಗೆ ಹೇತುವಾಯಿತು ಎಂಬ ಆರೋಪ ಜೋರಾಗಿ ಕೇಳಿಬಂತು. ಮೂಸೆ ವಾಲಾ ಅವರ ಭದ್ರತೆಗೆ ನೀಡಲಾಗಿದ್ದ ನಾಲ್ವರು ಪೊಲೀಸರಲ್ಲಿ ಇಬ್ಬರನ್ನು ಹಿಂದಕ್ಕೆ ಪಡೆಯಲಾಗಿತ್ತು. ಆದರೆ, ನಿಜವೆಂದರೆ ಮೂಸೆವಾಲಾ ಜವಾಹರ್‌ಕಿ ಹೋಗುವಾಗ ಆ ಇಬ್ಬರನ್ನೂ ಜತೆಗೆ ಕರೆದುಕೊಂಡು ಹೋಗಿರಲಿಲ್ಲ.
ಯಾರಿವರು ಹಂತಕರು?
ಮೇ 29ರಂದು ಮೂಸೆ ವಾಲಾ ಅವರನ್ನು ಕೊಂದ ಆರೋಪಿಗಳ ಮಾಹಿತಿಯನ್ನು ಪೊಲೀಸರು ಬಿಡುಗಡೆ ಮಾಡಿದ್ದಾರೆ. ಎಲ್ಲರೂ ಗ್ಯಾಂಗ್‌ಸ್ಟರ್‌ಗಳೇ ಆಗಿದ್ದು, ಮೊದಲೇ ಸಿದ್ಧತೆ ಮಾಡಿಕೊಂಡು ಬಂದು ಈ ಕೃತ್ಯ ನಡೆಸಿದ್ದಾರೆ.
1. ಮನ್ ಪ್ರೀತ್ ಸಿಂಗ್ ಮನ್ನು: ಪಂಜಾಬ್‌ನ ಮೋಹಾ ಜಿಲ್ಲೆಯವನು. ಹಲವು ಪ್ರಕರಣಗಳಲ್ಲಿ ಭಾಗಿಯಾಗಿ ಜೈಲು ಸೇರಿದ್ದ.
2. ಜಗರೂಪ್ ಸಿಂಗ್ ರೂಪಾ, ಅಮೃತ್ ಸರ
3. ಮನ್ನಿ, ಅಮೃತಸರ
4. ಪ್ರಿಯಾವೃತ್ ಫೌಜಿ, ಹರಿಯಾಣದ ಸೋನೆಪತ್‌ನವನು. ರಾಮ್ ಕರಣ್ ಗ್ಯಾಂಗ್‌ನಲ್ಲಿ ಶಾರ್ಪ್ ಶೂಟರ್ ಆಗಿ ಕೆಲಸ ಮಾಡಿದ್ದ. ಅವನ ಬಂಧನಕ್ಕೆ ಸಹಾಯ ಮಾಡುವ ಮಾಹಿತಿ ನೀಡಿದರೆ 25000 ರೂ. ಬಹುಮಾನ ನೀಡುವುದಾಗಿ ಪ್ರಕಟಿಸಲಾಗಿತ್ತು.
5. ಅಂಕಿತ್ ಸೇರ್ಸಾ ಜಟಿ, ಹರಿಯಾಣದ ಸೋನೆಪತ್ ನಿವಾಸಿ.
6. ಸಂತೋಷ್ ಜಾಧವ್, ಪುಣೆ, ಒಂದು ಕೊಲೆ ಕೇಸಿನಲ್ಲಿ ಭಾಗಿ
7. ಸೌರವ್ ಮಹಾಕಾಲ್, ಪುಣೆ
ಇದನ್ನೂ ಓದಿ| Moose wala murder ಹಿಂದಿರುವ ಬಿಷ್ಣೋಯಿ, ಗೋಲ್ಡಿ ಬ್ರಾರ್ ಯಾರು? ಸಿಧು ಮೇಲೇಕೆ ಅವರಿಗೆ ಸಿಟ್ಟು?