ನವ ದೆಹಲಿ: ಪಂಜಾಬಿ ನಾಯಕ ಸಿಧು ಮೂಸೆ ವಾಲಾ ಹತ್ಯೆ (Moose wala murder) ಇದೀಗ ಗ್ಯಾಂಗ್‌ವಾರ್ ತಿರುವು ಪಡೆಯುವ ಲಕ್ಷಣಗಳು ಕಾಣಿಸುತ್ತಿವೆ. ಮೂಸೆ ವಾಲಾ ಅವರ ಕೊಲೆಗೆ ಕೇವಲ ಎರಡು ದಿನದಲ್ಲೇ ಸೇಡು ತೀರಿಸಿಕೊಳ್ಳುವುದಾಗಿ ದಿಲ್ಲಿ ಮೂಲದ ಕುಖ್ಯಾತ ಗ್ಯಾಂಗ್‌ಸ್ಟರ್ ನೀರಜ್ ಬಾವನಾ ಸೋಷಿಯಲ್ ಮೀಡಿಯಾದಲ್ಲಿ ಸವಾಲು ಹಾಕಿದ್ದಾನೆ. ಈತ ಮೂಸೆ ವಾಲಾನನ್ನು ಕೊಲೆ ಮಾಡಿದ್ದೇನೆಂದು ಹೇಳುತ್ತಿರುವ ಗೋಲ್ಡಿ ಬ್ರಾರ್ ತಂಡದ ಪ್ರಧಾನ ಶತ್ರುಗಳಲ್ಲಿ ಒಬ್ಬ.
ಸಿಧು ಮೂಸೆವಾಲಾ ತನ್ನ ಹೃದಯದ ಸಹೋದರನಿದ್ದಂತೆ. ನಾವು ಇದರ ಫಲಿತಾಂಶವನ್ನು ಎರಡೇ ದಿನದಲ್ಲಿ ನೀಡುತ್ತೇವೆ ಎಂದು ಫೇಸ್ ಬುಕ್ ಸ್ಟೋರಿಯಲ್ಲಿ ಬರೆಯಲಾಗಿದೆ. ನೀರಜ್ ಬಾವನಾ ಈಗ ತಿಹಾರ್ ಜೈಲಿನಲ್ಲಿದ್ದಾನೆ. ಈ ನಡುವೆ, ನೀರಜ್ ಬಾವನಾನ ಸಹಚರನಾಗಿರುವ ಭೂಪ್ಪಿ ರಾಣಾ ಎಂಬಾತ ಕೂಡಾ ಇದೇ ಮಾದರಿಯ ಒಂದು ಪೋಸ್ಟ್ ಹಾಕಿದ್ದಾನೆ.
ʻʻಅಕಾಲಿ ದಳ ನಾಯಕ ವಿಕ್ರಮ್ ಜಿತ್ ಸಿಂಗ್ ಅಲಿಯಾಸ್ ವಿಕ್ಕಿ ಮಿಧುಖೇರಾ ಮತ್ತು ಪಂಜಾಬ್‌ನ ವಿದ್ಯಾರ್ಥಿ ನಾಯಕ ಗುರುಲಾಲ್ ಬಾರಾನ ಕೊಲೆಯಲ್ಲಿ ಸಿಧು ಮೂಸೆವಾಲಾನ ಕೈವಾಡವಿದೆ ಎಂದು ಗೋಲ್ಡಿ ಬ್ರಾರ್ ಆಪಾದಿಸಿದ್ದಾನೆ. ಆದರೆ, ಸಿಧು ಮೂಸೆವಾಲಾ ಅವರಿಗೂ ಈ ಕೊಲೆಗಳಿಗೂ ಯಾವುದೇ ಸಂಬಂಧವಿಲ್ಲ. ಅವರ ಯಾವುದೇ ಪಾತ್ರವಿಲ್ಲ. ನಾವೊಂದು ವಿಷಯವನ್ನು ಸ್ಪಷ್ಟಪಡಿಸುತ್ತಿದ್ದೇವೆ. ಸಿಧು ಮೂಸೆವಾಲಾ ಅವರ ಕೊಲೆಗೆ ಸಹಾಯ ಮಾಡಿದ ಪ್ರತಿಯೊಬ್ಬರ ಲೆಕ್ಕಾಚಾರವನ್ನೂ ತೀರಿಸಲಾಗುತ್ತದೆ. ಅವರ ಸಾವಿಗೆ ಶೀಘ್ರವೇ ಪ್ರತೀಕಾರ ತೀರಿಸಲಾಗುವುದು. ನಾವು ಅವರ ಕುಟುಂಬ ಮತ್ತು ಸ್ನೇಹಿತರಿಗೆ ಯಾವತ್ತೂ ಬೆಂಬಲವಾಗಿ ನಿಲ್ಲುತ್ತೇವೆ ಎಂದು ನೀರಜ್ ಬಾವನಾನ ಪೋಸ್ಟ್‌ನಲ್ಲಿ ಬರೆಯಲಾಗಿದೆ.
ಬಿಷ್ಣೋಯಿ ವಿಚಾರಣೆ: ಈ ನಡುವೆ, ಪಂಜಾಬ್ ಪೊಲೀಸರು ತಿಹಾರ್ ಜೈಲಿನಲ್ಲಿ ಲಾರೆನ್ಸ್ ಬಿಷ್ಣೋಯಿಯನ್ನು ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಒಳಪಡಿಸಿದೆ. ಕೆನಡಾದಲ್ಲಿರುವ ಗೋಲ್ಡಿ ಬ್ರಾರ್, ಲಾರೆನ್ಸ್ ಬಿಷ್ಣೋಯಿ ಮೂಸೆ ವಾಲಾ ಕೊಲೆ ಮಾಡಿಸಿದ್ದಾರೆ ಎನ್ನುವುದು ಈಗ ಸ್ಪಷ್ಟವಾಗಿದೆ. ಬಿಷ್ಣೋಯಿ ದಿಲ್ಲಿಯ ತಿಹಾರ್ ಜೈಲಿನಲ್ಲಿದ್ದುಕೊಂಡೇ ದಿಲ್ಲಿಯ ಗ್ಯಾಂಗೊಂದನ್ನು ಬಳಸಿಕೊಂಡು ಈ ಕೃತ್ಯ ನಡೆಸಿರುವ ಶಂಕೆ ಇದೆ. ಈ ಸಂಬಂಧ ಆರು ಮಂದಿಯನ್ನು ಈಗಾಗಲೇ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇತ್ತ ಲಾರೆನ್ಸ್ ಬಿಷ್ಣೋಯಿ ಕೋರ್ಟ್‌ಗೆ ಮನವಿಯೊಂದನ್ನು ಸಲ್ಲಿಸಿ ಪಂಜಾಬ್ ಪೊಲೀಸರು ತನ್ನ ಎನ್‌ಕೌಂಟರ್ ಮಾಡುವ ಸಾಧ್ಯತೆ ಇದೆ. ಹಾಗಾಗಿ ಅವರ ವಶಕ್ಕೆ ಒಪ್ಪಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದ. ಆದರೆ, ಕೋರ್ಟ್ ಇದಕ್ಕೆ ಒಪ್ಪಿಗೆ ನೀಡಿಲ್ಲ.
ಯಾರು ಈ ನೀರಜ್ ಬಾವನಾ?
ಪ್ರಸಕ್ತ ತಿಹಾರ್ ಜೈಲಿನಲ್ಲಿರುವ ನೀರಜ್ ಬಾವನಾ ಲಾರೆನ್ಸ್ ಬಿಷ್ಣೋಯಿ ಗ್ಯಾಂಗ್‌ನ ಬದ್ಧ ವಿರೋಧಿಯಾಗಿದ್ದಾನೆ. ಎರಡು ದಶಕಗಳ ಹಿಂದೆ ಅಪರಾಧ ಜಗತ್ತನ್ನು ಪ್ರವೇಶಿಸಿರುವ ಈತನ ವಿರುದ್ಧ ಕೊಲೆ, ಹಫ್ತಾ ವಸೂಲಿ, ಬೆದರಿಕೆ ಒಡ್ಡಿದ ಹಲವಾರು ಕೇಸುಗಳಿವೆ. ನೀರಜ್ ಹಲವಾರು ವರ್ಷಗಳಿಂದ ಜೈಲಿನಲ್ಲೇ ಇದ್ದರೂ ಆಲ್ಲಿಂದಲೇ ಗ್ಯಾಂಗ್‌ನ ಸದಸ್ಯರನ್ನು ಬಳಸಿಕೊಂಡು ದುಷ್ಕೃತ್ಯಗಳನ್ನು ನಡೆಸುತ್ತಿದ್ದಾನೆ ಎನ್ನಲಾಗಿದೆ. ಮಧ್ಯಮ ವರ್ಗದಿಂದ ಬಂದಿರುವ ನೀರಜ್ ಮಾದಕ ದ್ರವ್ಯದ ನಶೆಯಲ್ಲಿ ಕುಕೃತ್ಯಗಳನ್ನು ನಡೆಸಲು ಆರಂಭಿಸಿದ್ದ. ಬಳಿಕ ಹಣದ ವ್ಯಾಮೋಹದಿಂದ ಅದನ್ನು ಮುಂದುವರಿಸಿದ. ಆತನ ಸಂಬಂಧಿಯೊಬ್ಬರು ದಿಲ್ಲಿಯಲ್ಲಿ ರಾಜಕಾರಣಿಯಾಗಿದ್ದು ಆತ ಈ ಮಟ್ಟಕ್ಕೆ ಬೆಳೆಯಲು ಕಾರಣವಾಯಿತು ಎನ್ನಲಾಗಿದೆ. ಒಟ್ಟಾರೆಯಾಗಿ ಮೂಸೆ ವಾಲಾ ಸಾವಿನ ಹಿನ್ನೆಲೆಯಲ್ಲಿ ದೊಡ್ಡ ಮಟ್ಟದ ಗ್ಯಾಂಗ್‌ವಾರ್ ಒಂದು ನಡೆಯುವುದು ಖಚಿತವಾಗಿದೆ.