Site icon Vistara News

Moose wala murder ಬಳಿಕ ಗಣ್ಯರ ಭದ್ರತೆ ಹಿಂದೆಗೆತ ನಿರ್ಧಾರ ಮರುಪರಿಶೀಲನೆ?

moose wala murder

ಸಿಧು ಮೂಸೆವಾಲಾ ಹತ್ಯೆ ಖಂಡಿಸಿ ಕಾಂಗ್ರೆಸ್‌ ಕಾರ್ಯಕರ್ತರಿಂದ ಪ್ರತಿಭಟನೆ

ಚಂಡೀಗಢ: ರಾಜ್ಯದಲ್ಲಿ ವಿಐಪಿ ಸಂಸ್ಕೃತಿಯನ್ನು ನಿಯಂತ್ರಿಸುವುದಕ್ಕಾಗಿ 424 ಮಂದಿ ಪೊಲೀಸ್‌ ಅಧಿಕಾರಿಗಳು, ಧಾರ್ಮಿಕ ನಾಯಕರು, ರಾಜಕಾರಣಿಗಳಿಗೆ ನೀಡಿದ್ದ ವಿಶೇಷ ಭದ್ರತೆಯನ್ನು ಹಿಂದೆಗೆದುಕೊಂಡ ನಿರ್ಧಾರವನ್ನು ಪಂಜಾಬ್‌ನ ಆಪ್‌ ಸರಕಾರ ಮರುಪರಿಶೀಲಿಸಲು ಮುಂದಾಗಿದೆ.

ಖ್ಯಾತ ಹಾಡುಗಾರ, ಕಾಂಗ್ರೆಸ್‌ ನಾಯಕ ಸಿಧು ಮೂಸೆ ವಾಲಾ ಅವರನ್ನು ಭದ್ರತೆ ಹಿಂದೆಗೆತವನ್ನು ಪ್ರಕಟಿಸಿದ ಕೆಲವೇ ಗಂಟೆಗಳಲ್ಲಿ ದುಷ್ಕರ್ಮಿಗಳು ಕೊಲೆ ಮಾಡಿದ್ದರು. ಈ ಕಾರಣದಿಂದ ಎಲ್ಲ ರಾಜಕಾರಣಿಗಳು ಆಪ್‌ ಸರಕಾರದ ಮೇಲೆ ಮುಗಿ ಬಿದ್ದಿದ್ದಾರೆ. ಹೀಗಾಗಿ ಭದ್ರತೆ ಹಿಂಪಡೆಯುವ ನಿರ್ಧಾರವನ್ನು ಮರುಪರಿಶೀಲಿಸುವ ಸಾಧ್ಯತೆ ಇದೆ. ಇದನ್ನೂ ಓದಿ| Moose wala murder ಹಿಂದಿರುವ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಯಾರು? ಸಿಧು ಮೇಲೇಕೆ ಅವರಿಗೆ ಸಿಟ್ಟು?

ಮೂಸೆ ವಾಲಾ ಅವರ ಭದ್ರತೆ ಯನ್ನು ಹಿಂಪಡೆಯಲು ಕಾರಣ ಏನುಯಾಂ ಎಂಬ ಬಗ್ಗೆ ಮಾಹಿತಿ ಪಡೆಯುವುದಾಗಿ ಅವರು ತಿಳಿಸಿದ್ದಾರೆ. ನಿಜವೆಂದರೆ, ಸಿಧು ಮೂಸೆ ವಾಲಾ ಅವರಿಗೆ ಇದ್ದ ನಾಲ್ವರು ಭದ್ರತಾ ಸಿಬ್ಬಂದಿ ಸಂಖ್ಯೆಯನ್ನು ಎರಡಕ್ಕೆ ಇಳಿಸಲಾಗಿತ್ತು. ಮತ್ತೊಂದು ಮಹತ್ವದ ವಿಚಾರವೆಂದರೆ ಕೊಲೆ ನಡೆಯುವ ಹೊತ್ತಿನಲ್ಲಿ ಈ ಇಬ್ಬರೂ ಭದ್ರತಾ ಸಿಬ್ಬಂದಿಯನ್ನು ಮೂಸೆ ವಾಲಾ ಕರೆದುಕೊಂಡು ಹೋಗಿರಲಿಲ್ಲ. ಜತೆಗೆ ನಿತ್ಯ ಬಳಸುವ ಗುಂಡು ನಿರೋಧಕ ಫಾರ್ಚುನರ್‌ ಬದಲಿಗೆ ಸಾದಾ ಥಾರ್‌ನ್ನು ಬಳಸಿದ್ದರು.

ನ್ಯಾಯಾಂಗ ತನಿಖೆಗೆ ಆದೇಶ
ಈ ನಡುವೆ ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಸಿಬಿಐ, ಎನ್‌ಐಎ ಅಥವಾ ಹಾಲಿ ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆ ನಡೆಸಬೇಕು ಎಂಬ ಮೂಸೆ ವಾಲಾ ಅವರ ತಂದೆ ಬಾಲ್ಕೌರ್‌ ಸಿಂಗ್‌ ಅವರ ಮನವಿಯ ಮೇರೆಗೆ ಪಂಜಾಬ್‌ ಮುಖ್ಯಮಂತ್ರಿ ಭಗವಂತ್‌ ಮಾನ್‌ ಅವರು ನ್ಯಾಯಾಧೀಶರ ನೇತೃತ್ವದಲ್ಲಿ ತನಿಖೆಗೆ ಆದೇಶಿಸಿದ್ದಾರೆ. ಪಂಜಾಬ್‌ ಮತ್ತು ಹರಿಯಾಣ ಕೋರ್ಟ್‌ ಮುಖ್ಯ ನ್ಯಾಯಾಧೀಶರಿಗೆ ಈ ಸಂಬಂಧ ಮನವಿ ಮಾಡಿದ್ದು, ನ್ಯಾಯಾಧೀಶರನ್ನು ನೇಮಿಸುವಂತೆ ಕೋರಿದ್ದಾರೆ.

ತಿಹಾರ್‌ ಜೈಲಿನಲ್ಲಿ ಸ್ಕೆಚ್‌?
ಮೂಸೆ ವಾಲಾ ಹತ್ಯೆಯ ಪ್ರಧಾನ ರೂವಾರಿಗಳಲ್ಲಿ ಒಬ್ಬನಾಗಿರುವ ಲಾರೆನ್ಸ್‌ ಬಿಷ್ಣೋಯಿಯನ್ನು ಇತ್ತೀಚೆಗೆ ರಾಜಸ್ಥಾನದಿಂದ ತಿಹಾರ್‌ ಜೈಲಿಗೆ ಸ್ಥಳಾಂತರಿಸಲಾಗಿದೆ. ಅಲ್ಲಿನ ಎಂಟನೇ ನಂಬರ್‌ ಕೋಣೆಯಲ್ಲಿ ಕೂಡಿ ಹಾಕಲಾಗಿರುವ ಆತ ಅಲ್ಲಿಂದಲೇ ಈ ಕೊಲೆಗೆ ಸ್ಕೆಚ್‌ ಹಾಕಿದ್ದಾನೆ ಎಂದು ಹೇಳಲಾಗುತ್ತಿದೆ. ಪೊಲೀಸರು ಇದೀಗ ಆತನ ವಿಚಾರಣೆಗೆ ಮುಂದಾಗಿದ್ದಾರೆ.

ಫೊರೆನ್ಸಿಕ್‌ ತಜ್ಞರಿಂದ ಪರಿಶೀಲನೆ

ಈ ನಡುವೆ ಮೂಸೆ ವಾಲಾ ಹತ್ಯೆ ನಡೆದ ಜಾಗ ಮತ್ತು ವಾಹನವನ್ನು ಫೊರೆನ್ಸಿಕ್‌ ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ. ಹತ್ಯೆಗೆ ಬಳಸಿದ ಸಾಧನ ಮತ್ತು ಎಷ್ಟು ಅಂತರದಿಂದ ಗುಂಡಿಕ್ಕಲಾಗಿದೆ ಎಂಬ ಮಾಹಿತಿಗಳು ಇಲ್ಲಿ ಸ್ಪಷ್ಟವಾಗಲಿವೆ.

ಕಾಂಗ್ರೆಸ್‌ ಪ್ರತಿಭಟನೆ
ಇತ್ತ ಮೂಸೆ ವಾಲಾ ಹತ್ಯೆ ಪ್ರಕರಣದ ಸಮಗ್ರ ತನಿಖೆಗೆ ಒತ್ತಾಯಿಸಿ ಕಾಂಗ್ರೆಸ್‌ ಕಾರ್ಯಕರ್ತರು ಚಂಡೀಗಢದಲ್ಲಿ ಪ್ರತಿಭಟನೆ ನಡೆಸಿದರು.

ಇದನ್ನೂ ಓದಿ| Moose wala murder ಹಿಂದಿರುವ ಬಿಷ್ಣೋಯಿ, ಗೋಲ್ಡಿ ಬ್ರಾರ್‌ ಯಾರು? ಸಿಧು ಮೇಲೇಕೆ ಅವರಿಗೆ ಸಿಟ್ಟು?

Exit mobile version