ನವದೆಹಲಿ: ಹೌದು ನಾನೇ ಕೊಲ್ಲಿಸಿದ್ದು.. ಹೀಗಂತ ಕೆನಡಾದಿಂದ ಸಂದೇಶ ಕಳುಹಿಸಿದ್ದಾನೆ ಗೋಲ್ಡಿ ಬ್ರಾರ್. ಜನಪ್ರಿಯ ಹಾಡುಗಾರ, ಸಂಗೀತ ನಿರ್ದೇಶಕ, ರಾಜಕಾರಣಿ ಸಿಧು ಮೂಸೆ ವಾಲಾ ಅವರನ್ನು ಹಾಡಹಗಲೇ ನಡುಬೀದಿಯಲ್ಲಿ ಯರ‍್ರಾಬಿರ‍್ರಿ ಗುಂಡು ಹಾರಿಸಿ ಕೊಲೆ ಮಾಡಿದ (Moose wala murder) ಘಟನೆ ನಡೆದ ಕೆಲವೇ ಗಂಟೆಗಳಲ್ಲಿ ಬ್ರಾರ್ ಘಟನೆಯ ಹೊಣೆ ಹೊತ್ತಿರುವುದು ಇದೊಂದು ಗ್ಯಾಂಗ್‌ವಾರ್ ಎನ್ನುವುದನ್ನು ಸ್ಪಷ್ಟಪಡಿಸಿದೆ. ಗೋಲ್ಡಿ ಬ್ರಾರ್‌ನ ಸೂಚನೆಯಂತೆ ಲಾರೆನ್ಸ್ ಬಿಷ್ಣೋಯಿ ಮತ್ತು ಟೀಮ್ ಈ ಕೊಲೆಯನ್ನು ಮಾಡಿದೆ. ಮೂಸೆ ವಾಲಾ ಸಾಗುತ್ತಿದ್ದ ಥಾರ್ ಕಾರನ್ನು ಒಂದು ಕಾರು ಹಿಂಬಾಲಿಸಿಕೊಂಡು ಬಂದಿದ್ದರೆ ಇನ್ನೊಂದು ಕಾರು ಮಾನ್ಸಾ ಜಿಲ್ಲೆಯ ಜಹಾವರ್ಕೆ ಗ್ರಾಮದಲ್ಲಿ ನಿಂತಿತ್ತು. ಮೂಸೆ ವಾಲಾನ ಕಾರನ್ನು ಅಡ್ಡಗಟ್ಟಿದ ಎಂಟು ದುಷ್ಕರ್ಮಿಗಳು ಬೇಕಾಬಿಟ್ಟಿ ಗುಂಡು ಹಾರಿಸಿ ಕೊಂದು ಹಾಕಿದ್ದಾರೆ. ಎಕೆ – 94 ಗನ್‌ನಿಂದ ಸಿಡಿದ 30 ಗುಂಡುಗಳಲ್ಲಿ ಎಂಟು ಮೂಸೆ ವಾಲಾ ಅವರ ದೇಹವನ್ನು ಹೊಕ್ಕಿದೆ.
ಫೇಸ್ ಬುಕ್‌ನಲ್ಲಿ ಹೇಳಿಕೆ
ʻʻಸಿಧು ಮೂಸೆವಾಲಾನ ಹತ್ಯೆಯ ಹೊಣೆಯನ್ನು ನಾನು, ಸಚಿನ್ ಬಿಷ್ಣೋಯಿ ಧತ್ತಾರನ್ವಾಲಿ, ಲಾರೆನ್ಸ್ ಬಿಷ್ಣೋಯಿ ಗುಂಪು ಜಂಟಿಯಾಗಿ ಹೊರುತ್ತಿದ್ದೇವೆ. ವಿಕ್ಕಿ ಮಿಧುಖೇರ ಮತ್ತು ಗುರುಲಾಲ್ ಬ್ರಾರ್ ಸಾವಿನ ಹಿಂದೆ ಮೂಸೆ ವಾಲಾನ ಹೆಸರು ಕೇಳಿಬಂದಿತ್ತು. ಆದರೆ, ಪೊಲೀಸರು ಯಾವುದೇ ಕ್ರಮ ಕೈಗೊಂಡಿಲ್ಲ.. ಹಾಗಾಗಿ ನಾವು ಈ ಕೃತು ನಡೆಸಿದ್ದೇವೆ,ʼʼ ಎಂದು ಗೋಲ್ಡಿ ಬ್ರಾರ್ ಅಥವಾ ಅವನ ಪರವಾಗಿ ಇನ್ಯಾರೋ ಫೇಸ್ ಬುಕ್ ಪೋಸ್ಟ್ ಹಾಕಿದ್ದಾರೆ. ಗೋಲ್ಡಿ ಬ್ರಾರ್ ಈಗ ಕೆನಡಾದಲ್ಲಿದ್ದಾನೆ.
ಇದನ್ನೂ ಓದಿ| Sidhu MooseWala: ಪಂಜಾಬಿ ಸಿಂಗರ್ ಸಿಧು ಮೂಸೆವಾಲಾ ಗುಂಡಿಗೆ ಬಲಿ
ಯಾರಿವನು ಗೋಲ್ಡಿ ಬ್ರಾರ್?
ಗೋಲ್ಡಿ ಬ್ರಾರ್‌ನ ಮೂಲ ಹೆಸರು ಸತಿಂದರ್ ಸಿಂಗ್. ಇವನು ಗ್ಯಾಂಗ್‌ಸ್ಟರ್ ರವಿ ಬಿಷ್ಣೋಯಿ ತಂಡದ ಪ್ರಮುಖರಲ್ಲಿ ಒಬ್ಬ. ಕಳೆದ ವರ್ಷದ ಪಂಜಾಬ್‌ನ ಫರೀದ್ ಕೋಟ್ ಜಿಲ್ಲೆಯಲ್ಲಿ ಯುವ ಕಾಂಗ್ರೆಸ್ ಮುಖಂಡ ಗುರುಲಾಲ್ ಸಿಂಗ್ ಪೆಹಲ್ವಾನ್‌ನನ್ನು 12 ಬಾರಿ ಗುಂಡಿಕ್ಕಿ ಕೊಲೆ ಮಾಡಲಾಗಿತ್ತು. ಈ ಪ್ರಕರಣಕ್ಕೆ ಸಂಬಂಧಿಸಿ ಫರೀದ್ ಕೋಟ್ ನ್ಯಾಯಾಲಯ ಗೋಲ್ಡಿ ಬ್ರಾರ್ ವಿರುದ್ಧ ಜಾಮೀನು ರಹಿತ ವಾರಂಟ್ ಹೊರಡಿಸಿತ್ತು.
ಇದೇ ವರ್ಷದ ಮಾರ್ಚ್ 11ರಂದು ಗುರುಗ್ರಾಮದಲ್ಲಿ ಪರಮ್ ಜಿತ್ ಮತ್ತು ಸುರ್ಜಿತ್ ಎಂಬ ಸಹೋದರರನ್ನು ಗುಂಡಿಕ್ಕಿ ಕೊಲೆ ಮಾಡಿದ ಪ್ರಕರಣದಲ್ಲೂ ಗೋಲ್ಡಿ ಬ್ರಾರ್ ಹೆಸರು ಕೇಳಿಬಂದಿತ್ತು. ಆಗ ಲಾರೆನ್ಸ್ ಬಿಷ್ಣೋಯಿ, ಕಾಲಾ ಜತೇರಿ, ನರೇಶ್ ಸೇಥಿ ಎಂಬವರನ್ನು ಬಂಧಿಸಲಾಗಿತ್ತು. ಮೃತಪಟ್ಟ ಸಹೋದರರಿಬ್ಬರು ಜೈಲಿನಲ್ಲಿದ್ದ ಇನ್ನೊಬ್ಬ ಕುಖ್ಯಾತ ಗ್ಯಾಂಗ್‌ಸ್ಟರ್ ಕೌಶಲ್‌ಗೆ ಆಪ್ತರಾಗಿದ್ದರು. ಮತ್ತು ಅವರಿಗೆ ಅಜಯ್ ಜೈಲ್ದಾರ್ ಎಂಬಾತನ ಜತೆ ದ್ವೇಷ ಇತ್ತು. ಅಜಯ್ ಜೈಲ್ದಾರ್ ಲಾರೆನ್ಸ್, ಕಾಲಾ ಜತೇರಿ, ನರೇಶ್ ಜತೆ ಸೇರಿಕೊಂಡು ಅವರಿಬ್ಬರ ಮುಗಿಸಿದ್ದ. ಇದಕ್ಕೆ ಸೂಚನೆ ಕೊಟ್ಟಿದ್ದು ಗೋಲ್ಡಿ ಬ್ರಾರ್. ಪಂಜಾಬ್‌ನಲ್ಲಿ ನಡೆಯುತ್ತಿರುವ ಲಿಕ್ಕರ್ ಬ್ಯುಸಿನೆಸ್ ವೈಷಮ್ಯವೇ ಈ ಕೊಲೆಗೆ ಕಾರಣವಾಗಿತ್ತು.
ಮಾಳ್ವಾ ಪ್ರದೇಶದಲ್ಲಿ ಉದ್ಯಮಿಯೊಬ್ಬರ ಹತ್ಯೆಗೆ ಸಂಚು ನಡೆಸುತ್ತಿದ್ದ ಲಾರೆನ್ಸ್ ಮತ್ತು ಬಿಷ್ಣೋಯಿ ಗುಂಪಿಗೆ ಸೇರಿದ ಮೂವರನ್ನು ಬಂಧಿಸಲಾಗಿತ್ತು.
ಸಲ್ಮಾನ್ ಖಾನ್‌ಗೂ ಸ್ಕೆಚ್ ಹಾಕಿದ ಬಿಷ್ಣೋಯಿ
ಲಾರೆನ್ಸ್ ಬಿಷ್ಣೋಯಿ ಪಂಜಾಬ್‌ನ ಫಿರೋಜ್ ಪುರ ಜಿಲ್ಲೆಯ ಅಬೋಹರ್‌ನ ಶ್ರೀಮಂತ ಕುಟುಂಬದಿಂದ ಬಂದವನು . ಗೋಲ್ಡಿ ಬ್ರಾರ್‌ನ ಜತೆ ಹೆಗಲಿಗೆ ಹೆಗಲಾಗಿ ಕುಕೃತ್ಯಗಳನ್ನು ನಡೆಸಿದವನು. ಹಲವು ಕ್ರಿಮಿನಲ್ ಕೇಸುಗಳಲ್ಲಿ ಇವನ ಹೆಸರಿದ್ದರೂ ಮೊದಲ ಬಾರಿ ಇಡೀ ದೇಶದಲ್ಲಿ ಕೇಳಿಬಂದಿದ್ದು 2018ರಲ್ಲಿ ಆತ ಖ್ಯಾತ ನಟ ಸಲ್ಮಾನ್ ಖಾನ್‌ನನ್ನು ಕೊಲೆ ಮಾಡಲು ಸಂಚು ಮಾಡಿದ್ದು ಬಯಲಾದಾಗ.
ಲಾರೆನ್ಸ್ ಬಿಷ್ಣೋಯಿಯ ಸಹಚರನಾದ ಶಾರ್ಪ್ ಶೂಟರ್ ಸಂಪತ್ ನೇಹ್ರಾ ಎಂಬಾತನನ್ನು ಹರಿಯಾಣ ಪೊಲೀಸರು ಬಂಧಿಸಿದ ವೇಳೆ ಸಲ್ಮಾನ್ ಖಾನ್ ಹತ್ಯೆ ಸಂಚು ಬಯಲಾಗಿತ್ತು. ಇದೊಂದು ಹಫ್ತಾ ಪ್ರಕರಣವೆಂದು ಹೇಳಲಾಗಿದ್ದರೂ ಬಿಷ್ಣೋಯಿ ಮಾತ್ರ ಅದನ್ನು ನಿರಾಕರಿಸಿ, ಸಲ್ಮಾನ್ ಖಾನ್ ಕೃಷ್ಣ ಮೃಗವನ್ನು ಕೊಂದಿದ್ದಕ್ಕೆ ಪ್ರತೀಕಾರವಾಗಿ ಕೊಲೆ ಮಾಡಲು ಸ್ಕೆಚ್ ಹಾಕಿದ್ದಾಗಿ ಹೇಳಿಕೊಂಡಿದ್ದ.. ಕೃಷ್ಣ ಮೃಗವನ್ನು ಬಿಷ್ಣೋಯಿ ಸಮಾಜ ಅತ್ಯಂತ ಭಕ್ತಿಯಿಂದ ಕಾಣುತ್ತಿದ್ದು, ಅದನ್ನು ಕೊಂದಿದ್ದಕ್ಕೆ ಸೇಡು ತೀರಿಸಿಕೊಳ್ಳಲು ಆತ ಮುಂದಾಗಿದ್ದ ಎನ್ನಲಾಗಿದೆ.
2010ರ ಸಮಯದಲ್ಲಿ ವಿದ್ಯಾರ್ಥಿ ನಾಯಕನಾಗಿ ಹೆಸರಾಗಿದ್ದ ಲಾರೆನ್ಸ್ ಬಿಷ್ಣೋಯಿ ಅಗಲೇ ಹಲವು ಅಪರಾಧ ಪ್ರಕರಣಗಳಲ್ಲಿ ಭಾಗಿಯಾಗಿದ್ದ. 2016ರಲ್ಲಿ ಮೊದಲು ಗ್ಯಾಂಗ್ ಸ್ಟರ್ ಆಗಿದ್ದು ಬಳಿಕ ರಾಜಕಾರಣಿಯಾದ ಜಸ್ವಿಂದರ್ ಸಿಂಗ್‌ನನ್ನು ಕೊಲೆ ಮಾಡಿದ ಪ್ರಕರಣದಲ್ಲಿ ಬಿಷ್ಣೋಯಿ ಪ್ರಧಾನ ಆರೋಪಿ. ಈತ ಈಗ ರಾಜಸ್ಥಾನದ ಜೈಲಿನಲ್ಲಿದ್ದು ಅಲ್ಲಿಂದಲೇ ಸ್ಕೆಚ್ ಹಾಕುತ್ತಿದ್ದಾನೆ ಎನ್ನಲಾಗಿದೆ.
ಮೂಸೆ ವಾಲಾನ ಮೇಲೇಕೆ ಸಿಟ್ಟು?
ಮೂಸೆ ವಾಲಾ ಕೂಡಾ ಹಲವಾರು ಕ್ರಿಮಿನಲ್ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪವಿದೆ. ಬ್ರಾರ್ ಗ್ಯಾಂಗ್ ಮತ್ತು ಮೂಸೆ ವಾಲಾನ ನಡುವೆ ದ್ವೇಷಕ್ಕೆ ಕಾರಣವಾಗಿದ್ದು ಯುವ ಅಕಾಲಿ ದಳ ನಾಯಕ ಮಿದ್ದುಖೇರಾನ ಕೊಲೆ. 2021ರ ಆಗಸ್ಟ್ 7ರಂದು ಈ ಕೊಲೆ ನಡೆದಿತ್ತು. ಈ ಕೊಲೆಯಲ್ಲಿ ಪ್ರಧಾನವಾಗಿ ಭಾಗಿಯಾದವನು ಮೂಸೆ ವಾಲಾನ ಮ್ಯಾನೇಜರ್‌ಗಳಲ್ಲಿ ಒಬ್ಬನಾದ ಶಗುನ್ ಪ್ರೀತ್. ಆತ ಈತ ದೇಶ ಬಿಟ್ಟು ಆಸ್ಟ್ರೇಲಿಯಾದಲ್ಲಿದ್ದಾನೆ.
ಕೊಲೆಯಾದ ಮಿದ್ದುಖೇರಾ ಗೋಲ್ಡಿ ಬ್ರಾರ್‌ಗೆ ಆತ್ಮೀಯನಾಗಿದ್ದ. ಮೂಸೆ ವಾಲಾನ ಸೂಚನೆಯ ಮೇರೆಗೇ ಶಗುನ್ ಪ್ರೀತ್ ಈ ಕೊಲೆ ಮಾಡಿಸಿದ್ದಾನೆ ಎನ್ನುವುದು ಗೋಲ್ಡಿ ಬ್ರಾರ್ ಆರೋಪ. ಇದೇ ಕಾರಣಕ್ಕೆ ಸೇಡು ತೀರಿಸಿಕೊಂಡಿದ್ದೇನೆ ಎನ್ನುತ್ತಾನೆ ಅವನು.
ಇದನ್ನೂ ಓದಿ| Sidhu moose wala ಮರ್ಡರ್‌ಗೆ ಗ್ಯಾಂಗ್‌ವಾರ್ ಕಾರಣ? ಹೊಣೆ ಹೊತ್ತ ಬಿಷ್ಣೋಯಿ ಗ್ಯಾಂಗ್