ಮುಂಬಯಿ: ಮಹಿಳೆಯೊಬ್ಬರು ತನ್ನ ಆರೂ ಮಕ್ಕಳನ್ನು ಬಾವಿಗೆಸೆದು ತಾನೂ ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮಹಾರಾಷ್ಟ್ರದ ರಾಯಗಢ ಜಿಲ್ಲೆಯ ಮಹಾಡ್‌ನ ಬೋರ್‌ಗಾಂವ್‌ನಲ್ಲಿ ನಡೆದಿದೆ. ಈ ಮಹಿಳೆಗೆ 30 ವರ್ಷ. ಆಕೆಯ ಮಕ್ಕಳು ಎರಡರಿಂದ ಹತ್ತು ವರ್ಷದ ನಡುವಿನವು. ಐದು ಹೆಣ್ಣು ಮತ್ತು ಒಂದು ಗಂಡು. ಆಕೆ 20 ಅಡಿ ಆಳದ ಬಾವಿಗೆ ಹಾರುವ ಅತಿರೇಕದ ಕ್ರಮಕ್ಕೆ ಮುಂದಾಗಿದ್ದು ಸೋಮವಾರ ಮಧ್ಯಾಹ್ನ. ವಿಷಯ ತಿಳಿಯುತ್ತಿದ್ದಂತೆಯೇ ಊರಿನವರು ರಕ್ಷಣೆಗೆ ಮುಂದಾದರು. ಆದರೆ, ಯಾವ ಮಕ್ಕಳೂ ಬದುಕುಳಿಯಲಿಲ್ಲ. ಮಹಿಳೆ ಮಾತ್ರ ಜೀವಂತವಾಗಿ ಉಳಿದಿದ್ದಾಳೆ.
ರೂನಾ ಸಹಾನಿ ಎಂಬ ಮಹಿಳೆ ಈ ಕೃತ್ಯವನ್ನು ಎಸಗಿದವಳು. 18ನೇ ವಯಸ್ಸಿಗೆ ಮೊದಲೇ ಮದುವೆಯಾಗಿದ್ದ ಆಕೆ ಸಾಲು ಸಾಲು ಮಕ್ಕಳಿಗೆ ಜನ್ಮ ನೀಡಿ ಮೂವತ್ತನೇ ವರ್ಷಕ್ಕೆ ಆರು ಮಕ್ಕಳಾಗಿದ್ದವು. ಈ ಮಕ್ಕಳ ಲಾಲನೆ ಪಾಲನೆಗೆ ಕಷ್ಟಪಡುತ್ತಿದ್ದ ಆಕೆಗೆ ಗಂಡನೂ ಹಿಂಸೆ ನೀಡುತ್ತಿದ್ದ. ಇದೆಲ್ಲವನ್ನೂ ತಾಳಲಾಗದೆ ಆಕೆ ಸಾವಿನ ಮೊರೆ ಹೊಕ್ಕಿದ್ದಳು ಎಂದು ಪ್ರಾಥಮಿಕ ತನಿಖೆ ವೇಳೆ ತಿಳಿದುಬಂದಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಇದನ್ನೂ ಓದಿ| ಆತ್ಮಹತ್ಯೆಗೆ ಯತ್ನಿಸಿದ ಗರ್ಭಿಣಿ: ಹೊಟ್ಟೆಯಲ್ಲೆ ಮಗು ಸಾವು
ಆಕೆಯ ಗಂಡ ಕುಡುಕನಾಗಿದ್ದು, ಗಂಡ-ಹೆಂಡತಿ ಮಧ್ಯೆ ಬೇರೆ ಬೇರೆ ಕಾರಣಗಳಿಗಾಗಿ ಆಗಾಗ ಗಲಾಟೆಗಳು ನಡೆಯುತ್ತಿದ್ದವು. ಇದನ್ನು ಸಹಿಸಲಾಗದೆ ಈ ಕೃತ್ಯ ನಡೆದಿರಬಹುದು ಎಂದು ಪೊಲೀಸರು ಅಂದಾಜಿಸಿದ್ದಾರೆ. ರಕ್ಷಿಸಲ್ಪಟ್ಟ ಮಹಿಳೆಯನ್ನು ಪೊಲೀಸ್ ಠಾಣೆಯಲ್ಲಿ ತಂದು ಕೂರಿಸಿದ್ದರೂ ಆಕೆ ಅಲ್ಲಿ ಏನನ್ನೂ ಹೇಳುವ ಸ್ಥಿತಿಯಲ್ಲಿ ಇರಲಿಲ್ಲ.
ಈ ಘಟನೆ ಗ್ರಾಮದಲ್ಲಿ ಆಘಾತ ಸೃಷ್ಟಿಸಿದೆ. ರೂನಾ ಸಹಾನಿಗೆ ಯಾವುದೇ ಮಾನಸಿಕ ಸಮಸ್ಯೆಗಳಿಲ್ಲ. ಆಕೆ ಕೌಟುಂಬಿಕ ಸಮಸ್ಯೆಗಳಿಂದಲೇ ಇಂಥ ಅತಿರೇಕದ ತೀರ್ಮಾನಕ್ಕೆ ಬಂದಿರಬಹುದು ಎಂದೇ ಮಾತನಾಡಿಕೊಳ್ಳುತ್ತಿದ್ದಾರೆ.
ಇದನ್ನೂ ಓದಿ | ದಿನವೂ ಸಾಯುವುದಕ್ಕಿಂತ ಒಮ್ಮೆಲೇ ಸಾಯೋದು ಒಳ್ಳೇದಲ್ವಾ? ಅಂತ ಸ್ಟೇಟಸ್ ಹಾಕಿದ್ದರು ಆ ಸಹೋದರಿಯರು