ಮುಂಬೈ: ದೇಶದ ವಾಣಿಜ್ಯ ನಗರಿ ಮುಂಬೈನಲ್ಲಿ ಬಾಂಬ್ ಸ್ಫೊಟದ ಕುರಿತು ಪೊಲೀಸರಿಗೆ ಮತ್ತೆ ಬೆದರಿಕೆ ಕೆರೆ (Bomb Threat) ಬಂದಿದೆ. ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಶನಿವಾರ ಸಂಜೆ (ಡಿಸೆಂಬರ್ 30) ಕರೆ ಮಾಡಿದ ವ್ಯಕ್ತಿಯು, ನಗರದಲ್ಲಿ ಬಾಂಬ್ ಸ್ಫೋಟವಾಗುತ್ತದೆ ಎಂಬುದಾಗಿ ತಿಳಿಸಿದ್ದಾನೆ. ಕೂಡಲೇ ಮುಂಬೈ ಪೊಲೀಸರು (Mumbai Police) ಕಟ್ಟೆಚ್ಚರ ವಹಿಸಿದ್ದಾರೆ. ಅಲ್ಲದೆ, ಕ್ರೈಮ್ ಬ್ರ್ಯಾಂಚ್ (Crime Branch) ಅಲರ್ಟ್ ಆಗಿದ್ದು, ಕರೆ ಮಾಡಿದವನ ಕುರಿತು ಮಾಹಿತಿ ಕಲೆಹಾಕಲಾಗುತ್ತಿದೆ ಎಂದು ತಿಳಿದುಬಂದಿದೆ.
ಮುಂಬೈನ 11 ಕಡೆ ಬಾಂಬ್ ಇರಿಸಲಾಗಿದ್ದು, ಸ್ಫೊಟಿಸಲಾಗುತ್ತದೆ ಎಂದು ಭಾರತೀಯ ರಿಸರ್ವ್ ಬ್ಯಾಂಕ್‌ಗೆ (RBI) ಬೆದರಿಕೆ ಕರೆ ಮಾಡಿದ ಕೆಲವೇ ದಿನಗಳಲ್ಲಿ ಮತ್ತೆ ಬೆದರಿಕೆ ಕರೆ ಬಂದಿದೆ. “ದೇಶದ ಇತಿಹಾಸದಲ್ಲೇ ದೊಡ್ಡ ಹಗರಣದಲ್ಲಿ ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಹಾಗೂ ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಭಾಗಿಯಾಗಿದ್ದಾರೆ” ಎಂದು ಆರ್‌ಬಿಐಗೆ ಇ-ಮೇಲ್ ಮಾಡಲಾಗಿತ್ತು. ಅಲ್ಲದೆ, ಬಾಂಬ್ ದಾಳಿ ನಡೆಸಲಾಗುವುದು ಎಂದು ಕೂಡ ಬೆದರಿಕೆ ಒಡ್ಡಲಾಗಿತ್ತು. ಇದರ ಬೆನ್ನಲ್ಲೇ ಮತ್ತೊಂದು ಬಾಂಬ್ ದಾಳಿ ಬೆದರಿಕೆ ಕರೆ ಬಂದಿದ್ದು ಪೊಲೀಸರಿಗೆ ತಲೆನೋವಾಗಿ ಪರಿಣಮಿಸಿದೆ.
ಇತ್ತೀಚೆಗೆ ಮುಂಬೈ ಪೊಲೀಸ್ ಕಂಟ್ರೋಲ್‌ಗೆ ರೂಮ್‌ಗೆ ಬೆದರಿಕೆ ಕರೆಗಳು ಬರುತ್ತಿರುವುದು ಜಾಸ್ತಿಯಾಗಿದೆ. ಕಳೆದ ನವೆಂಬರ್‌ನಲ್ಲಿಯೂ ಪೊಲೀಸರಿಗೆ ಸಾಲು ಸಾಲಾಗಿ ಬೆದರಿಕೆ ಕರೆ, ಸಂದೇಶಗಳು ಬಂದಿದ್ದವು. ಪ್ರತಿ ಬಾರಿ ಬೆದರಿಕೆ ಕರೆ ಬಂದಾಗಲೂ ಪೊಲೀಸರು ಅಲರ್ಟ್ ಆಗುತ್ತಾರೆ. ಮುಕೇಶ್ ಅಂಬಾನಿ ಕುಟುಂಬಸ್ಥರ ಕೊಲೆ ಕುರಿತು ಕೂಡ ಬೆದರಿಕೆ ಕರೆ ಮಾಡಲಾಗಿತ್ತು.
ಕೆಲ ತಿಂಗಳ ಹಿಂದೆಯೂ, ಮುಂಬೈ ಪೊಲೀಸ್ ಕಂಟ್ರೋಲ್ ರೂಮ್‌ಗೆ ಕರೆ ಮಾಡಿದ ವ್ಯಕ್ತಿಯು ತನ್ನನ್ನು ತಾನು ಪಾಂಡೆ ಎಂಬುದಾಗಿ ಪರಿಚಯ ಮಾಡಿಕೊಂಡಿದ್ದ. “ಒಂದು ಟ್ಯಾಂಕರ್ ತುಂಬ ಆರ್‌ಡಿಎಕ್ಸ್ ಸ್ಫೋಟಕ ತುಂಬಲಾಗಿದೆ. ಅದು ಮುಂಬೈನಿಂದ ಗೋವಾದ ಕಡೆಗೆ ತೆರಳುತ್ತಿದೆ. ಟ್ಯಾಂಕರ್‌ನಲ್ಲಿ ಇಬ್ಬರು ಪಾಕಿಸ್ತಾನದ ಪ್ರಜೆಗಳೂ ಇದ್ದಾರೆ” ಎಂದು ತಿಳಿಸಿದ್ದ. ಇದಾದ ಬಳಿಕ ಪೊಲೀಸರು ಕಟ್ಟೆಚ್ಚರ ವಹಿಸಿದ್ದರು.
ಇದನ್ನೂ ಓದಿ: Hoax Bomb Threat: ಬೆಂಗಳೂರು ಏರ್‌ಪೋರ್ಟ್‌ಗೆ ಹುಸಿ ಬಾಂಬ್ ಬೆದರಿಕೆ ಕರೆ; ಪ್ರಯಾಣಿಕನ ಬಂಧನ
ಜುಲೈ 12ರಂದು ಕೂಡ ಹೀಗೆ ಮುಂಬೈನಲ್ಲಿ ಬಾಂಬ್ ಇಡಲಾಗಿದೆ ಎಂದು ಕರೆ ಬಂದಿತ್ತು. ಇದಾದ ಬಳಿಕವೂ ಪೊಲೀಸರು ಅಲರ್ಟ್ ಆದರು. ಆದರೆ, ಯಾವುದೇ ಭಾಗದಲ್ಲಿ ಬಾಂಬ್ ಇರುವುದು ಪತ್ತೆಯಾಗಿರಲಿಲ್ಲ. ಈಗ ಕೆಲ ದಿನಗಳ ಹಿಂದಿನ ರೀತಿ ಹುಸಿ ಬೆದರಿಕೆ ಕರೆ ಇರಬಹುದು ಎಂದು ಕೂಡ ಅಂದಾಜಿಸಲಾಗಿತ್ತು.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ