ಆನೇಕಲ್: ಬೆಂಗಳೂರು ಗ್ರಾಮಾಂತರ ಜಿಲ್ಲೆ ಆನೇಕಲ್ (Anekal) ಪಟ್ಟಣದಲ್ಲಿ ಪುರಸಭೆ ಸದಸ್ಯರೊಬ್ಬರನ್ನು (Municipality Member) ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಆನೇಕಲ್ ಪಟ್ಟಣದ ಹೊಸೂರು ಮುಖ್ಯ ರಸ್ತೆಯಲ್ಲಿ ಪುರಸಭೆ ಸದಸ್ಯ ರವಿ ಅಲಿಯಾ ಸ್ಕ್ರ್ಯಾಪ್ ರವಿ ಎಂಬುವರನ್ನು ಬುಧವಾರ (ಜುಲೈ 24) ರಾತ್ರಿ ಮಾರಕಾಸ್ತ್ರಗಳಿಂದ ಕೊಚ್ಚಿ ಹತ್ಯೆ ಮಾಡಲಾಗಿದೆ.
ಹಳೆಯ ವೈಷಮ್ಯದ ಹಿನ್ನೆಲೆಯಲ್ಲಿ ದುಷ್ಕರ್ಮಿಗಳು ದಾಳಿ ನಡೆಸಿದ್ದಾರೆ ಎನ್ನಲಾಗಿದೆ. ಆನೇಕಲ್ ಪುರಸಭೆಯ 22ನೇ ವಾರ್ಡ್ ಸದಸ್ಯರಾಗಿರುವ ರವಿ ಅವರ ಮೇಲೆ ವೈಷ್ಯಮ್ಯ ಇತ್ತು. ಇದೇ ಕಾರಣಕ್ಕಾಗಿ ಏಕಾಏಕಿ ದಾಳಿ ನಡೆಸಿ, ಮನಸೋ ಇಚ್ಛೆ ಕೊಚ್ಚಿ ಕೊಲೆ ಮಾಡಿದ್ದಾರೆ ಎನ್ನಲಾಗಿದೆ. ಆದರೆ, ದಾಳಿ ಮಾಡಿದವರು ಯಾರು, ಅವರಿಗೆ ಯಾವ ಸೇಡು ಇತ್ತು ಎಂಬ ಕುರಿತು ಮಾಹಿತಿ ಲಭ್ಯವಾಗಿಲ್ಲ.
ರವಿ ಅವರ ಶವವನ್ನು ಆನೇಕಲ್ ಸರ್ಕಾರಿ ಆಸ್ಪತ್ರೆಗೆ ಸಾಗಿಸಲಾಗಿದೆ. ಆಸ್ಪತ್ರೆ ಬಳಿ ಕುಟುಂಬಸ್ಥರು ಹಾಗೂ ಆಪ್ತರು ಜಮಾಯಿಸಿದ್ದು, ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. ಇನ್ನು, ಕೊಲೆಯ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ. ಅಹಿತಕರ ಘಟನೆ ನಡೆಯದಂತೆ ಹೆಚ್ಚಿನ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಆನೇಕಲ್ ಪೊಲೀಸರು ಹೆಚ್ಚಿನ ತನಿಖೆ ನಡೆಸುತ್ತಿದ್ದಾರೆ.
ಚಿಕ್ಕಬಳ್ಳಾಪುರ ಶೂಟೌಟ್; ಸಾವಿನ ಸಂಖ್ಯೆ 2
ಚಿಕ್ಕಬಳ್ಳಾಪುರದಲ್ಲಿ ಬುಧವಾರ ಬೆಳಗ್ಗೆ ನಡೆದ ಶೂಟೌಟ್ (Shootout) ಪ್ರಕರಣದಲ್ಲಿ ಮೃತರ ಸಂಖ್ಯೆ 2ಕ್ಕೆ ಏರಿದೆ. ಚಿಕ್ಕಬಳ್ಳಾಪುರ ಜಿಲ್ಲೆ ಗುಡಿಬಂಡೆ ತಾಲೂಕು ಹಂಪಸಂದ್ರ ಗ್ರಾಮದಲ್ಲಿ ಬಶೀರ್ ಅಹ್ಮದ್ (66) ಪಿಸ್ತೂಲಿನಿಂದ ಗುಂಡು ಹಾರಿಸಿದ ಬಳಿಕ ಮಚ್ಚಿನಿಂದ ದಾಳಿ ನಡೆಸಿದ್ದ. ಗುಂಡೇಟು ತಗುಲಿ ನಜೀರ್ ಅಹ್ಮದ್ (46) ಸ್ಥಳದಲ್ಲೇ ಅಸುನೀಗಿದ್ದರೆ, ಮಚ್ಚಿನ ದಾಳಿಯಿಂದ ಗಂಭೀರ ಗಾಯಗೊಂಡಿದ್ದ ಅವರ ತಂದೆ ಮಹಬೂಬ್ ಸಾಬ್ ಬೆಂಗಳೂರಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ
ಇದನ್ನೂ ಓದಿ: Murder Case: ಲೇಡಿಸ್ ಪಿಜಿಗೆ ನುಗ್ಗಿ ಯುವತಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್; ಪ್ರಿಯತಮನೇ ಕೊಲೆಗಾರ