Site icon Vistara News

Murder Case: ಪತ್ನಿಯನ್ನು ಕೊಂದು ಪರಾರಿಯಾದ, ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ಸತ್ತ!

Murder case

ಕೋಲಾರ: ಪತ್ನಿಯನ್ನು ಕೊಂದು (Murder Case) ಪರಾರಿಯಾಗಿದ್ದ ಪಾತಕಿ ಪೊಲೀಸರಿಂದ ತಪ್ಪಿಸಿಕೊಳ್ಳಲು ಕಟ್ಟಡದಿಂದ ಜಿಗಿದು ತೀವ್ರವಾಗಿ ಗಾಯಗೊಂಡು ಸತ್ತುಹೋಗಿದ್ದಾನೆ. ಬೆಂಗಳೂರಿನ ಚಾಮರಾಜಪೇಟೆಯಲ್ಲಿ (Bangalore Crime) ಪತ್ನಿಯನ್ನು ಕೊಂದಿದ್ದ (husband killed wife) ಆರೋಪಿ, ಕೋಲಾರದಲ್ಲಿ (Kolar News) ಸಾವಿಗೀಡಾಗಿದ್ದಾನೆ.

ಕೊಲೆ ನಡೆದ ಐದು ದಿನದ ಬಳಿಕ, ಆರೋಪಿ ತಬ್ರೇಝ್ ಪಾಷಾನ ಬೆನ್ನು ಹತ್ತಿದ ಪೊಲೀಸರಿಗೆ ಆತನ ಹೆಣ ಎದುರಾಗಿದೆ. ಫೇಸ್‌ಬುಕ್ ಲೈವ್ ಮಾಡುತ್ತಲೇ ಪತ್ನಿಯ ಹತ್ಯೆ ಮಾಡಿದ್ದ ಪಾತಕಿ, ಪೊಲೀಸರಿಂದ ತಪ್ಪಿಸಿಕೊಳ್ಳುವ ಆತುರದಲ್ಲಿ ಜೀವ ಕಳೆದುಕೊಂಡಿದ್ದಾನೆ.

ಫಾತಿಮಾ‌ (34) ಪತಿಯಿಂದ ಕೊಲೆಯಾದ ಮಹಿಳೆ. ಬೆಂಗಳೂರಿನ ಚಾಮರಾಜಪೇಟೆ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿತ್ತು. ಐದು ವರ್ಷಗಳ ಹಿಂದೆಯೇ ಈ ದಂಪತಿ ದೂರವಾಗಿದ್ದರು. ಆರೋಪಿ ತಬ್ರೇಝ್ ಪಾಷಾ ಕಳ್ಳತನ ಕೇಸ್, ಗಾಂಜಾ ಕೇಸ್‌ನಲ್ಲಿ ಭಾಗಿಯಾಗಿದ್ದ. ಇತ್ತ ಅಂಗವಿಕಲ ತಾಯಿಯೊಂದಿಗೆ ಇಬ್ಬರು ಮಕ್ಕಳ ಜತೆ ಫಾತಿಮಾ ವಾಸವಿದ್ದಳು. ಆದರೂ ಆಗಾಗ ಮನೆಗೆ ಬಂದು ಜಗಳ ಮಾಡುತ್ತಿದ್ದ. ಪದೇ ಪದೆ ಮನೆಗೆ ಬರುವಂತೆ ಕಿರುಕುಳ ಕೊಡುತ್ತಿದ್ದ.

ಇತ್ತೀಚೆಗೆ ರಸ್ತೆಯಲ್ಲಿ ಆಕೆಯನ್ನು ಅಡ್ಡ ಹಾಕಿ ಜಗಳ ತೆಗೆದಿದ್ದ ತಬ್ರೇಝ್, ಕೊಲೆ ಮಾಡುತ್ತೇನೆ ಎಂದು ಬೆದರಿಸಿದ್ದ. ಹೀಗಾಗಿ ಫಾತಿಮಾ ತಾಯಿ, ತಬ್ರೇಝ್ ಏನಾದರೂ ಮಾಡುತ್ತಾನೆ ಎಂಬ ಆತಂಕದಿಂದ ಮನೆಗೆ ಸಿಸಿಟಿವಿ ಅಳವಡಿಸಿದ್ದರು. ಸೋಮವಾರ ಬೆಳಗ್ಗೆ 8.30ರ ಸುಮಾರಿಗೆ ಮನೆಗೆ ಬಂದು ಜಗಳ ತೆಗೆದಿದ್ದ ತಬ್ರೇಜ್ ಪಾಷ, ಇಬ್ಬರು ಮಕ್ಕಳನ್ನು ಹೊರಗೆ ಕಳಿಸಿದ್ದ. ತಾಯಿಯ ಮುಂದೆಯೇ ಪತ್ನಿಗೆ ಚಾಕುವಿನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದ.

ಮನೆಗೆ ಬರುವ ಮುನ್ನ ಹಾಗೂ ಹತ್ಯೆಯ ವೇಳೆ ತನ್ನ ಕೃತ್ಯವನ್ನು ಈ ಪಾತಕಿ ಫೇಸ್‌ಬುಕ್‌ ಲೈವ್ ಮಾಡಿದ್ದ. ಕೊಲೆಯ ಬಳಿಕ ಕೋಲಾರಕ್ಕೆ ಕಾಲ್ಕಿತ್ತಿದ್ದ. ಮೊಬೈಲ್ ಬಳಸದೇ ಕೋಲಾರದ ಮಸೀದಿಯಲ್ಲಿ ನಾಲ್ಕು ದಿನ ಉಳಿದುಕೊಂಡಿದ್ದ. ಬಳಿಕ ನಿನ್ನೆ ಕೋಲಾರದ ಚಿಕ್ಕಮ್ಮನ ಮನೆಗೆ ತೆರಳಿದ್ದ.

ಆರೋಪಿಯನ್ನು ಬಂಧಿಸಲು ಕೋಲಾರಕ್ಕೆ ತೆರಳಿದ್ದ ಚಾಮರಾಜಪೇಟೆ ಪೊಲೀಸರ ತಂಡ ಚಿಕ್ಕಮ್ಮನ ಮನೆಗೆ ಪ್ರವೇಶಿಸಿದಾಗ, ತಪ್ಪಿಸಿಕೊಳ್ಳುವ ಭರದಲ್ಲಿ ಸುಮಾರು 12 ಅಡಿ ಎತ್ತರದ ಮನೆಯ ಟೆರೇಸ್‌ನಿಂದ ಈತ ಜಿಗಿದಿದ್ದಾನೆ. ಆಗ ಬಿದ್ದು ಅಸ್ವಸ್ಥನಾಗಿದ್ದ. ಆಸ್ಪತ್ರೆಗೆ ಸಾಗಿಸಲಾಯಿತಾದರೂ ಅಲ್ಲಿ ಸಾವಿಗೀಡಾಗಿದ್ದಾನೆ.

ಬೆಂಗಳೂರಿನ ಶೇಷಾದ್ರಿಪುರಂನಲ್ಲಿ ಹಾಡಹಗಲೇ ಯುವಕನ ಬರ್ಬರ ಹತ್ಯೆ

ಬೆಂಗಳೂರು: ಹಾಡಹಗಲೆ ಯುವಕನ ಬರ್ಬರ ಹತ್ಯೆ (Murder case) ನಡೆದಿದೆ. ಬೆಂಗಳೂರಿನ ಶೇಷಾದ್ರಿ ಪುರಂ ಪೊಲೀಸ್ ಠಾಣೆಯ ಕೂಗಳತೆಯ ದೂರದಲ್ಲಿ ಘಟನೆ ನಡೆದಿದೆ. ಅಜಿತ್ ಕುಮಾರ್‌ (25) ಕೊಲೆಯಾದವನು.

ಶೇಷಾದ್ರಿಪುರಂ ಪೊಲೀಸ್ ಠಾಣಾ ವ್ಯಾಪ್ತಿಯ ರಶಿಲ್ಲಾರ್ ಸ್ಟ್ರೀಟ್‌ನಲ್ಲಿ ಅಜಿತ್‌ನನ್ನು ಮಾರಕಾಸ್ತ್ರಗಳಿಂದ ಕೊಚ್ಚಿ ಕೊಲೆ ಮಾಡಲಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕೊಲೆಗೆ ನಿಖರ ಕಾರಣವೇನು ಎಂಬುದು ತಿಳಿದುಬಂದಿಲ್ಲ. ಸ್ಥಳಕ್ಕೆ ಕೇಂದ್ರ ವಿಭಾಗದ ಡಿಸಿಪಿ ಶೇಖರ್ ಭೇಟಿ ನೀಡಿದ್ದಾರೆ.

ಸ್ಥಳದಲ್ಲಿ ಮೃತ ಕುಟುಂಬಸ್ಥರ ಆಕ್ರಂದನ ನಡೆದಿದೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಹಂತಕರಿಗಾಗಿ ಹುಡುಕಾಟ ನಡೆಸಿರುವ ಪೊಲೀಸರು, ಸಿಸಿಟಿವಿ ಪರಿಶೀಲನೆ ನಡೆಸುತ್ತಿದ್ದಾರೆ.

ಇದನ್ನೂ ಓದಿ: Actor Darshan: ರೇಣುಕಾ ಸ್ವಾಮಿ ಕೊಲೆ ಆರೋಪಿಗಳ ನಡುವೆಯೇ ಚಕಮಕಿ, ಗೋಳಾಟ!

Exit mobile version