Site icon Vistara News

Murder Case: ಕರಗ ಉತ್ಸವದ ವೇಳೆ ಅಣ್ಣಮ್ಮ ದೇವಾಲಯದ ಮುಂದೆ ಹಲ್ಲೆ, ಯುವಕ ಸಾವು

murder case bengaluru karaga

ಬೆಂಗಳೂರು: ನಿನ್ನೆ ನಡೆದ ಬೆಂಗಳೂರಿನ ಐತಿಹಾಸಿಕ ಕರಗ (Bengaluru karaga) ಮೆರವಣಿಗೆಯ ಸಂದರ್ಭದಲ್ಲಿಯೇ ಯುವಕನೊಬ್ಬನ ಕೊಲೆ (Murder Case) ಆಗಿದೆ. ಮೆರವಣಿಗೆ ವೇಳೆ ಯುವಕರ ನಡುವೆ ಸೃಷ್ಟಿಯಾದ ಗಲಾಟೆ, ಕೊಲೆಯಲ್ಲಿ ಅಂತ್ಯವಾಗಿದೆ.

ವಿವಿ ಗಿರಿ ಕಾಲೋನಿಯ ಯುವಕ ಡಿ.ಸಾರದಿ, ಕೊಲೆಯಾದ ಯುವಕ. ಏಪ್ರಿಲ್‌ 24ರ ಬೆಳಿಗ್ಗೆ 3.30ರ ಸುಮಾರಿಗೆ ಅಣ್ಣಮ್ಮ ದೇಗುಲದ ಮುಂದೆಯೇ ಈ ಘಟನೆ ನಡೆದಿದೆ. ಮೆರವಣಿಗೆಯಲ್ಲಿ ಡ್ಯಾನ್ಸ್ ಮಾಡುತ್ತಿದ್ದ ಒಬ್ಬ ವ್ಯಕ್ತಿ ಸಾರದಿ ಮತ್ತು ಸ್ನೇಹಿತರನ್ನು ಟಚ್ ಮಾಡಿದ್ದಾನೆ. ಟಚ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಮೂರ್ನಾಲ್ಕು ಹುಡುಗರಿಂದ ಹಲ್ಲೆ ನಡೆದಿದೆ.

ಈ ವೇಳೆ ಸಾರದಿ ಮೇಲೆ ಮಾರಣಾಂತಿಕವಾಗಿ ಹಲ್ಲೆಯಾಗಿದೆ. ತಕ್ಷಣವೇ ಸಾರದಿಯನ್ನು ಮಲ್ಲೇಶ್ವರಂ ಕೆ.ಸಿ ಜನರಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ನಂತರ ಚಿಕಿತ್ಸೆ ಫಲಿಸದೆ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ಕೊಂಡೊಯ್ಯಲಾಯಿತು. ಆದರೆ ಚಿಕಿತ್ಸೆ ಫಲಕಾರಿಯಾಗದೇ ಸಾರದಿ ಮೃತಪಟ್ಟಿದ್ದಾನೆ.

ಜೈ ಶ್ರೀರಾಮ್‌ ಹೇಳಿದ್ದಕ್ಕೆ ಮುಸ್ಲಿಂ ಯುವಕರಿಂದ ಹಲ್ಲೆ; ಇನ್ನೊಂದು ಘಟನೆ

ಕೊಪ್ಪಳ: ʼಜೈ ಶ್ರೀರಾಮ್ʼ ಎಂದ (Jai Sriram Slogan) ವ್ಯಕ್ತಿಯ ಮೇಲೆ ಮುಸ್ಲಿಂ ಯುವಕರು ಹಲ್ಲೆ (Assault Case) ನಡೆಸಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ. ಕೊಪ್ಪಳ (Koppal news) ಜಿಲ್ಲೆಯ ಗಂಗಾವತಿ ತಾಲೂಕಿನ ಶ್ರೀರಾಮನಗರದ ಶೈನ್ ಬಾರ್‌ನಲ್ಲಿ ಈ ಘಟನೆ (Crime news) ನಡೆದಿದ್ದು, ಮದ್ಯ ಸೇವನೆಯ ವೇಳೆ ʼಜೈ ಶ್ರೀರಾಮ್‌ʼ ಎಂದಿದ್ದಕ್ಕೆ ಹಲ್ಲೆ ನಡೆಸಲಾಗಿದೆ ಎಂಬುದು ಆರೋಪ.

ಶ್ರೀರಾಮ ನಗರದ ಕುಮಾರ್ ರಾಠೋಡ್ ಎಂಬವರ ಮೇಲೆ ಹಲ್ಲೆ ಮಾಡಿದ್ದಾರೆಂದು ಆರೋಪಿಸಲಾಗಿದೆ. ಹಲ್ಲೆಯಲ್ಲಿ ಗಾಯಗೊಂಡಿರುವ ಕುಮಾರ್ ರಾಠೋಡ್ ಆಸ್ಪತ್ರೆಗೆ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಾರ್‌ನಲ್ಲಿ ʼಜೈ ಶ್ರೀರಾಮ್‌ʼ ಎಂದು ಕೂಗಿದಾಗ 20 ಜನ ಮುಸ್ಲಿಂ ಯುವಕರು ಘೇರಾಯಿಸಿ ಸೇರಿ ಹಲ್ಲೆ ನಡೆಸಿದ್ದಾರೆ ಎಂದು ದೂರಿನಲ್ಲಿ ತಿಳಿಸಲಾಗಿದೆ. ಸ್ಥಳಕ್ಕೆ ಗಂಗಾವತಿ ಗ್ರಾಮೀಣ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.

ಶ್ರೀರಾಮನವಮಿ (Sri Ram Navami) ಸಂದರ್ಭದಲ್ಲಿ ಜೈ ಶ್ರೀರಾಮ್‌ ಘೋಷಣೆ ಕೂಗಿದ್ದ ಯುವಕರನ್ನು ಅಡ್ಡಗಟ್ಟಿ ಕೆಲ ಮುಸ್ಲಿಂ ಯುವಕರು ಗೂಂಡಾಗಿರಿ ನಡೆಸಿದ್ದ ಘಟನೆ ಬೆಂಗಳೂರಿನ ವಿದ್ಯಾರಣ್ಯಪುರದಲ್ಲಿ ನಡೆದಿತ್ತು. ಹಿಂದು ಯುವಕರ ಮೇಲೆ ಹಲ್ಲೆ ಪ್ರಕರಣ ಸಂಬಂಧ ಡಿ. ಪವನ್ ಕುಮಾರ್ ನೀಡಿದ ದೂರಿನ ಮೇರೆಗೆ ವಿದ್ಯಾರಣ್ಯಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಈ ಬಗ್ಗೆ ಕೆಲವರನ್ನು ವಶಕ್ಕೆ ಪಡೆದುಕೊಂಡು ವಿಚಾರಿಸಲಾಗಿದೆ.

ಗುಜರಿ ಅಂಗಡಿ ಮಾಲೀಕನಿಗೆ ಬೆದರಿಸಿ ಹಣ ಪೀಕಿದ ಪೊಲೀಸ್‌ 

ಬೆಂಗಳೂರು: ಮಾರತ್ತಹಳ್ಳಿ ಪೊಲೀಸ್ ಠಾಣೆ ಸಿಬ್ಬಂದಿ ಸುಳ್ಳು ಆರೋಪಗಳನ್ನು ಮಾಡಿ ಗುಜರಿ ಅಂಗಡಿ ಮಾಲೀಕನಿಂದ ಹಣ ವಸೂಲಿ (Fraud Case) ಮಾಡಿರುವ ಆರೋಪವೊಂದು ಕೇಳಿ ಬಂದಿದೆ. ಗುಜರಿ ಅಂಗಡಿ ಮಾಲೀಕ ಅಖ್ತಿರ್ ಅಲಿ ಮಂಡಲ್‌ ಎಂಬುವವರು ಈ ಸಂಬಂಧ ಪೊಲೀಸ್‌ ಠಾಣೆ ಮೆಟ್ಟಿಲೇರಿದ್ದಾರೆ.

ಅಖ್ತರ್ ಅವರು ವೈಟ್ ಫೀಲ್ಡ್ ಪೊಲೀಸ್ ಠಾಣೆ ವ್ಯಾಪ್ತಿಯ ನಲ್ಲೂರಳ್ಳಿಯಲ್ಲಿ ಗುಜರಿ ಅಂಗಡಿ ಇಟ್ಟುಕೊಂಡಿದ್ದರು. ಕಳೆದ ಏಪ್ರಿಲ್ 17ರ ಮಧ್ಯಾಹ್ನ 12ಗಂಟೆಗೆ ಗುಜುರಿ ಬಳಿ ಪೊಲೀಸ್ ಸಿಬ್ಬಂದಿ, ಇನ್ಫಾರ್ಮರ್ ಎಸ್.ನಿವಾಸ್ ಎಂಬಾತನ ಜತೆಗೆ ಆಗಮಿಸಿದ್ದರು. ಹೀಗೆ ಬಂದವರೇ ನಾವು ಪೊಲೀಸರು ನೀವು ದಂಧೆ ನಡೆಸುತ್ತಿದ್ದೀರಾ? ಗಾಂಜಾ ಮಾರಾಟ ಮಾಡುತ್ತೀದ್ದೀರಾ ಎಂದು ಬೆದರಿಕೆ ಹಾಕಿದ್ದಾರೆ.

ಕೆಲಸಗಾರರ ಮೇಲೆ ಹಲ್ಲೆ ಮಾಡಿ ಅಖ್ತರ್ ಬಳಿ ಸುಮಾರು 2 ಲಕ್ಷ ರೂ. ಹಣವನ್ನು ಇನ್ಫಾರ್ಮರ್ ಖಾತೆಗೆ ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಮೊದಲು 20 ಸಾವಿರ ನಗದು ಪಡೆದುಕೊಂಡು ಬಳಿಕ ಬ್ಯಾಂಕ್ ಖಾತೆಯಿಂದ 80 ಸಾವಿರ ರೂ. ವರ್ಗಾವಣೆ ಮಾಡಿಸಿಕೊಂಡಿದ್ದಾರೆ. ಅಷ್ಟೇ ಅಲ್ಲ ಹೋಗುವಾಗ ಬೆದರಿಕೆ ಹಾಕಿ ಎಟಿಎಂ ಕಾರ್ಡ್ ಹಾಗೂ ಪಿನ್ ನಂಬರ್‌ ಪಡೆದುಕೊಂಡಿದ್ದಾರೆ. ಬಳಿಕ ಎಟಿಎಂನಿಂದ 50 ಸಾವಿರ ಹಣ ಡ್ರಾ ಮಾಡಿಕೊಂಡಿದ್ದಾರೆ.

ಮರುದಿನ ವಾಪಸ್‌ ಗುಜುರಿ ಅಂಗಡಿಗೆ ಬಂದಿದ್ದ ಆರೋಪಿಗಳು, ಎಟಿಎಂ ಕಾರ್ಡ್ ಕೊಟ್ಟು ಮತ್ತೆ 50 ಸಾವಿರ ಹಣ ಪಡೆದುಕೊಂಡು ಹೋಗಿದ್ದಾರೆ. ಮತ್ತೊಮ್ಮೆ 50 ಸಾವಿರ ರೂ. ಕೊಡಬೇಕು ಇಲ್ಲದಿದ್ದರೆ ಬೈಕ್ ತೆಗೆದುಕೊಂಡು ಹೋಗುವುದಾಗಿ ಬೆದರಿಕೆ ಹಾಕಿದ್ದಾರೆ. ಇವರ ಕಾಟ ತಾಳಲಾರದೆ ಅಖ್ತಿರ್‌ ವೈಟ್ ಫೀಲ್ಡ್ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ವೈಟ್ ಫೀಲ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗುತ್ತಿದ್ದಂತೆ ನಿವಾಸ್ ಎಂಬಾತನನ್ನು ಬಂಧಿಸಿದ್ದಾರೆ. ತಲೆಮರೆಸಿಕೊಂಡಿರುವ ಮೂವರು ಆರೋಪಿಗಳಿಗೆ ಹುಡುಕಾಟ ನಡೆಸಿದ್ದಾಗಿ ವೈಟ್ ಫೀಲ್ಡ್ ಡಿಸಿಪಿ ಶಿವಕುಮಾರ್ ಗುಣಾರೆ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: Murder Case : ಕೊಲೆಯಾದ ಮಹಿಳೆಗೆ 20 ಹುಡುಗರ ಸಹವಾಸ! ಅವರಿಗೆ ಆಕೆ ಇಟ್ಟಿದ್ದ ಹೆಸರು ಆರೆಂಜ್, ಆ್ಯಪಲ್, ಬನಾನಾ ಇತ್ಯಾದಿ!

Exit mobile version