ಬೆಂಗಳೂರು/ಗದಗ/ಉಡುಪಿ: ಬೆಂಗಳೂರಿನ ಯಲಹಂಕ ಉಪನಗರ ಪೊಲೀಸ್ ಠಾಣಾ ವ್ಯಾಪ್ತಿಯ ಡೈರಿ ಸರ್ಕಲ್ ಬಳಿ ವ್ಯಕ್ತಿ ತಲೆ ಮೇಲೆ ಕಲ್ಲೆಸೆದು ಭೀಕರವಾಗಿ ಕೊಲೆ (Murder case) ಮಾಡಲಾಗಿದೆ. ನೇಪಾಳ ಮೂಲದ ಗಜೇಂದ್ರ ಸಿಂಗ್ ಕೊಲೆಯಾದವನು
ಕಳೆದ ಮೂರು ವರ್ಷದ ಹಿಂದೆ ನೇಪಾಳದಿಂದ ಬೆಂಗಳೂರಿಗೆ ಬಂದಿದ್ದ ಗಜೇಂದ್ರ ಸಿಂಗ್, ಯಲಹಂಕದ ತಿರುಪತಿ ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ. ನಿನ್ನೆ ಶುಕ್ರವಾರ ರಾತ್ರಿ ಕೆಲಸ ಮುಗಿಸಿಕೊಂಡು ಹೋಟೆಲ್‌ನಲ್ಲಿ ಕೆಲಸ ಮಾಡಿಕೊಂಡಿದ್ದ ಸಂತೋಷ್ ಜತೆ ಬಾರ್‌ಗೆ ಹೋಗಿದ್ದ.
ಇಬ್ಬರು ಕಂಠಪೂರ್ತಿ ಕುಡಿದು ಮನೆಗೆ ಹೋಗುವಾಗ ಕ್ಷುಲ್ಲಕ ಕಾರಣಕ್ಕೆ ಗಲಾಟೆ ಮಾಡಿಕೊಂಡಿದ್ದಾರೆ. ಗಲಾಟೆ ವಿಕೋಪಕ್ಕೆ ಹೋಗಿ ಗಜೇಂದ್ರ ಸಿಂಗ್ ತಲೆ ಮೇಲೆ ಕಲ್ಲುಎತ್ತಿ ಹಾಕಿ ಕೊಲೆ ಮಾಡಿ ಸಂತೋಷ್ ಎಸ್ಕೇಪ್ ಆಗಿದ್ದಾನೆ. ಘಟನೆ ಸಂಬಂದ ಯಲಹಂಕ ನ್ಯೂಟೌನ್ ಪೊಲೀಸ್ ಠಾಣೆಯಲ್ಲಿ ಕೊಲೆ ಕೇಸ್ ದಾಖಲಾಗಿದ್ದು ಆರೋಪಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಮೃತದೇಹವನ್ನು ಯಲಹಂಕ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಸೇಡಿಗಾಗಾಗಿ ಗ್ರಾಪಂ ಸದಸ್ಯನ ಮನೆ ಮೇಲೆ ದಾಳಿ
ಗದಗ ತಾಲೂಕಿನ ಹುಯಿಲಗೋಳ ಗ್ರಾಮದಲ್ಲಿ ಕೆಲ ಕಿಡಿಗೇಡಿಗಳು ಸೇಡು ತೀರಿಸಿಕೊಳ್ಳಲು ರಾತ್ರೋರಾತ್ರಿ ಗ್ರಾಮ ಪಂಚಾಯಿತಿ ಸದಸ್ಯನ ಮನೆ ಮೇಲೆ ದಾಳಿ ಮಾಡಿದ್ದಾರೆ. ಮನೆ ಮುಂದೆ ನಿಲ್ಲಿಸಿದ್ದ ವಾಹನಗಳನ್ನು ಜಖಂಗೊಳಿಸಿದ್ದಾರೆ. ದುಷ್ಕರ್ಮಿಗಳ ಅಟ್ಟಹಾಸದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಮೇ 8ರ ಮಧ್ಯರಾತ್ರಿ ಘಟನೆ ನಡೆದಿದೆ.
ಗ್ರಾಮ ಪಂಚಾಯಿತಿ ಸದಸ್ಯ ಮಿಲಿಂದ್ ಕಾಳೆ ಮನೆ ಮೇಲೆ ದಾಳಿ ಮಾಡಲಾಗಿದೆ. ಘಟನೆಯ ದೃಶ್ಯಾವಳಿ ಸಿಸಿ ಟಿವಿಯಲ್ಲಿ ಸೆರೆಯಾಗಿದ್ದು, ವಿಂಡ್ ಫ್ಯಾನ್ ವ್ಯವಹಾರವಾಗಿ ಮಿಲಿಂದ್ ಕಾಳೆ, ಪ್ರಕಾಶ್ ನಿಡಗುಂದಿ ಮಧ್ಯದ ಮುನಿಸಿನಿಂದ ಗಲಾಟೆ ನಡೆದಿದೆ ಎನ್ನಲಾಗಿದೆ. ಮಿಲಿಂದ್ ಕಾಳೆ ಮೇಲಿನ ಸೇಡಿಗಾಗಿ ಲಾಂಗ್, ಮಚ್ಚು, ರಾಡ್, ಕಲ್ಲುಗಳಿಂದ ದಾಳಿ ನಡೆಸಿದ್ದಾರೆ.
ಈ ಘಟನೆಯಿಂದ ಗ್ರಾಮದಲ್ಲಿ ಭಯದ ವಾತಾವರಣ ನಿರ್ಮಾಣವಾಗಿದ್ದು, ಗದಗ ಗ್ರಾಮೀಣ ಠಾಣೆಯಲ್ಲಿ ಸುಮಾರು 11 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಪೊಲೀಸರು ಹಲವರನ್ನು ಬಂಧಿಸಿದ್ದು, ಪರಾರಿ ಆಗಿರುವ ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ.
ಈ ಪ್ರಕರಣದ ಬೆನ್ನಲ್ಲೇ ಮೇ 9ರ ಮಧ್ಯಾಹ್ನ ಆರೋಪಿ ಪ್ರಕಾಶ್ ನಿಡಗುಂದಿ ಕಾರಿಗೆ ಬೆಂಕಿ ಹಾಗೂ ಮನೆ ಮೇಲೆ ದಾಳಿ ನಡೆಸಲಾಗಿದೆ. ಮಿಲಿಂದ್ ಕಾಳೆ ಮನೆ ಮೇಲೆ ದಾಳಿಯ ರಿವೇಂಜ್‌ಗೆ ಪ್ರಕಾಶ್ ನಿಡಗುಂದಿ ಕಾರಿಗೆ ಮಿಲಿಂದ ಕಾಳೆ ಬೆಂಬಲಿಗರು ಬೆಂಕಿ ಹಚ್ಚಿದ್ದಾರೆ. ಎರಡೂ ಬಣದಿಂದ ಹಲವರನ್ನು ಬಂಧಿಸಲಾಗಿದೆ. ಎರಡು ಕಡೆಯಿಂದಲ್ಲೂ ಪ್ರತ್ಯೇಕ ದೂರು ದಾಖಲಾಗಿದೆ.
ಉಡುಪಿಯಲ್ಲಿ ಪೆಟ್ರೋಲ್ ವಿಚಾರಕ್ಕೆ ಕಿರಿಕ್
ತಡರಾತ್ರಿ ಪೆಟ್ರೋಲ್ ಹಾಕದೇ ಇದ್ದದ್ದಕ್ಕೆ ಬಂಕ್ ಸಿಬ್ಬಂದಿ ಮೇಲೆ ಯುವಕರು ಮಾರಣಾಂತಿಕ ಹಲ್ಲೆ ನಡೆಸಿರುವ ಘಟನೆ ಉಡುಪಿ ನಗರದ ಪೆಟ್ರೋಲ್ ಬಂಕ್ ಒಂದರಲ್ಲಿ ನಡೆದಿದೆ. ಎರಡು ಬೈಕ್‌ಗಳಲ್ಲಿ ಮಧ್ಯರಾತ್ರಿ ಬಂದ ಯುವಕರು ಪೆಟ್ರೋಲ್ ಹಾಕಿಸಿಕೊಳ್ಳಲು ಬಂದಿದ್ದಾರೆ. ಪೆಟ್ರೋಲ್ ಹಾಕಲು ಹೇಳಿದಾಗ ಸಿಬ್ಬಂದಿ ಬಂದ್ ಆಗಿದೆ ಎಂದಿದ್ದಾರೆ. ಇಷ್ಟಕ್ಕೆ ಕೋಪಗೊಂಡ ಯುವಕ ಸಿಬ್ಬಂದಿ ಮೇಲೆ ಹಲ್ಲೆ ಮಾಡಿದ್ದಾನೆ. ಪ್ರದೀಪ್ ಕುಮಾರ್ (26) ಹಲ್ಲೆಗೊಳಾಗಿ ಮಣಿಪಾಲ ಆಸ್ಪತ್ರೆಗೆ ದಾಖಲಾಗಿದ್ದಾರೆ.
ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ