Site icon Vistara News

Murder Case: ಪತ್ನಿಯ ಪ್ರಿಯಕರನನ್ನು ನಡು ಬೀದಿಯಲ್ಲಿ ಬರ್ಬರವಾಗಿ ಕೊಚ್ಚಿ ಕೊಂದ!

chintamani murder case

ಚಿಕ್ಕಬಳ್ಳಾಪುರ: ಪತ್ನಿಯ ಜೊತೆ ಅನೈತಿಕ ಸಂಬಂಧ ಹೊಂದಿದ್ದ ಪ್ರಿಯಕರನನ್ನು ಪತಿ ಭೀಕರವಾಗಿ ಕೊಚ್ಚಿ ಕೊಲೆ (Murder case) ಮಾಡಿದ್ದಾನೆ. ಚಿಕ್ಕಬಳ್ಳಾಪುರ (chikkaballapura news) ಜಿಲ್ಲೆಯ ಚಿಂತಾಮಣಿ‌ ನಗರದಲ್ಲಿರುವ (chintamani murdr) ಟಿಪ್ಪು ಬಡಾವಣೆಯಲ್ಲಿ ಘಟನೆ ನಡೆದಿದೆ.

ಜಾಬೀರ್ ಪಾಷ‌ (26) ಅಲಿಯಾಸ್ ನೇಪಾಳ್ ಕೊಲೆಯಾದ ವ್ಯಕ್ತಿ. ಮುಕ್ತಿಯಾರ್ ಪಾಷ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ. ಮುಕ್ತಿಯಾರ್ ಪಾಷನ ಪತ್ನಿಯೊಂದಿಗೆ ಜಾಬೀರ್ ಪಾಷ ಅಕ್ರಮ ಸಂಬಂಧ ಹೊಂದಿದ್ದ ಎನ್ನಲಾಗಿದೆ. ನಿನ್ನ ಪತ್ನಿಗೂ ನನಗೂ ಅಕ್ರಮ ಸಂಬಂಧ ಇದೆ ಎಂದು ಜಾಬೀರ್‌ ಬಹಿರಂಗವಾಗಿ ಹೇಳಿದ್ದ. ಇದರಿಂದ ಕ್ರೋಧತಪ್ತನಾಗಿದ್ದ ಮುಕ್ತಿಯಾರ್‌, ಜಾಬೀರ್ ಪಾಷಗೆ ಮುಹೂರ್ತ ಫಿಕ್ಸ್ ಮಾಡಿದ್ದ.

ನಿನ್ನೆ ಮಧ್ಯರಾತ್ರಿ ನಡುಬೀದಿಯಲ್ಲಿ ಮಾರಕಾಸ್ಟ್ರಗಳಿಂದ ಕೊಚ್ಚಿ ಕೊಲೆ ಮಾಡಿ ನೇರವಾಗಿ ಠಾಣೆಗೆ ಬಂದು ಆರೋಪಿ ಮುಕ್ತಿಯಾರ್‌ ಶರಣಾಗಿದ್ದಾನೆ. ಸ್ಥಳಕ್ಕೆ ಚಿಂತಾಮಣಿ ನಗರ ಪೊಲೀಸರು ಭೇಟಿ ನೀಡಿ ಪರಿಶೀಲನೆ‌ ನಡೆಸಿದ್ದಾರೆ.

ನಿರ್ಮಲಾ ಸೀತಾರಾಮನ್‌ ಪಿಎ ಸೋಗಿನಲ್ಲಿ ಎಂಎಸ್‌ ಧೋನಿ ಮ್ಯಾನೇಜರ್‌ಗೆ ವಂಚನೆ!

ಬೆಂಗಳೂರು: ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್‌ ಅವರ ಪಿಎ ತಾನು ಎಂದು ಹೇಳಿಕೊಂಡು ಇಂಡಿಯಾ ಕ್ರಿಕೆಟ್‌ ತಂಡದ ಮಾಜಿ ಕ್ಯಾಪ್ಟನ್ ಎಂಎಸ್ ಧೋನಿ ಅವರ ಮ್ಯಾನೇಜರ್‌ಗೆ ವಂಚಿಸಿದ ಘಟನೆ ನಡೆದಿದೆ. ತಿರುಪತಿಯಲ್ಲಿ ಶ್ರೀ ವೆಂಕಟೇಶ್ವರ ದೇವರ ಸ್ಪೆಷಲ್ ದರ್ಶನ ಮಾಡಿಸಿಕೊಡುತ್ತೇನೆ ಎಂದು ಹೇಳಿ ಲಕ್ಷಾಂತರ ರೂಪಾಯಿ ವಂಚಿಸಿದ್ದಾನೆ.

ಕಳೆದ ವರ್ಷ ಅಕ್ಟೋಬರ್‌ನಲ್ಲಿ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದ್ದು, ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ. ಎಂಎಸ್ ಧೋನಿ ಅವರ ಮ್ಯಾನೇಜರ್ ಸ್ವಾಮಿನಾಥನ್ ಎಂಬವರಿಗೆ ಬರೋಬ್ಬರಿ ಆರುವರೆ ಲಕ್ಷ ರೂಪಾಯಿಗಳಷ್ಟು ವಂಚಿಸಲಾಗಿದೆ.

ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರ ಪಿಎ ತಾನು; ತಾನು ಐಎಎಸ್ ಅಧಿಕಾರಿಯಾಗಿದ್ದು, ತಿರುಪತಿಯಲ್ಲಿ ಹನ್ನೆರಡು ಮಂದಿಗೆ ದೇವರ ವಿಶೇಷ ದರ್ಶನ ಮಾಡಿಸುತ್ತೇವೆ; ರೂಮ್ ವ್ಯವಸ್ಥೆ ಇರುತ್ತದೆ. ಪ್ರೋಟೋಕಾಲ್ ಮೂಲಕ ಯಾರನ್ನಾದ್ರೂ ಕಳಿಸುವ ಅಧಿಕಾರ ತನಗಿದೆ ಎಂದು ಒಬ್ಬಾತ ವಂಚಿಸಿದ್ದಾನೆ.

ಸ್ನೇಹಿತರ ಕುಟುಂಬವನ್ನು ಕಳಿಸುವ ನಿಟ್ಟಿನಲ್ಲಿ ಮೂರು ಲಕ್ಷ ರೂಪಾಯಿ ಹಣವನ್ನು ಧೋನಿ ಅವರ ಮ್ಯಾನೇಜರ್‌ ಸ್ವಾಮಿನಾಥನ್ ಅವರು ಪೋನ್ ಪೇ ಮಾಡಿದ್ದರು. ಸಾಯಿ ಟ್ರಸ್ಟ್ ಹೆಸರಿಗೆ ಮೂರು ಲಕ್ಷ ಹಣ ಪಡೆದಿರುವ ಆರೋಪವಿದೆ. ಹಣ ಪಡೆದು ಹಿಂತಿರುಗಿಸದ ಹಿನ್ನೆಲೆಯಲ್ಲಿ ಸ್ವಾಮಿನಾಥನ್ ಅವರು ಹೆಚ್‌ಎಸ್‌ಆರ್ ಲೇಔಟ್ ಠಾಣೆಗೆ ದೂರು ನೀಡಿದ್ದಾರೆ.

ಹಾಸನದಲ್ಲಿ ಸರಣಿ ಕಳ್ಳತನ

ಹಾಸನ: ಹಾಸನ ಜಿಲ್ಲೆ ಸಕಲೇಶಪುರ ಪಟ್ಟಣದಲ್ಲಿ ಸರಣಿ ಕಳ್ಳತನ ನಡೆದಿದೆ. ಎರಡು ಅಂಗಡಿಗಳಲ್ಲಿ ಕಳ್ಳತನ, ಒಂದು ಅಂಗಡಿಯಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಒಂದು ಬೈಕ್‌ನಲ್ಲಿ ಬಂದಿರುವ ಮೂವರು ಚೋರರು ಕೃತ್ಯ ಎಸಗಿದ್ದಾರೆ.

ಸಕಲೇಶಪುರ ಪಟ್ಟಣದ ಬಿ.ಎಂ.ರಸ್ತೆಯ ಬಾಲಾಜಿ ಟ್ರೇಡ‌ರ‌್ಸ್, ಮಲ್ಲಮ್ಮನ ರಸ್ತೆಯ ಮಹತಿ ಸೂಪರ್ ಮಾಕೆರ್ಟ್‌‌ನಲ್ಲಿ ಕಳ್ಳತನ ನಡೆದಿದ್ದು, ಮಾಸ್ಕ್ ಧರಿಸಿ ರೋಲಿಂಗ್ ಶಟರ್ ಮುರಿದು ಇಬ್ಬರು ಕಳ್ಳರು ಒಳಪ್ರವೇಶಿಸಿದ್ದಾರೆ. ಮಲ್ನಾಡ್ ಆಟೋಮೊಬೈಲ್‌ನಲ್ಲಿ ಕಳ್ಳತನಕ್ಕೆ ಯತ್ನ ನಡೆದಿದೆ. ಮಹತಿ ಸೂಪರ್ ಮಾರ್ಕೆಟ್‌ನಲ್ಲಿ 70 ಸಾವಿರ ನಗದು, ಬಾಲಾಜಿ ಟ್ರೇಡರ್ಸ್‌ನಲ್ಲಿ 20 ಸಾವಿರ ಹಣ ಹಾಗೂ ಸಿಗರೇಟ್ ಪ್ಯಾಕ್‌‌ಗಳನ್ನು ಕದ್ದೊಯ್ದಿದ್ದಾರೆ. ಕಳ್ಳತನದ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದೆ. ಸಕಲೇಶಪುರ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಇದನ್ನೂ ಓದಿ: Indian Student Dead: ಮತ್ತೊಬ್ಬ ಭಾರತೀಯ ವಿದ್ಯಾರ್ಥಿ ಸಾವು, 2 ವಾರದಲ್ಲಿ ಇದು 3ನೇ ಕೊಲೆ!

Exit mobile version