ಬೆಂಗಳೂರು: ಕೆಲವರಿಗೆ ಒಂದು ಕೆಟ್ಟ ಅಭ್ಯಾಸ ಇರುತ್ತದೆ. ಗೆಳೆಯರ ಗುಂಪಿನಲ್ಲಿ ಒಬ್ಬ ವ್ಯಕ್ತಿಯನ್ನು ತುಂಬ ಕಾಲೆಳೆದು ಮಾತನಾಡುವುದು! ಅವನ ಹಾವಭಾವಗಳ ಬಗ್ಗೆ, ಅವನ ಕುಟುಂಬದ ಬಗ್ಗೆ, ಅವನ ಗೆಳೆಯರ ಬಗ್ಗೆ, ಅವನ ಕಷ್ಟಗಳ ಬಗ್ಗೆ ಅಪಮಾನವಾಗುವಂತೆ (Degrading in the name of joke) ತಮಾಷೆ ಮಾಡುವುದು. ಇನ್ನು ಕೆಲವು ಕಡೆ ಒಬ್ಬನೇ ವ್ಯಕ್ತಿ ತನ್ನ ಇಡೀ ಗೆಳೆಯರ ಬಗ್ಗೆ ಕೆಟ್ಟದಾಗಿ ಮಾತನಾಡುವ ದುರಭ್ಯಾಸ ಹೊಂದಿರುತ್ತಾರೆ. ಇದೆಲ್ಲ ಒಂದು ಸಹ್ಯ ಮಟ್ಟವನ್ನು ಮೀರಿದಾಗ ಅದು ಭಯಾನಕ ತಿರುವು ಪಡೆದುಕೊಳ್ಳುವ ಅಪಾಯವಿದೆ. ಬೆಂಗಳೂರಿನ ಕೊತ್ತನೂರಿನಲ್ಲಿ ನಡೆದ ಒಂದು ಕೊಲೆಯ (Murder Case) ಹಿಂದೆ ಇರುವುದು ಕೂಡಾ ಇಂಥಹುದೇ ಒಂದು ಕಥೆ.
ಕೊತ್ತನೂರಿನ ಖಾಲಿ ಜಮೀನಿನಲ್ಲಿ ಶುಕ್ರವಾರ ಒಂದು ಶವ ಪತ್ತೆಯಾಗಿತ್ತು. ಕೊಲೆ ಮಾಡಿದ ಸ್ಥಿತಿಯಲ್ಲಿ ಕಂಡ ಯುವಕ ಯಾರು ಎನ್ನುವುದು ಮೊದಲು ಯಾರಿಗೂ ಗೊತ್ತಿರಲಿಲ್ಲ. ಆದರೆ, ಕೇವಲ 24 ಗಂಟೆಗಳಲ್ಲಿ ಸತ್ತವನು ಯಾರು ಮತ್ತು ಕೊಲೆ ಮಾಡಿದವರು ಯಾರು ಎನ್ನುವುದನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ.
ಕೊಲೆಯಾದ ವ್ಯಕ್ತಿ ಜಾರ್ಖಂಡ್ ಮೂಲದ ಲಕ್ಷ್ಮಣ್ ಮಾಂಝಿ. ಈತ ಇತ್ತೀಚೆಗೆ ಕೆಲಸ ಅರಸಿಕೊಂಡು ಗೆಳೆಯರ ಜತೆ ಬೆಂಗಳೂರಿಗೆ ಬಂದಿದ್ದ. ಆತ ಬೆಂಗಳೂರಿನ ಬೈರತಿಯಲ್ಲಿ ಬೈರತಿಯಲ್ಲಿ ಗೆಳೆಯರೊಂದಿಗೆ ವಾಸವಿದ್ದ.
ನವೆಂಬರ್ 16ರಂದು ರಾತ್ರಿ ಅವರೆಲ್ಲರೂ ಸೇರಿ ಗುಂಡು ಪಾರ್ಟಿ ಮಾಡಿದ್ದರು. ಆಗ ಅವರ ನಡುವೆ ಮಾತಿನ ಜಗಳ ಮತ್ತು ಹೊಡೆದಾಟ ನಡೆದಿತ್ತು.
ಅವರ ನಡುವೆ ಜಗಳ ಶುರುವಾಗಿದ್ದು ಸುಮ್ಮಸುಮ್ಮನೆ ಅಪಮಾನ ಮಾಡುವ ರೀತಿಯಲ್ಲಿ ಕಾಲೆಳೆದು ಮಾತನಾಡುವ ಚಾಳಿಯ ಕಾರಣಕ್ಕಾಗಿ. ಲಕ್ಷ್ಮಣ್ ಮಾಂಝಿ ಜಾರ್ಖಂಡ್‌ನಲ್ಲಿದ್ದಾಗಲೂ ಎಲ್ಲರ ಕಾಲೆಳೆದು ಮಾತನಾಡುತ್ತಿದ್ದ. ಈ ಚಾಳಿಯನ್ನು ಬೆಂಗಳೂರಿಗೆ ಬಂದ ಮೇಲೂ ಮುಂದುವರಿಸಿದ್ದ. ಅದರಲ್ಲೂ ಕುಡಿದ ಹೊತ್ತಿನಲ್ಲಿ ಇದು ವಿಪರೀತಕ್ಕೇರಿತ್ತು.
ಸಾಕಷ್ಟು ಹೊತ್ತು ಸಹಿಸಿಕೊಂಡ ಗೆಳೆಯರು ಮಾತಿನಿಂದ ಆತನನ್ನು ನಿಯಂತ್ರಿಸಲು ಪ್ರಯತ್ನಿಸಿದ್ದರು. ಆದರೆ, ಅವರಿಗೂ ಅಮಲು ಏರುತ್ತಿದ್ದಂತೆಯೇ ಅದು ಘರ್ಷಣೆಯ ಮಟ್ಟಕ್ಕೆ ಹೋಯಿತು. ಆತನನ್ನು ಕುಡಿಯೋ ಜಾಗದಿಂದ ಹೊರಗೆ ಕರೆದುಕೊಂಡು ಬಂದವರೇ ಖಾಲಿ ಜಮೀನಿನಲ್ಲಿ ನೆಲಕ್ಕೆ ಉರುಳಿಸಿ ಹಲ್ಲೆ ಮಾಡಿದರು. ಅಷ್ಟೇ ಅಲ್ಲ, ಕೊನೆಗೆ ಹಾಲೋ ಬ್ಲಾಕನ್ನು ತಲೆಯ ಮೇಲೆ ಹಾಕಿ ಜಜ್ಜಿ ಕೊಲೆಯನ್ನೇ ಮಾಡಿಬಿದ್ದರು.
ಇದನ್ನೂ ಓದಿ: Murder Judgement: ಪತ್ನಿಯ ಪ್ರೇಮಿಯನ್ನು ಗುಂಡಿಕ್ಕಿ ಕೊಂದ ಹಂತಕನಿಗೆ ಆಜೀವ ಜೈಲುಶಿಕ್ಷೆ
ಬೈರತಿಯ ಕ್ಯಾಲಸನಹಳ್ಳಿಯ ಖಾಲಿ ಜಮೀನಿಗೆ ಕರೆತಂದು ಕೊಲೆ ಮಾಡಿದ ಆರೋಪಿಗಳನ್ನು ಶವವನ್ನು ಅಲ್ಲೇ ಬಿಟ್ಟು ಓಡಿದರು. ನವೆಂಬರ್ 17ರಂದು ಇದು ಯಾರ ಶವ ಎಂಬ ಚರ್ಚೆ ಶುರುವಾಗಿತ್ತು. ಆದರೆ, ಪೊಲೀಸರಿಗೆ ವಿಡಿಯೊ ಸಾಕ್ಷ್ಯಗಳು ಸಿಕ್ಕಿದ್ದರಿಂದ ಕೊಲೆಗಡುಕರನ್ನು ಪತ್ತೆ ಹಚ್ಚುವುದು ಕಷ್ಟವಾಗಲಿಲ್ಲ. ಕೃತ್ಯಕ್ಕೆ ಸಂಬಂಧಿಸಿ ಜಗದೇವ್ ಹಾಗೂ ಚಂದನ್ ಕುಮಾರ್ ಎಂಬವರನ್ನು ಬಂಧಿಸಲಾಗಿದೆ. ಕೊತ್ತನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.