Site icon Vistara News

Murder case: ವಿವಾಹಿತೆಯ ಮೋಹಿಸಿ ಹತ್ಯೆಯಾದ ಲಾರಿ ಚಾಲಕ

Tipper lorry driver killed for adultery

ನೆಲಮಂಗಲ: ಕಳೆದ ಫೆಬ್ರವರಿ 2ರಂದು ನಡೆದಿದ್ದ ಟಿಪ್ಪರ್ ಲಾರಿ ಚಾಲಕನ ಕೊಲೆ (murder case) ರಹಸ್ಯವನ್ನು ಮಾದನಾಯಕನಹಳ್ಳಿ ಪೊಲೀಸರು ಭೇದಿಸಿದ್ದಾರೆ. ಡಿವೈಎಸ್‌ಪಿ ಜಗದೀಶ್ ನೇತೃತ್ವದಲ್ಲಿ ನಡೆದ ಕಾರ್ಯಾಚರಣೆಯಲ್ಲಿ ಮೂವರು ಕೊಲೆ ಆರೋಪಿಗಳನ್ನು ಬಂಧಿಸಿಲಾಗಿದೆ. ನಾಗೇಂದ್ರ ಕುಮಾರ್ @ನಾಗ (27), ಖೈಸರ್ ಪಾಷ(30), ರುಬೀಯ(26) ಬಂಧಿತ ಆರೋಪಿಗಳು.

ಚಿಕ್ಕಬಳ್ಳಾಪುರದ ಎಸ್.ದೇವಗಾನಹಳ್ಳಿಯ ಶ್ರೀನಿವಾಸ್ ಎಂಬಾತನನ್ನು ಹುಸ್ಕೂರು ಕ್ರಾಸ್ ಬಳಿ ಬರ್ಬರವಾಗಿ ಹತ್ಯೆ ಮಾಡಲಾಗಿತ್ತು. ಇದರ ತನಿಖೆ ನಡೆಸಿ ಪೊಲೀಸರು ಆರೋಪಿಗಳನ್ನು ಬಂಧಿಸಿದ್ದಾರೆ. ಎಸ್.ದೇವಗಾನಹಳ್ಳಿಯ ಮಂಜುಳ ಎಂಬಾಕೆ ಮದುವೆ ಆಗಿ ಮಗು ಇದ್ದರೂ, ಶ್ರೀನಿವಾಸ್‌ ಹಾಗೂ ನಾಗೇಂದ್ರ ಇಬ್ಬರೊಟ್ಟಿಗೂ ಅಕ್ರಮ ಸಂಬಂಧವನ್ನು ಹೊಂದಿದ್ದಳು. ಈ ವಿಷಯವು ಶ್ರೀನಿವಾಸ್‌ಗೆ ತಿಳಿದು ಸಿಟ್ಟು ಹೊರಹಾಕಿದ್ದ. ನಾಗೇಂದ್ರ ಜತೆಗಿನ ಸಂಬಂಧವನ್ನು ಪ್ರಶ್ನಿಸಿ ಮಂಜುಳಗೆ ಹೊಡೆದಿದ್ದ. ಶ್ರೀನಿವಾಸ್‌ ಹಲ್ಲೆ ಮಾಡಿದ್ದ ವಿಚಾರವನ್ನು ಮಂಜುಳಾ ನಾಗೇಂದ್ರನಿಗೆ ಹೇಳಿದ್ದಳು.

ಮಂಜುಳಾ ಹಾಗೂ ಕೊಲೆಯಾದ ಶ್ರೀನಿವಾಸ್‌

ಇದು ನಾಗೇಂದ್ರನನ್ನು ಕೆರಳಿಸಿ, ಹತ್ಯೆ ಮಾಡುವ ಹಂತಕ್ಕೆ ತಲುಪಿತ್ತು. ಇದಕ್ಕಾಗಿ ಪ್ಲ್ಯಾನ್‌ ಮಾಡಿಕೊಂಡ ನಾಗೇಂದ್ರ, ಹುಸ್ಕೂರು ಕ್ರಾಸ್ ಬಳಿ ತನಗೆ ಪರಿಚಯವಿದ್ದ ದಂಪತಿ ಖೈಸರ್‌ ಪಾಷ್‌, ರುಬಿಯಾ ಜತೆಗೆ ಸೇರಿ ಕೊಲೆಗೆ ಸಂಚು ರೂಪಿಸಿದ್ದ. ಅದರಂತೆ ತನ್ನ ಟಿಪ್ಪರ್‌ ವಾಹನದಲ್ಲೇ ಬಂದಿದ್ದ ಶ್ರೀನಿವಾಸ್‌ನ ಕುತ್ತಿಗೆಗೆ ಚಾಕು ಇರಿದು ಭೀಕರವಾಗಿ ಕೊಲೆಗೈದು ಪರಾರಿ ಆಗಿದ್ದರು.

ಖೈಸರ್ ಪಾಷ, ರುಬೀಯ ದಂಪತಿ ತನಿಖೆ ದಾರಿ ತಪ್ಪಿಸಲು, ಹಣಕಾಸಿನ ವಿಚಾರಕ್ಕೆ ಅಪರಿಚಿತ ವ್ಯಕ್ತಿಗಳು ಗಲಾಟೆ ಮಾಡಿ ಕೊಲೆಗೈದಿದ್ದಾರೆ ಎಂದಿದ್ದರು. ಆದರೆ ರುಬಿಯಾ ಕೊಲೆಗೂ ಮುನ್ನ ಶ್ರೀನಿವಾಸ್‌ಗೆ 26 ಬಾರಿ ಫೋನ್‌ ಮಾಡಿದ್ದಳು. ಇದರ ಜಾಡು ಹಿಡಿದ ಪೊಲೀಸರು ಮೊಬೈಲ್ ಲೋಕೇಷನ್ ಆಧಾರದ ಮೇಲೆ ಆರೋಪಿಗಳನ್ನು ಬಂಧಿಸಿ, ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾರೆ.

ಖೈಸರ್‌, ರುಬಿಯಾ ದಂಪತಿ ಹಾಗೂ ನಾಗೇಂದ್ರ

ಈ ಮೂವರು ಆರೋಪಿಗಳು ಹಿಂದೊಮ್ಮೆ ಹಲವು ಪ್ರಕರಣಗಳಲ್ಲಿ ಭಾಗಿಯಾಗಿದ್ದರು ಎಂದು ತಿಳಿದು ಬಂದಿದೆ. ಆರೋಪಿ (ಎ1) ನಾಗೇಂದ್ರ ಕುಮಾರ್ ಮೇಲೆ ಗೌರಿಬಿದನೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಕೊಲೆ ಯತ್ನ ಕೇಸ್ ದಾಖಲಾಗಿದೆ. ಇನ್ನೂ ಎ2 ಆರೋಪಿ ಖೈಸರ್ ಪಾಷನ ಮೇಲೆ ಬೆಂಗಳೂರು ನಗರದ ಅಶೋಕ ನಗರ, ಹೈಗ್ರೌಂಡ್ಸ್ ಪೊಲೀಸ್ ಠಾಣೆಗಳಲ್ಲಿ ಕೊಲೆ ಯತ್ನ, ದರೋಡೆ, ಮನೆಗಳವು ಸೇರಿದಂತೆ ಒಟ್ಟು16 ಪ್ರಕರಣಗಳು ದಾಖಲಾಗಿದೆ. ಖೈಸರ್‌ ಅಶೋಕನಗರ ಪೊಲೀಸ್ ಠಾಣೆಯಲ್ಲಿ ರೌಡಿ ಶೀಟರ್‌ ಆಗಿದ್ದಾನೆ. ಸದ್ಯ ಮಾದನಾಯಕನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣದಲ್ಲಿ ಬಂಧಿಯಾಗಿದ್ದು, ಹೆಚ್ಚಿನ ವಿಚಾರಣೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version