Site icon Vistara News

Murder case : ತೃತೀಯ ಲಿಂಗಿಯನ್ನು ಕೊಂದ ಮಹಿಳೆ; ಮಗನಿಗೆ ನಾಯಿ ಚೈನ್‌ ಹಾಕಿ ಎಳೆಯುವಾಗ ಸಾವು

Murder case

ಬೆಂಗಳೂರು: ಸಣ್ಣದಾಗಿ ಶುರುವಾದ ಜಗಳವು ವಿಕೋಪಕ್ಕೆ ತಿರುಗಿತ್ತು. ತನ್ನ ಪ್ರಾಣ ಉಳಿಸಿಕೊಳ್ಳಲು ಆ ಮಹಿಳೆ ಮತ್ತೊಬ್ಬರ ಪ್ರಾಣವನ್ನೇ (Murder case) ತೆಗೆದು ಕಾಲ್ಕಿತ್ತಿದ್ದಳು. ಆದರೆ ಪ್ರಕರಣ ದಾಖಲಿಸಿಕೊಂಡು ತನಿಖೆಗಿಳಿದ ಪೊಲೀಸರು ಕೊಲೆ ಆರೋಪಿಯನ್ನು ಬಂಧಿಸಿದ್ದಾರೆ. ತೃತೀಯ ಲಿಂಗಿಯನ್ನು ಹತ್ಯೆ ಮಾಡಿದ್ದ ಮಹಿಳೆಯ ಬಂಧನವಾಗಿದೆ.

ತೃತೀಯ ಲಿಂಗಿ ಮಂಜಿ ಬಾಯ್ ಅಲಿಯಾಸ್‌ ಮಂಜ ನಾಯ್ಕ್ (42) ಕೊಲೆಯಾದವರು. ಕಳೆದ ಏ. 3ರಂದು ಜೆ.ಬಿ.ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಮಂಜಿ ಬಾಯ್ ಶವ ಪತ್ತೆಯಾಗಿತ್ತು. ಈ ಬಗ್ಗೆ ಮೊದಲಿಗೆ ಪೊಲೀಸರು ಯುಡಿಆರ್‌ (UDR) ಪ್ರಕರಣವನ್ನು ದಾಖಲಿಸಿಕೊಂಡಿದ್ದರು.

ನಂತರ ಮರಣೋತ್ತರ ಪರೀಕ್ಷೆ ವೇಳೆ ಉಸಿರುಗಟ್ಟಿಸಿ ಕೊಲೆ ಮಾಡಿರುವುದು ಬಯಲಾಗಿತ್ತು. ಹೀಗಾಗಿ ಮಂಜಿ ಬಾಯ್‌ ಜತೆ ವಾಸವಿದ್ದ ಪ್ರೇಮ (51) ಎಂಬ ಮಹಿಳೆಯನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.

ವಿಚಾರಣೆ ವೇಳೆ ಪ್ರೇಮಾ ತಾನೇ ಮಂಜಿಯನ್ನು ಕೊಲೆ ಮಾಡಿದ್ದಾಗಿ ಹೇಳಿ ನಂತರ ಕಾರಣವನ್ನು ಬಾಯ್ಬಿಟ್ಟಿದ್ದಳು. ಪ್ರೇಮ ತನ್ನ ಪತಿಯನ್ನು ಕಳೆದುಕೊಂಡ ಮೇಲೆ ಕಳೆದ 20 ವರ್ಷದಿಂದ ತೃತೀಯ ಲಿಂಗಿ ಮಂಜಿ ಬಾಯ್‌ ಜತೆ ವಾಸವಿದ್ದಳು. ಮಂಜಿ ಬಾಯ್ ಕಂಪನಿಯೊಂದರ ಕ್ಯಾಂಟಿನ್‌ನಲ್ಲಿ ಕೆಲಸ ಮಾಡುತ್ತಿದ್ದರೆ, ಪ್ರೇಮಾ ಹೌಸ್ ಕೀಪಿಂಗ್ ಕೆಲಸ ಮಾಡುತ್ತಿದ್ದಳು.

ಈ ನಡುವೆ ಚೆನ್ನಾಗಿಯೇ ಇದ್ದ ಅವರಿಬ್ಬರು ಕಳೆದ ಏ.26ರಂದು ಮನೆಯಲ್ಲಿದ್ದಾಗ ಇಬ್ಬರ ನಡುವೆ ಯಾವುದೋ ವಿಚಾರಕ್ಕೆ ಜಗಳ ಆಗಿತ್ತು. ಇವರಿಬ್ಬರ ಗಲಾಟೆ ವಿಕೋಪಕ್ಕೆ ತಿರುಗಿದ್ದು, ಮಂಜಿ ಬಾಯ್‌ ಪ್ರೇಮಾಳಿಗೆ ಚಾಕುವಿನಿಂದ ಚುಚ್ಚಲು ಮುಂದಾಗಿದ್ದ.ತನ್ನ ಪ್ರಾಣ ಉಳಿಸಿಕೊಳ್ಳಲು ಪ್ರೇಮಾ ಟವಲ್‌ನಿಂದ ಮಂಜಿಬಾಯ್ ಕುತ್ತಿಗೆ ಬಿಗಿದಿದ್ದಳು. ಅಷ್ಟೇ ಉಸಿರುಗಟ್ಟಿ ಮಂಜಿ ಬಾಯ್‌ ಕ್ಷಣಾರ್ಧದಲ್ಲೇ ಮೃತಪಟ್ಟಿದ್ದ. ಸದ್ಯ ಆರೋಪಿತೆ ಪ್ರೇಮಾಳನ್ನು ಬಂಧಿಸಿರುವ ಪೊಲೀಸರು ತನಿಖೆಯನ್ನು ಮುಂದುವರಿಸಿದ್ದಾರೆ.

ಇದನ್ನೂ ಓದಿ: Murder Case : ಕಾಂಗ್ರೆಸ್‌ಗೆ ವೋಟ್‌ ಹಾಕಿದ್ದಕ್ಕೆ ಅಮಾವಾಸ್ಯೆ ದಿನ ಕರೆದು ಕೊಂದರು

ಮಂಗಳೂರಲ್ಲಿ ಯುವಕ ಅನುಮಾನಾಸ್ಪದ ಸಾವು

ಮಂಗಳೂರಿನ ಪುತ್ತೂರಿನ ಬೆಟ್ಟಂಪ್ಪಾಡಿಯ ಪಾರೆ ಎಂಬಲ್ಲಿ ಯುವಕನೊಬ್ಬ ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾನೆ. ಚೇತನ್ (33) ಮೃತ ದುರ್ದೈವಿ. ಮೃತ ಚೇತನ್ ತಾಯಿ ಉಮಾವತಿ ನೇಣು ಬಿಗಿದು ಸಾವನ್ನಪ್ಪಿರುವ ಬಗ್ಗೆ ಪೊಲೀಸರಿಗೆ ದೂರು ನೀಡಿದ್ದರು. ಆದರೆ ಪೊಲೀಸರ ಪರಿಶೀಲನೆ ವೇಳೆ ಪ್ರಕರಣ ಸಂಬಂಧ ಅನುಮಾನ ಮೂಡಿದರಿಂದ ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡಿದ್ದರು.

ನಿನ್ನೆ ಗುರುವಾರ ರಾತ್ರಿ ಚೇತನ್‌ ಕಂಠಪೂರ್ತಿ ಕುಡಿದು ಮನೆಗೆ ಬಂದಿದ್ದ. ಈ ವೇಳೆ ತಾಯಿ ಜತೆ ಜಗಳವಾಡಿ ಹೊರನಡೆದ ಚೇತನ್‌, ಮನೆ ಪಕ್ಕದಲ್ಲಿರುವ ಯೂಸುಫ್ ಎನ್ನುವವರ ಮನೆ ಬಾಗಿಲು ಬಡಿದಿದ್ದ. ಹೀಗಾಗಿ ಯೂಸುಫ್, ಚೇತನ್ ಅವರ ತಾಯಿ ಉಮಾವತಿಗೆ ಕರೆ ಮಾಡಿ ವಿಷಯ ತಿಳಿಸಿದ್ದರು.

ಕೂಡಲೇ ಅಲ್ಲಿಗೆ ಬಂದ ಚೇತನ್ ತಾಯಿ ಉಮಾವತಿ, ನಾಯಿಯನ್ನು ಕಟ್ಟುವ ಸಂಕೋಲೆಯನ್ನು ಮಗನ ಸೊಂಟಕ್ಕೆ ಹಾಕಿ ಕರೆದುಕೊಂಡು ಹೋಗಲು ಯತ್ನಿಸಿದ್ದಾರೆ. ಚೇತನ್‌ ಮತ್ತಷ್ಟು ಹಠಕ್ಕೆ ಬಿದ್ದಾಗ ಯೂಸುಫ್ ಹಾಗೂ ಸ್ಥಳೀಯ ನಿವಾಸಿಗಳು ಸೇರಿ ಚೇತನ್‌ನನ್ನು ಮನೆಗೆ ಎಳೆದೊಯ್ದಿದ್ದಾರೆ.

ಸಂಕೋಲೆ ಎಳೆಯುವ ಸಮಯದಲ್ಲಿ ಚೇತನ್‌ ಕುತ್ತಿಗೆಗೆ ಸುತ್ತಿಕೊಂಡಿದೆ. ಈ ವೇಳೆ ಕುತ್ತಿಗೆಗೆ ಸಂಕೋಲೆ ಬಿಗಿದು ಚೇತನ್‌ ಮೃತಪಟ್ಟಿದ್ದಾನೆ. ಸದ್ಯ ಘಟನೆಗೆ ಸಂಬಂಧಿಸಿದಂತೆ ತಾಯಿ ಉಮಾವತಿ ಸೇರಿದಂತೆ ಮೂವರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಮರಣೋತ್ತರ ಪರೀಕ್ಷೆಗಾಗಿ ಮೃತದೇಹವನ್ನು ಮಂಗಳೂರಿಗೆ ರವಾನೆ ಮಾಡಲಾಗಿದೆ. ಪುತ್ತೂರು ಗ್ರಾಮಾಂತರ ಪೋಲೀಸ್ ಠಾಣೆಯಲ್ಲಿ ಈ ಸಂಬಂಧ ಪ್ರಕರಣ ದಾಖಲಾಗಿದ್ದು, ತನಿಖೆಯನ್ನು ಮುಂದುವರಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version