Site icon Vistara News

Murder Case : ಪತ್ನಿಯ ಕೊಂದು ಹೂತುಹಾಕಿದನೇ ಸಂಶಯಪಿಶಾಚಿ ಗಂಡ? ; 20 ದಿನಗಳ ಬಳಿಕ ಶವ ಮೇಲೆತ್ತಿ ಪರೀಕ್ಷೆ

woman death in tumkur

ತುಮಕೂರು: 20 ದಿನಗಳ ಹಿಂದೆ ಸಾವನ್ನಪ್ಪಿದ ಮಹಿಳೆಯೊಬ್ಬರ ಶವವನ್ನು ಇದೀಗ ಅಧಿಕಾರಿಗಳು ಮೇಲೆತ್ತಿದ್ದಾರೆ (Dead body excavated). ಇದಕ್ಕೆ ಕಾರಣ, ಆಕೆಯನ್ನು ಆಕೆಯ ಗಂಡನೇ ಕೊಲೆ (Murder Case) ಮಾಡಿ ಹೂತು ಹಾಕಿದ್ದಾನೆ ಎಂಬ ಆರೋಪ.

ತುಮಕೂರು ನಗರದ ಹೊರವಲಯದಲ್ಲಿರುವ ಶೆಟ್ಟಿಹಳ್ಳಿಯಲ್ಲಿ ವರ್ಷಿಣಿ ಎಂಬವರು ಆಗಸ್ಟ್‌ 2ರಂದು ಮೃತಪಟ್ಟಿದ್ದರು. ಆಕೆಯ ಗಂಡ ಚೇತನ್‌ ಶವದ ಅಂತ್ಯಸಂಸ್ಕಾರ ನಡೆಸಿದ್ದ. ಆದರೆ, ಇದು ಸಹಜ ಸಾವಲ್ಲ, ಇದೊಂದು ಕೊಲೆ ಎನ್ನುವುದು ವರ್ಷಿಣಿ ಮನೆಯವರ ಆರೋಪ. ಹೀಗಾಗಿ ಅಧಿಕಾರಿಗಳು ಅಂತ್ಯ ಸಂಸ್ಕಾರ ನಡೆದ 20 ದಿನಗಳ ಬಳಿಕ ಶವವನ್ನು ಮೇಲೆತ್ತಿದ್ದು ಮರಣೋತ್ತರ ಪರೀಕ್ಷೆ ನಡೆಸುತ್ತಿದ್ದಾರೆ.

ವರ್ಷಿಣಿ ಮತ್ತು ಚೇತನ್‌ಗೆ 15 ವರ್ಷದ ಹಿಂದೆ ಅಂದರೆ 2008ರಲ್ಲಿ ಮದುವೆಯಾಗಿತ್ತು. ಈ ದಂಪತಿಗೆ ಮೂವರು ಮಕ್ಕಳಿದ್ದಾರೆ. ಕಳೆದ ಆಗಸ್ಟ್‌ 2ರಂದು ವರ್ಷಿಣಿ ಮೃತಪಟ್ಟಿದ್ದಾರೆ. ಚೇತನ್‌ ಈ ಸಾವಿನ ವಿಚಾರವನ್ನು ಆಕೆಯ ಹೆತ್ತವರಿಗೂ ತಿಳಿಸದೆ ತಾನೇ ಅಂತ್ಯ ಸಂಸ್ಕಾರವನ್ನು ಕೂಡಾ ಮುಗಿಸಿದ್ದಾನೆ. ಇದು ಮನೆಯವರ ಸಂಶಯಕ್ಕೆ ಕಾರಣವಾಗಿದೆ.

ನಿಜವೆಂದರೆ, ಚೇತನ್‌ ಒಬ್ಬ ಸಂಶಯಪಿಶಾಚಿಯಾಗಿದ್ದು, ಮದುವೆಯಾದ ದಿನದಿಂದಲೇ ಆಕೆಯನ್ನು ಮನೆಯಿಂದ ಹೊರಗೆ ಹೋಗಲು ಬಿಡದೆ ಒಳಗೇ ದಿಗ್ಬಂಧನ ವಿಧಿಸಿದ್ದ. ಆಗಾಗ ವರದಕ್ಷಿಣೆಗಾಗಿ ಕಿರುಕುಳ ನೀಡುತ್ತಿದ್ದ ಎಂದೂ ಮನೆಯವರು ಆರೋಪಿಸಿದ್ದಾರೆ.

ಯಾರೊಂದಿಗೂ ಮಾತನಾಡಲು ಬಿಡದೆ, ಮನೆಯಿಂದ ಹೊರಗೆ ಹೋಗಲೂ ಬಿಡದೆ ಕಾಡುತ್ತಿದ್ದ ಚೇತನ್‌ ಎನ್ನಲಾಗಿದೆ. ಹೀಗಾಗಿ ಆಕೆ ತವರು ಮನೆಗೂ ಹೋಗದೆ ತುಂಬಾ ಸಮಯವಾಗಿತ್ತು. ಜತೆಗೆ ಫೋನ್‌ ಸಂಪರ್ಕ ಮಾಡಲೂ ಬಿಡುತ್ತಿರಲಿಲ್ಲ ಎನ್ನಲಾಗಿದೆ.

ವರ್ಷಿಣಿ ಸತ್ತ ದಿನದಿಂದಲೇ ಇದೊಂದು ಸಹಜ ಸಾವಲ್ಲ. ಚೇತನ್‌ನೇ ಕೊಲೆ ಮಾಡಿರುತ್ತಾನೆ, ಹೀಗಾಗಿಯೇ ಯಾರಿಗೂ ಹೇಳದೆ ಮಣ್ಣು ಮಾಡಿದ್ದಾನೆ. ಆದ್ದರಿಂದ ಸಮಗ್ರ ತನಿಖೆ ನಡೆಸಬೇಕು ಎಂದು ಹೆತ್ತವರು ಒತ್ತಾಯಿಸಿದ್ದರು. ಅವರು ನೀಡಿದ ಹೇಳಿಕೆ, ಕೊಟ್ಟ ದಾಖಲೆಗಳ ಆಧಾರದಲ್ಲಿ ಪೊಲೀಸರಿಗೂ ಸಂಶಯ ಬಂದಿದೆ. ಹೀಗಾಗಿ ಅವರು ಶವವನ್ನು ಹೊರತೆಗೆದು ಮರಣೋತ್ತರ ಪರೀಕ್ಷೆಗೆ ಮುಂದಾಗಿದ್ದಾರೆ.

ತುಮಕೂರು ಎಸಿ ನೇತೃತ್ವದಲ್ಲಿ ಶವವನ್ನು ಮೇಲೆತ್ತಲಾಗಿದ್ದು, ಸರ್ಕಾರಿ ಆಸ್ಪತ್ರೆಯಲ್ಲಿ ಪೋಸ್ಟ್‌ ಮಾರ್ಟಂ ನಡೆಯಲಿದೆ. ಈ ಮೂಲಕ ವರ್ಷಿಣಿ ಅವರ ಮೈಮೇಲೆ ಗಾಯಗಳಿದ್ದವೇ? ಆಕೆಯನ್ನು ಉಸಿರುಗಟ್ಟಿಸಿ ಕೊಲ್ಲಲಾಯಿತೇ? ವಿಷ ನೀಡಲಾಗಿದೆಯೇ ಎಂಬೆಲ್ಲ ನಿಟ್ಟಿನಲ್ಲಿ ತನಿಖೆ ನಡೆಯಲಿದೆ. ಆದರೆ ಅಂತ್ಯ ಸಂಸ್ಕಾರ ನಡೆದು 20 ದಿನಗಳೇ ಕಳೆದಿರುವುದರಿಂದ ಯಾವೆಲ್ಲ ಮಾಹಿತಿಗಳು ಸಿಗಲಿವೆ ಎಂದು ಕಾದು ನೋಡಬೇಕಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿ ಈ ಪ್ರಕ್ರಿಯೆಗಳು ನಡೆಯುತ್ತಿವೆ.

ಇದನ್ನೂ ಓದಿ: Self Harming: ಅನುಮಾನಾಸ್ಪದ‌ ರೀತಿಯಲ್ಲಿ ವಿದ್ಯಾರ್ಥಿನಿ‌ ಸಾವು

Exit mobile version