ಉಡುಪಿ: ತಮ್ಮನೊಬ್ಬ ಸ್ವಂತ ಅಣ್ಣನನ್ನು ದೊಣ್ಣೆಯಿಂದ ಹೊಡೆದು ಹೊಡೆದೇ ಕೊಲೆ ಮಾಡಿದ (Murder Case) ಬರ್ಬರ ಘಟನೆ ಉಡುಪಿ (Udupi news, Udupi crime) ಜಿಲ್ಲೆಯಲ್ಲಿ ನಡೆದಿದೆ. ಹೆಬ್ರಿ ತಾಲೂಕಿನ ನಾಲ್ಕೂರು ಗ್ರಾಮದ ಕಜ್ಕೆ ಅರಮನೆ ಜೆಡ್ಡು ಎಂಬಲ್ಲಿ ಘಟನೆ ನಡೆದಿದೆ.
ಅರಮನೆಜೆಡ್ಡು ನಿವಾಸಿ ಮಂಜುನಾಥ (35) ಮೃತ ಅಣ್ಣ. ಕೊಲೆ ಆರೋಪಿ ತಮ್ಮ ವಿಶ್ವನಾಥನನ್ನು (30) ಪೊಲೀಸರು ವಶಕ್ಕೆ ಪಡೆದಿದ್ದಾರೆ. ಕೂಲಿ ಕೆಲಸ ಮಾಡಿಕೊಂಡಿದ್ದ ಮಂಜುನಾಥ ಮತ್ತು ವಿಶ್ವನಾಥ, ಒಂದೇ ಮನೆಯಲ್ಲಿ ವಾಸವಾಗಿದ್ದು, ಇವರಿಬ್ಬರೂ ಆಗಾಗ ಗಲಾಟೆ ಮಾಡುತ್ತಿದ್ದರು.
ಮಧ್ಯರಾತ್ರಿ ವೇಳೆ ಮದ್ಯ ಸೇವಿಸಿ ಬಂದು ಅಣ್ಣತಮ್ಮಂದಿರ ಗಲಾಟೆ ನಡೆಯುತ್ತಿತ್ತು. ಅಣ್ಣನ ಪತ್ನಿ ಮನೆ ಬಿಟ್ಟು ಹೋಗಿದ್ದು, ಅದಕ್ಕೆ ತಮ್ಮ ಕಾರಣವೆಂದು ಅಣ್ಣನಿಗೆ ಸಿಟ್ಟಿತ್ತು. ಜಗಳದ ವೇಳೆ ನನ್ನ ಪತ್ನಿ ಮನೆ ಬಿಟ್ಟು ಹೋಗಲು ನೀನೇ ಕಾರಣವೆಂದು ಅಣ್ಣ ದೂಷಿಸಿದ್ದ. ಇದರಿಂದ ಕೋಪಗೊಂಡ ತಮ್ಮ ವಿಶ್ವನಾಥ ದೊಣ್ಣೆಯಿಂದ ತಲೆಗೆ ಹೊಡೆದು ಅಣ್ಣನ ಕೊಲೆ ಮಾಡಿದ್ದಾನೆ. ತೀವ್ರ ರಕ್ತಸ್ರಾವವಾಗಿ ಮಂಜುನಾಥ ಸ್ಥಳದಲ್ಲಿಯೇ ಸಾವಿಗೀಡಾಗಿದ್ದಾನೆ. ಹೆಬ್ರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬೀದಿ ಕಾಮಣ್ಣರಿಗೆ ಧರ್ಮದೇಟು
ಕೊಪ್ಪಳ: ರಸ್ತೆಯಲ್ಲಿ ಓಡಾಡುವ ಮಹಿಳೆಯರನ್ನು ಚುಡಾಯಿಸುತ್ತಿದ್ದ ಬೀದಿ ಕಾಮಣ್ಣನನ್ನು ವಿದ್ಯುತ್ ಕಂಬಕ್ಕೆ ಕಟ್ಟಿಹಾಕಿ ಧರ್ಮದೇಟು (Misbehaviour) ಕೊಟ್ಟಿದ್ದಾರೆ. ಕೊಪ್ಪಳದ (Koppala News) ಕನಕಗಿರಿ ಪಟ್ಟಣದ 5ನೇ ವಾರ್ಡ್‌ನಲ್ಲಿ ಘಟನೆ ನಡೆದಿದೆ.
ಕಾಲೇಜು ಯುವತಿಯರಿಗೆ, ಮಹಿಳೆಯರನ್ನು ಹಿಂಬಾಲಿಸಿ ಹಲವು ದಿನಗಳಿಂದ ಕಿರಿಕಿರಿ ಉಂಟು ಮಾಡುತ್ತಿದ್ದ. ಹಲವು ದಿನಗಳಿಂದ ಈತನ ಕಾಟವನ್ನು ಸಹಿಸಿಕೊಂಡು ಬಂದಿದ್ದರು. ಆದರೆ ದಿನ ಕಳೆದಂತೆ ಈತನ ಹುಚ್ಚಾಟ ವಿಪರೀತಗೊಂಡಿತ್ತು. ಇದರಿಂದ ಬೇಸತ್ತ ಮಹಿಳೆಯರು ಈ ವಿಚಾರವನ್ನು ಮನೆಯವರಿಗೆ ಹೇಳಿದ್ದಾರೆ. ಈ ವಿಷಯ ತಿಳಿಯುತ್ತಿದ್ದಂತೆ ಸಿಟ್ಟಾದ ಜನರು ಯುವಕನನ್ನು ಹಿಡಿದು, ವಿದ್ಯುತ್ ಕಂಬಕ್ಕೆ ಕಟ್ಟಿ, ದೊಣ್ಣೆಯಿಂದ ಥಳಿಸಿದ್ದಾರೆ.
ಪೊಲೀಸ್ ಠಾಣೆಗೆ ನುಗ್ಗಿ ಎಎಸ್‌ಐಗೆ ಹೊಡೆದ ಮಹಿಳೆ; ಇಬ್ಬರು ಆಸ್ಪತ್ರೆ ಪಾಲು
ಬೆಂಗಳೂರು: ಪ್ರಾಪರ್ಟಿ ವಿಚಾರದಲ್ಲಿ ನ್ಯಾಯ ಸಿಗಲಿಲ್ಲ ಎಂದು ಸಿಟ್ಟಾದ ಮಹಿಳೆಯೊಬ್ಬರು ಪೊಲೀಸ್ ಮೇಲೆ ಹಲ್ಲೆ (Assault Case) ನಡೆಸಿರುವ ಆರೋಪವೊಂದು ಕೇಳಿ ಬಂದಿದೆ. ಶನಿವಾರ ಮಧ್ಯಾಹ್ನ ಬೆಂಗಳೂರಿನ (Bengaluru News) ಗಂಗಮ್ಮನ ಗುಡಿ ಪೊಲೀಸ್ ಠಾಣೆಯಲ್ಲಿ ಘಟನೆ ನಡೆದಿದೆ.
ಅಶ್ವಿನಿ ಎಂಬಾಕೆ ಎಎಸ್ಐ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾರೆ. ಹಲವು ದಿನಗಳಿಂದ ಗಂಗಮ್ಮನ ಗುಡಿ ಪೊಲೀಸ್ ಠಾಣೆಗೆ ಅಶ್ವಿನಿ ಬಂದು ಹೋಗುತ್ತಿದ್ದರು. ಆಸ್ತಿ ವಿಚಾರಕ್ಕೆ ಸಂಬಂಧಿಸಿದಂತೆ ಅನೇಕ ಬಾರಿ ಅಶ್ವಿನಿ ನ್ಯಾಯಕ್ಕಾಗಿ ಹೋರಾಟ ಮಾಡುತ್ತಿದ್ದರು ಎನ್ನಲಾಗಿದೆ.ಆದರೆ ತನ್ನ ಸಮಸ್ಯೆಗೆ ನ್ಯಾಯ ಸಿಗುತ್ತಿಲ್ಲವೆಂಬ ಸಿಟ್ಟಿಗೆ ಹಲ್ಲೆ ನಡೆಸಿದ್ದಾರೆ ಎನ್ನಲಾಗಿದೆ.
ಮಾನಸಿಕ ಅಸ್ವಸ್ಥತೆಯಾಗಿರುವ ಅಶ್ವಿನಿ ಕಳೆದ 15 ವರ್ಷಗಳಿಂದ ಚಿಕಿತ್ಸೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ನಿನ್ನೆ ಠಾಣೆಗೆ ಬಂದ ಅಶ್ವಿನಿ ಎಎಸ್‌ಐ ನಾಗರಾಜು ಜತೆ ಮಾತುಕತೆ ನಡೆಸಿದ್ದಾಳೆ. ಈ ವೇಳೆ ಏಕಾಏಕಿ ಸಿಟ್ಟಾಗಿ ಕೈಗೆ ಸಿಕ್ಕ ವಸ್ತುವಿನಿಂದ ನಾಗರಾಜು ಮೇಲೆ ಹಲ್ಲೆ ನಡೆಸಿದ್ದಾಳೆ.
ಸದ್ಯ ಹಲ್ಲೆಗೊಳಗಾದ ಎಎಸ್ಐ ನಾಗರಾಜು ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಇತ್ತ ಅಶ್ವಿನಿಗೂ ನಿಮ್ಹಾನ್ಸ್ ಆಸ್ಪತ್ರೆಗೆ ದಾಖಲು ಮಾಡಿ ಚಿಕಿತ್ಸೆ ಕೊಡಿಸಲಾಗುತ್ತಿದೆ. ಇನ್ನೂ ಈ ಘಟನೆ ಬಗ್ಗೆ ಯಾವುದೇ ಪ್ರಕರಣ ದಾಖಲಾಗಿಲ್ಲ.
ಇದನ್ನೂ ಓದಿ:Assault Case : ಶಿವಮೊಗ್ಗದಲ್ಲಿ ಗಲಾಟೆ ತಡೆಯಲು ಹೋದ ಪೊಲೀಸರ ಮೇಲೆ ಪುಂಡರಿಂದ ಹಲ್ಲೆ