ಲಕ್ನೋ: ಲಕ್ನೋದಲ್ಲಿ ನಡೆದ ಪಬ್‌ಜಿ ಆನ್‌ಲೈನ್ ಗೇಮ್‌ಗೆ ಸಂಬಂಧಿಸಿದ ಕೊಲೆ ಪ್ರಕರಣದ ವಿವರಗಳು ಒಂದೊಂದಾಗಿ ಹೊರಬೀಳುತ್ತಿದ್ದು, ಪೊಲೀಸರೇ ಅವಾಕ್ಕಾಗಿದ್ದಾರೆ. ರಾತ್ರಿ ಮಗ ಗುಂಡು ಹಾರಿಸಿದ್ದರೂ ತಾಯಿ ಬೆಳಗಿನವರೆಗೂ ಜೀವಂತವಾಗಿದ್ದರು ಎಂಬ ಅಂಶವೂ ತಿಳಿದುಬಂದಿದೆ.
ಪಬ್‌ಜಿ ಆಡುವುದನ್ನು ತಡೆದಿದ್ದಕ್ಕೆ ಹದಿಹರೆಯದ ಹುಡುಗ ತನ್ನ ತಾಯಿಗೆ ಗುಂಡು ಹಾರಿಸಿದ ಘಟನೆ ಲಕ್ನೋದಲ್ಲಿ ನಡೆದಿತ್ತು. ತನ್ನ ತಂದೆಯ ಪಿಸ್ತೂಲಿನಿಂದ ತನ್ನ ತಾಯಿಗೆ ಗುಂಡು ಹಾರಿಸಿದ ನಂತರ, ಆತ ಅವಳನ್ನು ಕೋಣೆಯಲ್ಲಿ ಕೂಡಿಹಾಕಿದ್ದ. ಅವಳು ಜೀವಂತವಾಗಿದ್ದಾಳೊ ಅಥವಾ ಸತ್ತಿದ್ದಾಳೋ ಎಂದು ನಿರಂತರವಾಗಿ ಪರೀಕ್ಷಿಸುತ್ತಿದ್ದನಂತೆ ಆತ.
ಇದನ್ನೂ ಓದಿ: ಪಬ್-ಜಿ ಆಡಲು ಬಿಡಲಿಲ್ಲ ಎಂದು ತಾಯಿಯನ್ನೇ ಗುಂಡಿಟ್ಟು ಕೊಂದ 16ರ ಬಾಲಕ, ಬಳಿಕ ಮಾಡಿದ್ದೇನು?
ಪೊಲೀಸ್ ವರದಿಯ ಪ್ರಕಾರ, ತಾಯಿಯ ಶವವನ್ನು ಲಕ್ನೋದ ತನ್ನ ಮನೆಯಲ್ಲಿ ಮೂರು ದಿನಗಳ ಕಾಲ ಬಚ್ಚಿಟ್ಟಿದ್ದನಂತೆ. ಮರುದಿನ ಬೆಳಿಗ್ಗೆ ಅವನು ಕೋಣೆಯ ಬಾಗಿಲು ತೆರೆದಾಗ, ಅವನ ತಾಯಿ ಇನ್ನೂ ಉಸಿರಾಡುತ್ತಿದ್ದಳು ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ. ಈ ಮಾಹಿತಿಯನ್ನು ವಿಚಾರಣೆಯ ವೇಳೆ ಹುಡುಗ ಹೇಳಿಕೊಂಡಿದ್ದಾನೆ.
ಆಕೆಯನ್ನು ಉಳಿಸಬಹುದಿತ್ತಾ? ಆ ಹುಡುಗ ಮನಸ್ಸನ್ನು ಪರಿವರ್ತಿಸಿಕೊಂಡು, ತನ್ನನ್ನು ಹೆತ್ತು ಹೊತ್ತು ಸಾಕಿರುವುದನ್ನು ನೆನೆದು, ಬೆಳಿಗ್ಗೆ ಯಾರಿಗಾದರೂ ಮಾಹಿತಿ ನೀಡಿದ್ದರೆ, ತಾಯಿಯ ಜೀವವನ್ನು ಉಳಿಸಬಹುದಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.
ಹುಡುಗ ತನ್ನ ತಾಯಿಗೆ ಗುಂಡು ಹಾರಿಸಿದ ನಂತರ ಆಕೆಯನ್ನು ಪಕ್ಕದ ಕೋಣೆಯಲ್ಲಿ ಎಸೆದು ತನ್ನ ತಂಗಿಯನ್ನು ಮತ್ತೊಂದು ಕೋಣೆಯಲ್ಲಿ ಕೂಡಿಹಾಕಿದ್ದಾನೆ. ವಿಚಾರಣೆಯ ಸಮಯದಲ್ಲಿ, ತನ್ನ ಅಪರಾಧವನ್ನು ಒಪ್ಪಿಕೊಂಡಿದ್ದಾನೆ. ಮತ್ತು ಪಬ್‌ಜಿ ಆಡಲು ಅವಕಾಶ ನೀಡದ್ದಕ್ಕಾಗಿ ತಾಯಿಯ ಮೇಲೆ ಕೋಪಗೊಂಡಿದ್ದು, ತಂದೆಯ ಬಂದೂಕಿನಿಂದ ಅವಳನ್ನು ಕೊಂದಿರುವುದಾಗಿ ಹೇಳಿದ್ದಾನೆ. ಇಷ್ಟಕ್ಕೂ ಸುಮ್ಮನಾಗದ ಆತ ಸ್ನೇಹಿತನನ್ನು ಸಹ ಕರೆದು ಶವವನ್ನು ವಿಲೇವಾರಿ ಮಾಡಲು ಸಹಾಯ ಮಾಡುವಂತೆ ಗನ್ ತೋರಿಸಿ ಬೆದರಿಕೆ ಹಾಕಿದ್ದನಂತೆ. ಸಹಾಯ ಮಾಡಿದ್ದಕ್ಕಾಗಿ ಅವನಿಗೆ 50 ರೂ.ಗಳನ್ನು ನೀಡಿ, ಘಟನೆಯ ಬಗ್ಗೆ ಯಾರಿಗೂ ಹೇಳದಂತೆ ಎಚ್ಚರಿಕೆ ನೀಡಿದ್ದ ಎಂದು ವಿಚಾರಣೆಯ ವೇಳೆ ಬಾಯಿಬಿಟ್ಟಿದ್ದಾನೆ.
ಇದನ್ನೂ ಓದಿ: ಚಿಕ್ಕಮಗಳೂರಿನಲ್ಲಿ ಮಗನ ಪಬ್‌ಜೀ ಹುಚ್ಚಾಟ ತಡೆದ ತಾಯಿ ಗುಂಡೇಟಿಗೆ ಬಲಿ