ನವ ದೆಹಲಿ: ಅಫ್ಘಾನಿಸ್ತಾನ ಮೂಲದ 35 ವರ್ಷದ ಮುಸ್ಲಿಂ ಧರ್ಮಗುರುವನ್ನು ಮಹಾರಾಷ್ಟ್ರದ ನಾಸಿಕ್‌ನಲ್ಲಿ ಹತ್ಯೆಗೈಯ್ಯಲಾಗಿದೆ. ಮುಂಬೈನಿಂದ 200ಕಿಮೀ ದೂರದಲ್ಲಿರುವ ಯೆಯೋಲಾ ನಗರದಲ್ಲಿರುವ ಕೈಗಾರಿಕಾ ಪ್ರದೇಶದಲ್ಲಿ ಮಂಗಳವಾರ ಘಟನೆ ನಡೆದಿದೆ. ಮೃತ ಧರ್ಮಗುರುವನ್ನು ಖ್ವಾಜಾ ಸೈಯದ್ ಚಿಸ್ತಿ ಎಂದು ಗುರುತಿಸಲಾಗಿದೆ. ಇವರ ಹಣೆಗೇ ಗುಂಡಿಕ್ಕಲಾಗಿದೆ. ಹೀಗಾಗಿ ಚಿಸ್ತಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಖ್ವಾಜಾ ಸೈಯದ್ ಚಿಸ್ತಿ ಯೆಯೋಲಾ ನಗರಕ್ಕೆ ಬಂದು ಹಲವು ವರ್ಷಗಳೇ ಕಳೆದು ಹೋಗಿತ್ತು. ಇಲ್ಲೆಲ್ಲ ಸೂಫಿ ಬಾಬಾ ಎಂದೇ ಅವರು ಖ್ಯಾತರಾಗಿದ್ದರು. ಇವರನ್ನು ಕೊಂದ ಆರೋಪಿಗಳು ಚಿಸ್ತಿಯವರ ಒಂದು ಎಸ್‌ಯುವಿಯಲ್ಲೇ ಅಲ್ಲಿಂದ ಪರಾರಿಯಾಗಿದ್ದಾರೆ. ಈ ಪ್ರಕರಣದಲ್ಲಿ ಅವರ ಕಾರು ಚಾಲಕನೇ ಮುಖ್ಯ ಆರೋಪಿ ಎಂಬ ಶಂಕೆ ವ್ಯಕ್ತವಾಗಿದ್ದು ಸದ್ಯ ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದೇವೆ ಎಂದು ಪೊಲೀಸ್ ಅಧಿಕಾರಿ ಸಚಿನ್ ಪಾಟೀಲ್ ತಿಳಿಸಿದ್ದಾರೆ.
ಈ ಘಟನೆಗೆ ಯಾವುದೇ ಧಾರ್ಮಿಕ ವಿಷಯದ ಆಯಾಮ ಕಾಣಿಸುತ್ತಿಲ್ಲ. ಇದು ಭೂಮಿ ವಿಚಾರಕ್ಕೆ ನಡೆದ ಹತ್ಯೆ ಎಂಬುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಇವರ ಅಫ್ಘಾನಿಸ್ತಾನದಿಂದ ಇಲ್ಲಿಗೆ ಬಂದು ನೆಲೆಸಿದ್ದರು. ಅವರಿಗೆ ಇಲ್ಲಿ ಯಾವುದೇ ಭೂಮಿ ಖರೀದಿ ಸಾಧ್ಯವಾಗಿರಲಿಲ್ಲ. ಆದರೆ ಸ್ಥಳೀಯ ಕೆಲವರ ಸಹಾಯದಿಂದ ಸ್ವಲ್ಪ ಭೂಮಿಯನ್ನು ಅತಿಕ್ರಮಣ ಮಾಡಿಕೊಂಡಿದ್ದರು ಎಂಬ ವರದಿ ಸಿಕ್ಕಿದೆ. ಇನ್ನಷ್ಟು ತನಿಖೆ ನಡೆಸಲಾಗುವುದು ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: ಚಿಕನ್ ಕಟ್ಟಿಕೊಡಲು ಹಿಂದೂ ದೇವತೆಗಳ ಚಿತ್ರ ಇರುವ ಪೇಪರ್ ಬಳಸುತ್ತಿದ್ದ ಮುಸ್ಲಿಂ ವ್ಯಕ್ತಿ ಅರೆಸ್ಟ್