ಮೈಸೂರು: ಮೈಸೂರು ವಿಶ್ವವಿದ್ಯಾಲಯದ (Mysore University) ವಿದ್ಯಾರ್ಥಿಯೊಬ್ಬ ಮಾನಸಿಕ ಕಿರುಕುಳಕ್ಕೆ ಬೇಸತ್ತು (Prof Harassment) ಆತ್ಮಹತ್ಯೆಗೆ (Self Harming) ಯತ್ನಿಸಿದ್ದಾನೆ. ದೈಹಿಕ ಶಿಕ್ಷಣ ವಿಭಾಗದ ಗಗನ್ ಎಂಬಾತ ಆತ್ಮಹತ್ಯೆಗೆ ಯತ್ನಿಸಿದವನು.
ದೈಹಿಕ ಶಿಕ್ಷಣ ವಿಭಾಗದ ಪ್ರೊ.ವೆಂಕಟೇಶ್ ಎಂಬುವವರು ಮಾನಸಿಕವಾಗಿ ಕಿರುಕುಳ ನೀಡುವುದರ ಜತೆಗೆ ದೈಹಿಕವಾಗಿ ಹಲ್ಲೆ ನಡೆಸಿದ್ದಾರೆ. ಇದಕ್ಕೆಲ್ಲ ಮಹೇಂದ್ರ ಹಾಗೂ ಸಹಪಾಠಿ ರಶ್ಮಿ ಎಂಬಾಕೆ ಕಾರಣ. ಇವರಿಂದ ನಾನು ಪೊಲೀಸ್ ಠಾಣೆ ಮೆಟ್ಟಿಲೇರಿದ್ದೇನೆ ಎಂದು ಗಗನ್ ಆರೋಪಿಸಿದ್ದಾನೆ.
ಈ ಮೂವರ ಮಾನಸಿಕ ಕಿರುಕುಳದಿಂದ ಮನನೊಂದು ಸಾಯುವ ನಿರ್ಧಾರಕ್ಕೆ ಬಂದಿದ್ದಾಗಿ ಆತ್ಮಹತ್ಯೆ ಯತ್ನಕ್ಕೂ ಮುನ್ನ ವಿಡಿಯೊ ಮಾಡಿದ್ದಾನೆ. ಮೈಸೂರು ವಿವಿಯ ವಿಸಿ ಚೆಂಬರ್ ಎದುರೇ ಆತ್ಮಹತ್ಯೆ ಯತ್ನಿಸಿದ್ದಾನೆ. ಮಾತ್ರೆ ಸೇವಿಸಿ ಸೆಲ್ಫಿ ವಿಡಿಯೊ ಮಾಡಿ ಅಸ್ವಸ್ಥಗೊಂಡಿದ್ದಾನೆ. ವಿಷಯ ತಿಳಿದು ಕೂಡಲೇ ಸಹಪಾಠಿಗಳು ಡಿ.ಆರ್.ಎಂ. ಆಸ್ಪತ್ರೆಗೆ ದಾಖಲು ಮಾಡಿದ್ದಾರೆ. ಮಾತ್ರೆ ಸೇವಿಸಿ ಅಸ್ವಸ್ಥಗೊಂಡಿರುವ ವಿದ್ಯಾರ್ಥಿಗೆ ಚಿಕಿತ್ಸೆ ಮುಂದುವರಿದಿದೆ.
ಹಾಸ್ಟೆಲ್ನಲ್ಲಿ ಮದ್ಯ ಸೇವನೆ
ವಿದ್ಯಾರ್ಥಿ ಗಗನ್ ಆತ್ಮಹತ್ಯೆ ಯತ್ನ ಪ್ರಕರಣಕ್ಕೆ ಸಂಬಂಧಿಸಿದಂತೆ ಮೈಸೂರು ವಿವಿ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಡಾ.ವೆಂಕಟೇಶ್ ಸ್ಪಷ್ಟನೆ ನೀಡಿದ್ದಾರೆ. ಗಗನ್ ನಾಲ್ಕನೇ ಸೆಮಿಸ್ಟರ್ ವಿದ್ಯಾರ್ಥಿ ಆಗಿದ್ದಾನೆ. ಆತ ಹಾಸ್ಟೆಲ್ನಲ್ಲೇ ಮದ್ಯ ಸೇವಿಸುತ್ತಿದ್ದ ಜತೆಗೆ ತನ್ನ ಬಟ್ಟೆಗಳನ್ನು ಲೇಡಿಸ್ ಹಾಸ್ಟೆಲ್ನಲ್ಲಿ ಕೊಟ್ಟು ತೊಳೆಸಿಕೊಳ್ಳುತ್ತಿದ್ದ. ಸಹಪಾಠಿ ವಿದ್ಯಾರ್ಥಿನಿ ಜತೆಗೂ ಗಲಾಟೆ ಮಾಡಿಕೊಂಡಿದ್ದ. ಎಚ್ಒಡಿಯಾಗಿ ನಾನು ಆತನಿಗೆ ಬುದ್ಧಿವಾದ ಹೇಳಿದ್ದೆ.
ಅಷ್ಟಕ್ಕೇ ಆತ ಪೋಷಕರನ್ನು ಕರೆಸಿ ಕಾರ್ಯಕ್ರಮವೊಂದರಲ್ಲಿ ಜಗಳ ಮಾಡಿಸಿದ್ದ. ಇಂದು ಬೆಳಗ್ಗೆ ಚನ್ನಾಗಿಯೇ ಇದ್ದವನು ಈಗ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ನನಗೂ ಆತ್ಮಹತ್ಯೆ ಯತ್ನಕ್ಕೂ ಸಂಬಂಧ ಇಲ್ಲ. ವಿಭಾಗದಲ್ಲೇ ಇರುವ ಅತಿಥಿ ಉಪನ್ಯಾಸಕರು ನನ್ನ ವಿರುದ್ಧ ಪಿತೂರಿ ಮಾಡುತ್ತಿದ್ದಾರೆ. ಹುದ್ದೆಯಿಂದ ಕೆಳಗಿಳಿಸಲು ಪ್ರಯತ್ನ ಮಾಡುತ್ತಿದ್ದಾರೆ. ನಾನು ಯಾವುದೇ ತಪ್ಪು ಮಾಡಿಲ್ಲ ಎಂದು ಡಾ.ವೆಂಕಟೇಶ್ ತಿಳಿಸಿದ್ದಾರೆ.
ಫೇಲ್ ಮಾಡುವುದಾಗಿ ಬೆದರಿಕೆ
ಮೈಸೂರು ವಿವಿಗೆ ಕುಲಪತಿ ಇಲ್ಲದೇ ಇರುವುದೇ ಇದಕ್ಕೆಲ್ಲ ಕಾರಣ ಎಂದು ವಿದ್ಯಾರ್ಥಿ ಮುಖಂಡ ಮಹೇಶ್ ಸೋಸಲೆ ಆರೋಪಿಸಿದ್ದಾರೆ. ದೈಹಿಕ ಶಿಕ್ಷಣ ವಿಭಾಗದ ವೆಂಕಟೇಶ್ ಮೇಲೆ ಹಲವಾರು ಆರೋಪಗಳು ಇವೆ. ವಿದ್ಯಾರ್ಥಿ ಗಗನ್ ಮೇಲೆ ದೈಹಿಕ ಹಲ್ಲೆ ಮಾಡಿದ್ದಾರೆ. ಪರೀಕ್ಷೆಯಲ್ಲಿ ಅಂಕ ಕೊಡುವುದಿಲ್ಲ, ಫೇಲ್ ಮಾಡುತ್ತೇನೆ ಎಂದು ಬೆದರಿಸಿದ್ದಾರೆ. ಇನ್ನು 15 ದಿನದಲ್ಲಿ ಬಿಪಿಎಡ್ ಕೋರ್ಸ್ ಮುಗಿಯಬೇಕಿತ್ತು. ಅಷ್ಟರಲ್ಲಿ ಗಗನ್ ಆತ್ಮಹತ್ಯೆಗೆ ಯತ್ನಿಸಿದ್ದಾನೆ. ಇದಕ್ಕೆಲ್ಲ ಎಚ್ಒಡಿ ವೆಂಕಟೇಶ್ ಕಾರಣ, ಅವರನ್ನು ಕೂಡಲೇ ಅಮಾನತು ಮಾಡಬೇಕೆಂದು ಮಹೇಶ್ ಸೋಸಲೆ ಒತ್ತಾಯಿಸಿದ್ದರು.
ರಾಜ್ಯದ ಇನ್ನಷ್ಟು ಸುದ್ದಿಗಾಗಿ ಈ ಲಿಂಕ್ ಕ್ಲಿಕ್ ಮಾಡಿ