ಮುಂಬೈ: ನಾಗ್ಪುರ ಬಿಜೆಪಿ ನಾಯಕಿ ಸನಾ ಖಾನ್ ಕೊಲೆ ಪ್ರಕರಣದಲ್ಲಿ (Sana Khan Case) ಪೊಲೀಸರು ಶುಕ್ರವಾರ ನಾಯಕಿಯ ಪತಿಯನ್ನೇ ಬಂಧಿಸಿದ್ದಾರೆ. ಮಧ್ಯಪ್ರದೇಶ (Madhya Pradesh) ಜಬಲ್ಪುರದಲ್ಲಿ ಸನಾ ಖಾನ್ ಅವರನ್ನು ಹತ್ಯೆ ಮಾಡಿದ ಹಿನ್ನೆಲೆಯಲ್ಲಿ ಪತಿ ಅಮಿತ್ ಸಾಹು (Amit Sahu) ಎಂಬುವನನ್ನು ಪೊಲೀಸರು ಬಂಧಿಸಿದ್ದಾರೆ. ಅಮಿತ್ ಸಾಹು ಜತೆ ಮತ್ತೊಬ್ಬ ವ್ಯಕ್ತಿಯನ್ನೂ ಫೊಲೀಸರು ಬಂಧಿಸಿದ್ದಾರೆ. ಆದರೆ, ಪತ್ನಿಯನ್ನೇ ಅಮಿತ್ ಸಾಹು ಏಕೆ ಕೊಲೆ ಮಾಡಿದ್ದಾನೆ ಎಂಬುದಕ್ಕೆ ನಿಖರ ಕಾರಣ ತಿಳಿದುಬಂದಿಲ್ಲ.
ಕಳೆದ 10 ದಿನಗಳಿಂದ ಸನಾ ಖಾನ್ ಅವರು ನಾಪತ್ತೆಯಾಗಿದ್ದು, ಈ ಕುರಿತು ತನಿಖೆ ನಡೆಸಿದ ನಾಗ್ಪುರ ಪೊಲೀಸರ ತಂಡವು ಪ್ರಕರಣವನ್ನು ಭೇದಿಸುವಲ್ಲಿ ಯಶಸ್ವಿಯಾಗಿದೆ. ಮಧ್ಯಪ್ರದೇಶದ ಜಬಲ್ಪುರ ಜಿಲ್ಲೆಯ ಘೋರಾ ಬಜಾರ್ ಪ್ರದೇಶದಲ್ಲಿ ನಾಗ್ಪುರ ಪೊಲೀಸರು ಅಮಿತ್ ಸಾಹು ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ಬಂಧಿಸಿದ್ದಾರೆ. ಬಂಧನದ ಬಳಿಕ ತಾನೇ ಕೊಲೆ ಮಾಡಿದ್ದಾಗಿ ಅಮಿತ್ ಸಾಹು ಒಪ್ಪಿಕೊಂಡಿದ್ದಾನೆ ಎಂಬುದಾಗಿ ಪೊಲೀಸರು ತಿಳಿಸಿದ್ದಾರೆ.
ಸನಾ ಖಾನ್ ಅವರನ್ನು ಕೊಲೆ ಮಾಡಿ, ನದಿಯೊಂದಕ್ಕೆ ಎಸೆದಿದ್ದಾನೆ ಎಂಬುದಾಗಿ ಅಮಿತ್ ಸಾಹು ಮಾಹಿತಿ ನೀಡಿದ್ದಾನೆ. ಆದರೆ, ನದಿಯಲ್ಲಿ ಹಲವು ಗಂಟೆಗಳಿಂದ ಶೋಧ ಕಾರ್ಯಾಚರಣೆ ಕೈಗೊಂಡಿದ್ದರೂ ಇದುವರೆಗೆ ಶವ ಪತ್ತೆಯಾಗಿಲ್ಲ. ಆದಾಗ್ಯೂ, ಅಮಿತ್ ಸಾಹುನನ್ನು ಮಹಾರಾಷ್ಟ್ರಕ್ಕೆ ಕರೆತಂದಿದ್ದು, ಶೀಘ್ರದಲ್ಲೇ ನ್ಯಾಯಾಲಯಕ್ಕೆ ಹಾಜರುಪಡಿಸಲಾಗುತ್ತದೆ ಎಂದು ತಿಳಿದುಬಂದಿದೆ.
ಇದನ್ನೂ ಓದಿ: BJP Leader Murder: ಉತ್ತರಪ್ರದೇಶದಲ್ಲಿ ಗುಂಡಿನ ದಾಳಿಗೆ ಬಿಜೆಪಿ ಮುಖಂಡ ಬಲಿ, ವಿಡಿಯೊ ಇಲ್ಲಿದೆ
ಸನಾ ಖಾನ್ ಅವರು ನಾಗ್ಪುರದಲ್ಲಿ ವಾಸಿಸುತ್ತಿದ್ದು, ಇವರು ಬಿಜೆಪಿ ಅಲ್ಪಸಂಖ್ಯಾತರ ಘಟಕದ ಸದಸ್ಯೆಯಾಗಿದ್ದಾರೆ. ಸನಾ ಖಾನ್ ಅವರು ಜಬಲ್ಪುರಕ್ಕೆ ಖಾಸಗಿ ಬಸ್‌ನಲ್ಲಿ ತೆರಳಿದ್ದು, ತಾಯಿಗೆ ಕರೆ ಮಾಡಿ ಈ ಕುರಿತು ಮಾಹಿತಿ ನೀಡಿದ್ದರು. ಅಮಿತ್ ಸಾಹುನನ್ನು ಭೇಟಿಯಾಗಲು ಸನಾ ಖಾನ್ ಜಬಲ್ಪುರಕ್ಕೆ ತೆರಳಿದ್ದರು. ಆಗಸ್ಟ್ 1ರಂದು ಜಬಲ್ಪುರದಲ್ಲಿಯೇ ಸನಾ ಖಾನ್ ಲೊಕೇಷನ್ ತೋರಿಸಿತ್ತು ಎಂಬುದಾಗಿ ಖಾನ್ ಕುಟುಂಬಸ್ಥರು ಪೊಲೀಸರಿಗೆ ತಿಳಿಸಿದ್ದರು. ಈ ಶಂಕೆಯ ಹಿನ್ನೆಲೆಯಲ್ಲಿ ಪೊಲೀಸರು ತನಿಖೆ ನಡೆಸಿ, ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.