ಬೆಂಗಳೂರು: ಬೆಂಗಳೂರಿನ ನಮ್ಮ ಮೆಟ್ರೋ (Namma Metro) ರೈಲುಗಳು ಪೀಕ್ ಅವರ್‌ನಲ್ಲಿ ಬಿಎಂಟಿಸಿ ಬಸ್‌ಗಳಂತಾಗುತ್ತಿವೆ, ನಿಲ್ದಾಣ ಎನ್ನುವುದು ಮೆಜೆಸ್ಟಿಕ್ ಬಸ್ ಸ್ಟಾಂಡ್‌ನ (Majestic Bus stand) ಹಾಗಾಗುತ್ತಿದೆ ಎಂಬ ಆರೋಪ ಕೇಳಿಬಂದಿತ್ತು. ಇದಕ್ಕೆ ಪೂರಕವಾಗಿ ರೈಲಿನಲ್ಲೇ ಆಹಾರ ಸೇವನೆ, ಹುಚ್ಚಾಟ, ಲೈಂಗಿಕ ಕಿರುಕುಳದಂಥ ಘಟನೆಗಳು ವರದಿಯಾಗಿದ್ದವು. ಇದೀಗ ಇವುಗಳಿಗೆ ಪೂರಕವಾಗಿ ಬಸ್ ನಿಲ್ದಾಣಗಳಲ್ಲಿ ಹೆಚ್ಚಾಗಿ ಕಂಡುಬರುವ ಮತ್ತು ಹೆಚ್ಚಿನ ರೈಲುಗಳಲ್ಲಿ ಸಾಮಾನ್ಯವಾಗಿರುವ ಭಿಕ್ಷಾಟನೆ ಮೆಟ್ರೋ ರೈಲಿಗೂ ಕಾಲಿಟ್ಟಿದೆ!
ಹೌದು, ತಾನೊಬ್ಬ ಮೂಕ ಮತ್ತು ಕಿವುಡ ಎಂದು ಹೇಳಿಕೊಂಡ ಯುವಕನೊಬ್ಬ ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುತ್ತಿದ್ದ ವಿದ್ಯಮಾನ ನಡೆದಿದೆ. ಈ ಬಗ್ಗೆ ದೂರು ಬರುತ್ತಿದ್ದಂತೆಯೇ ಎಚ್ಚೆತ್ತ ಬೆಂಗಳೂರು ಮೆಟ್ರೋ ರೈಲು ನಿಗಮದ ಅಧಿಕಾರಿಗಳು ಆತನ ಮೇಲೆ ಪ್ರಕರಣ ದಾಖಲಿಸಿ 500 ರೂ. ದಂಡ ವಿಧಿಸಿದ್ದಾರೆ. ಕೊಪ್ಪಳ ಮೂಲದ ಮಲ್ಲಿಕಾರ್ಜುನ್ (20) ಎಂಬಾತನೇ ಮೆಟ್ರೋ ರೈಲಿನ ಒಳಗಡೆ ಭಿಕ್ಷೆ ಬೇಡುತ್ತಿದ್ದ ಯುವಕ.
ಇದು ಬೆಂಗಳೂರು ಮೆಟ್ರೋದಲ್ಲಿ ದಾಖಲಾದ ಮೊದಲ ಭಿಕ್ಷಾಟನೆ ಪ್ರಸಂಗ. ಈತನ ವಿರುದ್ಧ ಬಿಎಂಆರ್‌ಸಿಎಲ್ ಮೆಟ್ರೋ ಕಾಯ್ದೆ ಸೆಕ್ಷನ್ 59ರ ಅಡಿ ಪ್ರಯಾಣಿಕರಿಗೆ ತೊಂದರೆ ನೀಡಿದ ಪ್ರಕರಣ ದಾಖಲಿಸಿಕೊಂಡಿದೆ.
ಏನಿದು ಭಿಕ್ಷಾಟನೆ ಘಟನೆ?
20 ವರ್ಷದ ಕೊಪ್ಪಳ ಮೂಲದ ಮಲ್ಲಿಕಾರ್ಜುನ್ ಹಸಿರು ಮಾರ್ಗದಲ್ಲಿ ಬರುವ ಯಶವಂತಪುರ ಮೆಟ್ರೋ ನಿಲ್ದಾಣದಲ್ಲಿ ₹150 ಕೊಟ್ಟು ಒಂದು ದಿನದ ಕಾರ್ಡ್ ತೆಗೆದುಕೊಂಡಿದ್ದ. ಯಶವಂತಪುರ ನಿಲ್ದಾಣದಿಂದ ನಾಗಸಂದ್ರ ಕಡೆಗೆ ಹೊರಟಿದ್ದ ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿದ್ದಾನೆ.
ರೈಲಿನಲ್ಲಿ ಕನ್ನಡ ಹಾಗೂ ಇಂಗ್ಲೀಷ್‌ನಲ್ಲಿ ‘ನಾನು ಮೂಗ ಹಾಗೂ ಕಿವುಡ, ಸಹಾಯ ಮಾಡಿ’ ಎಂದು ಬರೆದಿದ್ದ ಚೀಟಿಗಳನ್ನು ಕೊಟ್ಟು ಭಿಕ್ಷೆ ಬೇಡಿದ್ದಾನೆ. ಇದನ್ನು ಗಮನಿಸಿದ ಪ್ರಯಾಣಿಕರೊಬ್ಬರು ಮೆಟ್ರೋ ಭದ್ರತಾ ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ. ಭದ್ರತೆ ಸಿಬ್ಬಂದಿ ಎಲ್ಲಾ ನಿಲ್ದಾಣಗಳಿಗೂ ಈ ಬಗ್ಗೆ ಅಲರ್ಟ್ ಮಾಡಿದ್ದರು.
ಸುಮಾರು ಒಂದು ಗಂಟೆ ಬಳಿಕ ಯಶವಂತಪುರಕ್ಕೆ ಹೊರಗೆ ಬರುವಾಗ ಆತನನ್ನು ತಡೆಯಲಾಯಿತು. ಬಳಿಕ ಬಿಎಂಆರ್‌ಸಿಎಲ್ ಸಿಬ್ಬಂದಿ ಮಲ್ಲಿಕಾರ್ಜುನ್‌ನನ್ನು ತಾವೇ ಮಲ್ಲೇಶ್ವರ ಕೆ.ಸಿ.ಜನರಲ್ ಆಸ್ಪತ್ರೆಗೆ ಕರೆದೊಯ್ದು ತಪಾಸಣೆ ಮಾಡಿಸಿದ್ದಾರೆ. ಈ ವೇಳೆ ಆತ ಕಿವುಡ, ಮೂಗನಾಗಿರುವುದು ದೃಢಪಟ್ಟಿದೆ. ಏನೇ ಆಗಿದ್ದರೂ ಮೆಟ್ರೋ ರೈಲಿನಲ್ಲಿ ಭಿಕ್ಷೆ ಬೇಡುವುದಕ್ಕೆ ಅವಕಾಶವಿಲ್ಲ. ಹೀಗಾಗಿ 500 ರೂ. ದಂಡ ವಿಧಿಸಲಾಗಿದೆ.
ಇತ್ತೀಚೆಗೆ ಮೆಟ್ರೋ ರೈಲಿನಲ್ಲಿ ಆಹಾರ ತಿನ್ನುವುದು ಪತ್ತೆಯಾಗಿ ಆ ಯುವಕನಿಗೂ ದಂಡ ವಿಧಿಸಲಾಗಿತ್ತು. ಇದಲ್ಲದೆ ಟಿಕೆಟ್‌ಗಳನ್ನು ಖರೀದಿಸದೆ, ಸ್ಮಾರ್ಟ್ ಕಾರ್ಡ್ ಸೇರಿದಂತೆ ಯಾವ ಟಕೆಟ್ ಇಲ್ಲದೇ ಸಂಚರಿಸುವುದೂ ಬಯಲಿಗೆ ಬಂದಿದೆ. ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡಲು ರೀಲ್‌ಗಳನ್ನು ಮಾಡುವುದು, ಡ್ಯಾನ್ಸ್ ಮಾಡುವುದು ಕೂಡಾ ನಡೆದಿತ್ತು. ಆಗೆಲ್ಲ ಅವುಗಳನ್ನು ಪತ್ತೆ ಹಚ್ಚಿ ದಂಡ ವಿಧಿಸಲಾಗಿದೆ. ಒಟ್ಟಾರೆಯಾಗಿ ಮೆಟ್ರೋ ಸಂಚಾರದಲ್ಲಿ ಜನದಟ್ಟಣೆ ಹೆಚ್ಚಾಗುತ್ತಿದ್ದಂತೆಯೇ ಕಿರಿಕಿರಿಗಳೂ ಹೆಚ್ಚಾಗುತ್ತಿವೆ.