ಬೆಂಗಳೂರು: ಅತ್ಯಂತ ಸುರಕ್ಷಿತ ಎಂದು ಹೇಳಲಾದ ನಮ್ಮ ಮೆಟ್ರೋದಲ್ಲಿ (Namma Metro) ಮತ್ತೊಬ್ಬ ಯುವತಿ ಲೈಂಗಿಕ ಕಿರುಕುಳಕ್ಕೆ (Physical Abuse) ಒಳಗಾಗಿದ್ದಾರೆ. ಕುಡಿದ ಮತ್ತಿನಲ್ಲಿ ಯುವತಿಯ ಜತೆ ವ್ಯಕ್ತಿಯೊಬ್ಬ ಅಸಭ್ಯವಾಗಿ ವರ್ತಿಸಿದ್ದಾನೆ. ಸದ್ಯ ಆರೋಪಿಯನ್ನು ಬಂಧಿಸಲಾಗಿದೆ.
ಖಾಸಗಿ ಶಾಲೆಯಲ್ಲಿ ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದ ಯುವತಿಯು ವೈಟ್ಫೀಲ್ಡ್ಗೆ ಹೋಗಲು ನ್ಯಾಷನಲ್ ಕಾಲೇಜು ಬಳಿ ಮೆಟ್ರೋ ಹತ್ತಿದ್ದಾಳೆ. ಸಂತ್ರಸ್ತೆ ಪ್ರಯಾಣಿಸುತ್ತಿದ್ದ ಬೋಗಿಯಲ್ಲಿ ಕುಳಿತಿದ್ದ ವ್ಯಕ್ತಿಯು ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದಲ್ಲಿ ಯುವತಿ ಇಳಿಯುತ್ತಿದ್ದಂತೆ ಅಸಭ್ಯವಾಗಿ ವರ್ತನೆ ಮಾಡಿದ್ದಾನೆ ಎನ್ನಲಾಗಿದೆ.
ಹಿಂದಿನಿಂದ ಯುವತಿಯ ಮೈಮುಟ್ಟಿ ಲೈಂಗಿಕ ಕಿರುಕುಳ ನೀಡಿದ್ದಾನೆ. ನಂತರ ಆಕೆಯನ್ನೇ ನೋಡುತ್ತ ನಿಂತಿದ್ದ ಎನ್ನಲಾಗಿದೆ. ಬಳಿಕ ಅಲ್ಲಿಂದ ಹೊರಟಿದ್ದಾನೆ. ಇದರಿಂದ ಭಯಗೊಂಡಿದ್ದ ಯುವತಿಯು ಕೂಡಲೇ ಮೆಟ್ರೋದಿಂದ ಇಳಿದು ಸೆಕ್ಯೂರಿಟಿ ಸಿಬ್ಬಂದಿಗೆ ವಿಚಾರವನ್ನು ತಿಳಿಸಿದ್ದಾಳೆ. ಕೂಡಲೇ ಆತನನ್ನು ಹಿಡಿದು ಪೊಲೀಸರಿಗೆ ಒಪ್ಪಿಸಲಾಗಿದೆ.
ಕಾಮಾಕ್ಷಿಪಾಳ್ಯ ನಿವಾಸಿ ಮನೋಜ್ ಲೈಂಗಿಕ ದೌರ್ಜನ್ಯವೆಸಗಿದ ಆರೋಪಿ ಎಂದು ಗುರುತಿಸಲಾಗಿದೆ. ಯುವತಿ ದೂರಿನನ್ವಯ ಉಪ್ಪಾರಪೇಟೆ ಠಾಣೆಯಲ್ಲಿ ಎಫ್ಐಆರ್ ದಾಖಲು ಮಾಡಲಾಗಿದೆ. ಆರೋಪಿ ಮನೋಜ್ನನ್ನು ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಮೆಟ್ರೋದಲ್ಲಿ ಟೆಕ್ಕಿ ಯುವತಿ ಮೈ ಸವರಿದ ಕಾಮುಕ; ಎಸ್ಕೇಪ್ ಆಗುವಾಗ ಅರೆಸ್ಟ್
ಬೆಂಗಳೂರಿನ ಮೆಜೆಸ್ಟಿಕ್ ರೈಲು ನಿಲ್ದಾಣದಲ್ಲಿ (Majestic Metro Railway station) ಡಿಸೆಂಬರ್ 7ರ ಬೆಳಗ್ಗೆ 9.40ರ ಸುಮಾರಿಗೆ ಈ ಘಟನೆ ನಡೆದಿತ್ತು, ಕಿರುಕುಳಕ್ಕೆ ಒಳಗಾದ ಯುವತಿ ಕೂಗಿಕೊಂಡಾಗ ಅಲ್ಲಿದ್ದ ಮೆಟ್ರೋ ಸಿಬ್ಬಂದಿ ಕೂಡಲೇ ಅ ಕೀಚಕನನ್ನು ಹಿಡಿದಿದ್ದರು. ಕೆಲವು ದಿನಗಳ ಹಿಂದಷ್ಟೇ ಒಬ್ಬ ಯುವತಿಗೆ ಮೆಟ್ರೋದಲ್ಲಿ ಕಿರುಕುಳ (Physical abuse in Metro) ನೀಡಲಾಗಿತ್ತು.
22 ವರ್ಷದ ಯುವತಿ ರೈಲಿನಲ್ಲಿದ್ದಾಗ ರೈಲಿನ ಜನ ಸಂದಣಿ ಮತ್ತು ಒತ್ತಡದ ಪರಿಸ್ಥಿತಿಯ ಲಾಭವನ್ನು ಎತ್ತಿದ ಲೋಕೇಶ್ ಅಲಿಯಾಸ್ ಲೋಕಿ ಎಂಬಾತ ಆಕೆಯ ಮೈಕೈ ಮುಟ್ಟಿ ಕಿರುಕುಳ ನೀಡಿದ್ದಾನೆ. ಅನುಚಿತವಾಗಿ ವರ್ತಿಸಿದ ಆತ ರೈಲು ನಿಲ್ಲುತ್ತಿದ್ದಂತೆಯೇ ರೈಲಿನಿಂದ ಇಳಿದು ಎಸ್ಕಲೇಟರ್ ಮೂಲಕ ಎಸ್ಕೇಪ್ ಆಗಲು ಯತ್ನಿಸಿದ್ದ. ಆಗ ಯುವತಿ ಜೋರಾಗಿ ಕೂಗಿಗೊಂಡಾಗ ಭದ್ರತಾ ಸಿಬ್ಬಂದಿ ಆತನನ್ನು ಅಲ್ಲೇ ಹಿಡಿದುಹಾಕಿದ್ದರು. ಈ ಬಗ್ಗೆ ಉಪ್ಪಾರಪೇಟೆ ಪೊಲೀಸ್ ಠಾಣೆಗೆ ದೂರು ನೀಡಲಾಗಿದೆ.
ಹಾಗಿದ್ದರೆ ಮೆಟ್ರೋದಲ್ಲಿ ಆಗಿದ್ದೇನು?
ಐಟಿ ಉದ್ಯೋಗಿಯಾಗಿರುವ 22 ವರ್ಷದ ಈ ಯುವತಿ ಬೆಳಗ್ಗೆ 9.40 ಗಂಟೆಗೆ ಐಟಿ ಉದ್ಯೋಗಿ ಮೆಟ್ರೋ ಹತ್ತಿದ್ದಾರೆ. ರಾಜಾಜಿನಗರದಲ್ಲಿ ಮೆಟ್ರೋ ಹತ್ತಿದ ಯುವತಿಗೆ ಮೆಜೆಸ್ಟಿಕ್ ನಿಲ್ದಾಣ ಬರುತ್ತಿದ್ದಂತೆಯೇ ಜನಸಂದಣಿ ಹೆಚ್ಚಾದಾಗ ಒಬ್ಬ ಯುವಕ ಹಿಂಬದಿಯಲ್ಲಿ ನಿಂತು ಅನುಚಿತವಾಗಿ ವರ್ತಿಸಲು ಶುರು ಮಾಡಿದ್ದಾನೆ. ಕೆಳಭಾಗದಲ್ಲಿ ಮೈಗೆ ಕೈ ಆಡಿಸಿದ್ದಾನೆ. ಆರಂಭದಲ್ಲಿ ಇದು ಒತ್ತಡದಿಂದ ಆಗುತ್ತಿರುವುದು ಎಂದು ತಿಳಿದರಾದರೂ ನಂತರ ಉದ್ದೇಶಪೂರ್ವಕವಾಗಿ ಅನುಚಿತವಾಗಿ ವರ್ತಿಸುತ್ತಿರುವುದು ಗೊತ್ತಾದ ಕೂಡಲೇ ಪ್ರತಿಭಟಿಸಿದ್ದರು.
ಆಕೆ ಮೆಟ್ರೋ ರೈಲಿನ ಒಳಗೇ ಜೋರಾಗಿ ಕೂಗಿಕೊಂಡರು. ಅಷ್ಟು ಹೊತ್ತಿಗೆ ಮೆಜೆಸ್ಟಿಕ್ ಮೆಟ್ರೋ ನಿಲ್ದಾಣ ಬಂದಿತ್ತು. ಇಲ್ಲಿ ರೈಲು ನಿಲ್ಲುತ್ತಿದ್ದಂತೆಯೇ ಈ ಕಾಮುಕ ಬೇಗಬೇಗನೆ ಇಳಿದು ಓಡಲು ಯತ್ನಿಸಿದ್ದ. ಆಗ ಯುವತಿ ಮತ್ತು ಸಾರ್ವಜನಿಕರ ಕೂಗು ಕೇಳಿಸಿಕೊಂಡು ಆತನನ್ನು ಅಲ್ಲೇ ಹಿಡಿದು ಹಾಕಲಾಗಿತ್ತು.
ಮೆಜೆಸ್ಟಿಕ್ ಮೆಟ್ರೋ ನಿಲ್ದಾಣದ ಭದ್ರತಾ ಅಧಿಕಾರಿ ಪುಟ್ಟಮಾದಯ್ಯ ಮತ್ತು ಸಹಾಯಕ ಭದ್ರತಾ ಅಧಿಕಾರಿ ದಿವಾಕರ್ ಸ್ಥಳಕ್ಕೆ ಆಗಮಿಸಿ ಆರೋಪಿ ಲೊಕೇಶ್ನನ್ನು (30 ವರ್ಷ) ಲಾಕ್ ಮಾಡಿ ಉಪ್ಪಾರ ಪೇಟೆ ಪೊಲೀಸರಿಗೊಪ್ಪಿಸಿದ್ದರು.
ಇದನ್ನೂ ಓದಿ: Namma Metro : ಮೆಟ್ರೊದಲ್ಲಿ ಕಾಲೇಜು ವಿದ್ಯಾರ್ಥಿನಿಗೆ ಲೈಂಗಿಕ ಕಿರುಕುಳ; ಕೆಂಪು ಅಂಗಿಯವ ಯಾರು?
ಇವನು ಸಾಮಾನ್ಯದವನಲ್ಲ!
ಉಪ್ಪಾರಪೇಟೆ ಪೊಲೀಸರು ತನಿಖೆ ನಡೆಸುತ್ತಿದ್ದಂತೆಯೇ ಕಾಮುಕ ಲೋಕೇಶ್ನ ಕರಾಳ ಇತಿಹಾಸ ಬಯಲಾಗಿದೆ. ಈ ದುಷ್ಟ ಲೋಕಿಯ ಮೇಲೆ ಈ ಹಿಂದೆ ಕೂಡ ಕೆಲವು ಕೇಸ್ಗಳು ಇರುವುದು ಪತ್ತೆಯಾಗಿದೆ.
ಈ ಹಿಂದೆ ಬಿಎಂಟಿಸಿ ಬಸ್ನಲ್ಲಿ ಯುವತಿಯ ಮೊಬೈಲ್ ಕಳ್ಳತನ ಮಾಡಲು ಹೋಗಿ ಸಿಕ್ಕಿ ಹಾಕಿಕೊಂಡಿದ್ದ. ತನಿಖೆಯ ವೇಳೆ ಲೊಕೇಶ್ ಕಳ್ಳತನವನ್ನೇ ಕಾಯಕ ಮಾಡಿಕೊಂಡಿರುವ ಆತನಿಂದ ಅಂದು 20 ಮೊಬೈಲ್ ಫೋನ್, ಒಂದು ದ್ವಿಚಕ್ರ ವಾಹನ ವಶಪಡಿಸಿಕೊಳ್ಳಲಾಗಿತ್ತು.