ಚೆನ್ನೈ: ಅಂತರ್ಜಾತಿ ವಿವಾಹವಾಗಿದ್ದ ನೂತನ ದಂಪತಿಯನ್ನು ಕೊಲೆ ಮಾಡಿರುವ ನೀಚ ಘಟನೆ ತಮಿಳುನಾಡಿನ ಕುಂಭಕೋಣಂನಲ್ಲಿ ಸೋಮವಾರ ಸಂಜೆ ನಡೆದಿದೆ.
ಪ್ರಕರಣ ಸಂಬಂಧ ಮಹಿಳೆಯ ಸಹೋದರ ಹಾಗೂ ಆತನ ಇಬ್ಬರು ಸಂಬಂಧಿಕರ ವಿರುದ್ಧ ಪ್ರಕರಣ ದಾಖಲಾಗಿದ್ದು, ಬಂಧಿಸಲಾಗಿದೆ. ಸದ್ಯ ಪೊಲೀಸರ ಮಾಹಿತಿಯ ಪ್ರಕಾರ ಮಹಿಳೆ ಸಂಬಂಧಿಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದಳು, ಆದರೆ ಆಕೆ ಮತ್ತೊಬ್ಬನೊಂದಿಗೆ ವಿವಾಹವಾಗಿದ್ದಳು ಎಂದು ತಿಳಿದುಬಂದಿದೆ. ಈ ವಿಚಾರ ತಿಳಿದ ಮಹಿಳೆಯ ಸಹೋದರ ನವ ವಿವಾಹಿತ ಜೋಡಿಯನ್ನು ಮನೆಗೆ ಆಹ್ವಾನಿಸಿದ್ದಾನೆ. ಈ ವೇಳೆ ಆತ ಮತ್ತು ಆತನ ಸಂಬಂಧಿಕರು ಇಬ್ಬರನ್ನು ಕೊಚ್ಚಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನು ಓದಿ| ಹೆಣ್ಣಿನಂತೆ ಡ್ರೆಸ್ ಮಾಡಿಕೊಂಡು ಓಡಾಡುತ್ತಿದ್ದ ಕ್ರಾಸ್ ಡ್ರೆಸ್ಸರ್ ಕೊಲೆ, ರಿಕ್ಷಾ ಚಾಲಕನ ಕೃತ್ಯ
ಮಹಿಳೆ ಪರಿಶಿಷ್ಟ ಜಾತಿಗೆ ಸೇರಿದವರಾಗಿದ್ದರೆ, ಆಕೆಯ ಪತಿ ಅತ್ಯಂತ ಹಿಂದುಳಿದ ಜಾತಿಗೆ ಸೇರಿದವರಾಗಿದ್ದಾರೆ. ಆದರೆ, ಈ ಕೊಲೆ ಮರ್ಯಾದೆ ಹತ್ಯೆ ಪ್ರಕರಣವಲ್ಲ. ಬೇರೆ ವೈಯಕ್ತಿಕ ದ್ವೇಷದಿಂದ ಈ ಕೊಲೆ ಮಾಡಲಾಗಿದೆ ಎಂಬಂತೆ ಕಂಡುಬಂದಿದೆ. ಇದರ ಬಗ್ಗೆ ಸೂಕ್ತ ತನಿಖೆ ನಡೆಸಲಾಗುತ್ತಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.