Site icon Vistara News

NIA Raid | ತೆಲಂಗಾಣ-ಆಂಧ್ರದ ವಿವಿಧೆಡೆ ಎನ್ಐಎ ದಾಳಿ, ಪಿಎಫ್ಐ ಸದಸ್ಯರ ಮನೆ ಶೋಧ

NIA charges arms trainer Ibrahim Puthanathani of PFI Cadre

ಹೈದ್ರಾಬಾದ್: ವಿಧ್ವಂಸಕ ಕೃತ್ಯಗಳಿಗೆ ಸಂಬಂಧಿಸಿದಂತೆ ಪಾಪ್ಯೂಲರ್ ಫ್ರಂಟ್ ಆಫ್ ಇಂಡಿಯಾ (ಪಿಎಫ್ಐ) ಸದಸ್ಯರನ್ನು ಬೇಟೆಯಾಡುತ್ತಿರುವ ರಾಷ್ಟ್ರೀಯ ತನಿಖಾ ಏಜೆನ್ಸಿ (NIA), ಭಾನುವಾರ ಆಂಧ್ರಪ್ರದೇಶ ಹಾಗೂ ತೆಲಂಗಾಣದ ವಿವಿಧ ಜಿಲ್ಲೆಗಳ 23 ಸ್ಥಳಗಳಲ್ಲಿ ಏಕಕಾಲಕ್ಕೆ ದಾಳಿ ಕೈಗೊಂಡಿದೆ. ಎನ್ಐಎನ 23 ತಂಡಗಳು ಏಕಕಾಲಕ್ಕೆ ನಿಜಾಮಾಬಾದ್, ಕರ್ನೋಲ್, ಗುಂಟೂರ್, ನೆಲ್ಲೋರ್ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಕಾರ್ಯಾಚರಣೆಯನ್ನು ಕೈಗೊಂಡಿದೆ. ಈಗಾಗಲೇ ಅಧಿಕಾರಿಗಳು, ಪಿಎಫ್ಐ ಜಿಲ್ಲಾ ಸಂಚಾಲಕ ಶದುಲ್ಲಾ ಮತ್ತು ಸದಸ್ಯರಾದ ಮೊಹಮ್ಮದ್ ಇಮ್ರಾನ್, ಮೊಹಮ್ಮದ್ ಅಬ್ದುಲ್ಲಾ ಮೊಬಿನ್ ಅವರನ್ನು ವಶಕ್ಕೆ ತೆಗೆದುಕೊಂಡಿದೆ. ಕರಾಟೆ ಕಲಿಸುವ ನೆಪದಲ್ಲಿ ಅಕ್ರಮ ಚಟುವಟಿಕೆ ನಡೆಸುತ್ತಿರುವ ಮತ್ತು ತರಬೇತಿ ನೀಡುತ್ತಿರುವ ಆರೋಪವನ್ನು ಇವರ ವಿರುದ್ಧ ಹೊರಿಸಲಾಗಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ಅವರನ್ನು ವಿಚಾರಣೆಗೊಳಪಡಿಸಿದ್ದಾರೆ.

ಮತ್ತೊಂದೆಡೆ, ನಂದ್ಯಾಲ್ ಮತ್ತು ಕರ್ನೋಲ್‌ನ ಅನೇಕ ಕಡೆ ಎನ್ಐಎ ಅಧಿಕಾರಿಗಳು ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ. ಆದರೆ, ಅಧಿಕಾರಿಗಳು ಸ್ಥಳೀಯರಿಂದ ತೀವ್ರ ವಿರೋಧವನ್ನು ಎದುರಿಸಬೇಕಾಯಿತು. ಹಿಂದಕ್ಕೆ ಹೋಗಿ ಎಂಬ ಘೋಷಣೆಗಳೂ ಕೇಳಿ ಬಂದವು. ತೆಲಂಗಾಣದ ನಿಜಾಮಾಬಾದ್‌ ಜಿಲ್ಲೆಯಲ್ಲೂ ಅಧಿಕಾರಿಗಳು ತೀವ್ರ ಶೋಧ ಕಾರ್ಯಾಚರಣೆಯನ್ನು ಕೈಗೊಂಡಿದ್ದಾರೆ.

ಶಹಿದ್ ಚೌಸಿನ್ ಎಂಬಾತನ ಮನೆಯನ್ನು ಶೋಧ ನಡೆಸಿದ್ದು, ಅನೇಕ ದಾಖಲೆ ಪತ್ರಗಳನ್ನು ವಶಪಡಿಸಿಕೊಂಡಿದ್ದಾರೆ. ಶಹಿದ್‌ನ ಪಾಸ್‌ಪೋರ್ಟ್, ಬ್ಯಾಂಕ್ ಪಾಸ್‌ಬುಕ್‌ಗಳನ್ನು ತಮ್ಮ ವಶಕ್ಕೆ ತೆಗೆದುಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಜತೆಗೆ, ಹೆಚ್ಚಿನ ವಿಚಾರಣೆಗಾಗಿ ಹೈದ್ರಾಬಾದ್‌ಕ್ಕೆ ಬರುವಂತೆ ಆತನಿಗೆ ನೋಟಿಸ್ ಕೂಡ ನೀಡಿದೆ.

ನೆಲ್ಲೋರ್ ಜಿಲ್ಲೆಯ ಬುಚಿರೆಡ್ಡಿಪಾಲೇಂ ಪಟ್ಟಣದ ಖಾಜಾ ನಗರದಲ್ಲೂ ಕಾರ್ಯಾಚರಣೆಯನ್ನು ಎನ್ಐಎ ಕೈಗೊಂಡಿದೆ. ಕಳೆದ ಮೂರು ತಿಂಗಳಿಂದ ಕಾಣೆಯಾಗಿರುವ ಇಲ್ಯಾಸ್ ಎಂಬಾತನ ಮನೆಯನ್ನು ಅಧಿಕಾರಿಗಳು ಶೋಧ ಮಾಡಿದ್ದಾರೆ. ಈತ ಖಾಜಾ ನಗರದಲ್ಲಿ ಟಿಫಿನ್ ಅಂಗಡಿಯನ್ನು ನಡೆಸುತ್ತಿದ್ದು, ಉಗ್ರ ಚಟುವಟಿಕೆಗಳಲ್ಲಿ ಪಾಲ್ಗೊಂಡ ಆರೋಪವಿದೆ. ಶೋಧ ಕಾರ್ಯಾಚರಣೆಯನ್ನು ಕೈಗೊಂಡ ಅಧಿಕಾರಿಗಳು ಆತನ ಕುಟುಂಬದ ಸದಸ್ಯರನ್ನೂ ವಿಚಾರಣೆಗೆ ಒಳಪಡಿಸಿದ್ದಾರೆ.

ಇದನ್ನೂ ಓದಿ | NIA Raid | ಟೆರರಿಸ್ಟ್ ಜತೆ ಲಿಂಕ್, ಗ್ಯಾಂಗ್‌ಸ್ಟರ್‌ಗಳಿಗೆ ಸೇರಿದ 60 ಸ್ಥಳಗಳಲ್ಲಿ ಎನ್ಐಎ ರೇಡ್

Exit mobile version