ಮುಂಬಯಿ: ಕಳೆದ ಕೆಲವು ದಶಕದಿಂದ ತಣ್ಣಗೆ ಮಲಗಿದ್ದ ಮುಂಬಯಿ ಭೂಗತ ಜಗತ್ತು ಮತ್ತೊಮ್ಮೆ ಎದ್ದು ನಿಂತಂತೆ ಭಾಸವಾಗುತ್ತಿದೆ. ಒಂದು ಹಂತದಲ್ಲಿ ದಾವೂದ್ ಇಬ್ರಾಹಿಂ ಮತ್ತು ಚೋಟಾ ರಾಜನ್ ಎಂಬಿಬ್ಬರು ಭೂಗತ ದೊರೆಗಳು ಇಡೀ ಮುಂಬಯಿಯನ್ನು ತಮ್ಮ ಕಪಿಮುಷ್ಠಿಯಲ್ಲಿ ಇಟ್ಟುಕೊಂಡಿದ್ದರು. ಆದರೆ, 1990ರ ದಶಕದ ಅಂತ್ಯ ಭಾಗದಲ್ಲಿ ನಡೆದ ಸಾಲು ಸಾಲು ಎನ್‌ಕೌಂಟರ್‌ಗಳು ಅಂಡರ್‌ವರ್ಲ್ಡ್ ತಾನೇ ಭೂಗತಗೊಳ್ಳುವಂತೆ ಮಾಡಿತು. ದಾವೂದ್ ಇಬ್ರಾಹಿಂ ವಿದೇಶದಲ್ಲಿ ತಲೆಮರೆಸಿಕೊಂಡು ಓಡಾಡಬೇಕಾದ ಪರಿಸ್ಥಿತಿ ನಿರ್ಮಾಣವಾದರೆ, ಹಾಂಕಾಂಗ್‌ನಲ್ಲಿದ್ದ ಚೋಟಾ ರಾಜನ್ ಜೀವಭಯದಿಂದ ಶರಣಾಗಿದ್ದಾನೆ.
ಈ ನಡುವೆ, ಭೂಗತ ಮಾಫಿಯಾ ಮತ್ತೆ ಚಿಗುರಿಕೊಳ್ಳುವ ಸಣ್ಣ ಪ್ರಯತ್ನವನ್ನು ಮಾಡಿದೆ. ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ಮುಂಬಯಿಯ ಹಲವು ಕಡೆಗಳಲ್ಲಿ ದಾಳಿ ನಡೆಸಿದ್ದು, ಈ ವೇಳೆ ದುಷ್ಟ ಕೂಟ ಸದ್ದಿಲ್ಲದೆ ನಡೆಯಲು ಯೋಜಿಸಿರುವ ಕಾರ್ಯತಂತ್ರಗಳ ಹಲವು ಮಾಹಿತಿಗಳು ಲಭ್ಯವಾಗಿವೆ.
ಕೆಲವೊಂದು ರಾಜಕಾರಣಿಗಳು, ಉದ್ಯಮಿಗಳು ಸೇರಿದಂತೆ ಜನಪ್ರಿಯ ವ್ಯಕ್ತಿಗಳ ಮೇಲೆ ದಾಳಿ ನಡೆಸಿ ದೇಶದ ಜನರ ಮನಸ್ಸಿನಲ್ಲಿ ಭಯವನ್ನು ಸೃಷ್ಟಿಸುವುದು, ಕೋಮು ಗಲಭೆಯ ವಾತಾವರಣ ಉಂಟು ಮಾಡುವುದು ಈ ಕೂಟದ ತಂತ್ರ ಎನ್ನುವುದು ಬಯಲಾಗಿದೆ.
ಎಲ್ಲೆಲ್ಲಿ ದಾಳಿ?
ಮುಂಬಯಿಯ ಪರೇಲ್, ಗೋರೆಗಾಂವ್ ಮತ್ತು ಸಾಂತಾಕ್ರೂಜ್‌ನಲ್ಲಿರುವ ಮಾದಕ ವಸ್ತು ಕಳ್ಳಸಾಗಣೆದಾರರು, ರಿಯಲ್ ಎಸ್ಟೇಟ್ ಏಜೆಂಟ್‌ಗಳು, ಹವಾಲಾ ಆಪರೇಟರ್‌ಗಳ ಚಟುವಟಿಕೆಗಳ ಮೇಲೆ ಕಣ್ಣಿಟ್ಟು ಈ ದಾಳಿಯನ್ನು ನಡೆಸಲಾಗಿದೆ. ಇವರೆಲ್ಲರೂ ದಾವೂದ್ ಇಬ್ರಾಹಿಂನ ಬಂಟರೆಂದು ಹೇಳಲಾಗಿದೆ. ದಾವೂದ್ ಇಬ್ರಾಹಿಂನ ಡಿ-ಕಂಪನಿಯನ್ನು ವಿಶ್ವ ಸಂಸ್ಥೆ ಈಗಾಗಲೇ ನಿಷೇಧಿಸಿದೆ. ಆದರೂ ಕದ್ದುಮುಚ್ಚಿ ಚಟುವಟಿಕೆ ಮುಂದುವರಿದಿದೆ.
ವಿಶೇಷ ತಂಡ ರಚನೆ
ಸ್ಫೋಟಕಗಳು, ಶಸ್ತ್ರಾಸ್ತ್ರಗಳು ಮತ್ತು ಇನ್ನೂ ಹಲವು ಮಾರಕ ಆಯುಧಗಳನ್ನು ಬಳಸಿ ನಡೆಸುವ ಮೂಲಕ ದೇಶದಲ್ಲಿ ಭಯದ ವಾತಾವರಣ ಸೃಷ್ಟಿ ಮಾಡಲು ಡಿ-ಗ್ಯಾಂಗ್ ಒಂದು ವಿಶೇಷ ತಂಡವನ್ನೇ ರಚನೆ ಮಾಡಿದೆ ಎಂದು ತಿಳಿದುಬಂದಿದೆ. ಮೊದಲ ಹಂತದಲ್ಲಿ ಶಿವಸೇನೆಯ ಕೆಲವು ನಾಯಕರನ್ನು ಟಾರ್ಗೆಟ್ ಮಾಡಲು ಸಂಚು ನಡೆಸಲಾಗಿದೆ. ಅದಕ್ಕಾಗಿ ದಾವೂದ್ ಬಂಟ ಚೋಟಾ ಶಕೀಲ್ ಇಬ್ಬರು ಶಾರ್ಪ್ ಶೂಟರ್‌ಗಳನ್ನು ನಿಯೋಜಿಸಿದ್ದಾನೆ ಎಂಬ ಮಾಹಿತಿ ಎನ್‌ಐಎಗೆ ಲಭಿಸಿದೆ.
ಜನರ ನಡುವೆ ಅಪನಂಬಿಕೆ ಮೂಡಿಸುವುದು, ಹಿಂಸೆಯನ್ನು ಪ್ರಚೋದಿಸುವುದು, ದೇಶಾದ್ಯಂತ ಅದು ವಿಸ್ತರಣೆ ಆಗುವಂತೆ ನೋಡಿಕೊಳ್ಳುವುದು ಡಿ -ಗ್ಯಾಂಗ್‌ನ ಸಂಚಾಗಿದೆ. ಅದರಲ್ಲೂ ಮುಖ್ಯವಾಗಿ ಅದರ ಟಾರ್ಗೆಟ್ ಇರುವುದು ದಿಲ್ಲಿ, ಎನ್‌ಸಿಆರ್, ಮುಂಬಯಿ ಮತ್ತು ದೇಶದ ಇತರ ಪ್ರಮುಖ ನಗರಗಳು ಎನ್ನಲಾಗಿದೆ.
ದಾವೂದ್ ಇಬ್ರಾಹಿಂ ತಂಡ ದೇಶದಲ್ಲಿ ಅಶಾಂತಿ ವಾತಾವರಣ ನಿರ್ಮಿಸಲು ಪ್ರಯತ್ನ ನಡೆಸುತ್ತಿದೆ ಎಂದು ಎನ್‌ಐಎ ಕಳೆದ ಫೆಬ್ರವರಿಯಲ್ಲೇ ಮಾಹಿತಿ ನೀಡಿತ್ತು. ಈ ಬಗ್ಗೆ ತನಿಖೆಗೆಯನ್ನು ಆರಂಭ ಮಾಡಿತ್ತು.
ಈ ಸಂದರ್ಭದಲ್ಲಿ ಯಾಕೆ?
ಪ್ರಸಕ್ತ ದೇಶದಲ್ಲಿ ಧಾರ್ಮಿಕ ಸಂಘರ್ಷ ಜೋರಾಗಿದ್ದು, ಸಣ್ಣ ಪುಟ್ಟ ವಿವಾದಗಳು ಹೊಸ ಹೊಸ ರೂಪವನ್ನು ಪಡೆಯುತ್ತಿವೆ. ಹಿಜಾಬ್, ಮುಸ್ಲಿಮರ ವ್ಯಾಪಾರ ನಿಷೇಧ, ಬೆಳಗ್ಗೆ ಆಜಾನ್ ಕೂಗಬಾರದು ಎಂಬ ಒತ್ತಡಗಳು ಸೇರಿದಂತೆ ಹಿಂದೂ ಮತ್ತು ಮುಸ್ಲಿಮರ ನಡುವೆ ಕಂದಕ ಉಂಟು ಮಾಡುವ ಪ್ರಯತ್ನಗಳು ಹೆಚ್ಚುತ್ತಿವೆ. ಇಂಥ ಪರಿಸ್ಥಿತಿಗಳನ್ನು ದುಷ್ಟ ಶಕ್ತಿಗಳು ದುರ್ಬಳಕೆ ಮಾಡಿಕೊಳ್ಳಲು ಹವಣಿಸುತ್ತವೆ. ದಾವೂದ್ ಇಬ್ರಾಹಿಂ ಗ್ಯಾಂಗ್ ಈ ಹಿಂದೆಯೂ 1990 ರ ದಶಕದಲ್ಲಿ ಇಂತಹುದೇ ಸಂಘರ್ಷದ ಸ್ಥಿತಿಯನ್ನು ದುರ್ಬಳಕೆ ಮಾಡಿಕೊಂಡು ಮುಂಬಯಿ ಸೇರಿದಂತೆ ಹಲವು ಪಡೆ ಸ್ಪೋಟಗಳನ್ನು ನಡೆಸಿತ್ತು ಎನ್ನುವುದನ್ನು ಸ್ಮರಿಸಬಹುದಾಗಿದೆ.