Site icon Vistara News

Rajasthan murder: ಮಹಾರಾಷ್ಟ್ರ, ಗುಜರಾತ್‌ನಲ್ಲೂ ಕನ್ಹಯ್ಯ ಲಾಲ್‌ ಮಾದರಿ ಹತ್ಯೆ? ಎನ್‌ಐಎ ಸಂಶಯ

NIA investigation

ನವ ದೆಹಲಿ: ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿದ್ದಕ್ಕಾಗಿ ರಾಜಸ್ಥಾನದ ಉದಯಪುರದಲ್ಲಿ ಕನ್ಹಯ್ಯ ಲಾಲ್‌ ಅವರನ್ನು ಅತ್ಯಂತ ಬರ್ಬರವಾಗಿ ಕೊಲೆ ಮಾಡಿದ ವಿದ್ಯಮಾನ ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದೆ. ಇದು ವಿಶ್ವ ಮಟ್ಟದಲ್ಲಿ ಸುದ್ದಿಯಾಗಿದೆ. ಆದರೆ, ಇದೇ ಮಾದರಿಯ ಹತ್ಯೆಗಳು ಮಹಾರಾಷ್ಟ್ರ, ಗುಜರಾತ್‌ನಲ್ಲೂ ನಡೆದಿವೆ. ಅದು ಹೆಚ್ಚು ಸುದ್ದಿಯಾಗಿಲ್ಲ. ಈ ಎಲ್ಲ ಕೃತ್ಯಗಳ ಹಿಂದೆ ಒಂದೇ ಉದ್ದೇಶವಿದ್ದು ಒಂದಕ್ಕೊಂದು ಸಂಬಂಧ ಇರಬಹುದು ಎಂದು ರಾಷ್ಟ್ರೀಯ ತನಿಖಾ ದಳ ಶಂಕಿಸಿದೆ.

ಟೇಲರ್‌ ಆಗಿದ್ದ ಕನ್ಹಯ್ಯ ಲಾಲ್‌ ಅವರನ್ನು ಕೊಲೆ ಮಾಡಿದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಗೌಸ್‌ ಮಹಮ್ಮದ್‌ ಪಾಕಿಸ್ತಾನದ ಜತೆ ಲಿಂಕ್‌ ಇರುವುದನ್ನು ಈಗಾಗಲೇ ಎನ್‌ಐಎ ಪತ್ತೆ ಹಚ್ಚಿದೆ. ಪಾಕಿಸ್ತಾನದ ಉಗ್ರ ಸಂಘಟನೆಗಳ ಕೈವಾಡ ಇದರಲ್ಲಿ ಇರುವ ಬಗ್ಗೆ ಸಂಶಯವಿದೆ. ಇಂಥಹುದೇ ತಂಡಗಳ ದೇಶದ ನಾನಾ ಕಡೆ ಕಾರ್ಯಾಚರಿಸುತ್ತಿರಬಹುದು ಎಂದು ಎನ್‌ಐಎ ಅಭಿಪ್ರಾಯಪಟ್ಟಿದೆ.

ಮಹಾರಾಷ್ಟ್ರ ಮತ್ತು ಗುಜರಾತ್‌ನಲ್ಲಿ ನೂಪುರ್‌ ಹೇಳಿಕೆಗೆ ಸಂಬಂಧಪಟ್ಟೇ ಕೆಲವು ಕೊಲೆಗಳು ಸಂಭವಿಸಿವೆ. ಮಹಾರಾಷ್ಟ್ರದ ಅಮರಾವತಿಯಲ್ಲಿ ಉಮೇಶ್‌ ಕೊಲ್ಹೆ ಎಂಬ ವೈದ್ಯರನ್ನು ಜೂನ್‌ 21ರಂದು ಕೊಲೆ ಮಾಡಲಾಗಿತ್ತು. ಅವರು ನೂಪುರ್‌ ಶರ್ಮ ಹೇಳಿಕೆಯನ್ನು ಬೆಂಬಲಿಸಿದ್ದೇ ಕೊಲೆಗೆ ಕಾರಣವಾಗಿತ್ತು. ಈ ಕೃತ್ಯದಲ್ಲಿ ಅಬ್ದುಲ್‌, ಶೋಯಿಬ್‌, ಮುದಸ್ಸಿರ್‌ ಮತ್ತು ಶಾರುಖ್‌ ಎಂಬವರು ಭಾಗಿಗಳಾಗಿದ್ದು, ಎಲ್ಲರೂ ಬಂಧಿಸಲಾಗಿದೆ.

ಇನ್ನೊಂದು ಘಟನೆ ನಡೆದಿರುವುದು ಗುಜರಾತ್‌ನ ಧಂಡುಕಾದ ಮೊಧ್ವಾಲಾ ಎಂಬ ಪ್ರದೇಶದಲ್ಲಿ. ಜೂನ್ 25ರಂದು ಇಲ್ಲಿ 30 ವರ್ಷದ ಅಂಗಡಿ ಮಾಲೀಕ ಕಿಶನ್‌ ಭರ್ವಾಡ್‌ ಅವರನ್ನು ಗುಂಡಿಕ್ಕಿ ಸಾಯಿಸಲಾಗಿದೆ. ಶಬ್ಬೀರ್‌ ಮತ್ತು ಇಮ್ತಿಯಾಜ್‌ ಎಂಬ ಇಬ್ಬರನ್ನು ಬಂಧಿಸಲಾಗಿದೆ. ಈ ಪ್ರಕರಣವನ್ನು ಭಯೋತ್ಪಾದನಾ ನಿಗ್ರಹ ದಳ ಮತ್ತು ಎನ್‌ಐಎ ತನಿಖೆ ನಡೆಸುತ್ತಿವೆ. ಕಿಶನ್‌ ಭರ್ವಾಡ್‌ ಅವರು ಜನವರಿ ಆರರಂದು ಶ್ರೀ ಕೃಷ್ಣ ಮೊಹಮ್ಮದ್‌ ಪೈಗಂಬರ್‌ ಅವರಿಗಿಂತ ಶ್ರೇಷ್ಠ ಎಂದು ಪ್ರತಿಪಾದಿಸಿದ್ದರು. ಬಳಿಕ ಕ್ಷಮೆ ಯಾಚಿಸಿದ್ದರು.

ಮೂರು ಪ್ರಕರಣಗಳಲ್ಲಿ ಸಾಮ್ಯತೆ
ಈ ಮೂರೂ ಪ್ರಕರಣಗಳಿಗೆ ಸಾಮ್ಯತೆ ಇರುವುದನ್ನು ಎನ್‌ಐಎ ಕಂಡುಕೊಂಡಿದೆ. ಮೂರೂ ಪ್ರಕರಣಗಳಲ್ಲಿ ಆರೋಪಿಗಳನ್ನು ತಕ್ಷಣವೇ ಬಂಧಿಸಲಾಗಿದೆ. ಹಿಂದಿನ ಎರಡು ಪ್ರಕರಣಗಳಲ್ಲಿ ಅವರು ತಪ್ಪಿಸಿಕೊಳ್ಳಲು ಪ್ರಯತ್ನಿಸಿಯೇ ಇಲ್ಲ.

ಮಹಾರಾಷ್ಟ್ರ ಮತ್ತು ಗುಜರಾತ್‌ನ ಕೊಲೆಗಳಲ್ಲಿ ಪಾಪ್ಯುಲರ್‌ ಫ್ರಂಟ್‌ ಆಫ್‌ ಇಂಡಿಯಾದ ಕೈವಾಡ ಇದೆಯೇ ಎಂಬ ಬಗ್ಗೆಯೂ ತನಿಖೆ ನಡೆಯುತ್ತಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.

ಇದನ್ನೂ ಓದಿ| Rajasthan murder: ಕನ್ಹಯ್ಯ ಲಾಲ್‌ ಹಂತಕರಿಗೆ mumbai terror ಲಿಂಕ್‌? ಏನಿದು 2611?

Exit mobile version