Site icon Vistara News

3 ವರ್ಷದ ಬಾಲೆಯ ಮೇಲೆ ಸ್ಕೂಲ್​ ಬಸ್​​ನಲ್ಲಿ ಅತ್ಯಾಚಾರ; ಅಂಗಿ ಬದಲಿಸಿ ಕಳಿಸಿದ್ದ ಕ್ರೂರ ಚಾಲಕ

nursery school student raped in School Bus in Bhopal

ಭೋಪಾಲ್​: ಮೂರು ವರ್ಷದ ಬಾಲಕಿಯ ಮೇಲೆ ಬಸ್​​ನಲ್ಲಿಯೇ ಅತ್ಯಾಚಾರ ನಡೆದಿದೆ. ಆಕೆಯನ್ನು ಪ್ರತಿದಿನ ನರ್ಸರಿಗೆ ಕರೆದೊಯ್ದು, ಅಲ್ಲಿಂದ ಮನೆಗೆ ಕರೆದುಕೊಂಡು ಬಂದು ಬಿಡುವ ಚಾಲಕನೇ ಈ ದುಷ್ಕೃತ್ಯ ನಡೆಸಿದ್ದು, ಸದ್ಯ ಆತ ಬಂಧಿತನಾಗಿದ್ದಾನೆ. ಅವನೊಂದಿಗೆ ಬಸ್​​ ಅಟೆಂಡೆಂಟ್​ ಕೂಡ ಅರೆಸ್ಟ್​ ಆಗಿದ್ದಾಳೆ. ಸೆಪ್ಟೆಂಬರ್​ 8ರಂದು ಮಧ್ಯಪ್ರದೇಶದ ಭೋಪಾಲ್​ನಲ್ಲಿ ಘಟನೆ ನಡೆದಿದೆ. ಆ ಕ್ರೂರ ಚಾಲಕ ಬಸ್​​​ನಲ್ಲಿದ್ದ ಮಹಿಳಾ ಅಟೆಂಡೆಂಟ್​ ಎದುರೇ ಮೂರು ವರ್ಷದ ಹುಡುಗಿಯ ಮೇಲೇ ರೇಪ್​ ಮಾಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಸೆ.8ರಂದು ಎಂದಿನಂತೆ ನರ್ಸರಿಯಿಂದ ಎಲ್ಲರೊಂದಿಗೆ ಈ ಪುಟ್ಟ ಬಾಲಕಿಯೂ ಬಸ್​​ನಲ್ಲಿ ಮನೆಗೆ ಹೊರಟಿದ್ದಳು. ಎಲ್ಲ ಮಕ್ಕಳನ್ನೂ ಬಿಟ್ಟ ನಂತರ ಕೊನೇದಾಗಿ ಡ್ರೈವರ್​ ಈಕೆಯನ್ನು ಮನೆಗೆ ಬಿಡಲಿದ್ದ. ಆದರೆ ಮಾರ್ಗಮಧ್ಯೆ ಹುಡುಗಿಯ ಮೇಲೆ ದೌರ್ಜನ್ಯ ಎಸಗಿದ್ದಾನೆ. ಅಷ್ಟಲ್ಲದೆ, ಆಕೆಯ ನರ್ಸರಿ ಯೂನಿಫಾರ್ಮ್​ ಬಿಚ್ಚಿ, ಅವಳ ಬ್ಯಾಗ್​​ನಲ್ಲಿದ್ದ ಮತ್ತೊಂದು ಡ್ರೆಸ್​​ ಹಾಕಿದ್ದಾನೆ. ನರ್ಸರಿ ಮಕ್ಕಳಿಗೆ ಮನೆಯಿಂದ ಶಾಲೆಗೆ ಹೊರಡುವಾಗ ಯೂನಿಫಾರ್ಮ್​ ಹಾಕುವ ಜತೆಗೆ, ಪಾಲಕರು ಅವರ ಬ್ಯಾಗ್​​ನಲ್ಲಿ ಇನ್ನೊಂದು ಉಡುಪನ್ನು ಇಟ್ಟು ಕಳಿಸುವುದು ಕಡ್ಡಾಯವಾಗಿದೆ. ಹೀಗೆ ಹುಡುಗಿಯ ಅಮ್ಮ ಇಟ್ಟು ಕಳಿಸಿದ್ದ ಇನ್ನೊಂದು ಡ್ರೆಸ್​ ಹಾಕಿಸಿ, ಮನೆಗೆ ಬಿಟ್ಟಿದ್ದಾನೆ.

ಮಗಳು ಮನೆಗೆ ಬರುತ್ತಿದ್ದಂತೆ ತಾಯಿ ‘ಯೂನಿಫಾರ್ಮ್​ ಎಲ್ಲಿ? ಯಾಕೆ ಈ ಅಂಗಿ ತೊಟ್ಟೆ?’ ಎಂದು ಪ್ರಶ್ನಿಸಿದ್ದಾರೆ. ಆಗ ಅವಳು ‘ಬಸ್​​ನಲ್ಲಿ ಡ್ರೈವರ್​ ತೊಡಿಸಿದ್ದಾರೆ’ ಎಂದಿದ್ದಾಳೆ. ಅದಾದ ಬಳಿಕ ಹುಡುಗಿಯ ಪಾಲಕರು ಶಾಲೆಯ ಆಡಳಿತ ಮಂಡಳಿಗೆ ವಿಷಯ ತಿಳಿಸಿದ್ದಾರೆ. ‘ನನ್ನ ಮಗಳ ಮುಖ, ದೇಹವನ್ನೆಲ್ಲ ಆ ಚಾಲಕ ಮುಟ್ಟಿದ್ದಾನೆ. ನಮ್ಮ ಮಗಳು ತನ್ನ ಖಾಸಗಿ ಭಾಗದಲ್ಲಿ ನೋವು ಎಂದು ಹೇಳುತ್ತಿದ್ದಳು, ನಾವು ಅದನ್ನು ಗಂಭೀರವಾಗಿ ಪರಿಗಣಿಸದೆ ತಪ್ಪು ಮಾಡಿದೆವು’ ಎಂದೂ ಪಾಲಕರು ಹೇಳಿದ್ದಾರೆ. ಅದಾದ ಮೇಲೆ ಪೊಲೀಸರಿಗೂ ದೂರು ನೀಡಲಾಗಿದೆ.

ಆರೋಪಿಗಳಾದ ಹನುಮಂತ್ ಜಾತವ್​ (31), ಬಸ್​ ಅಟೆಂಡೆಂಟ್​ ಊರ್ಮಿಳಾ ಸಾಹು (28) ಬಂಧಿತರಾಗಿದ್ದು, ಪೋಕ್ಸೋ ಕಾಯ್ದೆ ಮತ್ತು ಐಪಿಸಿ ಸೆಕ್ಷನ್​ 376ರಡಿ ಕೇಸ್​ ದಾಖಲಾಗಿದೆ. ಬಸ್​​ನಲ್ಲಿ ಸಿಸಿಟಿವಿ ಕ್ಯಾಮರಾಗಳು ಇವೆ. ಆದರೆ ಅದರ ಫೂಟೇಜ್​ಗಳನ್ನು ಮೂರು ದಿನಕ್ಕೊಮ್ಮೆ ಡಿಲೀಟ್ ಮಾಡಲಾಗುತ್ತದೆ ಎಂದು ನಮಗೆ ಶಾಲಾ ಆಡಳಿತ ತಿಳಿಸಿದೆ ಎಂದು ಭೋಪಾಲ್​ ಪೊಲೀಸ್ ಆಯುಕ್ತ ಮಕ್ರಂಡ್ ದಿಯೋಸ್ಕರ್ ತಿಳಿಸಿದ್ದಾರೆ. ಹಾಗೇ, ‘ಈ ಕೇಸ್​ಗೆ ಸಂಬಂಧಪಟ್ಟು ತನಿಖೆ ನಡೆಸಲು ಎಲ್ಲ ರೀತಿಯ ಸಹಕಾರವನ್ನೂ ನಾವು ನೀಡುತ್ತೇವೆ ಎಂದು ಶಾಲೆಯ ಪ್ರಿನ್ಸಿಪಾಲ್​ ಹೇಳಿದ್ದಾರೆ.

ಇದನ್ನೂ ಓದಿ: Verdict | 7 ವರ್ಷದ ಬಾಲಕಿ ಮೇಲೆ ಅತ್ಯಾಚಾರ ಮಾಡಿದ್ದವನಿಗೆ 7 ವರ್ಷ ಜೈಲು; ಸಂತ್ರಸ್ತೆಗೆ 1.15 ಲಕ್ಷ ಪರಿಹಾರ

Exit mobile version