ಭುವನೇಶ್ವರ: ದೇಶದಲ್ಲಿ ಬಡತನ ಎಂದರೆ ಎಷ್ಟು ಶಾಪವೋ, ರಾಜಕಾರಣಿಗಳು ಸೇರಿ ಹಲವರಿಗೆ ಅದು ವರ. ಪ್ರತಿ ಬಾರಿ ಚುನಾವಣೆ ಬಂದಾಗಲೂ, ನಾವು ಬಡವರ ಏಳಿಗೆಗೆ ಶ್ರಮಿಸುತ್ತೇವೆ ಎಂದು ನಂಬಿಸಿ, ಮತ ಪಡೆದು, ರಾಜಕಾರಣಿಗಳು ಶ್ರೀಮಂತರಾಗುತ್ತಾರೆ. ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು 75 ವರ್ಷ ಕಳೆದರೂ ಈಗಲೂ ರಾಜಕಾರಣಿಗಳು ಬಡತನ (Poverty) ನಿರ್ಮೂಲನೆ ಮಾಡುತ್ತೇವೆ ಎಂದೇ ಹೇಳುತ್ತಾರೆ. ಹೀಗೆ ಜನರ ಬಡತನವು ಕೂಡ ದೇಶದಲ್ಲಿ ‘ಬಂಡವಾಳ’ ಆಗಿದೆ. ಇದಕ್ಕೆ ಮತ್ತೊಂದು ನಿದರ್ಶನ ಎಂಬಂತೆ, ಒಡಿಶಾ (Odisha) ಸೇರಿ ಹಲವು ರಾಜ್ಯಗಳಲ್ಲಿ ಬಡವರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳನ್ನು (Bank Accounts) ಸೈಬರ್ ಅಪರಾಧಿಗಳು (Cyber Criminals) ಕೊಂಡುಕೊಳ್ಳುವ ಜಾಲವೊಂದು ಬಯಲಾಗಿದೆ.
ಹೌದು, ಒಡಿಶಾ, ಪಶ್ಚಿಮ ಬಂಗಾಳ ಹಾಗೂ ಜಾರ್ಖಂಡ್‌ನಲ್ಲಿ ಬಡವರ ಹೆಸರಿನಲ್ಲಿರುವ ಬ್ಯಾಂಕ್ ಖಾತೆಗಳನ್ನು ಖರೀದಿಸಿ, ಅವುಗಳನ್ನು ಸೈಬರ್ ಅಪರಾಧಿಗಳಿಗೆ ಮಾರಾಟ ಮಾಡುವ ಜಾಲವನ್ನು ಒಡಿಶಾ ವಿಶೇಷ ಕಾರ್ಯಪಡೆ (STF) ಪೊಲೀಸರು ಭೇದಿಸಿದ್ದಾರೆ. ಬಡವರ ಹೆಸರಿನಲ್ಲಿರುವ ಖಾತೆಗಳನ್ನು ಸೈಬರ್ ಅಪರಾಧಿಗಳು ಬಳಸಿಕೊಂಡು, ಮೋಸದ ಜಾಲಕ್ಕೆ ಸಿಲುಕಿದವರಿಂದ ಹಣವನ್ನು ಹಾಕಿಸಿಕೊಂಡು, ಬಡವರ ಖಾತೆಗಳನ್ನು ದುರ್ಬಳಕೆ ಮಾಡಿಕೊಳ್ಳುತ್ತಿರುವ ಜಾಲ ಇದಾಗಿದೆ.
“ಗ್ರಾಮೀಣ ಪ್ರದೇಶಗಳಿಗೆ ತೆರಳುವ ಒಂದಷ್ಟು ದುಷ್ಕರ್ಮಿಗಳು ಬಡವರಿಗೆ 2 ಸಾವಿರ ರೂ. ಕೊಟ್ಟು, ಅವರಿಂದ ಬ್ಯಾಂಕ್ ಖಾತೆಯನ್ನು ಖರೀದಿಸುತ್ತಾರೆ. ಬ್ಯಾಂಕ್ ಖಾತೆಯ ಹೆಸರು, ಎಟಿಎಂ, ಎಟಿಎಂ ಪಾಸ್‌ವರ್ಡ್ ಸೇರಿ ಎಲ್ಲ ದಾಖಲೆ, ಮಾಹಿತಿ ಪಡೆಯುತ್ತಾರೆ. ಆ ಖಾತೆಗಳನ್ನು ಸೈಬರ್ ಅಪರಾಧಿಗಳಿಗೆ, ಸ್ಕ್ಯಾಮರ್‌ಗಳಿಗೆ 15-20 ಸಾವಿರ ರೂ.ಗೆ ಮಾರಾಟ ಮಾಡುತ್ತಾರೆ. ಈ ಜಾಲವನ್ನೀಗ ಭೇದಿಸಲಾಗಿದ್ದು, ಮೂವರು ಆರೋಪಿಗಳನ್ನು ಬಂಧಿಸಲಾಗಿದೆ” ಎಂದು ಎಸ್‌ಟಿಎಫ್ ಐಜಿ ಜೆ.ಎನ್.ಪಂಕಜ್ ತಿಳಿಸಿದ್ದಾರೆ.
“ಬಡವರು, ಬುಡಕಟ್ಟು ಸಮುದಾಯದವರಿಗೆ ಹಣದ ಆಸೆ ತೋರಿಸಿ ಖರೀದಿಸಿದ ಬ್ಯಾಂಕ್ ಖಾತೆಗಳಿಗೆ ಸೈಬರ್ ವಂಚನೆಯಿಂದ ಗಳಿಸಿದ ಹಣ ಜಮೆಯಾಗುತ್ತದೆ. ಆ ಹಣವನ್ನು ಕೂಡಲೇ ಕ್ರಿಪ್ಟೋಕರೆನ್ಸಿ ವ್ಯಾಲೆಟ್‌ಗೆ ವರ್ಗಾಯಿಸಲಾಗುತ್ತದೆ. ಈ ಸೈಬರ್ ಕ್ರಿಮಿನಲ್‌ಗಳಿಗೆ ಬಡವರ ಖಾತೆಗಳನ್ನು ಮಾರಾಟ ಮಾಡುವವರ ಜಾಲವೇ ದೊಡ್ಡಿದೆ. ಪ್ರಕರಣದ ಕುರಿತು ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬೇರೆ ಬೇರೆ ರಾಜ್ಯಗಳಲ್ಲೂ ಈ ಜಾಲ ಇರುವುದು ಗೊತ್ತಾಗಿದೆ” ಎಂದು ತಿಳಿಸಿದ್ದಾರೆ.
ಇದನ್ನೂ ಓದಿ: Cyber Crime: ಬೆಂಗಳೂರಿನಲ್ಲಿ ಖತರ್ನಾಕ್ ಹ್ಯಾಕರ್ ಬಂಧನ; 4.16 ಕೋಟಿ ರೂ. ಮೌಲ್ಯದ ವಸ್ತುಗಳು ವಶಕ್ಕೆ