ಭೋಪಾಲ್: ಶಾಸಕಾಂಗ ಹಾಗೂ ನ್ಯಾಯಾಂಗದಷ್ಟೇ ಕಾರ್ಯಾಂಗವೂ ದೇಶದ ಏಳಿಗೆಗೆ ಪ್ರಮುಖವಾಗಿದೆ. ಹಾಗಾಗಿ, ಇದು ಸರ್ಕಾರದ ಪ್ರಮುಖ ಅಂಗವಾಗಿದೆ. ಅಧಿಕಾರಶಾಹಿ ವರ್ಗವು ಸಮರ್ಥವಾಗಿ ಕಾರ್ಯನಿರ್ವಹಿಸದ ಹೊರತು ಯಾವ ಸರ್ಕಾರ, ಯಾವ ರಾಜ್ಯ ಹಾಗೂ ಯಾವ ದೇಶವೂ ಉತ್ತಮವಾಗಿ ಇರಲು ಸಾಧ್ಯವಿಲ್ಲ. ಆದರೆ, ಮಧ್ಯಪ್ರದೇಶದಲ್ಲಿ ಸರ್ಕಾರದ ಹಣವನ್ನು ನುಂಗಲು ಅಧಿಕಾರಿಗಳು ಹೀನ ಕೃತ್ಯ ಎಸಗಿದ ಪ್ರಕರಣ ಬೆಳಕಿಗೆ ಬಂದಿದೆ.
ಹೌದು, ಸರ್ಕಾರದ ಪರಿಹಾರ ನಿಧಿಯ ಸುಮಾರು 93.56 ಲಕ್ಷ ರೂಪಾಯಿಯನ್ನು ಲಪಟಾಯಿಸಲು ಅಧಿಕಾರಿಗಳು 26 ಜೀವಂತ ಕಾರ್ಮಿಕರನ್ನು ಮೃತಪಟ್ಟಿದ್ದಾರೆ ಎಂಬುದಾಗಿ ಘೋಷಿಸಿದ್ದಾರೆ. ಸರ್ಕಾರದ ಪರಿಹಾರದ ಹಣ ವಿತರಣೆಯಲ್ಲಿ ಏರುಪೇರಾದ ಕುರಿತು ವಿಚಾರಣೆ ನಡೆಸಿದಾಗ, ಅಧಿಕಾರಿಗಳು ವಂಚನೆ ಎಸಗಿರುವ ಪ್ರಕರಣ ಬಹಿರಂಗವಾಗಿದೆ. ಶಿವಪುರಿ ಜಿಲ್ಲೆಯ ಜನಪದ ಪಂಚಾಯಿತಿಯ ಐವರು ಅಧಿಕಾರಿಗಳ ವಿರುದ್ಧ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ಕಟ್ಟಡ ಹಾಗೂ ನಿರ್ಮಾಣ ಕಾರ್ಮಿಕರು ಕಾರ್ಯನಿರ್ವಹಿಸುವಾಗ ಮೃತಪಟ್ಟರೆ ಮಧ್ಯಪ್ರದೇಶ ಕಟ್ಟಡ ಹಾಗೂ ಕಾರ್ಮಿಕರ ಮಂಡಳಿಯಿಂದ ಪರಿಹಾರ ನೀಡಲಾಗುತ್ತದೆ. ಆದರೆ, ಈ ಪರಿಹಾರದ ನಿಧಿಯಿಂದ 26 ಕಾರ್ಮಿಕರಿಗೆ ಹಣ ವಿತರಿಸಲಾಗಿದೆ ಎಂದು ಸುಳ್ಳು ದಾಖಲೆ ಸೃಷ್ಟಿಸಲಾಗಿದೆ. ಜೀವಂತವಿರುವ ಕಾರ್ಮಿಕರ ಹೆಸರುಗಳನ್ನು ಬಳಸಿಕೊಂಡು ಸರ್ಕಾರದ ಹಣವನ್ನು ವಂಚಿಸಲಾಗಿದೆ.
ಇದನ್ನೂ ಓದಿ: Fraud Case: ಬೆಳದಿಂಗಳ ಬಾಲೆ ಪ್ರಕರಣಕ್ಕೆ ಟ್ವಿಸ್ಟ್; ಸ್ವಾಮೀಜಿ ವಂಚನೆ ಕೇಸಲ್ಲಿ ಎ2 ಆರೋಪಿ ಈಗ ಎ1!
ಜಿಲ್ಲಾ ಪಂಚಾಯಿತಿ ಸಿಇಒ ನೇತೃತ್ವದಲ್ಲಿ ಪ್ರಕರಣದ ಕುರಿತು ತನಿಖೆ ನಡೆಸಿದಾಗ ಹತ್ತಾರು ವಿಚಾರಗಳು ಬಯಲಾಗಿವೆ. ಪರಿಹಾರದ ಹಣ ಎಗರಿಸಲು 26 ಕಾರ್ಮಿಕರು ಮೃತಪಟ್ಟಿದ್ದಾರೆ ಎಂದು ಘೋಷಿಸಲಾಗಿದೆ. ಎರಡು ಜಿಲ್ಲೆಗಳ ಸಿಇಒಗಳ ಡಿಜಿಟಲ್ ಸಿಗ್ನೇಚರ್ ಬಳಸಿ ಹಣವನ್ನು ವಿತ್‌ಡ್ರಾ ಮಾಡಲಾಗಿದೆ. ವಂಚನೆ ಪ್ರಕರಣದಲ್ಲಿ ಇಬ್ಬರು ಮಹಿಳಾ ಕ್ಲರ್ಕ್‌ಗಳು ಕೂಡ ಭಾಗಿಯಾಗಿದ್ದಾರೆ. ಇನ್ನು, ಕೇಸ್‌ಗೆ ಸಂಬಂಧಿಸಿದಂತೆ ಒಬ್ಬ ಕಂಪ್ಯೂಟರ್ ಆಪರೇಟರ್, ಇಬ್ಬರು ಜಿಪಂ ಸಿಇಒ, ಇಬ್ಬರು ಮಹಿಳಾ ಕ್ಲರ್ಕ್‌ಗಳ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗಿದೆ. ಒಟ್ಟಿನಲ್ಲಿ “ಬೇಲಿಯೇ ಎದ್ದು ಹೊಲ ಮೇಯ್ದಂತೆ”, ಜನರಿಗೆ ಪರಿಹಾರ ಒದಗಿಸಬೇಕಾದ ಸರ್ಕಾರಿ ಅಧಿಕಾರಿಗಳೇ ಸರ್ಕಾರದ ಹಣವನ್ನು ವಂಚಿಸಿದ್ದಾರೆ.