ಭುವನೇಶ್ವರ: ಸಹೋದರನಾದವನು ಸಹೋದರಿಯ ರಕ್ಷಣೆ ಮಾಡಬೇಕು. ಆಕೆಯ ಮೇಲೆ ಯಾರ ಕಣ್ಣೂ ಬೀಳದಂತೆ ನೋಡಿಕೊಳ್ಳಬೇಕು. ಆಕೆಯ ನೋವು, ದುಃಖ, ದುಮ್ಮಾನಗಳಿಗೆ ಸ್ಪಂದಿಸಬೇಕು. ಆದರೆ, ಒಡಿಶಾದಲ್ಲೊಬ್ಬ ದುಷ್ಟನು ಸಹೋದರಿಯ ಮೇಲೆಯೇ ಅತ್ಯಾಚಾರ ಎಸಗಿದ್ದಾನೆ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ರಕ್ಷಾಬಂಧನ ದಿನವೇ (Raksha Bandhan 2023) ಒಡಿಶಾ ಹೈಕೋರ್ಟ್ ದುಷ್ಟನಿಗೆ 20 ವರ್ಷ ಜೈಲು ಶಿಕ್ಷೆ ವಿಧಿಸಿದೆ.
ಸಹೋದರಿಯು ಬಾಲಕಿಯಾಗಿದ್ದಾಗ ಆಕೆಯ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಕುರಿತಂತೆ ಅಧೀನ ನ್ಯಾಯಾಲಯವು 20 ವರ್ಷ ಜೈಲು ಶಿಕ್ಷೆ ವಿಧಿಸಿ ಹೊರಡಿಸಿದ್ದ ಆದೇಶವನ್ನು ಒಡಿಶಾ ಹೈಕೋರ್ಟ್ ಎತ್ತಿಹಿಡಿದಿದೆ. ನ್ಯಾಯಮೂರ್ತಿ ಎಸ್.ಕೆ. ಸಾಹೂ ಅವರು ದುರುಳನಿಗೆ 40 ಸಾವಿರ ರೂಪಾಯಿ ದಂಡ ಹಾಗೂ 20 ವರ್ಷ ಜೈಲು ಶಿಕ್ಷೆ ವಿಧಿಸಿದ ಅಧೀನ ನ್ಯಾಯಾಲಯದ ತೀರ್ಪನ್ನು ಎತ್ತಿಹಿಡಿದಿದ್ದಾರೆ.
“ರಕ್ಷಾಬಂಧನದ ದಿನದಂದು ಸಹೋದರನಾದವನು ತಂಗಿಯ ಕೈಯಲ್ಲಿ ರಾಖಿ ಕಟ್ಟಿಸಿಕೊಂಡು, ನನ್ನ ಕೊನೆಯ ಉಸಿರಿರುವವರೆಗೆ ನಿನ್ನನ್ನು ಕಾಪಾಡುತ್ತೇನೆ, ಚೆನ್ನಾಗಿ ನೋಡಿಕೊಳ್ಳುತ್ತೇನೆ ಎಂದು ಶಪಥ ಮಾಡುತ್ತಾನೆ. ಇಂತಹ ಪವಿತ್ರ ದಿನದಂದು ಕೆಟ್ಟ ಸುದ್ದಿಯನ್ನು ಕೇಳುತ್ತಿದ್ದೇನೆ ಹಾಗೂ ಸಹೋದರಿ ಮೇಲೆಯೇ ಅತ್ಯಾಚಾರ ಎಸಗಿದವನಿಗೆ ಶಿಕ್ಷೆ ನೀಡುತ್ತಿದ್ದೇನೆ ಎಂಬುದೇ ನನ್ನನ್ನು ವಿಚಲಿತನನ್ನಾಗಿಸಿದೆ” ಎಂದು ಸಾಹೂ ಹೇಳಿದರು.
ಇದನ್ನೂ ಓದಿ: Actor Yash: ಯಶ್ ಹಾಗೂ ರಿಷಬ್ ಶೆಟ್ಟಿ ಮಕ್ಕಳ ರಕ್ಷಾಬಂಧನ ಆಚರಣೆ ಹೇಗಿತ್ತು? ಕ್ಯೂಟ್ ಫೋಟೊಗಳು ವೈರಲ್!
ಒಡಿಶಾದ ಮಲ್ಕನ್‌ಗಿರಿ ಜಿಲ್ಲೆಯ ಗ್ರಾಮವೊಂದರಲ್ಲಿ 2018 ಹಾಗೂ 2019ರ ಅವಧಿಯಲ್ಲಿ 14 ವರ್ಷದ ತಂಗಿಯ ಮೇಲೆಯೇ ದುರುಳನು ಲೈಂಗಿಕ ದೌರ್ಜನ್ಯ ಎಸಗುವ ಮೂಲಕ ಸಹೋದರ ಎಂಬ ಸಂಬಂಧಕ್ಕೆ ಕಳಂಕ ತಂದಿದ್ದ. ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಕನ್‌ಗಿರಿ ನ್ಯಾಯಾಲಯವು ದುಷ್ಟನಿಗೆ 2020ರ ಜನವರಿಯಲ್ಲಿ 20 ವರ್ಷ ಜೈಲು ಶಿಕ್ಷೆ ವಿಧಿಸಿ ಆದೇಶ ಹೊರಡಿಸಿತ್ತು. ಇದನ್ನು ಪ್ರಶ್ನಿಸಿ ಆತ ಹೈಕೋರ್ಟ್ ಮೊರೆಹೋಗಿದ್ದ.