ಮುಂಬೈ: ಆನ್‌ಲೈನ್ ವಂಚನೆ ಕುರಿತು ಎಷ್ಟೇ ಜಾಗೃತಿ ಮೂಡಿಸಿದರೂ, ಯಾರಿಗೂ ಒಟಿಪಿ ಸೇರಿ ಯಾವುದೇ ಮಾಹಿತಿ ಹಂಚಿಕೊಳ್ಳಬಾರದು ಎಂದು ತಿಳಿಸುತ್ತಿದ್ದರೂ ವಂಚನೆ ಜಾಲಕ್ಕೆ ಸಿಲುಕುತ್ತಿರುವವರ ಸಂಖ್ಯೆ ಹೆಚ್ಚಾಗುತ್ತಿದೆ. ಅದರಲ್ಲೂ, ಅನಕ್ಷರಸ್ಥರಿಗಿಂತ ಅಕ್ಷರಸ್ಥರೇ ಹೆಚ್ಚಾಗಿ ಇಂತಹ ಜಾಲಗಳಿಗೆ ಸಿಲುಕುತ್ತಿರುವ ಪ್ರಕರಣಗಳು ಹೆಚ್ಚಾಗಿ ಕಾಣಸಿಗುತ್ತಿವೆ. ಇದಕ್ಕೆ ನಿದರ್ಶನ ಎಂಬಂತೆ, ಮುಂಬೈನಲ್ಲಿ ಆನ್‌ಲೈನ್ ಮೂಲಕ ಸಮೋಸ (Online Fraud) ಆರ್ಡರ್ ಮಾಡಿದ ವೈದ್ಯರೊಬ್ಬರು ವಂಚನೆ ಜಾಲಕ್ಕೆ ಸಿಲುಕಿ 1.4 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ.
ಮುಂಬೈನ ಕೆ.ಇ.ಎಂ ಆಸ್ಪತ್ರೆ ವೈದ್ಯರು ಸೋಮವಾರ ಪಿಕ್‌ನಿಕ್‌ಗೆ ಹೋಗಲು ತೀರ್ಮಾನಿಸಿದ್ದಾರೆ. ಪಿಕ್‌ನಿಕ್ ಹೋದಾಗ ತಿನ್ನೋಣ ಎಂದು ವೈದ್ಯರೊಬ್ಬರು ಖ್ಯಾತ ಹೋಟೆಲ್‌ನಿಂದ 25 ಪ್ಲೇಟ್ ಸಮೋಸ ಆರ್ಡರ್ ಮಾಡಿದ್ದಾರೆ. ಆದರೆ, ಸಮೋಸ ಆರ್ಡರ್ ಮಾಡಿದ ಬಳಿಕ ಪೇಮೆಂಟ್ ವಿಚಾರದಲ್ಲಿ ಡಾಕ್ಟರ್ ನಿರ್ಲಕ್ಷ್ಯ ವಹಿಸಿದ್ದು, ಇದರಿಂದಾಗಿ ಅವರು 1.4 ಲಕ್ಷ ರೂಪಾಯಿ ಕಳೆದುಕೊಳ್ಳುವಂತಾಗಿದೆ. ಈ ಕುರಿತು ವೈದ್ಯರು ಪೊಲೀಸರಿಗೆ ದೂರು ನೀಡಿದ್ದಾರೆ.
“ಡಾಕ್ಟರ್ ಸಮೋಸ ಆರ್ಡರ್ ಮಾಡಿದ ಬಳಿಕ ಅವರಿಗೊಂದು ಕರೆ ಬಂದಿದೆ. ಸಮೋಸಕ್ಕಾಗಿ ನೀವು 1,500 ರೂಪಾಯಿ ಪಾವತಿಸಬೇಕು. ಆನ್‌ಲೈನ್ ಪಾವತಿಗಾಗಿ ನಿಮ್ಮ ಮೊಬೈಲ್‌ಗೆ ಲಿಂಕ್ ಕಳುಹಿಸುತ್ತೇವೆ. ಅದರ ಮೇಲೆ ಕ್ಲಿಕ್ ಮಾಡಿ, ಮಾಹಿತಿ ಒದಗಿಸಿ ಎಂಬುದಾಗಿ ವಂಚಕರು ತಿಳಿಸಿದ್ದಾರೆ. ಅದರಂತೆ, ಲಿಂಕ್ ಮೇಲೆ ಕ್ಲಿಕ್ ಮಾಡಿದ ಡಾಕ್ಟರ್, ಎಲ್ಲ ಮಾಹಿತಿ ನೀಡಿದ್ದಾರೆ. ಇದರಿಂದಾಗಿ ಅವರು ಹಣ ಕಳೆದುಕೊಂಡಿದ್ದಾರೆ” ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: Cyber Crime: ನೀವು ಆರ್ಡರ್ ಮಾಡಿಲ್ಲದ ಪಾರ್ಸೆಲ್ ಬಂದಿದೆಯಾ? ಹುಷಾರು! ಹೀಗೊಂದು ಆನ್‌ಲೈನ್ ವಂಚನೆ
ಸಮೋಸಕ್ಕಾಗಿ 1,500 ರೂಪಾಯಿ ಪಾವತಿಸಿದ ಡಾಕ್ಟರ್ ಬ್ಯಾಂಕ್ ಖಾತೆಯಿಂದ ಮೊದಲು 28 ಸಾವಿರ ರೂಪಾಯಿ ಕಡಿತವಾಗಿದೆ. ಹೀಗೆ ಹಲವು ಬಾರಿ ಕಡಿತವಾಗಿ ಕೊನೆಗೆ 1.40 ಲಕ್ಷ ರೂಪಾಯಿ ಕಳೆದುಕೊಂಡಿದ್ದಾರೆ. ಪ್ರಕರಣದ ಕುರಿತು ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಹಾಗಾಗಿ, ಯಾರು ಕೂಡ ಮೊಬೈಲ್‌ಗೆ ಬರುವ ಲಿಂಕ್‌ಗಳ ಮೇಲೆ ಕ್ಲಿಕ್ ಮಾಡುವುದು, ಅಪರಿಚಿತರಿಗೆ ಮಾಹಿತಿ ನೀಡುವುದು, ಒಟಿಪಿ, ಎಟಿಎಂ ಸಿವಿವಿ ನಂಬರ್ ಸೇರಿ ಯಾವುದೇ ಮಾಹಿತಿ ನೀಡಬಾರದು. ಇಲ್ಲದಿದ್ದರೆ ನೀವು ಕೂಡ ಹೀಗೆ ವಂಚನೆ ಜಾಲಕ್ಕೆ ಸಿಲುಕಬೇಕಾಗುತ್ತದೆ.