ಬೆಂಗಳೂರು: ಮೊದಲ ಪತ್ನಿ ಬದುಕಿರುವಾಗಲೇ ಎರಡನೇ ವಿವಾಹವಾದರೆ ಆ ಎರಡನೇ ಪತ್ನಿಗೆ (Second wife) ಪಿಂಚಣಿ ಪಡೆಯುವ (Pension Eligibility) ಅಧಿಕಾರ ಇಲ್ಲ. ಈ ಅಧಿಕಾರ ಏನಿದ್ದರೂ ಮೊದಲ ಪತ್ನಿಗೆ ಮಾತ್ರ. ಆಕೆ ಮಾತ್ರ ಪತಿಯ ಕುಟುಂಬ ಪಿಂಚಣಿಯನ್ನು (Family Pension) ಪಡೆಯಬಹುದು ಎಂದು ಕರ್ನಾಟಕ ಹೈಕೋರ್ಟ್ (Karnataka High Court) ಮಹತ್ವದ ತೀರ್ಪು ನೀಡಿದೆ.
ಈ ಸಂಬಂಧ ಸರ್ಕಾರಿ ನೌಕರರೊಬ್ಬರ 2ನೇ ಪತ್ನಿ ಸಲ್ಲಿಸಿದ್ದ ಮೇಲ್ಮನವಿಯ ವಿಚಾರಣೆ ನಡೆಸಿದ್ದ ಮುಖ್ಯ ನ್ಯಾಯಮೂರ್ತಿ ಪಿ.ಬಿ. ವರಲೆ ಹಾಗೂ ನ್ಯಾಯಮೂರ್ತಿ ಕೃಷ್ಣ ಎಸ್. ದೀಕ್ಷಿತ್ ಅವರಿದ್ದ ವಿಭಾಗೀಯ ಪೀಠವು ಈ ಮಹತ್ವದ ಆದೇಶವನ್ನು ನೀಡಿದೆ.
ಇದನ್ನೂ ಓದಿ: HSRP Number Plate : ಎಚ್‌ಎಸ್‌ಆರ್‌ಪಿ ನಂಬರ್ ಪ್ಲೇಟ್ ಹಾಕಿಸಿಲ್ವಾ? ಕೂಡಲೇ ಈ ಕೆಲಸ ಮಾಡಿ!
ಮೊದಲನೇ ಪತ್ನಿ ಬದುಕಿದ್ದಾಗ 2ನೇ ವಿವಾಹಕ್ಕೆ ಮಾನ್ಯತೆ ಇಲ್ಲ. ಹಾಗಾಗಿ ಎರಡನೇ ಪತ್ನಿಗೆ ಪಿಂಚಣಿಯ ಹಕ್ಕಿಲ್ಲ ಎಂದು ಹೈಕೋರ್ಟ್ ತನ್ನ ಆದೇಶದಲ್ಲಿ ಉಲ್ಲೇಖಿಸಿದೆ. ಹೀಗಾಗಿ ಮೊದಲ ಪತ್ನಿಗೆ ಮಾತ್ರ ಮೃತ ಪತಿಯ ಕುಟುಂಬ ಪಿಂಚಣಿ ಅಧಿಕಾರವಿದೆ ಎಂದು ಅಭಿಪ್ರಾಯವನ್ನು ಪಟ್ಟಿದೆ.
ಏನಿದು ಪ್ರಕರಣ?
ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ನೌಕರರಾಗಿದ್ದ ನಂಜುಂಡಪ್ಪ ಎಂಬುವವರ ಮೊದಲನೇ ಪತ್ನಿಗೆ ನಿಯಮದಂತೆ ಕೌಟುಂಬಿಕ ಪಿಂಚಣಿಯನ್ನು ನೀಡಲಾಗುತ್ತಿತ್ತು. ಆದರೆ, ಎರಡನೇ ಪತ್ನಿ ಇದಕ್ಕೆ ತಕರಾರು ವ್ಯಕ್ತಪಡಿಸಿದ್ದು, ಎರಡನೇ ಪತ್ನಿಯಾಗಿದ್ದರೂ ಕೌಟುಂಬಿಕ ಪಿಂಚಣಿ ಪಡೆಯಬಹುದಾಗಿದೆ. ಹೀಗಾಗಿ ತಮಗೆ ಪಿಂಚಣಿ ನೀಡಬೇಕು ಎಂದು ಆರ್‌ಡಿಪಿಆರ್‌ಗೆ ಅರ್ಜಿ ಸಲ್ಲಿಸಿದ್ದರು.
ಆದರೆ, ಇಲಾಖೆ ಎರಡನೇ ಪತ್ನಿಯ ಮನವಿಯನ್ನು ತಿರಸ್ಕರಿಸಿತ್ತು. ಅದನ್ನು ಪ್ರಶ್ನಿಸಿ ಹೈಕೋರ್ಟ್ ಏಕ ಸದಸ್ಯ ಪೀಠದ ಮೊರೆ ಹೋಗಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಏಕ ಸದಸ್ಯ ಪೀಠ ಆರ್‌ಡಿಪಿಆರ್ ಕ್ರಮವನ್ನು ಎತ್ತಿಹಿಡಿದಿತ್ತು. ಪಿಂಚಣಿ ನೀಡಲು ಸಾಧ್ಯವಿಲ್ಲವೆಂದು ಆದೇಶಿಸಿತ್ತು. ಇದನ್ನು ಪ್ರಶ್ನಿಸಿದ್ದ ನಂಜುಂಡಪ್ಪ ಅವರ ಎರಡನೇ ಪತ್ನಿ ವಿಭಾಗೀಯ ಪೀಠದಲ್ಲಿ ಮೇಲ್ಮನವಿ ಸಲ್ಲಿಸಿದ್ದರು.
ಎರಡನೇ ಮದುವೆ ಕಾನೂನಿನ ಪ್ರಕಾರ ಅಪರಾಧ
ಈ ಪ್ರಕರಣವನ್ನು ಕೈಗೆತ್ತಿಕೊಂಡ ಹೈಕೋರ್ಟ್ ವಿಭಾಗೀಯ ಪೀಠವು ವಾದ-ಪ್ರತಿವಾದ ಆಲಿಸಿದೆ. ಬಳಿಕ ತೀರ್ಪು ನೀಡಿದ್ದು, ಕೌಟುಂಬಿಕ ಪಿಂಚಣಿಯನ್ನು ನಿಯಮದ ಪ್ರಕಾರ ಪತ್ನಿಗೆ ನೀಡಲಾಗುವುದು. ಆದರೆ ಎರಡನೇ ಮದುವೆ ಕಾನೂನಿನ ಅನುಸಾರ ಮದುವೆ ಎಂದು ಪರಿಗಣನೆಗೆ ತೆಗೆದುಕೊಳ್ಳಲು ಬರುವುದಿಲ್ಲ. ಹಾಗಾಗಿ ಹಿಂದು ವಿವಾಹ ಕಾಯ್ದೆ 1955ರ ಅನುಸಾರ ದ್ವಿಪತ್ನಿತ್ವ ಅಪರಾಧವಾಗುತ್ತದೆ ಎಂದು ಆದೇಶದಲ್ಲಿ ಉಲ್ಲೇಖಿಸಲಾಗಿದೆ. ಈ ಕಾರಣದಿಂದ ಪಿಂಚಣಿಯನ್ನು ನೀಡಲು ಆಗುವುದಿಲ್ಲ ಎಂದು ಆದೇಶ ಮಾಡಲಾಗಿದೆ.
ಇದನ್ನೂ ಓದಿ: DL RC card : ನಿಮ್ಮ ಡಿಎಲ್-ಆರ್‌ಸಿ ಕಾರ್ಡ್ ಮೇಲೆ ಕ್ಯೂಆರ್ ಕೋಡ್! ಏನಿದು ಹೊಸ ರೂಲ್ಸ್?
ಹಿಂದು ಧರ್ಮದಲ್ಲಿ ಚಾಲ್ತಿಯಲ್ಲಿರೋದು ಏಕ ಪತ್ನಿತ್ವ
ಹಿಂದು ಧರ್ಮದಲ್ಲಿ ಏಕಪತ್ನಿತ್ವ ಚಾಲ್ತಿಯಲ್ಲಿದೆ. ಮೊದಲನೇ ಪತ್ನಿ ಜೀವಂತವಾಗಿ ಇರಬೇಕಾದರೆ ಎರಡನೇ ಮದುವೆಗೆ ಅವಕಾಶವೇ ಇಲ್ಲ. ಹಾಗಾಗಿ ಇಲ್ಲಿ ಅರ್ಜಿದಾರರಿಗೆ ಕಾಯಿದೆಯ ಬೆಂಬಲ ಸಿಗುವುದಿಲ್ಲ. ಅವರಿಗೆ ಪಿಂಚಣಿಯ ಅರ್ಹತೆಯೂ ಇರುವುದಿಲ್ಲ. ಇನ್ನು ಮೃತ ಸರ್ಕಾರಿ ನೌಕರ ನಂಜುಂಡಪ್ಪ ಅವರ ಜತೆಗೆ ಅರ್ಜಿದಾರರ ನಡುವೆ ಏರ್ಪಟ್ಟಿರುವ ಎರಡನೇ ಮದುವೆಯು ಕಾನೂನು ಬಾಹಿರವಾಗಿದ್ದು, ಅದಕ್ಕೆ ಸಿಂಧುತ್ವವಿಲ್ಲ” ಎಂಬ ಏಕಸದಸ್ಯ ಪೀಠದ ಆದೇಶವನ್ನು ಹೈಕೋರ್ಟ್ ವಿಭಾಗೀಯ ಪೀಠವು ಎತ್ತಿ ಹಿಡಿದಿದೆ. ಹಿಂದು ವಿವಾಹ ಕಾಯಿದೆ ಸೆಕ್ಷನ್ 17ರ ಪ್ರಕಾರ ದ್ವಿಪತ್ನಿತ್ವ ಅಪರಾಧವಾಗಿದೆ ಎಂದು ಸಹ ಈ ವೇಳೆ ಹೇಳಿದೆ.