Site icon Vistara News

Physical Abuse : ಮಹಿಳೆಯರು ಚಳಿ ಬಿಡಿಸಲು ಬಂದಾಗ ಕಾಂಪೌಂಡ್‌ ಹಾರಿದ ಪುರಸಭೆ ಮಾಜಿ ಅಧ್ಯಕ್ಷೆಯ ಪತಿಗೆ ಧರ್ಮದೇಟು

Physical Abuse in Gadaga

ಗದಗ: ಲೈಂಗಿಕ ಕಿರುಕುಳ (Physical Abuse) ಕೊಟ್ಟ ಪುರಸಭೆ ಮಾಜಿ ಅಧ್ಯಕ್ಷೆಯ‌ ಪತಿಗೆ ಮಹಿಳೆಯರು ಹಿಡಿದು ಥಳಿಸಿರುವ ಘಟನೆ ಗದಗ ಜಿಲ್ಲೆಯ ಮುಂಡರಗಿ ಪಟ್ಟಣದಲ್ಲಿ ನಡೆದಿದೆ. ಪುರಸಭೆ ಮಾಜಿ ಅಧ್ಯಕ್ಷೆ ಕವಿತಾ ಉಳ್ಳಾಗಡ್ಡಿ ಅವರ ಪತಿ ಅಂದಪ್ಪ ಉಳ್ಳಾಗಡ್ಡಿ ಧರ್ಮದೇಟು ತಿಂದವನು.

ಮುಂಡರಗಿಯಲ್ಲಿದ್ದ ಕುಟುಂಬವೊಂದರ ಸಹೋದರಿಯರಿಗೆ, ಅಂದಪ್ಪ ಉಳ್ಳಾಗಡ್ಡಿ ಲೈಂಗಿಕ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಸ್ಥಳೀಯ ಬಿಜೆಪಿ ಪಕ್ಷದಲ್ಲಿ ಮುಖಂಡನೆಂದು ಗುರುತಿಸಿಕೊಂಡಿರುವ ಅಂದಪ್ಪ ಉಳ್ಳಾಗಡ್ಡಿಗೆ ಈ ಸಂತ್ರಸ್ತ ಕುಟುಂಬ ಪರಿಚಯವಾಗಿತ್ತು. ಕುಟುಂಬಸ್ಥರ ಪೈಕಿ ದಂಪತಿಯೊಬ್ಬರು ಕಿತ್ತಾಡುತ್ತಿದ್ದರು. ಗಂಡ-ಹೆಂಡತಿ ಜಗಳದ ಸಮಯದಲ್ಲಿ ಈ ಅಂದಪ್ಪ ನ್ಯಾಯ ಪಂಚಾಯಿತಿ ಮಾಡುತ್ತಿದ್ದ. ದಂಪತಿ ಜಗಳವನ್ನೇ ಬಂಡವಾಳ ಮಾಡಿಕೊಂಡ ಅಂದಪ್ಪ, ಮಹಿಳೆಯನ್ನು ಪುಸಲಾಯಿ‌ಸಿ ಒಲಿಸಿಕೊಳ್ಳಲು ಯತ್ನಿಸಿದ್ದಾನೆ.

ಈ ಮಧ್ಯೆ ಮನಸ್ತಾಪದಿಂದ ದೂರವಿದ್ದ ಮಹಿಳೆಯ ಹಿರಿಯ ಸಹೋದರಿಗೂ ನ್ಯಾಯ ಪಂಚಾಯತಿ ನೆಪದಲ್ಲಿ ಪರಿಚಯ ಮಾಡಿಕೊಂಡಿದ್ದಾನೆ. ಆಕೆಯ ಮೇಲೂ‌ ಕಾಮದೃಷ್ಟಿ ಬೀರಲು ಪ್ರಯತ್ನಿಸಿದ್ದಾನೆ ಎಂಬ ಆರೋಪವಿದೆ. ಈತನ ವರ್ತನೆಗೆ ಬೇಸತ್ತ ಅಕ್ಕ-ತಂಗಿಯರು ಜೂ.3 ರಂದು ಮುಂಡರಗಿಯಲ್ಲಿರುವ ತಮ್ಮ ಮನೆಯಲ್ಲಿ ಮುಹೂರ್ತ ಫಿಕ್ಸ್ ಮಾಡಿ,‌ ಮನೆಗೆ ಬರುವಂತೆ ಹೇಳಿದ್ದಾರೆ. ಕುಟುಂಬದ ಸಹೋದರಿಯರೆಲ್ಲರೂ ಒಟ್ಟಾಗಿ, ಅಂದಪ್ಪನಿಗೆ ಥಳಿಸಿದ್ದಾರೆ. ಇತ್ತ ‌ಮಹಿಳೆಯರ ಧರ್ಮದೇಟಿಗೆ ಅಸಾಮಿ ಕೈ-‌ಕಾಲು ಮುಗಿದು ಕ್ಷಮಿಸಿ ಎಂದಿರುವ ವಿಡಿಯೊ ವೈರಲ್‌ ಆಗಿದೆ.

ಎಸ್ಕೇಪ್‌ ಆಗಲು ಯತ್ನಿಸಿದ ದುಷ್ಟ

ಅಕ್ಕ-ತಂಗಿಯರು ರಾಂಗ್‌ ಆಗುತ್ತಿರುವುದು ತಿಳಿಯುತ್ತಿದ್ದಂತೆ, ಮನೆಯಿಂದ ಹೊರಗೆ ಓಡಿ ಹೋಗಿ ಕಾಂಪೌಂಡ್‌ ಹಾರಿ ತಪ್ಪಿಸಿಕೊಳ್ಳಲು ಯತ್ನಿಸಿದ್ದಾನೆ. ಆದರೆ ಅಂದಪ್ಪ‌ ಕಾಂಪೌಂಡ್ ಜಿಗಿಯುವಾಗ, ಆತನ ಮೊಬೈಲ್‌ ಒಳಗೆ ಬಿದ್ದಿದೆ. ಬೆನ್ನ ಹಿಂದೆಯೇ ಇದ್ದ ಕುಟುಂಬದ ಮಹಿಳೆಯರು ತಕ್ಷಣವೇ ಮೊಬೈಲ್ ಪಡೆದು ವಾಪಸ್‌ ಒಳಗೆ ಬರುವಂತೆ ತಾಕೀತು ಮಾಡಿದ್ದಾರೆ.

ಅನಿರ್ವಾಯವಾಗಿ ಮನೆಯೊಳಗೆ ಬಂದ ಅಂದಪ್ಪನಿಗೆ ಕುಟುಂಬಸ್ಥರೆಲ್ಲರೂ ಸೇರಿ ಮಹಾಮಂಗಳಾರತಿ ಮಾಡಿದ್ದಾರೆ. ಸದ್ಯ ಈ ವಿಡಿಯೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿವೆ. ಈ ಪ್ರಕರಣ‌ ಮುಂಡರಗಿ ಪೊಲೀಸ್ ಠಾಣೆ ಮೆಟ್ಟಿಲೇರಿದ್ದು, ತನಿಖೆ ನಂತರವೇ ಸತ್ಯಾಸತ್ಯತೆ ಹೊರಬರಲಿದೆ.‌

ಇದನ್ನೂ ಓದಿ: Karnataka Rain : ಭಾರಿ ಮಳೆಗೆ ಮರ ಬಿದ್ದು ಮೇಕೆಗಳು ಸಾವು; ಸಿಡಿಲಿಗೆ ಎಲೆಕ್ಟ್ರಿಕ್‌ ಅಂಗಡಿ ಸುಟ್ಟು ಭಸ್ಮ

ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಕೊಂದ ದುಷ್ಕರ್ಮಿಗಳು

ಮೀರತ್: ಮೂವರು ಚಿಕ್ಕ ಮಕ್ಕಳ ಎದುರೇ ತಂದೆಯನ್ನು ಗುಂಡಿಕ್ಕಿ ಹತ್ಯೆ (murder) ಮಾಡಿರುವ ಘಟನೆ ಉತ್ತರ ಪ್ರದೇಶದ (uttarpradesh) ಮೀರತ್‌ನ (Meerut) ಕ್ಲಬ್‌ನಲ್ಲಿ ಮಂಗಳವಾರ ರಾತ್ರಿ ನಡೆದಿದೆ. ಮೀರತ್‌ನ ಜೈದಿ ಫಾರ್ಮ್‌ನ ನಿವಾಸಿ ಅರ್ಷದ್ (25) ಹತ್ಯೆಯಾದ ವ್ಯಕ್ತಿ. ಅವರು ತಮ್ಮ ಇಬ್ಬರು ಹೆಣ್ಣುಮಕ್ಕಳು ಮತ್ತು ಮಗನೊಂದಿಗೆ ಮೀರತ್‌ನ ಕ್ಲಬ್‌ಗೆ ಬಂದಿದ್ದಾಗ ಈ ಘಟನೆ ನಡೆದಿದೆ.

ಉತ್ತರ ಪ್ರದೇಶದ ಮೀರತ್‌ನ ಲೋಹಿಯಾ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ (Viral Video) ಆಗಿದೆ. ಅರ್ಷದ್ ಮಂಗಳವಾರ ರಾತ್ರಿ ಮಕ್ಕಳೊಂದಿಗೆ ಭದಾನದಲ್ಲಿರುವ ಕ್ಲಬ್‌ನ ಈಜುಕೊಳಕ್ಕೆ ತೆರಳಿದ್ದರು. ಜನರಿಂದ ತುಂಬಿದ್ದ ಕ್ಲಬ್‌ನಲ್ಲಿ ಅರ್ಷದ್ ಒಬ್ಬ ವ್ಯಕ್ತಿಯೊಂದಿಗೆ ಮಾತನಾಡುತ್ತಿದ್ದಾಗಲೇ ಈ ಘಟನೆ ನಡೆದಿದೆ. ಈ ಘಟನೆ ಸಿಸಿಟಿವಿ ಕೆಮರಾದಲ್ಲಿ ಸೆರೆಯಾಗಿದೆ. ಅರ್ಷದ್ ತನ್ನ ಫೋನ್ ಅನ್ನು ನೋಡುತ್ತಿದ್ದಂತೆ ಒಬ್ಬ ವ್ಯಕ್ತಿ ಅವರನ್ನು ಜನರ ಗುಂಪಿನಿಂದ ಪ್ರತ್ಯೇಕಿಸಲು ಪ್ರಯತ್ನಿಸುತ್ತಾನೆ. ಕೂಡಲೇ ಅವರ ಮೇಲೆ ಗುಂಡಿನ ದಾಳಿ ನಡೆದಿದೆ. ನೆಲಕ್ಕೆ ಬಿದ್ದ ಅವರತ್ತ ಮಕ್ಕಳು ಅಳುತ್ತಾ ಓಡಿ ಬಂದಿರುವುದು ವಿಡಿಯೋದಲ್ಲಿ ಸೆರೆಯಾಗಿದೆ.

ಮಾಹಿತಿ ಪಡೆದ ಪೊಲೀಸರು ಸ್ಥಳಕ್ಕಾಗಮಿಸಿ ಗಾಯಾಳುವನ್ನು ಸ್ಥಳೀಯ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದು, ವೈದ್ಯರು ಮೃತಪಟ್ಟಿರುವುದಾಗಿ ಘೋಷಿಸಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ ಎಂದು ನಗರ ಪೊಲೀಸ್ ವರಿಷ್ಠಾಧಿಕಾರಿ ಆಯುಷ್ ವಿಕ್ರಮ್ ತಿಳಿಸಿದ್ದಾರೆ.

ಆರೋಪಿಗಳು ಅರ್ಷದ್ ಅವರ ತಲೆಗೆ ಅತಿ ಸಮೀಪದಿಂದ ಪಾಯಿಂಟ್ ಬ್ಲಾಂಕ್ ರೇಂಜ್‌ ನಲ್ಲಿ ಗುಂಡು ಹಾರಿಸಿ ಸ್ಥಳದಿಂದ ಪರಾರಿಯಾಗಿದ್ದಾರೆ. ಹಳೆ ವೈಷಮ್ಯವೇ ಘಟನೆಗೆ ಕಾರಣ ಎನ್ನಲಾಗಿದೆ.


ಕೆಲವು ದಿನಗಳ ಹಿಂದೆ ಹಣದ ವಿಚಾರವಾಗಿ ಬಿಲಾಲ್ ಮತ್ತು ಅರ್ಷದ್ ನಡುವೆ ತೀವ್ರ ಜಗಳವಾಗಿತ್ತು. ಇಬ್ಬರ ವಿರುದ್ಧವೂ ಹಲವು ಕ್ರಿಮಿನಲ್ ಮೊಕದ್ದಮೆಗಳು ದಾಖಲಾಗಿವೆ. ಅರ್ಷದ್ ಕುಟುಂಬದ ದೂರಿನ ಮೇರೆಗೆ ಬಿಲಾಲ್ ವಿರುದ್ಧ ಪ್ರಕರಣ ದಾಖಲಾಗಿದೆ. ಆತನ ಬಂಧನಕ್ಕೆ ತಂಡ ರಚಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version