Site icon Vistara News

Inspector Abscond: ಕಳ್ಳರಿಂದ ಸೀಜ್‌ ಮಾಡಿದ ₹72 ಲಕ್ಷ ಗುಳುಂ ಮಾಡಿ ಇನ್‌ಸ್ಪೆಕ್ಟರ್‌ ನಾಪತ್ತೆ!

police inspector abscond

ಬೆಂಗಳೂರು: ಕಳ್ಳತನ ಪ್ರಕರಣದಲ್ಲಿ (Theft Case) ಮುಟ್ಟುಗೋಲು (Seize) ಹಾಕಿಕೊಂಡಿದ್ದ ಹಣವನ್ನು ದುರ್ಬಳಕೆ (misuse) ಮಾಡಿದ ಆರೋಪ ಹೊತ್ತಿರುವ ಪೊಲೀಸ್‌ ಇನ್‌ಸ್ಪೆಕ್ಟರ್‌ ನಾಪತ್ತೆ (Police inspector abscond) ಯಾಗಿದ್ದು, ಸಿಸಿಬಿ ಪೊಲೀಸರಿಂದ (CCB police) ಶೋಧ ನಡೆಯುತ್ತಿದೆ. ಬಿಡದಿ ಠಾಣೆಯಿಂದ ಪರಾರಿಯಾಗಿರುವ ಇನ್‌ಸ್ಪೆಕ್ಟರ್‌ ಶಂಕರ್ ನಾಯ್ಕ್ ಬಂಧನದ ಭೀತಿಯಿಂದ ತಲೆಮರೆಸಿಕೊಂಡಿದ್ದು, ಹತ್ತು ದಿನಗಳಿಂದ ಮೊಬೈಲ್ ಫೋನ್ ಸ್ವಿಚ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾರೆ.

ಕರ್ತವ್ಯದ ವೇಳೆ ಕಳ್ಳತನ ಪ್ರಕರಣವೊಂದರಲ್ಲಿ ಶಂಕರ್ ನಾಯ್ಕ್ ₹72 ಲಕ್ಷ ಜಪ್ತಿ ಮಾಡಿದ್ದರು. ಈ ಹಣವನ್ನು ಸರ್ಕಾರದ ಖಜಾನೆ ಅಥವಾ ಠಾಣೆಯ ಸುಪರ್ದಿಗೆ ಕೊಡದೆ ಸ್ವಂತಕ್ಕೆ ಬಳಸಿಕೊಂಡ ಆರೋಪವಿದೆ. ಈ ಸಂಬಂಧ ಬ್ಯಾಟರಾಯನಪುರ ಠಾಣೆಯಲ್ಲಿ ಶಂಕರ್ ಹಾಗೂ ಮಧ್ಯವರ್ತಿ ಲೋಕನಾಥ್ ವಿರುದ್ಧ ಕೇಸ್ ದಾಖಲಾಗಿತ್ತು. ಎಸಿಪಿ ಭರತ್ ರೆಡ್ಡಿ ದೂರು ಆಧರಿಸಿ FIR ದಾಖಲಾಗಿತ್ತು.

2023ರ ನವೆಂಬರ್‌ನಲ್ಲಿ ಎಫ್‌ಐಆರ್‌ ದಾಖಲಾಗಿತ್ತು. ನಂತರ ಪ್ರಕರಣದ ತನಿಖೆಯನ್ನು ಕಮಿಷನರ್ ಸಿಸಿಬಿಗೆ ವಹಿಸಿಸಲಾಗಿತ್ತು. ಪ್ರಕರಣ ರದ್ದು ಕೋರಿ ಶಂಕರ್‌ ನಾಯ್ಕ್‌ ಹೈಕೋರ್ಟ್ ಮೆಟ್ಟಲೇರಿದ್ದರು. ಪ್ರಕರಣದ ತನಿಖೆಗೆ ಹೈಕೋರ್ಟ್‌ ತಡೆ ನೀಡಿತ್ತು. ಆದರೆ ತಡೆಯಾಜ್ಞೆ ತೆರವುಗೊಳಿಸುವಂತೆ ಸಿಸಿಬಿ ಮೇಲ್ಮನವಿ ಸಲ್ಲಿಸಿತ್ತು. ಈ ಹಿನ್ನೆಲೆಯನ್ನು ತನಿಖೆಗೆ ನೀಡಿದ್ದ ತಡೆಯಾಜ್ಞೆಯನ್ನು ಹೈಕೋರ್ಟ್ ತೆರವುಗೊಳಿಸಿದೆ. ತಡೆಯಾಜ್ಞೆ ತೆರವುಗೊಳಿಸುತ್ತಿದ್ದಂತೆ ಇನ್‌ಸ್ಪೆಕ್ಟರ್ ಶಂಕರ್ ನಾಯಕ್ ನಾಪತ್ತೆಯಾಗಿದ್ದಾರೆ.

ಶಿಕ್ಷಕಿಯ ಹತ್ಯೆ ಮಾಡಿ ತಿರುಪತಿಯಲ್ಲಿ ತಲೆಮರೆಸಿಕೊಂಡವರ ಸೆರೆ

ಕೋಲಾರ: ಮನೆಗೆ ನುಗ್ಗಿ ಶಿಕ್ಷಕಿಯ ಕೊಲೆ (Teacher Murder Case) ಮಾಡಿದ ಪ್ರಕರಣದಲ್ಲಿ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದ ಆರು ಮಂದಿಯನ್ನು ಕೋಲಾರ ಪೊಲೀಸರು (Kolar news) ಬಂಧಿಸಿದ್ದಾರೆ.

ಕೋಲಾರ ಜಿಲ್ಲೆಯ ಮುಳಬಾಗಿಲು ಪಟ್ಟಣದ ಸುಂಕ ಲೇಔಟ್ ಬಡಾವಣೆಯಲ್ಲಿ ಕೊಲೆ ಪ್ರಕರಣ ನಡೆದಿತ್ತು. ಆಗಸ್ಟ್ 14ರ ಸಂಜೆ ದಿವ್ಯಶ್ರೀ (43) ಎಂಬ ಶಿಕ್ಷಕಿಯನ್ನು ಕೊಲೆ ಮಾಡಲಾಗಿತ್ತು. ಕೊಲೆ ಮಾಡಿದ ಆರೋಪಿಗಳು ಆಂಧ್ರಪ್ರದೇಶದ ತಿರುಪತಿಯಲ್ಲಿ ತಲೆ ಮರೆಸಿಕೊಂಡಿದ್ದರು. ಆರೋಪಿಗಳನ್ನು ಭುವನ್‌ ಪತ್ರಹಳ್ಳಿ, ರಂಜಿತ್‌ ಮುಳಬಾಗಿಲು, ಶಹೀದ್‌ ನಂಗಲಿ, ರಾಹುಲ್‌ ಮಲ್ಲೇಕುಪ್ಪ, ಭರತ್‌ ಗುಮ್ಮಕಲ್‌, ಯಶ್ವಂತ್‌ ಮಲ್ಲೇಕುಪ್ಪ ಎಂದು ಗುರುತಿಸಲಾಗಿದೆ.

ದಿವ್ಯಶ್ರೀ ಅವರ ಗಂಡನ ಫೈನಾನ್ಸ್‌ ವ್ಯವಹಾರಕ್ಕೆ ಸಂಬಂಧಿಸಿ ಚಿಂತಾಮಣಿಯಲ್ಲಿರುವ ಜಮೀನಿನ ವ್ಯಾಜ್ಯದ ವಿಚಾರದಲ್ಲಿ ಕೊಲೆ ನಡೆದಿದೆ. ಕೊಲೆಗಾಗಿ ಸುಪಾರಿ ನೀಡಿದ ಆರೋಪಿಗಾಗಿ ಹುಡುಕಾಟ ನಡೆದಿದೆ. ಆರೋಪಿಗಳಲ್ಲಿ ಅಪ್ರಾಪ್ತ ವಯಸ್ಕರೂ ಇದ್ದು, ಮಾದಕ ದ್ರವ್ಯವ ವ್ಯಸನಿಗಳಾದ ಇವರು ಚಿಲ್ಲರೆ ಕಾಸಿಗಾಗಿ ಕೊಲೆ ಮಾಡಿರುವ ಸಾಧ್ಯತೆ ಇದೆ. ಮುಳಬಾಗಿಲು ಪೊಲೀಸರಿಂದ ವಿಚಾರಣೆ ಮುಂದುವರಿದಿದೆ.

ಪ್ರಕರಣದ ವಿವರ

ಮುಳಬಾಗಿಲು ನಗರದ ಪ್ರತಿಷ್ಠಿತ ಬಡಾವಣೆಯಲ್ಲಿ ದಿವ್ಯಶ್ರೀ ಅವರು ಮಗಳೊಂದಿಗೆ ವಾಸವಾಗಿದ್ದು, ಇವರ ಪತಿ ಪದ್ಮನಾಭ ಶೆಟ್ಟಿ ಅಗರಬತ್ತಿ ಲೇವಾದೇವಿ ವ್ಯವಹಾರ ನಡೆಸುತ್ತಿದ್ದಾರೆ. ಇವರ ಮತ್ತೊಬ್ಬ ಮಗ ಪ್ರೇಮ್‌ ವಿದ್ಯಾಭ್ಯಾಸದ ನಿಮಿತ್ತ ಬೇರೆ ಊರಿನಲ್ಲಿ ನೆಲೆಸಿದ್ದಾರೆ. ಪತಿ ಹೊರಗೆ ಹೋಗಿದ್ದು, ಮನೆಯಲ್ಲಿ ದಿವ್ಯಶ್ರೀ ಹಾಗೂ ಪುತ್ರಿ ನಿಶಾ ಮಾತ್ರ ಇದ್ದಾಗ ಪಾತಕ ನಡೆದಿದೆ.

ನಿಶಾ ನಿನ್ನೆ ಸಂಜೆ ಮನೆಯ ಮೇಲ್ಭಾಗದ ಕೊಠಡಿಯಲ್ಲಿ ಓದುತ್ತಿದ್ದಳು. ನೆಲ ಮಾಳಿಗೆಯಲ್ಲಿ ದಿವ್ಯಶ್ರೀ ಅವರು ರಾತ್ರಿ 7.30ರ ಸುಮಾರಿನಲ್ಲಿ ಟಿವಿ ವೀಕ್ಷಿಸುತ್ತ ಕುಳಿತಿದ್ದರು. ಆ ವೇಳೆ ಹಂತಕರು ಏಕಾಏಕಿ ಮನೆಯೊಳಗೆ ನುಗ್ಗಿ ಚಾಕುವಿನಿಂದ ದಿವ್ಯಶ್ರೀ ಅವರ ಕುತ್ತಿಗೆ ಕೊಯ್ದು ಕೊಲೆ ಮಾಡಿ ಪರಾರಿಯಾಗಿದ್ದಾರೆ.

ಮನೆಯೊಳಗೆ ಏನೋ ಗಲಾಟೆಯಾಗುತ್ತಿದೆ ಎಂದು ನಿಶಾ ಕೆಳಗೆ ಇಳಿದು ಬಂದು ನೋಡಿದಾಗ ತಾಯಿ ರಕ್ತದ ಮಡುವಿನಲ್ಲಿ ಇದ್ದದ್ದು ಕಂಡು ಚೀರಾಡಿದ್ದಾರೆ. ನೆರೆಹೊರೆಯವರು ಏನಾಯಿತೆಂದು ಇವರ ಮನೆಗೆ ಬಂದು ನೋಡಿ ತಕ್ಷಣ ರಕ್ತದ ಮಡುವಿನಲ್ಲಿ ಬಿದಿದ್ದ ದಿವ್ಯಶ್ರೀ ಅವರನ್ನು ಆಸ್ಪತ್ರೆಗೆ ಕರೆದೊಯ್ದಾಗ ವೈದ್ಯರು ಪರೀಕ್ಷಿಸಿ ಮೃತಪಟ್ಟಿರುವುದಾಗಿ ತಿಳಿಸಿದ್ದಾರೆ. ಜನಭರಿತ ಈ ಬಡಾವಣೆಯಲ್ಲಿ ಶಿಕ್ಷಕಿಯ ಕೊಲೆ ನಡೆದಿರುವುದು ಕಂಡು ಆತಂಕಗೊಂಡ ಸುತ್ತಮುತ್ತಲ ನಿವಾಸಿಗಳು ಭಯಭೀತರಾಗಿದ್ದಾರೆ.

ಇದನ್ನೂ ಓದಿ: Food Poison: ಊಟ ಮಾಡುವಾಗ ಇಲಿ ವಿಷ ಸಿಂಪಡಣೆ, ವಿದ್ಯಾರ್ಥಿಗಳು ಅಸ್ವಸ್ಥ

Exit mobile version