ನವದೆಹಲಿ: ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ನಡೆದ ಶ್ರದ್ಧಾ ವಾಳ್ಕರ್ (Shraddha Murder Case) ಕೊಲೆ ಪ್ರಕರಣದ ಕುರಿತು ಬಗೆದಷ್ಟೂ ಮಾಹಿತಿ ಲಭ್ಯವಾಗುತ್ತಿದೆ. ಕೇಸ್‌ನಲ್ಲಿ ಹೆಚ್ಚಿನ ಸಾಕ್ಷ್ಯ ಸಂಗ್ರಹಿಸಲು ಪೊಲೀಸರು ದೆಹಲಿಯ ಹಲವೆಡೆ ಕಾರ್ಯಾಚರಣೆ ನಡೆಸಿದ್ದಾರೆ. ಮತ್ತೊಂದೆಡೆ, ಸೋಮವಾರ (ನವೆಂಬರ್ 21) ಅಪ್ತಾಬ್‌ನ ಮಂಪರು ಪರೀಕ್ಷೆ ನಡೆಸಲು ಸಿದ್ಧತೆ ನಡೆಯುತ್ತಿದೆ. ಇದರ ಬೆನ್ನಲ್ಲೇ, ಪೊಲೀಸರು ಶ್ರದ್ಧಾ ಹಾಗೂ ಅಮೀನ್ ವಾಸಿಸುತ್ತಿದ್ದ ಮೆಹ್ರೌಲಿ ಫ್ಲ್ಯಾಟ್‌ನಲ್ಲಿ ತಪಾಸಣೆ ನಡೆಸಿದ್ದಾರೆ. ಇದೇ ವೇಳೆ ಎರಡು ಬ್ಯಾಗ್ ಸಿಕ್ಕಿದ್ದು, ಹೆಚ್ಚಿನ ತನಿಖೆ ನಡೆಸಲಾಗುತ್ತಿದೆ. ಬ್ಯಾಗ್‌ನಲ್ಲಿ ಏನಿತ್ತು ಎಂಬುದರ ಕುರಿತು ಹೆಚ್ಚಿನ ಮಾಹಿತಿ ಲಭ್ಯವಾಗಿಲ್ಲ.
ಮಹಾರಾಷ್ಟ್ರದ ನಿವಾಸಕ್ಕೂ ಭೇಟಿ
ಶ್ರದ್ಧಾ ವಾಳ್ಕರ್ ಹಾಗೂ ಅಫ್ತಾಬ್ ಅಮೀನ್ ಪೂನಾವಾಲಾ ಅವರು ಮಹಾರಾಷ್ಟ್ರದ ವಾಸೈನಲ್ಲಿ ವಾಸಿಸುತ್ತಿದ್ದ ಬಾಡಿಗೆ ಫ್ಲ್ಯಾಟ್‌ನಲ್ಲೂ ದೆಹಲಿ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಹಾಗೆಯೇ, ಫ್ಲ್ಯಾಟ್ ಮಾಲೀಕರನ್ನು ವಿಚಾರಣೆ ನಡೆಸಿದ್ದು, “ಇಬ್ಬರೂ ಗಂಡ-ಹೆಂಡತಿ ಎಂಬುದಾಗಿ ಹೇಳಿಕೊಂಡಿದ್ದರು” ಎಂದು ಅವರು ತಿಳಿಸಿದ್ದಾರೆ. ಈ ಫ್ಲ್ಯಾಟ್‌ನಲ್ಲಿ ಇಬ್ಬರೂ 10 ತಿಂಗಳು ವಾಸವಿದ್ದರು.
ದೇಹದ ಭಾಗಗಳ ಡಿಎನ್‌ಎ ಪರೀಕ್ಷೆ
ಮೆಹ್ರೌಲಿ ಅರಣ್ಯದಲ್ಲಿ ಶ್ರದ್ಧಾ ದೇಹದ ಭಾಗಗಳನ್ನು ಪೊಲೀಸರು ಹುಡುಕುತ್ತಿದ್ದು, ಈಗಾಗಲೇ ಹತ್ತಾರು ಭಾಗಗಳು ಸಿಕ್ಕಿವೆ. ಬುರುಡೆ ಸೇರಿ ಹಲವು ಭಾಗಗಳನ್ನು ಪೊಲೀಸರು ಡಿಎನ್‌ಎ ಪರೀಕ್ಷೆಗೆ ಕಳುಹಿಸಿದ್ದಾರೆ. ಹತ್ತಾರು ವೆಬ್ ಸಿರೀಸ್‌ಗಳನ್ನು ನೋಡಿದ್ದ ಅಫ್ತಾಬ್, ಸುಲಭವಾಗಿ ಡಿಎನ್‌ಎ ಸಿಗಬಾರದು ಎಂಬ ಕಾರಣಕ್ಕಾಗಿ ಹತ್ತಾರು ಕಡೆಯ ಆಕೆಯ ದೇಹದ ಭಾಗಗಳನ್ನು ಎಸೆದಿದ್ದ ಎಂದು ತಿಳಿದುಬಂದಿದೆ.
ಮದುವೆ ಬಗ್ಗೆ ಮಾತಾಡಲು ಅಫ್ತಾಬ್ ಕುಟುಂಬಸ್ಥರು ಬಿಡಲಿಲ್ಲ: ಶ್ರದ್ಧಾ ತಂದೆ
“ಶ್ರದ್ಧಾ ವಾಳ್ಕರ್ ಹಾಗೂ ಅಫ್ತಾಬ್ ಅಮೀನ್ ಪೂನಾವಾಲಾ ಮದುವೆ ಬಗ್ಗೆ ಮಾತನಾಡಲು ಅವರು ಮಹಾರಾಷ್ಟ್ರದ ವಾಸೈನಲ್ಲಿ ವಾಸಿಸುತ್ತಿದ್ದ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆ” ಎಂದು ಶ್ರದ್ಧಾ ತಂದೆ ಹೇಳಿದ್ದಾರೆ. “ಮದುವೆ ಕುರಿತು ಮಾತನಾಡಬೇಕು ಎಂದು ಅವರ ಅಪಾರ್ಟ್‌ಮೆಂಟ್‌ಗೆ ಹೋಗಿದ್ದೆ. ಆದರೆ, ಅಫ್ತಾಬ್ ಕುಟುಂಬಸ್ಥರು ನನಗೆ ಅವಮಾನ ಮಾಡಿ ವಾಪಸ್ ಕಳುಹಿಸಿದರು. ಪ್ರಕರಣದಲ್ಲಿ ಪೊಲೀಸರು ಅಫ್ತಾಬ್ ಕುಟುಂಬಸ್ಥರನ್ನು ಕೂಡ ವಿಚಾರಣೆ ನಡೆಸಬೇಕು” ಎಂದು ಶ್ರದ್ಧಾ ತಂದೆ ವಿಕಾಸ್ ತಿಳಿಸಿದರು.
ಇದನ್ನೂ ಓದಿ | Shraddha Murder Case | ಮೆಹ್ರೌಲಿ ಕಾಡಿನಲ್ಲಿ ಪತ್ತೆಯಾದ ಮೂರು ಎಲುಬುಗಳು; ವಿಧಿ ವಿಜ್ಞಾನ ಲ್ಯಾಬ್ಗೆ ರವಾನೆ