Site icon Vistara News

Pooja Khedkar: ಯಾರು ಈ ಪೂಜಾ ಖೇಡ್ಕರ್? ವಿಐಪಿ ದರ್ಬಾರ್ ನಡೆಸಿ ಸಿಕ್ಕಿಹಾಕಿಕೊಂಡ ಐಎಎಸ್ ಅಧಿಕಾರಿ!

Pooja Khedkar

ಅಧಿಕಾರ ದುರುಪಯೋಗದ ಆರೋಪದ ಮೇಲೆ ಪುಣೆಯಿಂದ (pune) ವಾಶಿಮ್‌ಗೆ (Washim) ವರ್ಗಾವಣೆಗೊಂಡಿರುವ ಮಹಾರಾಷ್ಟ್ರದ (maharastra) ಪ್ರೊಬೇಷನರಿ ಐಎಎಸ್ ಅಧಿಕಾರಿ (probationary IAS officer ) ಪೂಜಾ ಖೇಡ್ಕರ್ (Pooja Khedkar) ಅವರು ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ನಕಲಿ ಅಂಗವೈಕಲ್ಯ ಮತ್ತು ಇತರೆ ಹಿಂದುಳಿದ ವರ್ಗ (obc) ಪ್ರಮಾಣ ಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಕೆಂಪು- ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್‌ನೊಂದಿಗೆ ಖಾಸಗಿ ಆಡಿ ಕಾರನ್ನು ಬಳಸಿದ್ದಕ್ಕಾಗಿ ತನಿಖೆಗೆ ಖೇಡ್ಕರ್ ಅವರನ್ನು ಒಳಪಡಿಸಿದಾಗ ಅವರು ಒಬಿಸಿ ಮತ್ತು ದೃಷ್ಟಿಹೀನ ವರ್ಗಗಳ ಅಡಿಯಲ್ಲಿ ಸಿವಿಲ್ ಸರ್ವೀಸ್ ಪರೀಕ್ಷೆಗೆ ಹಾಜರಾಗಿದ್ದರು ಮತ್ತು ಮಾನಸಿಕ ಅಸ್ವಸ್ಥತೆಯ ಪ್ರಮಾಣಪತ್ರವನ್ನೂ ಸಲ್ಲಿಸಿದ್ದಾರೆ ಎನ್ನುವುದು ಬಯಲಾಗಿದೆ.

ಏಪ್ರಿಲ್ 2022ರಲ್ಲಿ ಖೇಡ್ಕರ್ ಅವರ ಅಂಗವೈಕಲ್ಯ ಪ್ರಮಾಣಪತ್ರದ ಪರಿಶೀಲನೆಗಾಗಿ ದೆಹಲಿಯ ಆಲ್ ಇಂಡಿಯಾ ಇನ್‌ಸ್ಟಿಟ್ಯೂಟ್ ಆಫ್ ಮೆಡಿಕಲ್ ಸೈನ್ಸಸ್ ನಲ್ಲಿ (AIIMS) ವರದಿ ಮಾಡಲು ಕೇಳಲಾಯಿತು. ಆದರೆ ಕೋವಿಡ್ ಸೋಂಕನ್ನು ಉಲ್ಲೇಖಿಸಿ ಅವರು ತಪಾಸಣೆಗೆ ಹಾಜರಾಗಲಿಲ್ಲ. ಅನಂತರ, ಅವರು ಖಾಸಗಿಯಾಗಿ ಎಂಆರ್ ಐ ಸ್ಕ್ಯಾನಿಂಗ್ ಪ್ರಮಾಣಪತ್ರವನ್ನು ತಯಾರಿಸಿದ್ದಾರೆ. ಬಳಿಕ ಅವರ ಐಎಎಸ್ ನೇಮಕಾತಿಯನ್ನು ದೃಢೀಕರಿಸಲು ಸ್ವೀಕರಿಸಲಾಯಿತು.

ಪೂಜಾ ಖೇಡ್ಕರ್ ಅವರ ತಂದೆ ದಿಲೀಪ್ ಖೇಡ್ಕರ್ ಅವರು ರಾಜ್ಯ ಸರ್ಕಾರದ ಮಾಜಿ ಅಧಿಕಾರಿ. ಇತ್ತೀಚಿನ ಲೋಕಸಭೆ ಚುನಾವಣೆಯಲ್ಲಿ ಸ್ಪರ್ಧಿಸುವಾಗ ಅವರು ತಮ್ಮ ಆಸ್ತಿ ಮೌಲ್ಯ 40 ಕೋಟಿ ರೂ. ಎಂದು ಘೋಷಿಸಿದ್ದಾರೆ. ಆದರೂ ಪೂಜಾ ಖೇಡ್ಕರ್ ಒಬಿಸಿ ವರ್ಗದ ಅಡಿಯಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು. ಅಲ್ಲಿ ಕ್ರೀಮಿ ಲೇಯರ್ ಪ್ರಮಾಣಪತ್ರದ ಮಿತಿಯು ಪೋಷಕರ ವಾರ್ಷಿಕ ಆದಾಯ 8 ಲಕ್ಷ ರೂಪಾಯಿಯಾಗಿದೆ. ಆದರೆ ಇವರ ತಂದೆ ಕೋಟ್ಯಧೀಶರಾಗಿದ್ದರೂ ಒಬಿಸಿ ಪ್ರಮಾಣಪತ್ರ ಗಿಟ್ಟಿಸಿಕೊಂಡಿದ್ದಾರೆ ಎಂದು ತನಿಖಾ ಅಧಿಕಾರಿಗಳು ತಿಳಿಸಿದ್ದಾರೆ.

ಪುಣೆಯಲ್ಲಿ ಪ್ರೊಬೇಷನರಿ ಅಧಿಕಾರಿಯಾಗಿ ಸೇರಿದ ಅನಂತರ ಖೇಡ್ಕರ್ ಅವರು ಆಡಿ ಕಾರಿಗೆ ವಿಐಪಿ ನಂಬರ್ ಪ್ಲೇಟ್ ಸೇರಿದಂತೆ ಹಲವು ಬೇಡಿಕೆಗಳನ್ನು ಸಲ್ಲಿಸಿದ್ದರು. ವಾಹನಕ್ಕೆ ಕೆಂಪು ದೀಪವನ್ನು ಹಾಕಿಸಿದರು. ಅವರು ಪ್ರತ್ಯೇಕ ಕಚೇರಿ, ಕಾರು, ವಸತಿ ಕ್ವಾರ್ಟರ್ಸ್ ಮತ್ತು ತನಗಾಗಿ ವಿಶೇಷ ಪ್ಯೂನ್‌ಗೆ ಬೇಡಿಕೆ ಇಟ್ಟಿದ್ದರು ಎಂದು ಪುಣೆ ಕಲೆಕ್ಟರ್ ಸುಹಾಸ್ ದಿವ್ಸೆ ಸಾಮಾನ್ಯ ಆಡಳಿತ ಇಲಾಖೆಗೆ (ಜಿಎಡಿ) ಸಲ್ಲಿಸಿದ ತಮ್ಮ ವರದಿಯಲ್ಲಿ ತಿಳಿಸಿದ್ದಾರೆ.

ಜೂನ್ 3ರಂದು ಪುಣೆಯಲ್ಲಿ ಸಹಾಯಕ ಕಲೆಕ್ಟರ್ ಆಗಿ ಅಧಿಕಾರ ವಹಿಸಿಕೊಳ್ಳುವ ಮುನ್ನವೇ ಖೇಡ್ಕರ್ ಪುಣೆ ಜಿಲ್ಲಾಧಿಕಾರಿಯೊಂದಿಗೆ ವಾಟ್ಸಾಪ್ ಸಂಭಾಷಣೆಯ ಮೂಲಕ ಈ ಬೇಡಿಕೆಗಳನ್ನು ಮುಂದಿಟ್ಟರು.

ಈ ಅಸಾಮಾನ್ಯ ಬೇಡಿಕೆಗಳನ್ನು ಜಿಲ್ಲಾಧಿಕಾರಿಗಳು ಮುಖ್ಯ ಕಾರ್ಯದರ್ಶಿಗೆ ಸೂಚಿಸಿದ್ದರು. ತಮ್ಮ ವರದಿಯಲ್ಲಿ ಖೇಡ್ಕರ್ ಅವರ ತರಬೇತಿಯನ್ನು ಪುಣೆಯಲ್ಲಿ ಮುಂದುವರಿಸುವುದು ಸೂಕ್ತವಲ್ಲ ಎಂದು ಅವರು ಸೂಚಿಸಿದ್ದಾರೆ ಮತ್ತು ಇದು ಆಡಳಿತಾತ್ಮಕ ತೊಡಕುಗಳಿಗೆ ಕಾರಣವಾಗಬಹುದು ಎಂದು ಉಲ್ಲೇಖಿಸಿದ್ದಾರೆ.

ಅಧಿಕಾರಿಗೆ ತನ್ನ ಸ್ವಂತ ಕೊಠಡಿಯನ್ನು ನೀಡಲಾಯಿತು. ಆದರೂ ಕೊಠಡಿಯಲ್ಲಿ ಸ್ನಾನಗೃಹದ ಕೊರತೆಯಿರುವುದಾಗಿ ಹೇಳಿ ಅವರು ಅದನ್ನು ನಿರಾಕರಿಸಿದರು ಎನ್ನಲಾಗಿದೆ. ಬಳಿಕ ಪೂಜಾ ತಮ್ಮ ತಂದೆ ದಿಲೀಪ್ ಖೇಡ್ಕರ್ ಅವರೊಂದಿಗೆ ಪುಣೆಯ ಕಚೇರಿಗೆ ಭೇಟಿ ನೀಡಿದ್ದರು. ಗಣಿಗಾರಿಕೆ ಇಲಾಖೆಯ ಪಕ್ಕದಲ್ಲಿರುವ ವಿಐಪಿ ಹಾಲ್ ಅನ್ನು ತಮ್ಮ ಕ್ಯಾಬಿನ್ ಆಗಿ ಬಳಸಲು ಪ್ರಸ್ತಾಪಿಸಿದರು.

ಪ್ರೊಬೇಷನರಿ ಅಧಿಕಾರಿ ಅದರಲ್ಲೂ ಪ್ರೊಬೇಷನರಿಯಲ್ಲಿ ಈ ಸೌಲಭ್ಯಗಳಿಗೆ ಅರ್ಹಳಲ್ಲ ಎಂದು ತಿಳಿಸಲಾಗಿದ್ದು, ಆಕೆಗೆ ವಸತಿ ಒದಗಿಸಲಾಗುವುದು ಎಂದು ತಿಳಿಸಲಾಯಿತು.


ಯಾರು ಪೂಜಾ ಖೇಡ್ಕರ್ ?

ಮಹಾರಾಷ್ಟ್ರ ಕೇಡರ್‌ನ 2022ರ ಬ್ಯಾಚ್ ಐಎಎಸ್ ಅಧಿಕಾರಿ ಪೂಜಾ ಖೇಡ್ಕರ್, ಮಹಾರಾಷ್ಟ್ರದ ಮಾಜಿ ಸರ್ಕಾರಿ ಅಧಿಕಾರಿ ದಿಲೀಪ್ ಖೇಡ್ಕರ್ ಅವರ ಮಗಳು, ಅವರು 2024 ರ ಲೋಕಸಭೆ ಚುನಾವಣೆಯಲ್ಲಿ ವಂಚಿತ್ ಬಹುಜನ ಆಘಾಡಿ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸಿದ್ದರು.

ಇದನ್ನೂ ಓದಿ: Divya Vasantha: ಗೌರ್ಮೆಂಟ್ ಸ್ಕೂಲ್‌ನಲ್ಲಿ ಓದಿ, ಸೇಲ್ಸ್ ಗರ್ಲ್‌ ಆಗಿದ್ದ ದಿವ್ಯಾ ವಸಂತ ಬಳಿ ಇದೆ ಈ ದುಬಾರಿ ಕಾರು!

ಏನು ಆರೋಪ ?

ಸಾರ್ವಜನಿಕ ಸೇವೆಯಲ್ಲಿ ತೊಡಗಿರುವ ಕುಟುಂಬದಿಂದ ಬಂದ ಪೂಜಾ ಖೇಡ್ಕರ್ ಕಠಿಣವಾದ ಯುಪಿಎಸ್ ಸಿ ಪರೀಕ್ಷೆಯಲ್ಲಿ 841ನೇ ರಾಂಕ್ ಗಳಿಸಿದ್ದಾರೆ. ಆದರೆ ಖೇಡ್ಕರ್ ತನ್ನ ಐಎಎಸ್ ಪರೀಕ್ಷೆಗಳಲ್ಲಿ ತೇರ್ಗಡೆಯಾಗಲು ನಕಲಿ ಪ್ರಮಾಣಪತ್ರಗಳನ್ನು ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಖೇಡ್ಕರ್ ಒಬಿಸಿ ವರ್ಗದ ಅಡಿಯಲ್ಲಿ ನಾಗರಿಕ ಸೇವೆಗಳ ಪರೀಕ್ಷೆಗೆ ಹಾಜರಾಗಿದ್ದರು. ಅಲ್ಲಿ ಕ್ರೀಮಿ ಲೇಯರ್ ಪ್ರಮಾಣಪತ್ರದ ಮಿತಿಯು ಪೋಷಕರ ವಾರ್ಷಿಕ ಆದಾಯ 8 ಲಕ್ಷ ರೂ. ಎಂದು ಘೋಷಿಸಿದ್ದರು. ನಾಗರಿಕ ಸೇವಾ ಪರೀಕ್ಷೆಯಲ್ಲಿ ತೇರ್ಗಡೆಯಾಗಲು ಅವರು ನಕಲಿ ಅಂಗವೈಕಲ್ಯ ದಾಖಲೆಯನ್ನೂ ಸಲ್ಲಿಸಿದ್ದಾರೆ ಎಂದು ಆರೋಪಿಸಲಾಗಿದೆ.

ಅಲ್ಲದೇ ಖೇಡ್ಕರ್ ತಮ್ಮ ಖಾಸಗಿ ಆಡಿ ಕಾರನ್ನು ಕೆಂಪು-ನೀಲಿ ಬೀಕನ್ ಲೈಟ್ ಮತ್ತು ವಿಐಪಿ ನಂಬರ್ ಪ್ಲೇಟ್‌ನೊಂದಿಗೆ ಬಳಸಿದ್ದಕ್ಕಾಗಿ ತಪಾಸಣೆಗೆ ಒಳಗಾದ ಈ ಎಲ್ಲ ವಿಚಾರಗಳು ಬೆಳಕಿಗೆ ಬಂದಿದೆ.

Exit mobile version