Site icon Vistara News

Prajwal Revanna Case: ಮಾಜಿ ಸಂಸದ ಶಿವರಾಮೇಗೌಡ ಮನೆ ಮೇಲೆ ಮೊಟ್ಟೆ ದಾಳಿ

lr Shivarame gowda prajwal revanna case

ಬೆಂಗಳೂರು: ಪ್ರಜ್ವಲ್‌ ರೇವಣ್ಣ ಲೈಂಗಿಕ ಹಗರಣಕ್ಕೆ (Prajwal Revanna Case) ಸಂಬಂಧಿಸಿ ಆಡಿಯೋ ಒಂದರಲ್ಲಿ ಮಾಜಿ ಪ್ರಧಾನಿ ಎಚ್‌.ಡಿ ದೇವೇಗೌಡರನ್ನು (HD Deve Gowda) ಅವಾಚ್ಯವಾಗಿ ನಿಂದಿಸಿದ್ದಾರೆ ಎನ್ನಲಾಗಿರುವ, ಮಾಜಿ ಸಂಸದ ಎಲ್.ಆರ್ ಶಿವರಾಮೇಗೌಡ (LR Shivarame Gowda) ಮನೆ ಮೊಟ್ಟೆ ದಾಳಿಗೆ (Egg throw) ಯತ್ನ ನಡೆಸಲಾಗಿದೆ.

ನಿನ್ನೆ ತಡರಾತ್ರಿ ಕಾರಿನಲ್ಲಿ ಬಂದ ವ್ಯಕ್ತಿಗಳಿಂದ ಮೊಟ್ಟೆ ಎಸೆತ ನಡೆದಿದೆ. ಕಾರಿನಲ್ಲಿ ಬಂದ ಐದಾರು ಮಂದಿ, ಮನೆಯ ಮುಂದಿದ್ದ ಪೊಲೀಸರನ್ನು ಕಂಡು ಪೊಲೀಸರ ಕಣ್ತಪ್ಪಿಸಿ ಐದಾರು ಮೊಟ್ಟೆ ಎಸೆದು ಕ್ಷಣಾರ್ಧದಲ್ಲಿ ಪರಾರಿಯಾಗಿದ್ದಾರೆ. ಮೊಟ್ಟೆ ಎಸೆಯಲು ಯತ್ನಿಸಿ ಪರಾರಿ ಆದವರಿಗಾಗಿ ಚನ್ನಮ್ಮನ ಕೆರೆ ಅಚ್ಚುಕಟ್ಟು ಪೊಲೀಸರು ಸಿಸಿಟಿವಿ ವಿಷ್ಯುವಲ್ಸ್ ಆಧರಿಸಿ ಹುಡುಕಾಟ ನಡೆಸಿದ್ದಾರೆ. ಮೊಟ್ಟೆ ಎಸೆತದ ಬಳಿಕ ಎಲ್ಆರ್‌ಎಸ್ ಮನೆ ರಸ್ತೆ ಎರಡೂ ಕಡೆ ಬ್ಯಾರಿಕೇಡ್ ಹಾಕಿ ಬಂದೋಬಸ್ತ್ ಮಾಡಲಾಗಿದೆ.

ಪೆನ್ ಡ್ರೈವ್ ಪ್ರಕರಣ (Pen drive Case) ವಿಚಾರದಲ್ಲಿ ವಕೀಲ ದೇವರಾಜೇಗೌಡ ಜೊತೆ ಮಾತನಾಡುವಾಗ ಜೆಡಿಎಸ್ ವರಿಷ್ಠರ ಬಗ್ಗೆ ಎಲ್ ಆರ್ ಶಿವರಾಮೇಗೌಡ ಅವಹೇಳನಕಾರಿ ಮಾತನಾಡಿದ್ದರು ಎಂದು ವರದಿಯಾಗಿದೆ. ಈ ಬಗ್ಗೆ ಆಡಿಯೋವನ್ನು ನಿನ್ನೆ ಬಿಡುಗಡೆ ಮಾಡಲಾಗಿತ್ತು.

ದೇವೇಗೌಡ ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ವಲ್ಲ; ಹೊಸ ಆಡಿಯೊದಲ್ಲಿ ಶಿವರಾಮೇಗೌಡ ಸ್ಫೋಟಕ ಹೇಳಿಕೆ

ವಕೀಲ ದೇವರಾಜೇಗೌಡ (Devaraje Gowda) ಹಾಗೂ ಮಾಜಿ ಸಂಸದ ಎಲ್‌.ಆರ್.ಶಿವರಾಮೇಗೌಡ (LR Shivarame Gowda) ಅವರ ಮಧ್ಯೆ ನಡೆದಿದೆ ಎನ್ನಲಾದ ದೂರವಾಣಿ ಸಂಭಾಷಣೆಯ ಆಡಿಯೊ ಬಯಲಾಗಿದ್ದು, “ಮಾಜಿ ಪ್ರಧಾನಿ ಎಚ್‌.ಡಿ.ದೇವೇಗೌಡ ಅವರ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ಅಷ್ಟಕ್ಕೂ, ದೇವೇಗೌಡ ಅವರು ಇನ್ನೂ ಆತ್ಮಹತ್ಯೆ ಮಾಡಿಕೊಂಡಿಲ್ಲವಲ್ಲ” ಎಂಬುದಾಗಿ ಶಿವರಾಮೇಗೌಡ ಹೇಳಿದ್ದಾರೆ.

“ನೀವು ಡಿ.ಕೆ.ಶಿವಕುಮಾರ್‌ ಅವರ ಜತೆ ಕೈಜೋಡಿಸಿದರೆ ಯಾವ ಸಹಾಯ ಬೇಕೋ ಎಲ್ಲವನ್ನೂ ಮಾಡುತ್ತಾರೆ. ಜೆಡಿಎಸ್‌ಅನ್ನು ಎನ್‌ಡಿಎಯಿಂದ ಆಚೆಗೆ ಹಾಕಲು ನಾನೇ ನರೇಂದ್ರ ಮೋದಿ ಅವರಿಗೆ ಒತ್ತಾಯ ಮಾಡುತ್ತೇನೆ. ಇನ್ನೇನು ವಿಡಿಯೊಗಳು ಇವೆಯೋ, ಎಲ್ಲವನ್ನೂ ನಮಗೆ ಕೊಡಿ. ದೇವೇಗೌಡ ಕುಟುಂಬವನ್ನು ಬಲಿ ಕೊಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. ನೀವು ಯಾವುದಕ್ಕೂ ಹೆದರಬೇಡಿ. ನಿಮಗೆ ಏನು ಹೆಲ್ಪ್‌ ಬೇಕೋ ಅದನ್ನು ಡಿಕೆಶಿ ಮಾಡುತ್ತಾರೆ” ಎಂಬುದಾಗಿ ಶಿವರಾಮೇಗೌಡ ಭರವಸೆ ನೀಡಿರುವುದು ಆಡಿಯೊದಲ್ಲಿದೆ.

ವಿಡಿಯೊ ಕೊಡಿ ಎಂಬುದಕ್ಕೆ ಉತ್ತರಿಸಿದ ದೇವರಾಜೇಗೌಡ, “ಅಣ್ಣ ಇದು ಹೆಣ್ಣುಮಕ್ಕಳ ಮಾನ ಮರ್ಯಾದೆ ಪ್ರಶ್ನೆ ಅಲ್ಲವೇ? ಕಾನೂನು ಪ್ರಕಾರ ಕ್ರಮ ತೆಗೆದುಕೊಳ್ಳಲಾಗುತ್ತದೆ” ಎಂದಿದ್ದಾರೆ. ಅದಕ್ಕೆ ಶಿವರಾಮೇಗೌಡ, “ನಿನಗೆ ಏನು ಸಹಾಯ ಬೇಕೋ ಅದನ್ನು ಮಾಡುತ್ತಾರೆ. ಅಷ್ಟಕ್ಕೂ, ನೀನೇನೂ ಹಾಸನದಲ್ಲಿ ಪೆನ್‌ಡ್ರೈವ್‌ ಹಂಚಿಲ್ಲ. ಹಂಚಿದರೂ ಅದರಲ್ಲಿ ತಪ್ಪೇನಿಲ್ಲ. ನೀನೊಬ್ಬ ವಕೀಲನಾಗಿ ಹೀಗೆ ಹೆದರಿದರೆ ಹೇಗೆ? ಏನೂ ಆಗುವುದಿಲ್ಲ. ಯಾವ ವಿಡಿಯೊ ಇದೆ ನಮಗೆ ಕೊಡು” ಎಂದಿದ್ದಾರೆ.

ಗೌಡರು ಸೂಸೈಡ್‌ ಮಾಡಿಕೊಂಡಿಲ್ವಲ್ಲ

“ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಬಿಟ್ಟಿದ್ದಾರೆ ಎಂಬುದಾಗಿ ಹೇಳು. ಆ ದೇವೇಗೌಡರ ಮಕ್ಕಳು ಏನೂ ಕಡಿಮೆ ಇಲ್ಲ. ದೇವೇಗೌಡರು ಇಷ್ಟಾದರೂ ಆತ್ಮಹತ್ಯೆ ಮಾಡಕೊಂಡಿಲ್ಲವಲ್ಲ. ಪ್ರಜ್ವಲ್‌ ರೇವಣ್ಣ ಬೆಳೆಯುತ್ತಿದ್ದಾನೆ. ಕುಮಾರಸ್ವಾಮಿ ಅವರಿಗೆ ತಮ್ಮ ಮಗ ಮುಂದೆ ಬರಬೇಕು ಎಂಬ ಆಸೆ ಇದೆ. ಹಾಗಾಗಿ, ಕುಮಾರಸ್ವಾಮಿ ಅವರೇ ವಿಡಿಯೊಗಳನ್ನು ಹಂಚಿದ್ದಾರೆ ಎಂಬುದಾಗಿ ಹೇಳಿ” ಎಂದು ದೇವರಾಜೇಗೌಡ ಅವರಿಗೆ ಶಿವರಾಮೇಗೌಡ ಹೇಳಿರುವುದು ಆಡಿಯೊದಲ್ಲಿ ದಾಖಲಾಗಿದೆ. ಇದು ಈಗ ಪ್ರಕರಣಕ್ಕೆ ಹೊಸ ಟ್ವಿಸ್ಟ್‌ ನೀಡಿದೆ.

ಇದನ್ನೂ ಓದಿ: Prajwal Revanna Case: ಪೆನ್‌ಡ್ರೈವ್‌ ಕೇಸ್‌ಗೆ ಟ್ವಿಸ್ಟ್;‌ ದೇವರಾಜೇಗೌಡ, ಡಿಕೆಶಿ ಆಡಿಯೊ ಬಯಲು, ಇಲ್ಲಿದೆ ಸ್ಫೋಟಕ ಮಾಹಿತಿ

Exit mobile version