ಹಾಸನ: ಅತ್ಯಾಚಾರ ಹಾಗೂ ಲೈಂಗಿಕ ದೌರ್ಜನ್ಯ (physical Abuse) ಕೇಸ್ ಆರೋಪಿ ವಕೀಲ ದೇವರಾಜೇಗೌಡ (Devarajegowda) ಅವರ ಪೊಲೀಸ್ ಕಸ್ಟಡಿ ಅಂತ್ಯವಾಗಿದ್ದು, ಅವರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಗುರುವಾರವೂ ಒಂದು ದಿನ ಕಸ್ಟಡಿಗೆ ಪಡೆದುಕೊಂಡಿದ್ದರು. ಶುಕ್ರವಾರ ಕೋರ್ಟ್ ಮುಂದೆ ಹಾಜರುಪಡಿಸಿದ ಹಿನ್ನೆಲೆಯಲ್ಲಿ ಅವರಿಗೆ ನ್ಯಾಯಾಂಗ ಬಂಧನವಿರಿಸಿ ಆದೇಶಿಸಲಾಗಿದೆ. ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna Case) ಸಾಕ್ಷಿ ಬಿಡುಗಡೆ ಮುಂದಾಗಿದ್ದ ದೇವರಾಜೇಗೌಡ ಅವರೀಗ ಇದಕ್ಕೆ ಸಂಬಂಧಪಟ್ಟಂತೆ ಬೇರೆ ಕೇಸ್‌ನಲ್ಲಿ ಲಾಕ್ ಆದಂತೆ ಆಗಿದೆ.
ಒಟ್ಟು ನಾಲ್ಕು ದಿನ ಪೊಲೀಸ್ ಕಸ್ಟಡಿಯಲ್ಲಿದ್ದ ದೇವರಾಜೇಗೌಡ ಅವರು ಈಗ ಮತ್ತೆ ನ್ಯಾಯಾಂಗ ಬಂಧನಕ್ಕೊಳಪಟ್ಟಿದ್ದಾರೆ. ದೇವರಾಜೇಗೌಡ ಪರ ವಕೀಲರು ಇಂದು ಕೋರ್ಟ್‌ಗೆ ಜಾಮೀನು ಅರ್ಜಿ ಸಲ್ಲಿಸಲಿದ್ದಾರೆ.
ಪ್ರಜ್ವಲ್ ರೇವಣ್ಣ ಪ್ರಕರಣದಲ್ಲಿ (Prajwal Revanna Case) ವಿಡಿಯೊ ವೈರಲ್ (video viral) ಮಾಡಿದವರ ಕುರಿತು ಸಾಕ್ಷ್ಯ ಬಿಡುಗಡೆ ಮಾಡುತ್ತೇನೆ ಎನ್ನುತ್ತಿದ್ದ ವಕೀಲ ದೇವರಾಜೇಗೌಡ ಅವರನ್ನು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಬಂಧನ ಮಾಡಲಾಗಿತ್ತು. ಈ ಸಂಬಂಧ ಮೇ 14 ರಂದು ಪೊಲೀಸ್ ಕಸ್ಟಡಿಗೆ ಪಡೆದುಕೊಂಡಿದ್ದ ಹೊಳೆನರಸೀಪುರ ನಗರ ಪೊಲೀಸರು, ಜೆಎಂಎಫ್‌ಸಿ ಕೋರ್ಟ್‌ಗೆ ಪೊಲೀಸರು ಹಾಜರುಪಡಿಸಿದ್ದರು. ಹೀಗಾಗಿ ಗುರುವಾರವೂ ಒಂದು ದಿನ ಅವಧಿ ವಿಸ್ತರಣೆ ಮಾಡಿ ಕೋರ್ಟ್ ಆದೇಶಿಸಿತ್ತು. ಅಲ್ಲದೆ, ಶುಕ್ರವಾರ (ಮೇ 17) ಮತ್ತೆ ನ್ಯಾಯಾಲಯದ ಮುಂದೆ ಹಾಜರುಪಡಿಸಲು ಸೂಚಿಸಿತ್ತು. ಇಂದು ಅವರಿಗೆ ನ್ಯಾಯಾಂಗ ಬಂಧನ ವಿಧಿಸಿ ಆದೇಶಿಸಲಾಗಿದೆ.
ದೇವರಾಜೇಗೌಡ ಮೇ 11ರಂದು ಬಂಧನಕ್ಕೆ ಒಳಗಾಗಿದ್ದರು. ಇವರ ಮೇಲೆ ಲೈಂಗಿಕ ದೌರ್ಜನ್ಯ, ಕಿರುಕುಳ ಆರೋಪಗಳನ್ನು ಹೊರಿಸಲಾಗಿದೆ. ಹೀಗಾಗಿ ಹೆಚ್ಚಿನ ವಿಚಾರಣೆಗಾಗಿ ಹೊಳೆನರಸೀಪುರ ನಗರ ಠಾಣೆ ಪೊಲೀಸರು ಅವರನ್ನು ಕಸ್ಟಡಿಗೆ ಪಡೆದುಕೊಂಡಿದ್ದರು. ಹೊಳೆನರಸೀಪುರ, ಹಾಸನ ಸೇರಿ ಇತರ ಅಗತ್ಯ ಸ್ಥಳಗಳಿಗೆ ಕರೆದೊಯ್ದು ವಿಚಾರಣೆಯನ್ನು ಕೈಗೊಂಡಿದ್ದರು.
ಸರ್ಕಾರದ ವಿರುದ್ಧ ತೊಡೆ ತಟ್ಟಿದ್ದ ದೇವರಾಜೇಗೌಡ
ವಕೀಲ ದೇವರಾಜೇಗೌಡ ಬಂಧನವಾಗಿರುವುದು ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಾದರೂ ಹಾಸನ ಪೆನ್ ಡ್ರೈವ್ ಪ್ರಕರಣಕ್ಕೇ ತಳುಕು ಹಾಕಿಕೊಂಡಿದೆ. ಈಗಾಗಲೇ ಮಾಜಿ ಸಂಸದ ಶಿವರಾಮೇಗೌಡ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ವಿರುದ್ಧ ಗಂಭೀರ ಆರೋಪ ಮಾಡಿದ್ದಲ್ಲದೆ, ಅವರ ಜತೆಗಿನ ಮಾತುಕತೆ ಎನ್ನಲಾದ ಆಡಿಯೊವನ್ನು ಬಿಡುಗಡೆ ಮಾಡಿದ್ದರು. ಇದಲ್ಲದೆ, ಸಾಕಷ್ಟು ವಿಡಿಯೊಗಳು, ಸಾಕ್ಷಿಗಳು ಸಹ ತಮ್ಮ ಬಳಿ ಇದೆ ಎಂದು ಹೇಳಿಕೊಂಡಿದ್ದರು. ಸಾಕ್ಷ್ಯಗಳನ್ನು ಮುಂದಿನ ದಿನಗಳಲ್ಲಿ ಸಿಬಿಐ ಮುಂದೆ ಇಡುತ್ತೇನೆ ಎಂದು ಸಹ ಸುದ್ದಿಗೋಷ್ಠಿ ನಡೆಸಿ ನೇರವಾಗಿ ರಾಜ್ಯ ಸರ್ಕಾರದ ವಿರುದ್ಧ ಸವಾಲು ಹಾಕಿದ್ದರು. ಆದರೆ, ಹೊಳೆನರಸೀಪುರ ಠಾಣೆಯಲ್ಲಿ ದಾಖಲಾಗಿದ್ದ ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಕೇಸ್‌ನಲ್ಲಿ ಅವರನ್ನು ಬಂಧಿಸಲಾಗಿದೆ.
ಇದನ್ನೂ ಓದಿ: HD Revanna: ಬಸವನಗುಡಿ ನಿವಾಸದಿಂದ ದೂರವೇ ಉಳಿದ ಎಚ್ ಡಿ ರೇವಣ್ಣ; ಜ್ಯೋತಿಷಿಗಳ ಕಟ್ಟೆಚ್ಚರ?
ಪತಿಯು ಮಾಲೀಕತ್ವದ ಸೈಟ್ ವಿಚಾರವಾಗಿ ದೇವರಾಜೇಗೌಡ ಅವರನ್ನು ಮಹಿಳೆಯೊಬ್ಬರು ಭೇಟಿಯಾಗಿದ್ದರು. ಆ ಪರಿಚಯವನ್ನು ದುರ್ಬಳಕೆ ಮಾಡಿಕೊಂಡು ಲೈಂಗಿಕವಾಗಿ ಬಳಸಿಕೊಂಡಿರುವ ಆರೋಪ ದೇವರಾಜೇಗೌಡ ವಿರುದ್ಧ ಕೇಳಿ ಬಂದಿದೆ.