ಬೆಂಗಳೂರು: ದಕ್ಷಿಣ ಕನ್ನಡದ ಬೆಳ್ಳಾರೆಯಲ್ಲಿ ಬಿಜೆಪಿ ಕಾರ್ಯಕರ್ತ ಪ್ರವೀಣ್ ನೆಟ್ಟಾರು ಹತ್ಯೆಗೈದು, ಇಡೀ ನಾಡು ಪ್ರಕ್ಷುಬ್ಧಗೊಳ್ಳುವಂತೆ ಮಾಡಿದ ಪಾತಕಿಗಳಿಗಾಗಿ ಇನ್ನೂ ರಾಷ್ಟ್ರೀಯ ತನಿಖಾ ಸಂಸ್ಥೆ (ಎನ್‌ಐಎ) ಹುಡುಕಾಡುತ್ತಲೇ ಇದೆ. ಲಕ್ಷಾಂತರ ರೂಪಾಯಿ ತಲೆದಂಡ ಘೋಷಿಸಿದ್ದರೂ ಈ ಪಾಪಿಗಳು ಇನ್ನೂ ಸಿಕ್ಕಿಲ್ಲ.
ಕರಾವಳಿಯಲ್ಲಿ ನೆತ್ತರು ಹರಿಸಿ ಶಾಂತಿ ಕದಡಿದ್ದ ನಾಲ್ವರು ಆರೋಪಿಗಳಿಗಾಗಿ ಎನ್‌ಐಎ ಶೋಧ ಮುಂದುವರಿದಿದೆ. ಮಹಮ್ಮದ್ ಮುಸ್ತಫಾ, ತುಫೈಲ್ ಎಂ.ಹೆಚ್., ಉಮ್ಮರ್ ಫಾರುಕ್ ಎಂ.ಆರ್ ಹಾಗೂ ಅಬ್ಬುಬಕರ್ ಸಿದ್ದಕಿ ಅಲಿಯಾಸ್ ಗುಜರಿ ಸಿದ್ದಿಕಿಯನ್ನು ಹುಡುಕಾಡಿ ಸುಸ್ತಾಗಿರುವ ಪೊಲೀಸರು, ಸಾರ್ವಜನಿಕರ ಮಾಹಿತಿ ಮೊರೆ ಹೋಗಿದ್ದರು. ವಾಂಟೆಡ್ ಪೋಸ್ಟರ್ ಅಭಿಯಾನ ಆರಂಭಿಸಿದ್ದರು. ಪ್ರಮುಖ ಆರೋಪಿಗಳ ಬಗ್ಗೆ ಮಾಹಿತಿ ನೀಡಿದವರಿಗೆ ಬಹುಮಾನ ಘೋಷಿಸಿದ್ದರು.
ಇದನ್ನೂ ಓದಿ | Praveen Nettaru | ಪ್ರವೀಣ್ ನೆಟ್ಟಾರು ಹತ್ಯೆ; ಮತ್ತೊಬ್ಬ ಆರೋಪಿ ಎನ್‌ಐಎ ವಶಕ್ಕೆ?
ಈ ನಾಲ್ವರೂ ನಿಷೇಧಿತ ಪಿಎಫ್ಐ ಸಂಘಟನೆ ಸದಸ್ಯರಾಗಿದ್ದಾರೆ. ಜುಲೈ 26ರಂದು ಬೆಳ್ಳಾರೆ ಬಳಿ ಪ್ರವೀಣ್ ನೆಟ್ಟಾರು ಎಂಬ ಭಜರಂಗ ದಳ ಕಾರ್ಯಕರ್ತರನ್ನು ಕೊಲೆ ಮಾಡಿ ಬಳಿಕ ಯಾವ ಸುಳಿವೂ ನೀಡದೆ ಎಸ್ಕೇಪ್ ಆಗಿದ್ದರು. ಸ್ಥಳೀಯ ಪೊಲೀಸರಿಗೆ ಇವರು ಸಿಕ್ಕಿರಲಿಲ್ಲ. ಸದ್ಯ ಪ್ರಕರಣದ ತನಿಖೆ ನಡೆಸುತ್ತಿರುವ ಎನ್‌ಐಎ ಅಧಿಕಾರಿಗಳು ರಾಜ್ಯಾದ್ಯಂತ ಆರೋಪಿಗಳ ಪತ್ತೆಗೆ ವಾಂಟೆಡ್ ಪೋಸ್ಟರ್ ವಿತರಿಸಿದ್ದಾರೆ.
ಆರೋಪಿ ಮಹಮ್ಮದ್ ಮುಸ್ತಫಾ ತಲೆಗೆ 5 ಲಕ್ಷ, ತುಫೈಲ್ ಎಂ.ಹೆಚ್ ತಲೆಗೆ 5 ಲಕ್ಷ, ಉಮ್ಮರ್ ಫಾರುಕ್ ಎಂ.ಆರ್ ತಲೆಗೆ 2 ಲಕ್ಷ, ಅಬ್ಬುಬಕ್ಕರ್ ಸಿದ್ದಿಕಿ ಅಲಿಯಾಸ್ ಗುಜರಿ ಸಿದ್ದಿಕಿ ಸುಳಿವು ನೀಡಿದವರಿಗೆ 2 ಲಕ್ಷ ಬಹುಮಾನ ಘೋಷಿಸಲಾಗಿದೆ. ಈ ಬಗ್ಗೆ ಮಾಡಿಸಲಾಗಿರುವ ಪೋಸ್ಟರ್‌ಗಳನ್ನು ಎಲ್ಲೆಲ್ಲಿ ಪಿಎಫ್ಐ ಕಚೇರಿಗಳಿದ್ದವೋ ಅಲ್ಲೆಲ್ಲಾ ವಿತರಿಸಲಾಗಿದೆ. ಪ್ರತಿ ಪೊಲೀಸ್ ಠಾಣೆಗೂ ಪೋಸ್ಟರ್ ರವಾನಿಸಿ ಹುಡುಕಾಟಕ್ಕೆ ಸೂಚಿಸಲಾಗಿದೆ.
ಇದನ್ನೂ ಓದಿ | Praveen Nettaru murder | ಮಸೂದ್ ಹತ್ಯೆ ಪ್ರತೀಕಾರಕ್ಕೆ ಬಿಜೆಪಿ ಯುವ ಮುಖಂಡ ಪ್ರವೀಣ್ ನೆಟ್ಟಾರು ಹತ್ಯೆ: ಎನ್‌ಐಎ ತನಿಖೆ