ನವ ದೆಹಲಿ: ಮಹಾರಾಷ್ಟ್ರದ ಅಮರಾವತಿಯಲ್ಲಿ ಜೂನ್ ೨೧ರಂದು ನಡೆದ ಕೆಮಿಸ್ಟ್ ಉಮೇಶ್ ಪ್ರಹ್ಲಾದ ರಾವ್ ಕೊಹ್ಲೆ ಹತ್ಯೆಗೆ ಸಂಬಂಧಿಸಿದಂತೆ ಹತ್ಯೆಯ ಮಾಸ್ಟರ್ ಮೈಂಡ್ ಸೇರಿದಂತೆ ಏಳು ಆರೋಪಿಗಳನ್ನು ಬಂಧಿಸಲಾಗಿದೆ.
ಈ ಹತ್ಯೆಯ ಸೂತ್ರದಾರ ಎನ್ನಲಾಗಿರುವ ಶೇಖ್ ಇರ್ಫಾನ್ ಶೇಖ್ ರಹೀಮ್ ಸೇರಿದಂತೆ ಒಟ್ಟು ಏಳು ಮಂದಿಯನ್ನು ಬಂಧಿಸಲಾಗಿದೆ ಎಂದು ಅಮರಾವತಿಯ ಸ್ಥಳೀಯ ಪೊಲೀಸ್ ಇನ್ಸ್‌ಪೆಕ್ಟರ್ ನಿಮಿಮಾ ಅರ್ಜ್ ತಿಳಿಸಿದ್ದಾರೆ. ಬಂಧಿತ ಇತರ ಆರೋಪಿಗಳೆಂದರೆ ಮುದಾಸಿರ್ ಅಹ್ಮದ್, ಶಾರುಖ್ ಪಠಾಣ್, ಅಬ್ದುಲ್ ತೋಫಿಕ್, ಶೋಹಿಬ್ ಖಾನ್, ಅತಿಬ್ ರಶೀದ್ ಮತ್ತು ಬಹುದ್ದೂರ್ ಖಾನ್.
ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ಪೊಲೀಸ್ ಕಸ್ಟಡಿಗೆ ಪಡೆದುಕೊಂಡು ತನಿಖೆ ಮುಂದುವರಿಸಲಾಗಿದೆ. ಈ ಹತ್ಯೆಯೂ ರಾಜಸ್ಥಾನದ ಉದಯಪುರದಲ್ಲಿ ನಡೆದ ಟೇಲರ್ ಕನ್ಹಯ್ಯ ಲಾಲ್ ಅವರ ಹತ್ಯೆಯಂತೆಯೇ ದ್ವೇಷ ಹತ್ಯೆಯಾಗಿರಬಹುದು ಎಂಬ ಬಗ್ಗೆ ಸಾಕಷ್ಟು ಮಾಹಿತಿಗಳು ಸಿಕ್ಕಿದ ಹಿನ್ನೆಲೆಯಲ್ಲಿ ರಾಷ್ಟ್ರದ ಗಮನ ಸೆಳೆದಿದೆ.
ಮಹಾರಾಷ್ಟ್ರದ ನೂತನ ಮುಖ್ಯಮಂತ್ರಿ ಏಕನಾಥ್ ಶಿಂಧೆ ನೇತೃತ್ವದ ಸರಕಾರ ಈ ಪ್ರಕರಣದ ತನಿಖೆಯನ್ನು ಎನ್‌ಐಎಗೆ ಒಪ್ಪಿಸಿದೆ. ಕೇಂದ್ರ ಗೃಹ ಸಚಿವೆ ಅಮಿತ್ ಶಾ ಕೂಡ ಎನ್‌ಐಎ ತನಿಖೆಗೆ ಸೂಚನೆ ನೀಡಿದ್ದಾರೆ. ಎನ್‌ಐಎ ಅಧಿಕಾರಿಗಳು ಸದ್ಯವೇ ಬಂಧಿತ ಆರೋಪಿಗಳ ವಿಚಾರಣೆ ನಡೆಸಲಿದ್ದಾರೆ.
ಬಂಧಿತ ಏಳು ಮಂದಿಯಲ್ಲಿ ಹೆಚ್ಚಿನವರ ವಿರುದ್ಧ ಯಾವುದೇ ಅಪರಾಧ ಪ್ರಕರಣಗಳಿರಲಿಲ್ಲ. ಉಮೇಶ್ ಕೊಲ್ಹೆ ಅವರ ಕೊಲೆಯ ಹಿಂದೆ ಧಾರ್ಮಿಕ ದ್ವೇಷದ ಹಿನ್ನೆಲೆ ಇದೆ ಎನ್ನಲಾಗಿದೆ. ಅವರು ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಅವರು ಪ್ರವಾದಿ ಮೊಹಮ್ಮದ್ ಅವರ ಬಗ್ಗೆ ನೀಡಿದ ಆಕ್ಷೇಪಾರ್ಹ ಹೇಳಿಕೆಯನ್ನು ಸಮರ್ಥಿಸಿ ವಾಟ್ಸ್ ಆ್ಯಪ್ ನಲ್ಲಿ ಒಂದು ಪೋಸ್ಟ್ ಶೇರ್ ಮಾಡಿದ್ದರು. ಅದು ಹಲವು ಗುಂಪುಗಳಿಗೆ ಹರಿದಾಡಿತ್ತು. ಅವರು ತಪ್ಪಾಗಿ ಮುಸ್ಲಿಂ ಸ್ನೇಹಿತರು ಇರುವ ಒಂದು ವಾಟ್ಸ್ ಆ್ಯಪ್ ಗ್ರೂಪ್‌ಗೂ ಶೇರ್ ಮಾಡಿದ್ದರು. ಇದೇ ಹತ್ಯೆಗೆ ಕಾರಣವಾಯಿತೆಂದು ಹೇಳಲಾಗುತ್ತಿದೆ.
ಇದನ್ನೂ ಓದಿ| ಅಮರಾವತಿಯ ಕೆಮಿಸ್ಟ್ ಮರ್ಡರ್ ಹಿಂದೆಯೂ ನೂಪುರ್ ಹೇಳಿಕೆ ದ್ವೇಷ? ಎನ್‌ಐಎ ತನಿಖೆಗೆ ಗ್ರೀನ್ ಸಿಗ್ನಲ್