Site icon Vistara News

PSI Parashuram Case: ಪಿಎಸ್‌ಐ ಪರಶುರಾಮ ಸಾವು ಪ್ರಕರಣದ ಕಡತ ನಾಳೆ ಸಿಐಡಿಗೆ ಹಸ್ತಾಂತರ: ಎಸ್‌ಪಿ ಜಿ.ಸಂಗೀತಾ

PSI Parashuram Case

ಯಾದಗಿರಿ: ಪಿಎಸ್‌ಐ ಪರಶುರಾಮ ಅನುಮಾನಾಸ್ಪದ ಸಾವು ಪ್ರಕರಣಕ್ಕೆ (PSI Parashuram Case) ಸಂಬಂಧಿಸಿದ ಕಡತವನ್ನು ಮುಂದಿನ ತನಿಖೆಗೆ ಆ.5ರಂದು ಸಿಐಡಿಗೆ ವರ್ಗಾಯಿಸಲಾಗುತ್ತದೆ ಎಂದು ಎಸ್‌ಪಿ ಜಿ. ಸಂಗೀತಾ ತಿಳಿಸಿದ್ದಾರೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಅವರು, ಆ.3ರಂದು ಮೃತ ಪಿ.ಎಸ್.ಐ ಪರಶುರಾಮ ಅವರ ಪತ್ನಿ ಶ್ವೇತಾ ಎನ್.ವಿ ಅವರು ನೀಡಿದ ದೂರಿನ ಆಧಾರದ ಮೇಲೆ ಯಾದಗಿರಿ ನಗರ ಪೊಲೀಸ್ ಠಾಣೆಯಲ್ಲಿ ಯಾದಗಿರಿ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರು ಮತ್ತು ಅವರ ಪುತ್ರ ಪಂಪನಗೌಡ (ಸನ್ನಿಗೌಡ) ಅವರ ವಿರುದ್ಧ ಪೊಲೀಸ್‌ ಠಾಣೆ ಗುನ್ನೆ ನಂ. 105/2024, ಕಲಂ 352, 108 ಸಂಗಡ 3(5) ಬಿಎನ್‌ಎಸ್ 2023 ಮತ್ತು ಕಲಂ 3(1) (ಆರ್) (ಎಸ್) 3(2) (v), ಎಸ್‌ಸಿ, ಎಸ್‌ಟಿ ಕಾಯ್ದೆ ಅಡಿ ಪ್ರಕರಣದಾಗಿದೆ.

ಡಿ.ಜಿ ಮತ್ತು ಐ.ಜಿ.ಪಿ ಅವರು ಪ್ರಕರಣದ ಕಡತವನ್ನು ಮುಂದಿನ ತನಿಖೆಗಾಗಿ ಸಿ.ಐ.ಡಿ ಘಟಕಕ್ಕೆ ನೀಡಲು ಆದೇಶಿಸಿದ್ದಾರೆ. ಹೀಗಾಗಿ ಪ್ರಕರಣದ ಕಡತವನ್ನು ಬೆಂಗಳೂರಿನ ಸಿ.ಐ.ಡಿ ಘಟಕಕ್ಕೆ ಆ. 5ರಂದು ವರ್ಗಾಯಿಸಲಾಗುವುದು ಎಂದು ತಿಳಿಸಿದ್ದಾರೆ.

ಇದನ್ನೂ ಓದಿ | PSI Parashuram Case: ಯಾದಗಿರಿ ಪಿಎಸ್ಐ ಪರಶುರಾಮ್ ಸಾವು ಪ್ರಕರಣ ಸಿಐಡಿಗೆ ವರ್ಗಾವಣೆ

ಆರೋಪಿ ಪಂಪನಗೌಡ ವಿರುದ್ಧ ಮತ್ತೊಂದು ಗಂಭೀರ ಆರೋಪ

ಯಾದಗಿರಿ: ಪಿಎಸ್ಐ ಪರಶುರಾಮ ಸಾವು ಪ್ರಕರಣದ (PSI Parashuram Case) ಎ2 ಆರೋಪಿ ಪಂಪನಗೌಡ (ಸನ್ನಿಗೌಡ) ವಿರುದ್ಧ ಮತ್ತೊಂದು ಗಂಭೀರ ಆರೋಪ ಕೇಳಿಬಂದಿದೆ. ಪಂಚಾಯತ್ ರಾಜ್‌ ಇಲಾಖೆ ಯೋಜನೆಯ 3 ಕೋಟಿ ಹಣ ಬಿಡುಗಡೆಗೂ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಪುತ್ರ ಕಮಿಷನ್ ಕೇಳಿದ್ದಾರೆ ಎನ್ನಲಾಗಿದ್ದು, ಈ ಪ್ರಕರಣದ ತನಿಖೆಗೆ ಒತ್ತಾಯಿಸಿ ಸರ್ಕಾರದ ಮುಖ್ಯ ಕಾರ್ಯದರ್ಶಿ ಹಾಗೂ ಸಭಾಧ್ಯಕ್ಷರಿಗೆ ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಪತ್ರ ಬರೆದಿದ್ದಾರೆ.

ಜಿಲ್ಲೆಯ ಐದು ತಾಲೂಕಿನ ಪಂಚಾಯತ್‌ ರಾಜ್ ಯೋಜನೆ ಹಣ ಬಿಡುಗಡೆಯಾಗಿದೆ. ಆದರೆ ವಡಗೇರಾ ತಾಲೂಕಿನ ಪಂಚಾಯತಿ ರಾಜ್ ಹಣ ಬಿಡುಗಡೆ ಆಗಿಲ್ಲ. ಇದರಿಂದ ವಡಗೇರಾ ತಾಲೂಕಿನಲ್ಲಿ ಭ್ರಷ್ಟಾಚಾರದ ವಾಸನೆ ಕಂಡು ಬರುತ್ತಿದೆ. ಶಾಸಕರ ಪುತ್ರ ಸನ್ನಿಗೌಡ ಹಣ ಬಿಡುಗಡೆಗೆ ಕಮಿಷನ್ ಕೇಳಿರುವ ಬಗ್ಗೆ ಸಾರ್ವಜನಿಕ ವಲಯದಲ್ಲಿ ಚರ್ಚೆಯಾಗುತ್ತಿದೆ. ಅಲ್ಲದೇ ಲಂಚಕ್ಕೆ ಬೇಡಿಕೆ ಇಟ್ಟು ಪಿಎಸ್‌ಐ ಪರಶುರಾಮ ಸಾವಿಗೆ ಕಾರಣವಾದ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಹಾಗೂ ಪುತ್ರ ಪಂಪನಗೌಡ ವಿರುದ್ಧ ಕ್ರಮಕ್ಕೆ ಸಾಮಾಜಿಕ ಹೋರಾಟಗಾರ ಒತ್ತಾಯಿಸಿದ್ದಾರೆ.

ಎರಡು ಪ್ರಕರಣ ಗಂಭೀರವಾಗಿ ಪರಿಗಣಿಸಿ ಶಾಸಕ ಶಾಸಕ ಚನ್ನಾರೆಡ್ಡಿ ಪಾಟೀಲ್ ತುನ್ನೂರ್ ಅವರ ವಿಧಾನಸಭಾ ಸದಸ್ಯತ್ವ ರದ್ದುಗೊಳಿಸುವಂತೆ ಸಾಮಾಜಿಕ ಹೋರಾಟಗಾರ ಮಾನಪ್ಪ ಹಡಪದ ಪತ್ರ ಬರೆದು ಮನವಿ ಮಾಡಿದ್ದಾರೆ.

Exit mobile version