ಬೆಂಗಳೂರು: ಪಿಎಸ್ಐ ನೇಮಕಾತಿ (PSI Recruitment) ಅಕ್ರಮ (PSI Scam) ಪ್ರಕರಣಕ್ಕೆ ಸಂಬಂಧಪಟ್ಟಂತೆ ಎಡಿಜಿಪಿ ಅಮೃತ್ ಪಾಲ್‌ಗೆ (ADGP Amrit Paul) ಕೊನೆಗೂ ಜಾಮೀನು ಸಿಕ್ಕಿದೆ. ಬಂಧಿತ ಎಡಿಜಿಪಿ ಅಮೃತ್ ಪಾಲ್‌ಗೆ ಹೈಕೋರ್ಟ್ (High Court) ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ.
ನ್ಯಾ. ಮಹಮ್ಮದ್ ನವಾಜ್ ಅವರನ್ನೊಳಗೊಂಡ ಏಕಸದಸ್ಯ ಪೀಠದಿಂದ ಜಾಮೀನು ಮಂಜೂರು ಮಾಡಲಾಗಿದೆ. ಒಂದು ವರ್ಷ ಎರಡು ತಿಂಗಳ ಬಳಿಕ ಜಾಮೀನು ಸಿಕ್ಕಂತೆ ಆಗಿದೆ. ಆದರೆ, ಈ ವೇಳೆ ಅವರಿಗೆ ಹಲವಾರು ಷರತ್ತುಗಳನ್ನು ವಿಧಿಸಲಾಗಿದೆ.
ಸಾಕ್ಷಿಗಳ ಮೇಲೆ ಪ್ರಭಾವ ಬೀರಬಾರದು, ನ್ಯಾಯಾಲಯದ ಅನುಮತಿ (Court permission) ಇಲ್ಲದೆ ವಿದೇಶ ಪ್ರವಾಸ ಮಾಡುವಂತಿಲ್ಲ. ತನಿಖಾಧಿಕಾರಿಗಳಿಗೆ ಸ್ಪಂದಿಸಬೇಕು ಎಂದು ನ್ಯಾಯಾಲಯವು ಷರತ್ತು ವಿಧಿಸಿದೆ.
5 ಲಕ್ಷ ರೂಪಾಯಿ ಬಾಂಡ್ (Bond of Rs 5 lakh) ಸೇರಿದಂತೆ ಇಬ್ಬರು ಶ್ಯೂರಿಟಿ ಒದಗಿಸಲು ಆದೇಶದಲ್ಲಿ ಹೇಳಲಾಗಿದೆ. ಇನ್ನು ಯಾವುದೇ ಕಾರಣಕ್ಕೂ ಸಾಕ್ಷಿಗಳ ಮೇಲೆ ಒತ್ತಡ ಹೇರುವುದು, ಪ್ರಭಾವ ಬೀರುವ ಕೆಲಸವನ್ನು ಮಾಡಕೂಡದು. ಕೋರ್ಟ್ ಅನುಮತಿಯಿಲ್ಲದೆ ಹೊರ ದೇಶಗಳಿಗೆ ಪ್ರಯಾಣ ಮಾಡುವಂತಿಲ್ಲ. ಇನ್ನು ಪ್ರಕರಣದಲ್ಲಿ ಅಮೃತ್ ಪಾಲ್ ಅವರ ದರ್ಜೆಗಿಂತ ಕಿರಿಯ ಶ್ರೇಣಿಯ ಅಧಿಕಾರಿಗಳು ತನಿಖೆಯನ್ನು ನಡೆಸುತ್ತಿದ್ದಾರೆ. ಅವರಿಗೆ ಬೆದರಿಕೆ ಹಾಕುವ ಕೆಲಸವನ್ನು ಮಾಡಕೂಡದು ಎಂದು ಷರತ್ತು ವಿಧಿಸಲಾಗಿದೆ.
ಎಸ್‌ಪಿಪಿ ಪ್ರಸನ್ನ ಕುಮಾರ್ ಅವರಿಂದ ಈ ಸಂಬಂಧ ಹೈಕೋರ್ಟ್‌ಗೆ ಮನವಿ ಸಲ್ಲಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ತನಿಖಾಧಿಕಾರಿಗಳಿಗೆ ಬೆದರಿಕೆ ಹಾಕದಂತೆ ಹೈಕೋರ್ಟ್ ಷರತ್ತು ವಿಧಿಸಿದೆ.
ಪಾಲ್ ವಿರುದ್ಧದ ಆರೋಪ ಏನಿತ್ತು?
ಅಮೃತ್ ಪಾಲ್ ವಿರುದ್ಧ ಸಿಐಡಿ 1,406 ಪುಟಗಳ ಚಾರ್ಜ್ ಶೀಟ್ ಸಲ್ಲಿಸಿತ್ತು. ಬೆಂಗಳೂರಿನ 1ನೇ ಎಸಿಎಂಎಂ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಲಾಗಿತ್ತು. ಆರೋಪಿ ಅಮೃತ್ ಪಾಲ್ ಅವರನ್ನು ಹಗರಣದ 35ನೇ ಆರೋಪಿಯನ್ನಾಗಿ ಮಾಡಲಾಗಿತ್ತು. ಸಿಐಡಿ ತನಿಖಾಧಿಕಾರಿ ಡಿವೈಎಸ್‌ಪಿ ಬಿ.ಕೆ. ಶೇಖರ್ ಅವರು ಹಗರಣದಲ್ಲಿ ಅಮೃತ್ ಪಾಲ್ ವಿರುದ್ಧ 78 ದಾಖಲೆಗಳು, 38 ಸಾಕ್ಷಿಗಳನ್ನು ಸಲ್ಲಿಸಿದ್ದರು. ಹಗರಣ ನಡೆಸಲು ಸಂಚು ಮತ್ತು ಸಬ್ ಇನ್ಸ್‌ಪೆಕ್ಟರ್ ಹುದ್ದೆಯ ಆಕಾಂಕ್ಷಿಗಳಿಂದ ಹಣ ವಸೂಲಿ ಮಾಡಿದ್ದರು ಎಂದು ಚಾರ್ಜ್‌ಶೀಟ್‌ನಲ್ಲಿ ಪ್ರಮುಖವಾಗಿ ಉಲ್ಲೇಖಿಸಲಾಗಿತ್ತು.
1.35 ಕೋಟಿ ರೂ. ಪಡೆದಿದ್ದ ಪಾಲ್
ಪಿಎಸ್‌ಐ ಹುದ್ದೆಯ ಆಕಾಂಕ್ಷಿಗಳಿಂದ 1.35 ಕೋಟಿ ರೂಪಾಯಿ ಹಣವನ್ನು ಪಡೆದಿದ್ದ ಪಾಲ್, ಆ ಹಣವನ್ನು ತಮ್ಮ ಸಹಾಯಕ ಹಾಗೂ ಬೇನಾಮಿ ಶಂಭುಲಿಂಗ ಸ್ವಾಮಿಗೆ ನೀಡಿದ್ದರು ಎಂಬುದು ತನಿಖೆಯಿಂದ ಬೆಳಕಿಗೆ ಬಂದಿತ್ತು. ಈತನಿಂದ 41 ಲಕ್ಷ ರೂ.ಗಳನ್ನು ಸಿಐಡಿ ವಶಪಡಿಸಿಕೊಂಡಿತ್ತು.
ಇದನ್ನೂ ಓದಿ: CM Siddaramaiah : ಪ್ರವಾಸೋದ್ಯಮ ಬೆಳೆದರೆ ರಾಜ್ಯದ ಆರ್ಥಿಕ ಚೈತನ್ಯ ಹೆಚ್ಚಲಿದೆ: ಸಿಎಂ ಸಿದ್ದರಾಮಯ್ಯ
ಹಗರಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ಅಮೃತ್ ಪಾಲ್
ನೇಮಕಾತಿ ವಿಭಾಗದ ಎಡಿಜಿಪಿಯಾಗಿ ಕೆಲಸ ಮಾಡಿದ್ದ ಅಮೃತ್ ಪಾಲ್ ಅವರು ತಮ್ಮ ಜ್ಯೂನಿಯರ್ ಡಿವೈಎಸ್ಪಿ ಶಾಂತಕುಮಾರ್ ಮತ್ತು ತಂಡಕ್ಕೆ 545 ಪಿಎಸ್ಐ ಹುದ್ದೆಗಳ ನೇಮಕಾತಿಯಲ್ಲಿ ಹಗರಣ ನಡೆಸಲು ಅವಕಾಶ ಮಾಡಿಕೊಟ್ಟಿದ್ದರು. ನೇಮಕಾತಿ ವಿಭಾಗದ ಇತರೆ ಅಧಿಕಾರಿಗಳಾದ ಸುನೀತಾ ಬಾಯಿ, ಆರ್‌ಪಿಐ ಮಂಜುನಾಥ್ ಮತ್ತು ಸಿಬ್ಬಂದಿ ಕೂಡ ಹಗರಣದಲ್ಲಿ ಅವರ ಪಾತ್ರವನ್ನು ದೃಢಪಡಿಸುವ ಹೇಳಿಕೆಗಳನ್ನು ನೀಡಿದ್ದರು. ಈ ಸಂಬಂಧ ಅವರ ಪ್ರಕರಣ ಗಂಭೀರತೆಯನ್ನು ಪಡೆದುಕೊಂಡಿತ್ತು. ಹೀಗಾಗಿ ಅಮೃತ್ ಪಾಲ್ ಈವರೆಗೆ ಎಷ್ಟು ಬಾರಿ ಜಾಮೀನಿಗೆ ಅರ್ಜಿ ಸಲ್ಲಿಕೆ ಮಾಡಿದ್ದರೂ ಕೋರ್ಟ್ ತಿರಸ್ಕಾರ ಮಾಡುತ್ತಲೇ ಬಂದಿತ್ತು. ಕೊನೆಗೂ ಈಗ ಪಾಲ್‌ಗೆ ಜಾಮೀನು ಸಿಕ್ಕಂತೆ ಆಗಿದೆ.