ಪುಣೆ: ಸಿಟ್ಟಿನ ಭರದಲ್ಲಿ ಇನ್ನೊಬ್ಬರನ್ನು ಕಚ್ಚಿ ಗಾಯಗೊಳಿಸುವ ಘಟನೆಯನ್ನು ಕೇಳಿದ್ದೇವೆ. ಆದರೆ, ಇಲ್ಲೊಬ್ಬಳು ನಟಿ ಪೊಲೀಸರಿಗೇ ಕಚ್ಚಿ ಅರೆಸ್ಟ್ ಆಗಿದ್ದಾಳೆ. ಪುಣೆ ನಗರ ಪೊಲೀಸರಿಂದ ಬಂಧಿತಳಾಗಿರುವ ಈತ ನಟಿಯ ಹೆಸರು ಕಾಕೋಲಿ ವಿಶ್ವಾಸ್. ಈಕೆ ವೆಬ್ ಸೀರಿಸ್ಗಳಲ್ಲಿ ನಟಿಸಿದ್ದಾಳಂತೆ. ಮುಂಬಯಿಯ ಅಂಧೇರಿ ನಗರದಲ್ಲಿ ವಾಸಿಸುತ್ತಿರುವ ಈಕೆಯ ಮೂಲ ಕರ್ನಾಟಕವಂತೆ.
ಆಗಿದ್ದೇನು? ಅವಳು ಕಚ್ಚಿದ್ದು ಯಾಕೆ?
ಅಂದ ಹಾಗೆ ಈಕೆ ಕಚ್ಚಿದ್ದು, ಮುಂಬಯಿಯಲ್ಲಿ ತುಂಬಾ ಫೇಮಸ್ ಆಗಿರುವ ಮಹಿಳಾ ಪೊಲೀಸರ ಟೀಮ್ ದಾಮಿನಿಯ ಒಬ್ಬ ಸದಸ್ಯರನ್ನು. ಯಾರಾದರೂ ಮಹಿಳೆಯರು ಕಷ್ಟದಲ್ಲಿದ್ದರೆ ಸಹಾಯಕ್ಕೆ ಧಾವಿಸುವ ಟೀಮ್ ಇದು. ಇಲ್ಲಿ ಕೂಡಾ ಅವರು ಹೋಗಿದ್ದ ಪಾಪ ಹೆಣ್ಮಗಳಿಗೆ ಏನೋ ಅನ್ಯಾಯವಾಗಿದೆ ಎಂಬ ಕಾರಣಕ್ಕೇ. ಆದರೆ, ಅಲ್ಲಿ ಆಗಿದ್ದು ಮಾತ್ರ ಬೇರೇನೆ!
೨೮ ವರ್ಷದ ಈ ನಟಿ ವೆಬ್ಸೀರಿಸ್ಗೆ ಸಂಬಂಧಿಸಿದ ಯಾವುದೋ ಕೆಲಸಕ್ಕಾಗಿ ಪುಣೆಗೆ ಬರುವುದಕ್ಕಿತ್ತು. ಆಕ್ ಆನ್ಲೈನ್ನಲ್ಲಿ ವಡಗಾಂವ್ ಶೇರಿ ಪ್ರದೇಶದ ಒಂದು ಹೋಟೆಲ್ನಲ್ಲಿ ರೂಮ್ ಬುಕ್ ಮಾಡಿದ್ದರು. ಆದರೆ ಹೋಟೆಲ್ಗೆ ಬಂದು ನೋಡಿದರೆ ಆಕೆಗೆ ರೂಮ್ಗಳು ಇಷ್ಟವಾಗಲಿಲ್ಲ. ಇಲ್ಲಿ ಸೌಕರ್ಯಗಳು ಸರಿ ಇಲ್ಲ ಎಂದು ತಗಾದೆ ತೆಗೆದರು. ಬುಕ್ಕಿಂಗ್ ಕ್ಯಾನ್ಸಲ್ ಮಾಡಿದರು. ಆದರೆ ಕೊನೆಗೆ ರಿಫಂಡ್ ವಿಚಾರದಲ್ಲಿ ಜಗಳ ಶುರುವಾಯಿತು. ಒಂದು ಹಂತದಲ್ಲಿ ಕಾಕೋಲಿ ವಿಶ್ವಾಸ್ ದಾಂಧಲೆ ಮಾಡುವ ಹಂತ ತಲುಪಿದಾಗ ಸಿಬ್ಬಂದಿ ಪೊಲೀಸರಿಗೆ ಕರೆ ಮಾಡಿದರು.
ಮಹಿಳೆಯರ ರಕ್ಷಣೆಗೆ ಇರುವ ದಾಮಿನಿ ಮಾರ್ಷಲ್ ಪಡೆ ಕೂಡಲೇ ಸ್ಥಳಕ್ಕೆ ಧಾವಿಸಿತು. ಅವರು ಬಂದು ಮಾತುಕತೆ ನಡೆಸಿ ವಿವಾದವನ್ನು ಪರಿಹರಿಸಲು ಯತ್ನಿಸಿದರು ಎನ್ನಲಾಗಿದೆ. ಈ ನಡುವೆ, ಕಾಕೋಲಿ ಅವರು ಪೊಲೀಸರ ಜತೆಗೂ ಜಗಳಕ್ಕೆ ಇಳಿದರು. ಒಂದು ಹಂತದಲ್ಲಿ ಜಗಳವೇ ಆಗಿ ಸಿಟ್ಟಿನ ಭರದಲ್ಲಿ ಮಹಿಳಾ ಪೊಲೀಸ್ ಸಿಬ್ಬಂದಿ ಪರ್ವೀನ್ ಶೇಖರ್ ಅವರ ಕೈಗೇ ಕಚ್ಚಿ ಬಿಟ್ಟರು ಮತ್ತು ಹಲ್ಲೆಯನ್ನೂ ನಡೆಸಿದರು. ಬಟ್ಟೆಯನ್ನೂ ಹರಿದು ಹಾಕಿದರು.
ಇದೀಗ ನಟಿಯ ಮೇಲೆ ಸರಕಾರಿ ಸೇವೆಯಲ್ಲಿರುವ ಸಿಬ್ಬಂದಿಯ ಕರ್ತವ್ಯಕ್ಕೆ ಅಡ್ಡಿ ಮಾಡಿದ ಆರೋಪದಡಿ ಭಾರತೀಯ ದಂಡ ಸಂಹಿತೆಯ ೩೫೩ ಹಾಗೂ ೩೩೨, ೪೨೭, ೫೦೪ರ ಅಡಿ ಕೇಸು ದಾಖಲಿಸಿಕೊಳ್ಳಲಾಗಿದೆ ಎಂದು ಸಬ್ ಇನ್ಸ್ಪೆಕ್ಟರ್ ಮುಂಜೂಷಾ ಮುಳುಕ್ ತಿಳಿಸಿದ್ದಾರೆ.
ಇದನ್ನೂ ಓದಿ| ಪೊಲೀಸರ ಮೇಲೆ ಹಲ್ಲೆಗೆ ಮುಂದಾದ ರೌಡಿ ಕಾಲಿಗೆ ಗುಂಡೇಟು