ಬೆಂಗಳೂರು: ವಿಧಾನ ಪರಿಷತ್ ವಿರೋಧ ಪಕ್ಷದ ನಾಯಕ ಬಿ.ಕೆ. ಹರಿಪ್ರಸಾದ್ (BK Hariprasad) ಅವರು ತಮ್ಮ ವಿರುದ್ಧ ಅಪಪ್ರಚಾರ ಮಾಡಿದ್ದಾರೆ ಎಂದು ಹಿಂದು ಕಾರ್ಯಕರ್ತ (Hindu activist) ಪುನೀತ್ ಕೆರೆಹಳ್ಳಿ (Puneeth Kerehalli) ದೂರು ನೀಡಿದ್ದಾರೆ. ಇತ್ತ ಕಾಂಗ್ರೆಸ್ ಸಹ ಪುನೀತ್ ಮೇಲೆ ಕೋಮುಗಲಭೆ (Communal riots) ಸೃಷ್ಟಿಸುವ ಪ್ರಯತ್ನ ನಡೆಸಿದ್ದಾರೆಂದು ದೂರು ದಾಖಲಿಸಿದೆ.
ಬಿ.ಕೆ. ಹರಿಪ್ರಸಾದ್ ವಿರುದ್ಧ ದೂರು
ಬಿ.ಕೆ. ಹರಿಪ್ರಸಾದ್ ವಿರುದ್ಧ ಬಸವನಗುಡಿ ಪೊಲೀಸ್ ಠಾಣೆಯಲ್ಲಿ ಪುನೀತ್ ಕೆರೆಹಳ್ಳಿ ದೂರು ನೀಡಿದ್ದಾರೆ. ಪುನೀತ್ ಕೆರೆಹಳ್ಳಿಯನ್ನು ಬಿಜೆಪಿಯವರು ದೊಂಬಿ, ಗಲಾಟೆ ಮಾಡುವುದಕ್ಕೆ ಬಳಸಿಕೊಳ್ಳುತ್ತಾರೆ ಎಂದು ಬಿ.ಕೆ ಹರಿಪ್ರಸಾದ್ ಹೇಳಿಕೆ ನೀಡಿದ್ದರು. ಅಲ್ಲದೆ, ಪುನೀತ್ ಕೆರೆಹಳ್ಳಿ ನಂಬರ್‌ನಲ್ಲಿ ನಕಲಿ ಸಂದೇಶ ಹರಿಬಿಡಲಾಗಿದೆ ಎಂದು ಸಹ ದೂರು ನೀಡಲಾಗಿದೆ.
ಇದನ್ನೂ ಓದಿ: Ram Janmabhoomi: ರಾಮಮಂದಿರ ಉದ್ಘಾಟನೆಗೆ ಆಹ್ವಾನ ಬಂದಿಲ್ಲ; ಹೃದಯದಲ್ಲೇ ದೇವರಿದ್ದಾನೆಂದ ಡಿಕೆಶಿ
ಬಿ.ಕೆ. ಹರಿಪ್ರಸಾದ್ ಹೇಳಿಕೆ ವಿರುದ್ಧ ಕ್ರಮ ಜರಗಿಸಬೇಕು. ಅವರು ಈಗ ಮಾಡಿರುವ ಕೆಲಸದಿಂದ ರಾಜ್ಯದ ಬೇರೆ ಬೇರೆ ಕಡೆಯಿಂದ ಮುಸ್ಲಿಂಮರು ಕರೆ ಮಾಡಿ ಬೆದರಿಕೆ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಉಲ್ಲೇಖಿಸಿದ್ದಾರೆ.
ಪುನೀತ್ ಕೆರೆಹಳ್ಳಿ ವಿರುದ್ಧ ಕಾಂಗ್ರೆಸ್ ದೂರು
ಬೆಂಗಳೂರು ಕೇಂದ್ರ ಜಿಲ್ಲಾ ಕಾಂಗ್ರೆಸ್ ಸಮಿತಿಯ ಹಿಂದುಳಿದ ವರ್ಗಗಳ ವಿಭಾಗದಿಂದ ಪುನೀತ್ ಕೆರೆಹಳ್ಳಿ ವಿರುದ್ಧ ದೂರು ದಾಖಲಾಗಿದೆ.
ಸೈಬರ್ ಕ್ರೈಂ ಗೆದೂರು ದಾಖಲು ಮಾಡಿದ ಕಾಂಗ್ರೆಸ್, ಕೋಮುಗಲಭೆ ಸೃಷ್ಟಿಸುವ ಪ್ರಯತ್ನ ನಡೆದಿದೆ. ರಾಷ್ಟ್ರ ರಕ್ಷಣಾ ಪಡೆ ವಾಟ್ಸಪ್ ಗ್ರೂಪಿನಲ್ಲಿ ಸಂದೇಶವೊಂದು ಹರಿದಾಡುತ್ತಿದೆ. “ಕರ್ನಾಟಕದಲ್ಲಿ ಕೋಮುಗಲಭೆ ಎಬ್ಬಿಸುವುದಕ್ಕೆ ಬಿಜೆಪಿ ಬೆಂಬಲ ಕೊಟ್ಟಿದೆ. ಆದ್ದರಿಂದ ಎಲ್ಲ ಕಾರ್ಯಕರ್ತರು ರೆಡಿಯಾಗಿ ಇರಿ. ಎಲ್ಲಿ ಏನು ಮಾಡಬೇಕು ಅಂತ ಈ ಗ್ರೂಪಿನ ಮೂಲಕ ಮಾಹಿತಿ ಕೊಡುತ್ತೇವೆ. ಜೈ ರಾಷ್ಟ್ರ ರಕ್ಷಣಾ ಪಡೆ 2024ಕ್ಕೆ ಮತ್ತೊಮ್ಮೆ ಮೋದಿ” ಎಂಬ ಸಂದೇಶವನ್ನು ಹಾಕಲಾಗಿದೆ ಎಂದು ಕಾಂಗ್ರೆಸ್ ದೂರಿದೆ.
ಇದನ್ನೂ ಓದಿ: Hariprakash Konemane: ಇಲ್ಲಿಯ ರಾಮ, ಅಲ್ಲಿಯ ರಾಮ ಎಂಬ ಭೇದವೇಕೆ? ಸಿಎಂಗೆ ಹರಿಪ್ರಕಾಶ್ ಕೋಣೆಮನೆ ಪ್ರಶ್ನೆ
ಸಂದೇಶ ಹಾಕಿರುವ ನಂಬರ್ ಅನ್ನು ಟ್ರೂ ಕಾಲರ್‌ಗೆ ಹಾಕಿ ಪರಿಶೀಲನೆ ನಡೆಸಿದಾಗ ಪುನೀತ್ ಕೆರೆಹಳ್ಳಿ ನಂಬರ್ ಎಂದು ತಿಳಿದಿದೆ. ಜನಾಂಗೀಯ ದ್ವೇಷ ಹುಟ್ಟಿಸುವ ಈತನನ್ನು ಬಂಧಿಸಬೇಕು. ಅದ್ಯಾವ ಬಿಜೆಪಿ ಮುಖಂಡ ಈತನಿಗೆ ಸುಪಾರಿ ಕೊಟ್ಟಿದ್ದಾರೆ ಎಂಬುದು ತನಿಖೆ ಮೂಲಕ ಎಲ್ಲರಿಗೂ ಗೊತ್ತಾಗಬೇಕು ಎಂದು ದೂರರಿನಲ್ಲಿ ಕಾಂಗ್ರೆಸ್ ಆಗ್ರಹಿಸಿದೆ.