ಜೈಪುರ: ಉದಯಪುರದಲ್ಲಿ ಕನ್ಹಯ್ಯ ಲಾಲ್ ಅವರನ್ನು ಬರ್ಬರವಾಗಿ ಕೊಲೆ ಮಾಡಿದ ದುಷ್ಟರು ಪಾಕಿಸ್ತಾನದ ದಾವತ್ ಇ- ಇಸ್ಲಾಮಿ ಸಂಘಟನೆಯನ್ನು ರಾಜಸ್ಥಾನದಲ್ಲಿ ಬೆಳೆಸಲು ಪ್ರಯತ್ನ ನಡೆಸಿದ್ದರು. ಅದರ ಸ್ಲೀಪರ್ ಸೆಲ್ ಸ್ಥಾಪಿಸಲು ಮಾಡಿದ ಪ್ರಯತ್ನಗಳ ವಿವರಗಳೆಲ್ಲವೂ ಈಗ ರಾಷ್ಟ್ರೀಯ ತನಿಖಾ ದಳಕ್ಕೆ (ಎನ್‌ಐಎ) ಸಿಕ್ಕಿವೆ.
ಹಂತಕರಲ್ಲಿ ಒಬ್ಬನಾಗಿರುವ ಮೊಹಮ್ಮದ್ ರಿಯಾಜ್ ಅಟ್ಟಾರಿ ಪಾಕಿಸ್ತಾನದ ಧಾರ್ಮಿಕ ಮೂಲಭೂತವಾದಿ ಸಂಘಟನೆಯ ಜತೆ ನೇರ ಸಂಪರ್ಕ ಹೊಂದಿದ್ದು, ಅದರ ಸೂಚನೆಯಂತೆಯೇ ಇಲ್ಲಿ ಕಾರ್ಯಾಚರಿಸುತ್ತಿದ್ದ ಎಂಬ ಅಂಶ ಬಯಲಾಗಿದೆ. ನಿಜವೆಂದರೆ, ಕನ್ಹಯ್ಯ ಲಾಲ್ ಕೊಲೆಯನ್ನು ಕೂಡಾ ದಾವತ್ ಇ ಇಸ್ಲಾಮಿ ಸಂಘಟನೆಯ ಅಲ್ಲಿನ ಉಗ್ರರ ಸೂಚನೆಯಂತೆ ನಡೆಸಲಾಗಿದೆ ಎಂಬುದು ಗೊತ್ತಾಗಿದೆ. ಪ್ರವಾದಿ ಮಹಮ್ಮದ್ ಅವರನ್ನು ಅವಹೇಳನ ಮಾಡಿದ ನೂಪುರ್ ಶರ್ಮ ಅವರನ್ನು ಬೆಂಬಲಿಸಿದ ಕಾರಣಕ್ಕಾಗಿ ಕನ್ಹಯ್ಯ ಲಾಲ್ ಹತ್ಯೆ ನಡೆದಿದೆ ಎಂದು ಹೇಳಲಾಗಿದೆಯಾದರೂ ಹಂತಕರು ಅದಲ್ಲದೆ ಹೋದರೆ ಇನ್ನೊಂದು ಕಾರಣ ಇಟ್ಟುಕೊಂಡು ಶಿರಚ್ಛೇದದಂಥ ದುಷ್ಕೃತ್ಯವನ್ನು ನಡೆಸುವುದು ಖಚಿತವಾಗಿತ್ತು ಎನ್ನಲಾಗಿದೆ. ಒಂದು ಮೂಲದ ಪ್ರಕಾರ ರಿಯಾಜ್ ಮತ್ತು ತಂಡ ಉದಯಪುರದಲ್ಲೇ ಇನ್ನೂ ಎರಡು ಹತ್ಯೆಗೆ ಸಂಚು ನಡೆಸಿತ್ತು.
ದಾವತ್ ಸೇರಲು ಆಮಿಷ
ಪಾಕಿಸ್ತಾನದಲ್ಲಿ ಧಾರ್ಮಿಕ ಉಗ್ರ ಸಂಘಟನೆ ಎಂಬ ಕುಖ್ಯಾತಿ ಹೊಂದಿರುವ ದಾವತ್ – ಇ -ಇಸ್ಲಾಮಿ ಸಂಘಟನೆಯನ್ನು ರಾಜಸ್ಥಾನದಲ್ಲಿ ಬೆಳೆಸುವುದು, ಹಲವರನ್ನು ಈ ಸಂಘಟನೆಗೆ ಸೇರಿಸುವುದು ರಿಯಾಜ್‌ನ ಕೆಲಸವಾಗಿತ್ತು. ರಿಯಾಜ್ ಅಟ್ಟಾರಿ ಮುಸ್ಲಿಮರೇ ಅಧಿಕ ಸಂಖ್ಯೆಯಲ್ಲಿ ವಾಸಿಸುವ ಪ್ರದೇಶಗಳಲ್ಲಿ ಬಾಡಿಗೆ ಮನೆ ಮಾಡಿಕೊಂಡು ಅಲ್ಲಿ ದಾವತ್ ಇಸ್ಲಾಮಿಯ ಪ್ರಚಾರ ಮಾಡುತ್ತಿದ್ದ. ಇದೊಂದು ಧಾರ್ಮಿಕ ಸಂಸ್ಥೆ ಎಂದು ನಂಬಿಸಿ ಅದಕ್ಕಾಗಿ ಹಣ ಸಂಗ್ರಹ ಮಾಡುತ್ತಿದ್ದ ಎಂದು ತನಿಖೆಯಿಂದ ತಿಳಿದುಬಂದಿದೆ.
ಮತಾಂತರ, ಧರ್ಮದ್ವೇಷ ಹರಡುವ ದಾವತ್
ದಾವತ್ ಇ ಇಸ್ಲಾಮಿ ಮೇಲ್ನೋಟಕ್ಕೆ ಒಂದು ಧಾರ್ಮಿಕ ಚಳವಳಿಯ ಹಾಗೇ ಇದೆ. ಇದು ಪ್ರವಾದಿ ಮೊಹಮ್ಮದರ ಸಂದೇಶವನ್ನು ಜಗತ್ತಿಗೆ ಸಾರುವ ಒಂದು ಸಂಸ್ಥೆ. ಇಸ್ಲಾಮಿಕ್ ಅಧ್ಯಯನಕ್ಕಾಗಿ ಆನ್‌ಲೈನ್ ಕೋರ್ಸ್‌ಗಳನ್ನು ಹೊಂದಿದೆ. ಜತೆಗೆ ಒಂದು ಟೀವಿ ಚಾನೆಲನ್ನು ಕೂಡಾ ನಡೆಸುತ್ತಿದೆ. ಇಸ್ಲಾಂಗೆ ಹೊಸದಾಗಿ ಬರುವವರಿಗೆ ವಿಶೇಷ ತರಬೇತಿ ನೀಡುವುದು ಅದರ ಕೆಲಸ. ಅಂದರೆ, ಮತಾಂತರ ಮತ್ತು ಮೂಲಭೂತವಾದವನ್ನು ತುಂಬುವ ಕೆಲಸವನ್ನೂ ಅದು ತಣ್ಣಗೆ ಮಾಡಿಕೊಂಡು ಬರುತ್ತಿದೆ.
ರಿಯಾಜ್ ಭಾರತದಲ್ಲಿ ಹಲವರ ಮನವೊಲಿಸಿ ದಾವತ್ ಇಸ್ಲಾಮಿಗೆ ಸೇರಿಸಲು ಸಂಚು ನಡೆಸಿದ್ದ. ಈ ವಿಚಾರವನ್ನು ಉದಯಪುರದ ರಿಕ್ಷಾ ಚಾಲಕರೊಬ್ಬರು ತನಿಖಾಧಿಕಾರಿಗಳ ಮುಂದೆ ಬಾಯಿ ಬಿಟ್ಟಿದ್ದಾರೆ.
ದಾವತ್ ಸೇರಲು ಚಾಲಕನಿಗೆ ಒತ್ತಡ
ರಿಯಾಜ್ ಅಟ್ಟಾರಿ ಮತ್ತು ಮಹಮ್ಮದ್ ಗೌಸ್ ವಾಸಿಸುವ ಪ್ರದೇಶದಲ್ಲೇ ಇರುವ ರಿಕ್ಷಾ ಚಾಲಕರೊಬ್ಬರನ್ನು ದಾವತ್‌ಗೆ ಸೇರುವಂತೆ ಬಲವಂತಪಡಿಸಲಾಗಿತ್ತು. ʻʻನಾನು ಅಟ್ಟಾರಿಯನ್ನು ಒಂದು ಶಾಪ್‌ನಲ್ಲಿ ಭೇಟಿ ಮಾಡಿದ್ದೆ. ಅವನು ನನಗೆ ದಾವತ್ ಸೇರುವಂತೆ ಕೋರಿದ್ದ. ನಮಾಜ್ ಗೆ ಬನ್ನಿ, ದೇವರ ಹೆಸರಲ್ಲಿ ದಾವತ್ ಇಸ್ಲಾಮಿಗೆ ಹಣ ಸಂಗ್ರಹಿಸೋಣ ಎಂದಿದ್ದʼʼ ಎಂದು ಚಾಲಕರು ತಿಳಿಸಿದ್ದಾರೆ. ರಿಯಾಜ್ ಮತ್ತು ಗೌಸ್ ಉದಯಪುರ ಪರಿಸರದಲ್ಲಿ ಇನ್ನೂ ಹಲವು ಮಂದಿಯನ್ನು ಇದೇ ರೀತಿ ಟಾರ್ಗೆಟ್ ಮಾಡಿದ್ದರು. ಪಾಕಿಸ್ತಾನಕ್ಕೆ ಹೋಗಿ ಬರೋಣ ಎಂದು ಒತ್ತಾಯಿಸಿದ್ದರು ಎಂದು ಚಾಲಕ ಹೇಳಿದ್ದಾರೆ.
ಕೊಲೆ ಮಾಡುವಂತೆ ಕೋರಿದ್ದ
ಈ ನಡುವೆ, ಕನ್ಹಯ್ಯ ಲಾಲ್ ಅವರನ್ನು ಕೊಲೆ ಮಾಡುವಂತೆ ಉದಯಪುರದ ಇಬ್ಬರು ಹುಡುಗರಾದ ಆಸಿಫ್ ಮತ್ತು ಮೊಹ್ಸಿನ್ ಅವರನ್ನು ಕೇಳಿಕೊಂಡಿದ್ದ. ಆದರೆ, ಅವರು ನೇರವಾಗಿ ಕೊಲೆ ಮಾಡಲು ನಿರಾಕರಿಸಿದ್ದರಿಂದ ಕೊನೆಗೆ ತಾನೇ ಈ ಕೃತ್ಯ ಮಾಡಿದ್ದಾನೆ ಎಂದು ಚಾಲಕ ಹೇಳಿದ್ದಾನೆ. ಒಟ್ಟಾರೆ ಸಂಚಿನಲ್ಲಿ ಈ ಇಬ್ಬರು ಭಾಗಿಯಾಗಿದ್ದು, ಅವರಿಗೆ ೧೪ ದಿನಗಳ ಪೊಲೀಸ್ ಕಸ್ಟಡಿ ವಿಧಿಸಲಾಗಿದೆ. ಈ ನಡುವೆ, ಸಂಚಿನಲ್ಲಿ ಪಾಲ್ಗೊಂಡ ಇನ್ನೂ ಇಬ್ಬರು ಆರೋಪಿಗಳಾದ ವಾಸಿಂ ಅಟ್ಟಾರಿ ಮತ್ತು ಅಖ್ತರ್ ರಾಜಾ ಎಂಬಿಬ್ಬರು ಉದಯಪುರ ನಿವಾಸಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಇವರಿಬ್ಬರು ಕೂಡಾ ದಾವತ್ ಇಸ್ಲಾಮಿ ಸಂಘಟನೆ ಜತೆ ಸಂಬಂಧ ಹೊಂದಿದ್ದು, ತರಬೇತಿಗಾಗಿ ಪಾಕಿಸ್ತಾನಕ್ಕೂ ಹೋಗಿಬಂದಿದ್ದರು. ಇಲ್ಲಿ ದಾವತ್ ಸಂಸ್ಥೆಯನ್ನು ಬೆಳೆಸುವ ಪ್ರಯತ್ನದಲ್ಲೂ ತೊಡಗಿದ್ದರು.
ದಾವತ್ ಇ ಇಸ್ಲಾಮಿ ನಿರಾಕರಣೆ
ಈ ನಡುವೆ ಪಾಕಿಸ್ತಾನ ಕರಾಚಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ದಾವತ್ ಇ ಇಸ್ಲಾಮಿ ಸಂಘಟನೆ ಯಾವುದೇ ಭಯೋತ್ಪಾದನಾ ಕೃತ್ಯಗಳಲ್ಲಿ ಭಾಗಿಯಾಗಿರುವುದನ್ನು ನಿರಾಕರಿಸಿದೆ. ತಾನು ಕೇವಲ ಧಾರ್ಮಿಕ ಕಾರ್ಯಗಳು, ಇಸ್ಲಾಮಿಕ್ ಬೋಧನೆಗಳಲ್ಲಷ್ಟೇ ಸಕ್ರಿಯವಾಗಿರುವುದಾಗಿ ಹೇಳಿದೆ.
ಇದನ್ನೂ ಓದಿ| Rajasthan murder: ಜೈಪುರದಲ್ಲಿ ಸರಣಿ ಸ್ಫೋಟಕ್ಕೆ ಸ್ಕೆಚ್ ಹಾಕಿದ್ದ ಕನ್ಹಯ್ಯ ಲಾಲ್ ಹಂತಕರು, NIA ತನಿಖೆ ವೇಳೆ ಬಯಲು