Site icon Vistara News

Rajasthan murder: ಬಿಜೆಪಿಯೊಳಗೆ ನುಸುಳಲು ಸಂಚು ನಡೆಸಿದ್ದ ಕನ್ಹಯ್ಯ ಲಾಲ್‌ ಹಂತಕರು!

udaipur

ಜೈಪುರ: ರಾಜಸ್ಥಾನದ ಉದಯಪುರದಲ್ಲಿ ಟೇಲರ್‌ ವೃತ್ತಿಯ ಕನ್ಹಯ್ಯ ಲಾಲ್‌ ಅವರನ್ನು ಬರ್ಬರವಾಗಿ ಕೊಲೆ (Rajasthan murder) ಮಾಡಿದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಮತ್ತು ಮಹಮ್ಮದ್‌ ಗೌಸ್‌ ಎಂಬ ದುಷ್ಟರು ಬಿಜೆಪಿ ಜತೆ ಸಂಪರ್ಕ ಹೊಂದಿದ್ದರೇ ಎಂಬ ಚರ್ಚೆ ಜೋರಾಗಿದೆ. ಈ ನಡುವೆ, ಅವರಿಬ್ಬರೂ ಬಿಜೆಪಿಯೊಳಗೆ ನುಸುಳಿ ಪಕ್ಷದ ಸ್ಥಳೀಯ ನಾಯಕರನ್ನು ಕೊಲ್ಲಲು ಸಂಚು ನಡೆಸುತ್ತಿದ್ದರು ಎಂಬ ರೋಚಕ ಟ್ವಿಸ್ಟ್‌ ಸಿಕ್ಕಿದೆ.

ಬಿಜೆಪಿ ನಾಯಕಿ ನೂಪುರ್‌ ಶರ್ಮ ಅವರ ಹೇಳಿಕೆಯನ್ನು ಬೆಂಬಲಿಸಿ ಸಾಮಾಜಿಕ ಜಾಲ ತಾಣದಲ್ಲಿ ಪೋಸ್ಟ್‌ ಹಾಕಿದ್ದರೆಂಬ ಕಾರಣಕ್ಕೆ ಕನ್ಹಯ್ಯ ಲಾಲ್‌ ಅವರನ್ನು ಇಬ್ಬರು ದುಷ್ಕರ್ಮಿಗಳು ಜೂನ್‌ ೨೭ರ ಸಂಜೆ ಟೇಲರ್‌ ಶಾಪಿಗೆ ನುಗ್ಗಿ ಅತ್ಯಂತ ಬರ್ಬರವಾಗಿ ಶಿರಚ್ಛೇದ ಮಾಡಿದ್ದರು. ಇಡೀ ದೇಶವೇ ಇದನ್ನು ಒಕ್ಕೊರಲಿನಿಂದ ಖಂಡಿಸಿತ್ತು. ಈ ನಡುವೆ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ರಾಷ್ಟ್ರೀಯ ತನಿಖಾ ದಳ (ಎನ್‌ಐಎ) ದುಷ್ಕರ್ಮಿಗಳಿಗೆ ಇರುವ ಪಾಕಿಸ್ತಾನ ನಂಟು, ಅವರು ಅಲ್ಲಿ ೪೫ ದಿನಗಳ ಕಾಲ ತರಬೇತಿ ಪಡೆದಿರುವುದು, ಜೈಪುರದಲ್ಲಿ ಕಳೆದ ಮಾರ್ಚ್‌ನಲ್ಲಿ ಸ್ಫೋಟಕ್ಕೆ ನಡೆಸಿದ ಸಂಚು ಮತ್ತು ೨೦೦೮ರ ಮುಂಬಯಿ ಉಗ್ರ ದಾಳಿಯಲ್ಲೂ ಅವರ ಕೈವಾಡ.. ಹೀಗೆ ನಾನಾ ಕೋನಗಳಲ್ಲಿ ತನಿಖೆಯನ್ನು ಮಾಡುತ್ತಿದೆ.

ಬಿಜೆಪಿ ಕಾರ್ಯಕರ್ತ ಎಂದ ಕಾಂಗ್ರೆಸ್‌
ಈ ನಡುವೆ, ರಾಜಸ್ಥಾನದ ಕಾಂಗ್ರೆಸ್‌ ಪಕ್ಷದ ಮಾಧ್ಯಮ ವಿಭಾಗ ಒಂದು ಸ್ಫೋಟಕ ಆರೋಪವನ್ನು ಮಾಡಿತ್ತು. ಕನ್ಹಯ್ಯ ಲಾಲ್‌ ಹತ್ಯೆಯ ಪ್ರಧಾನ ವಿದ್ರೋಹಿ ರಿಯಾಜ್‌ ಅಟ್ಟಾರಿ ಒಬ್ಬ ಬಿಜೆಪಿ ಕಾರ್ಯಕರ್ತ ಎಂದು ಅದು ಹೇಳಿತ್ತು. ಇದಕ್ಕೆ ಪೂರಕವಾಗಿ ಅಟ್ಟಾರಿ ಸ್ಥಳೀಯ ಬಿಜೆಪಿ ನಾಯಕರೊಂದಿಗೆ ಇರುವ ಫೋಟೊವನ್ನು ಬಿಡುಗಡೆ ಮಾಡಿತ್ತು.

ಆದರೆ, ಬಿಜೆಪಿ ಇದನ್ನು ಬಲವಾಗಿ ವಿರೋಧಿಸಿತ್ತು. ಯಾರೊ ಒಬ್ಬರು ಬಿಜೆಪಿ ನಾಯಕರ ಜತೆ ಇದ್ದರೆ ಅವರು ಬಿಜೆಪಿ ಕಾರ್ಯಕರ್ತರು ಎಂದು ಹೇಳುವುದು ಸರಿಯಲ್ಲ. ಅವರು ಯಾರೋ ಬಂದು ಫೋಟೊ ತೆಗೆಸಿಕೊಂಡಿರಬಹುದು ಎಂದು ಹೇಳಿತ್ತು. ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಅಧ್ಯಕ್ಷರಾಗಿರುವ ಮೊಹಮ್ಮದ್‌ ಸಾದಿಕ್‌ ಖಾನ್‌ ಅವರು ಫೋಟೊದ ಆಧಾರದಲ್ಲಿ ಅವನು ಪಕ್ಷದ ಕಾರ್ಯಕರ್ತ ಎಂದು ಹೇಳಲಾಗದು ಎಂದಿದ್ದಾರೆ. ಕಾಂಗ್ರೆಸ್‌ ಪಕ್ಷವು ಅಶೋಕ್‌ ಗೆಹ್ಲೋಟ್‌ ಸರಕಾರದ ತಪ್ಪನ್ನು ಮುಚ್ಚಿ ಹಾಕುವುದಕ್ಕಾಗಿ ಈ ರೀತಿ ದಾರಿ ತಪ್ಪಿಸುತ್ತಿದೆ ಎಂದು ಹೇಳಿದೆ.

ಈಗ ಸಿಕ್ಕಿದೆ ಹೊಸ ಟ್ವಿಸ್ಟ್‌..
ಕನ್ಹಯ್ಯ ಲಾಲ್‌ ಹಂತಕರು ಪಕ್ಷದ ಪ್ರಮುಖರನ್ನು ಹತ್ಯೆ ಮಾಡುವ ಉದ್ದೇಶದಿಂದ ಬಿಜೆಪಿಯೊಳಗೆ ನುಸುಳಲು ಯತ್ನಿಸಿದ್ದರು ಎಂಬ ಅಂಶ ಬೆಳಕಿಗೆ ಬಂದಿದೆ.

ಲಾಲ್‌ ಹಂತಕರಲ್ಲಿ ಪ್ರಮುಖನಾದ ಮೊಹಮ್ಮದ್‌ ರಿಯಾಜ್‌ ಅಟ್ಟಾರಿ ಕೆಲವು ಬಿಜೆಪಿ ನಾಯಕರ ಜತೆ ಸಂಪರ್ಕ ಸಾಧಿಸಲು ಯತ್ನಿಸುತ್ತಿದ್ದ. ಅವನ ಉದ್ದೇಶ ಬಿಜೆಪಿಯ ಕೆಲವು ನಾಯಕರನ್ನು ಟಾರ್ಗೆಟ್‌ ಮಾಡುವುದಾಗಿತ್ತು ಎಂದು ಹೇಳಲಾಗಿದೆ. ಪ್ರಮುಖವಾಗಿ ಮುಸ್ಲಿಂ ರಾಷ್ಟ್ರೀಯ ಮಂಚದ ಕೆಲವು ಕಾರ್ಯಕರ್ತರು, ಬಿಜೆಪಿ ಅಲ್ಪಸಂಖ್ಯಾತ ಮೋರ್ಚಾದ ಸದಸ್ಯರಾಗಿರುವ ಇರ್ಷಾದ್‌ ಚೈನ್‌ ವಾಲಾ, ಬಿಜೆಪಿ ಕಾರ್ಯಕರ್ತ ತಾಹಿರ್‌ ರಾಜಾ ಖಾನ್‌ ಅವರನ್ನು ಕೊಲೆ ಮಾಡಲು ರಿಯಾಚ್‌ ಸ್ಕೆಚ್‌ ಹಾಕುತ್ತಿದ್ದ ಎನ್ನಲಾಗಿದೆ.

ಇದೇ ಕಾರಣಕ್ಕಾಗಿ ರಿಯಾಜ್‌ ಪಕ್ಷದ ಕಚೇರಿಗೆ ಭೇಟಿ ಕೊಟ್ಟಿದ್ದ. ನಾಯಕರ ಜತೆಗೆ ಸಂಬಂಧ ಬೆಳೆಸಲು ಯತ್ನಿಸಿದ್ದ ಎಂದು ಹೇಳಲಾಗಿದೆ.

Exit mobile version