ನವ ದೆಹಲಿ: ರಾಜಸ್ಥಾನದ ಉದಯಪುರದಲ್ಲಿ ನಡೆದ ಕನ್ಹಯ್ಯ ಲಾಲ್ ಎಂಬ ಹಿಂದೂ ಟೇಲರ್ ಹತ್ಯೆಗೂ 2008ರಲ್ಲಿ ಮುಂಬಯಿಯಲ್ಲಿ ಸಂಭವಿಸಿದ, ಇಡೀ ದೇಶವನ್ನೇ ಬೆಚ್ಚಿ ಬೀಳಿಸಿದ ಉಗ್ರ ದಾಳಿಗೂ ಸಂಬಂಧ ಇದೆಯಾ?
ಕನ್ಹಯ್ಯ ಲಾಲ್ ಹತ್ಯೆ ಪ್ರಕರಣದ ತನಿಖೆ ನಡೆಸುತ್ತಿರುವ ರಾಷ್ಟ್ರೀಯ ತನಿಖಾ ದಳ ಘಟನೆಯ ಎಲ್ಲ ಆಯಾಮಗಳ ಬೆನ್ನು ಹತ್ತಿದ್ದು ಈ ವೇಳೆ ಹಂತಕರಾದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಗೌಸ್ ಮೊಹಮ್ಮದ್‌ಗೂ ಮುಂಬಯಿ ದಾಳಿಗೂ (Mumbai terror) ಸಂಬಂಧ ಇರುವ ಅಂಶ ಬಯಲಾಗಿದೆ.
ದೇಶವನ್ನೇ ಬೆಚ್ಚಿ ಬೀಳಿಸಿದ ಮುಂಬಯಿ ಉಗ್ರ ದಾಳಿ ನಡೆದಿದ್ದು 2008ರ ನವೆಂಬರ್ 26ರಂದು. ಈ ದಿನ 2611 ಅಥವಾ 26/11 ಎಂದೇ ಕುಖ್ಯಾತವಾಗಿದ್ದು, ಈಗಲೂ ಈ ಸಂಖ್ಯೆಯನ್ನು ಕೇಳಿದರೆ ಮುಂಬಯಿ ನಗರ ಬೆಚ್ಚಿ ಬೀಳುತ್ತಿದೆ. ಆವತ್ತು ಸಂಜೆಯ ಹೊತ್ತು ಹಡಗಿನಲ್ಲಿ ಬಂದ ಪಾಕಿಸ್ತಾನಿ ಉಗ್ರರು ನಡೆಸಿದ ಅಟ್ಟಹಾಸಕ್ಕೆ ವಾಣಿಜ್ಯ ನಗರಿ ನಲುಗಿ ಹೋಗಿತ್ತು. ಒಂಬತ್ತು ಮಂದಿ ಉಗ್ರರು ನಗರದ ಎಲ್ಲೆಡೆ ಓಡಾಡಿ ಯರ‍್ರಾಬಿರ‍್ರಿಯಾಗಿ ಗುಂಡು ಹಾರಿಸಿದ್ದರಿಂದ 175 ಮಂದಿ ಮಂದಿ ಪ್ರಾಣ ಕಳೆದುಕೊಂಡಿದ್ದರು. ಅದರಲ್ಲೂ ಮುಖ್ಯವಾಗಿ ಹೇಮಂತ್ ಕರ್ಕರೆ, ವಿಜಯ ಸಾಲಸ್ಕರ್ ಸೇರಿದಂತೆ ಹಲವು ಪೊಲೀಸ್ ಅಧಿಕಾರಿಗಳು ಬೀದಿಯಲ್ಲಿ ಪ್ರಾಣ ಕಳೆದುಕೊಂಡಿದ್ದರು.
ಸಮುದ್ರ ಮಾರ್ಗವಾಗಿ ಬಂದ ಪಾಪಿಗಳು ಮುಂಬಯಿಯ ಹಲವು ಪ್ರದೇಶಗಳಲ್ಲಿ ಅಮಾಯಕರನ್ನು ಕೊಂದು ಹಾಕಿ ಕೊಲೆಗೆ ದೇಶದ ಪ್ರತಿಷ್ಠಿತ ತಾಜ್ ಹೋಟೆಲ್‌ನ್ನು ಸೇರಿಕೊಂಡಿದ್ದರು. ಅಲ್ಲಿ ನೂರಾರು ಪ್ರವಾಸಿಗರು ತಂಗಿದ್ದು, ಅವರೆಲ್ಲರನ್ನು ಒತ್ತೆಯಾಳಾಗಿಕೊಂಡು ಈ ದುಷ್ಟರು ರಕ್ಷಣೆ ಪಡೆದಿದ್ದರು. ಎಲ್ಲ ಪ್ರವಾಸಿಗರನ್ನು ರಕ್ಷಿಸಿ ದುಷ್ಟರನ್ನು ದಮನಿಸುವ ಅತಿ ದೊಡ್ಡ ಕಾರ್ಯಾಚರಣೆಯನ್ನು ಸೇನೆ ವಹಿಸಿಕೊಂಡಿತ್ತು. ಅದರಲ್ಲಿ ಬೆಂಗಳೂರು ಮೂಲಕ ಮೇಜರ್ ಸಂದೀಪ್ ಉಣ್ಣಿಕೃಷ್ಣನ್ ಕೂಡಾ ಇದ್ದರು. ಸಂದೀಪ್ ಅವರ ನೇತೃತ್ವದ ಟೀಮ್ ಅತ್ಯಂತ ಸಾಹಸಿಕವಾಗಿ ಹೋಟೆಲ್‌ಗೆ ನುಗ್ಗಿ ಜನರನ್ನು ರಕ್ಷಿಸುವ ಕಾರ್ಯಾಚರಣೆ ನಡೆಸುತ್ತಿತ್ತು. ಒಂದು ಹಂತದಲ್ಲಿ ಒಬ್ಬ ಯೋಧರು ಉಗ್ರರ ದಾಳಿಯಿಂದ ಗಾಯಗೊಂಡಾಗ ಅವರನ್ನು ಬೇರೆಡೆಗೆ ಸಾಗಿಸುವ ಪ್ರಯತ್ನ ನಡೆಯಿತು. ಈ ವೇಳೆ ಉಗ್ರರು ಅಡಗುದಾಣದಿಂದ ಹೊರಬಂದು ದಾಳಿ ನಡೆಸಿದ್ದರು. ಆಗ ಮಹಾ ಸಾಹಸ ತೋರಿದ ಸಂದೀಪ್ ಉಣ್ಣಿಕೃಷ್ಣನ್ ಅವರು ಗಾಯಾಳು ಸಹವರ್ತಿಯನ್ನು ಅವರ ಕೈಯಿಂದ ರಕ್ಷಿಸಿ ತಾವೇ ದುಷ್ಟರನ್ನು ಬೆನ್ನಟ್ಟಿದರು. ಈ ಸಾಹಸಿಕ ಕಾರ್ಯಾಚರಣೆ ವೇಳೆ ಅವರೇ ಮೃತಪಟ್ಟರು.
ದೇಶದ ವಾಣಿಜ್ಯ ನಗರಿಯ ಮೇಲೆ ನಡೆದ ಈ ದಾಳಿ ಭಾರಿ ಆತಂಕವನ್ನು ಸೃಷ್ಟಿಸಿತ್ತು. ಪಾಕಿಸ್ತಾನ ಮೂಲದ ಲಷ್ಕರೆ ತಯ್ಬಾ ಸಂಘಟನೆ ಈ ದಾಳಿ ನಡೆಸಿದ್ದು ಆಗಲೇ ಸ್ಪಷ್ಟವಾಗಿತ್ತು. ಒಂಬತ್ತು ಮಂದಿ ಉಗ್ರರ ಪೈಕಿ ಎಂಟು ಮಂದಿಯನ್ನು ಸಾಹಸಿಕ ಕಾರ್ಯಾಚರಣೆ ವೇಳೆ ಬಲಿ ಪಡೆಯಲಾಗಿತ್ತು. ಅಜ್ಮಲ್ ಕಸಬ್ ಎಂಬ ಒಬ್ಬ ಉಗ್ರನನ್ನು ಪೊಲೀಸರು ಜೀವಂತವಾಗಿ ಸೆರೆ ಹಿಡಿದಿದ್ದರು. ಆತನಿಗೆ ಮುಂದೆ ಬಹು ವರ್ಷದ ಬಳಿಕ ಗಲ್ಲು ಶಿಕ್ಷೆ ವಿಧಿಸಲಾಯಿತು.
ರಿಯಾಜ್ ಬೈಕ್‌ಗೆ 2611 ನಂಬರ್!
ಇಂಥಹುದೊಂದು ಬೆಚ್ಚಿಬೀಳಿಸುವ ಘಟನೆಯನ್ನು ನೆನಪಿಸುವ ನೋಂದಣಿ ಸಂಖ್ಯೆಯನ್ನು ಉದಯಪುರದ ಕನ್ಹಯ್ಯ ಲಾಲ್ ಹಂತಕರು ಬಳಸಿರುವುದು ಈಗ ಹಲವು ಗುಮಾನಿಗಳಿಗೆ ಕಾರಣವಾಗಿದೆ.
ಜೂನ್ 28ರಂದು ಸಂಜೆಯ ಹೊತ್ತಿಗೆ ಉದಯಪುರದಲ್ಲಿ ಕನ್ಹಯ್ಯ ಲಾಲ್ ಅವರ ಹತ್ಯೆ ಮಾಡಿದ ಸ್ಥಳೀಯರೇ ಆದ ಮೊಹಮ್ಮದ್ ರಿಯಾಜ್ ಅಟ್ಟಾರಿ ಮತ್ತು ಗೌಸ್ ಮೊಹಮ್ಮದ್ ಪರಾರಿಯಾಗಲು ಬಳಸಿದ ಬೈಕ್‌ನ ಸಂಖ್ಯೆ ಆರ್‌ಜೆ 27 ಎಎಸ್ 2611! ಕೊಲೆ ಮಾಡಿ ಜೈಪುರದತ್ತ ಧಾವಿಸುತ್ತಿದ್ದ ಹಂತಕರನ್ನು 130 ಕಿ.ಮೀ. ದೂರದ ಭೀಮ್ ಹೈವೇನಲ್ಲಿ ಬಂಧಿಸಲಾಗಿತ್ತು.
ಈ ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಎನ್‌ಐಎ ಅತಿಸೂಕ್ಷ್ಮ ಸಂಗತಿಗಳ ಮೇಲೂ ಸೂಕ್ಷ್ಮ ದರ್ಶಕ ಬೀರುವಂತೆ ಪರಿಶೀಲನೆ ನಡೆಸುತ್ತಿದೆ. ಈ ಹಂತದಲ್ಲಿ 2611 ನಂಬರ್ ಕಣ್ಣಿಗೆ ಬಿತ್ತು. ತಕ್ಷಣವೇ ಅದರ ಹಿನ್ನೆಲೆಗಳನ್ನು ಬೆನ್ನಟ್ಟಿದ ಎನ್‌ಐಎಗೆ ಹಲವು ಅಂಶಗಳು ಗೋಚರಿಸಿವೆ.
ಸಾಮಾನ್ಯ ಜನರು 26/11 ಎಂಬ ಸಂಖ್ಯೆಯನ್ನು ಬಳಸುವುದಕ್ಕೇ ಹಿಂದೆ ಮುಂದೆ ನೋಡುತ್ತಿರುವ ಈ ವ್ಯಕ್ತಿಗಳು ಅದನ್ನು ರಾಜಾರೋಷವಾಗಿ ಬಳಸಿದ್ದಾರೆಂದರೆ ಅವರಿಗೂ ಮುಂಬಯಿ ಉಗ್ರ ದಾಳಿಗೂ ಸಂಬಂಧ ಇರಬಹುದು ಎಂಬ ಸಂಶಯವನ್ನು ಅದು ವ್ಯಕ್ತಪಡಿಸಿದೆ. ಈ ವ್ಯಕ್ತಿಗಳು ಪಾಕಿಸ್ತಾನದ ಧಾರ್ಮಿಕ ಮೂಲಭೂತವಾಗಿ ಸಂಘಟನೆ ದವಾತ್ ಇ ಇಸ್ಲಾಮಿ ಜತೆ ಸಂಪರ್ಕ ಹೊಂದಿರುವುದು ಈಗಾಗಲೇ ಬಯಲಾಗಿದೆ. ಲಷ್ಕರೆ ತಯ್ಬಾ ಉಗ್ರ ಸಂಘಟನೆಗೂ ಇವರಿಗೂ ಲಿಂಕ್ ಇರುವ ಸಾಧ್ಯತೆ ಬಗ್ಗೆ ಪರಿಶೀಲನೆ ನಡೆಯುತ್ತಿದೆ.
5000 ರೂ. ಕೊಟ್ಟು ಖರೀದಿಸಿದ್ದರು
ದುಷ್ಕರ್ಮಿಗಳು ಈ ಸಂಖ್ಯೆಯನ್ನು ಹೇಗೆ ಪಡೆದಿದ್ದಾರೆ? ಸ್ವಾಭಾವಿಕವಾಗಿಯೇ ಸಿಕ್ಕಿದೆಯೇ ಎಂಬ ಅಂಶವನ್ನು ಪರಿಶೀಲಿಸಿದಾಗ ಆರೋಪಿಗಳು 5000 ರೂ. ಹಣ ಕೊಟ್ಟು ಈ ನಂಬರ್ ಪಡೆದಿರುವುದು ಬಯಲಾಗಿದೆ. ಅಂದರೆ, ಈ ದುಷ್ಟರು ಒಂದೋ ಮುಂಬಯಿ ದಾಳಿಯ ಸಮರ್ಥಕರಾಗಿರಬಹುದು, ಇಲ್ಲವೇ ಅದರಲ್ಲೂ ಭಾಗಿಯಾಗಿರುವ ಸಾಧ್ಯತೆ ಇದೆ ಎಂಬ ಸಂಶಯವಿದೆ. ಇದೇ ತಂಡ ಜೈಪುರದಲ್ಲಿ ಬಾಂಬ್ ಸ್ಫೋಟಕ್ಕೂ ಸಂಚು ನಡೆಸಿದ್ದು ಬಯಲಾಗಿದೆ. ಹೀಗಾಗಿ ಮುಂಬಯಿ ದಾಳಿಯ ಹಿಂದೆಯೂ ಈ ತಂಡ ಇರಬಹುದು ಎನ್ನುವ ಗುಮಾನಿ ಹೆಚ್ಚಾಗಿದೆ. ಈ ಬಗ್ಗೆ ಎನ್‌ಐಎ ತೀವ್ರ ತನಿಖೆ ನಡೆಸುತ್ತಿದೆ.