ಜೈಪುರ: ದೇಶದಲ್ಲಿ ಸಾಕ್ಷರತೆ ಪ್ರಮಾಣ ಹೆಚ್ಚಾಗುತ್ತಿದೆ, ವಿಜ್ಞಾನ, ತಂತ್ರಜ್ಞಾನ ಹೊಸ ರೂಪ ಪಡೆದುಕೊಳ್ಳುತ್ತಿವೆ, ಮೂಢನಂಬಿಕೆ ಮರೆಯಾಗುತ್ತಿದೆ. ಆದರೆ, ಇಷ್ಟೆಲ್ಲ ಬದಲಾವಣೆಯಾಗುತ್ತಿದ್ದರೂ, ಚಿಂತನೆಗಳು ಉದಾತ್ತವಾಗುತ್ತಿದ್ದರೂ ಒಂದಷ್ಟು ಜನರು ಮಾತ್ರ ಹೀನ ಮನಸ್ತಿತಿಯಿಂದ ಹೊರಬಂದಿಲ್ಲ. ಇದಕ್ಕೆ ನಿದರ್ಶನ ಎಂಬಂತೆ ರಾಜಸ್ಥಾನದಲ್ಲಿ ಮದುವೆ ದಿನವೇ ಅತ್ಯಾಚಾರ ಸಂತ್ರಸ್ತೆಯೊಬ್ಬರ “ಕನ್ಯತ್ವ ಪರೀಕ್ಷೆ” (Virginity Test) ಮಾಡಲಾಗಿದೆ.
ರಾಜಸ್ಥಾನದ ಭಿಲ್ವಾರದಲ್ಲಿ ಮದುವೆಯಾದ ದಿನವೇ ಬಲವಂತವಾಗಿ ಕನ್ಯತ್ವ ಪರೀಕ್ಷೆಯೊಂದೇ ಅಲ್ಲ, ಪರೀಕ್ಷೆಯಲ್ಲಿ 24 ವರ್ಷದ ಮಹಿಳೆಯು ವಿಫಲವಾದ ಕಾರಣ ಆಕೆಯ ಅತ್ತೆ ಸೇರಿ ಹಲವು ಸಂಬಂಧಿಕರು ಹಲ್ಲೆ ನಡೆಸಿದ್ದಾರೆ. ಇನ್ನೂ ಮುಂದುವರಿದು ಖಾಪ್ ಎಂಬ ಪಂಚಾಯಿತಿಯು ಅತ್ಯಾಚಾರ ಸಂತ್ರಸ್ತೆಯ ಕುಟುಂಬಸ್ಥರಿಗೆ 10 ಲಕ್ಷ ರೂ. ದಂಡವನ್ನೂ ವಿಧಿಸುವ ಮೂಲಕ ಅಮಾನವೀಯತೆ ಮೆರೆದಿದೆ.
“ಅತ್ಯಾಚಾರ ಸಂತ್ರಸ್ತೆಯು ಮೇ 11ರಂದು ಮದುವೆಯಾಗಿದ್ದು, ಮದುವೆಯಾದ ದಿನವೇ ಬಲವಂತವಾಗಿ ಕನ್ಯತ್ವ ಪರೀಕ್ಷೆ ನಡೆಸಲಾಗಿದೆ. ಕನ್ಯತ್ವ ಪರೀಕ್ಷೆಯಲ್ಲಿ ಮಹಿಳೆ ವಿಫಲವಾದ ಕಾರಣ ಸಂಬಂಧಿಕರು ಆಕೆಯ ಮೇಲೆ ಹಲ್ಲೆ ನಡೆಸಿದ್ದಾರೆ. ಪ್ರಕರಣವನ್ನು ಪಂಚಾಯಿತಿವರೆಗೂ ಎಳೆದು, ಅಲ್ಲಿ ಮಹಿಳೆಯ ಕುಟುಂಬಸ್ಥರಿಗೆ 10 ಲಕ್ಷ ರೂ. ದಂಡ ವಿಧಿಸಲಾಗಿದೆ” ಎಂದು ಪೊಲೀಸರು ತಿಳಿಸಿದ್ದಾರೆ.
ತಡವಾಗಿ ಪ್ರಕರಣ ಸುದ್ದಿಯಾಗಿದ್ದು, ಮಹಿಳೆಯ ಗಂಡ, ಆತನ ಸಂಬಂಧಿಕರ ವಿರುದ್ಧ ಎಫ್‌ಐಆರ್ ದಾಖಲಾಗಿದೆ. ಮದುವೆಗೂ ಮುನ್ನವೇ ಮಹಿಳೆ ಮೇಲೆ ಪಕ್ಕದ ಮನೆಯವನು ಅತ್ಯಾಚಾರ ಎಸಗಿದ್ದು, ಈ ಕುರಿತು ಸುಭಾಷ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂಬುದಾಗಿ ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ | ಮಗಳ ರೇಪ್ ಕೇಸ್ ತನಿಖೆ ಮಾಡುತ್ತಿದ್ದ ಪೊಲೀಸ್ ಅಧಿಕಾರಿಯಿಂದ ಆಕೆಯ ತಾಯಿ ಮೇಲೆ ಅತ್ಯಾಚಾರ