ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ (Rameshwaram Cafe Blast) ಬಾಂಬ್ ಸ್ಪೋಟಿಸಿದ (Blast in Bengaluru) ಪ್ರಕರಣ ಸಂಬಂಧ ಪ್ರಧಾನ ಆರೋಪಿ, ಬಾಂಬ್ ಇಟ್ಟು ತಲೆ ಮರೆಸಿಕೊಂಡು ಓಡಾಡುತ್ತಿದ್ದ ಪಾತಕಿ ಹಾಗೂ ಇದರ ಹಿಂದಿನ ಮಾಸ್ಟರ್ ಮೈಂಡ್ ಬಂಧನವಾಗಿದೆ. ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ (mussavir shazeeb hussain) ಹಾಗೂ ಬಾಂಬ್ ಇಡುವ ಪ್ಲ್ಯಾನ್ ರೂಪಿಸಿದ್ದ ಪ್ರಧಾನ ಸೂತ್ರಧಾರಿ ಅಬ್ದುಲ್ ಮತೀನ್ ತಾಹಾನನ್ನು (Abdul Mateen Taha) ರಾಷ್ಟ್ರೀಯ ತನಿಖಾ ದಳ (ಎನ್‌ಐಎ – NIA) ಬಂಧಿಸಿದೆ. ಈ ವೇಳೆ ರಾಜ್ಯದಲ್ಲಿ ನಡೆದ ಬಾಂಬ್ ಬ್ಲಾಸ್ಟ್ ಬಗ್ಗೆ ನೋಡುವುದಾದರೆ, ಮೂರು ವರ್ಷದಲ್ಲಿ ಮೂರು ಬ್ಲಾಸ್ಟ್, ಮೂರಕ್ಕೂ ಮಲೆನಾಡ ನಂಟು ಇರುವುದು ಗೊತ್ತಾಗಿದೆ.
2021ರಲ್ಲಿ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್, 2022ರಲ್ಲಿ ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್ ಹಾಗೂ 2024ರಲ್ಲಿ ನಡೆದ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್‌ಗಳಲ್ಲೂ ಮಲೆನಾಡ ಯುವಕರದ್ದೇ ಕೃತ್ಯ ಇರುವುದು ಬಯಲಾಗಿದೆ. ಈಗ ಎನ್‌ಐಎ ಲಿಸ್ಟ್‌ನಲ್ಲಿ ಮಲೆನಾಡಿನ 6 ಜನ ಶಂಕಿತ ಉಗ್ರರು ಇದ್ದಾರೆ.
ಹಿಟ್ ಲಿಸ್ಟ್ ನಂಬರ್ 1
ಅಬ್ದುಲ್ ಮತೀನ್ ತಾಹಾ (ಬಂಧಿತ ಆರೋಪಿ) ಈತ ಒಬ್ಬ ಹ್ಯಾಂಡ್ಲರ್..! ಸುಮಾರು ನಾಲ್ಕು ವರ್ಷಗಳಿಂದ ತಲೆಮರೆಸಿಕೊಂಡಿದ್ದು ವಿದೇಶದಲ್ಲಿರುವ ಮಾಹಿತಿ ಎನ್.ಐ.ಎಗೆ ಲಭ್ಯವಾಗಿತ್ತು. ಆದರೆ, ಈತ ದೇಶಕ್ಕೆ ಬಂದು ಸ್ಫೋಟದ ರೂವಾರಿಯಾಗಿದ್ದಾನೆ. ಸದ್ಯ ಈತನ ಬಂಧನವಾಗಿದ್ದು, ಎಲ್ಲ ಆಯಾಮದಲ್ಲೂ ಎನ್ ಐ ಎ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಮಂಗಳೂರು ಹಾಗೂ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನ ಹ್ಯಾಂಡ್ಲರ್ ಇದೇ ಮತೀನ್ ಆಗಿದ್ದಾನೆ.
ಹಿಟ್ ಲಿಸ್ಟ್ ನಂಬರ್ 2
ಅರಾಫತ್ ಅಲಿ. ಈತನನ್ನು ದೆಹಲಿಯಲ್ಲಿ ಬಂಧನ ಮಾಡಲಾಗಿತ್ತು. ಅರಾಫತ್ ಅಲಿ ಮೂಲತಃ ತೀರ್ಥಹಳ್ಳಿಯವನು ಪ್ರಕರಣದಲ್ಲಿ ಭಾಗಿಯಾಗಿ ಕೀನ್ಯಾದಿಂದ ಬರುವಾಗ ದೆಹಲಿ ಏರ್‌ಪೋರ್ಟ್‌ನಲ್ಲಿ ಬಂಧನವಾಗಿದ್ದ. ಈತ ಮಾಜ್ ಹಾಗೂ ಶಾರಿಕ್‌ಗೆ ಹ್ಯಾಂಡ್ಲರ್ ಆಗಿ ಕೆಲಸ ಮಾಡುತ್ತಲಿದ್ದ.
ಹಿಟ್ ಲಿಸ್ಟ್ ನಂಬರ್ 3
ಮಂಗಳೂರಿನ ಕುಕ್ಕರ್ ಬ್ಲಾಸ್ಟ್ ಶಾರಿಕ್ ಇನ್ನೊಬ್ಬ ಶಂಕಿತ ಉಗ್ರ. ಈತ ಮಂಗಳೂರಿನಲ್ಲಿ ಬಂಧನವಾಗಿದ್ದಾನೆ. ಮಂಗಳೂರು ಕುಕ್ಕರ್ ಬಾಂಬ್ ಬ್ಲಾಸ್ಟ್‌ನ ರೂವಾರಿಯಾಗಿದ್ದ ಶಾರಿಕ್, ಕದ್ರಿ ದೇವಾಲಯದಲ್ಲಿ ಕುಕ್ಕರ್ ಬ್ಲಾಸ್ಟ್ ಮಾಡಲು ಹೋಗುತ್ತಿದ್ದ. ಆದರೆ, ಆಟೋದಲ್ಲಿಯೇ ಬಾಂಬ್ ಸ್ಫೋಟಗೊಂಡಿತ್ತು. ಇದು ಮಾತ್ರವಲ್ಲದೆ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನಲ್ಲೂ ಶಾರಿಕ್ ಪಾತ್ರವಿತ್ತು ಎಂದು ಎನ್‌ಐಎ ತನಿಖೆ ವೇಳೆ ತಿಳಿದುಬಂದಿದೆ.
ಹಿಟ್ ಲಿಸ್ಟ್ ನಂಬರ್ 4
ಶಾರಿಕ್ ಜತೆ ಮಂಗಳೂರು ಗೋಡೆ ಬರಹ ಪ್ರಕರಣದ ಆರೋಪಿಯಾಗಿರುವ ಮಾಜ್ ಮುನೀರ್ ಸಹ ಹಿಟ್ ಲಿಸ್ಟ್‌ನಲ್ಲಿದ್ದಾನೆ. ಈತ ಶಿವಮೊಗ್ಗ ಟ್ರಯಲ್ ಬ್ಲಾಸ್ಟ್‌ನಲ್ಲಿಯೂ ಭಾಗಿಯಾಗಿದ್ದ. ಅರಾಫತ್ ಅಲಿ ಮಾಜ್‌ನ ಹ್ಯಾಂಡ್ಲರ್ ಆಗಿದ್ದ.
ಹಿಟ್ ಲಿಸ್ಟ್ ನಂಬರ್ 5
ಶಿವಮೊಗ್ಗದಲ್ಲಿ ನಡೆದಿದ್ದ ಟ್ರಯಲ್ ಬ್ಲಾಸ್ಟ್‌ನಲ್ಲಿ ಎನ್ಐಎನಿಂದ ಬಂಧನವಾಗಿರುವ ಸೈಯದ್ ಯಾಸಿನ್ ಮತ್ತೊಬ್ಬ ಪ್ರಮುಖ ಶಂಕಿತ ಉಗ್ರ. ಟ್ರಯಲ್ ಬ್ಲಾಸ್ಟ್ ಆದ ಬಳಿಕ ಎನ್ ಐ ಎ ಗೆ ಮೊದಲು ಸಿಕ್ಕಿಬಿದ್ದಿರುವ ಆರೋಪಿ ಈತ. ಈತನಿಗೆ ಅಬ್ದುಲ್ ಮತೀನ್ ತಾಹಾ ಹ್ಯಾಂಡ್ಲರ್ ಆಗಿದ್ದ.
ಹಿಟ್ ಲಿಸ್ಟ್ ನಂಬರ್ 6
ಇನ್ನೊಬ್ಬ ಮುಸಾಬಿರ್ ಹುಸೇನ್ ಶಾಜಿಬ್ ಬಂಧಿತ ಆರೋಪಿಯಾಗಿದ್ದಾನೆ. 2020ರ ಅಲ್ ಇದ್ ಮಾಡಲ್ ಕೇಸ್‌ನ ಆರೋಪಿಯಾಗಿದ್ದು, ಗುರಪ್ಪನಪಾಳ್ಯದಲ್ಲಿ ದಾಖಲಾಗಿದ್ದ ಕೇಸಲ್ಲಿ A17 ಆರೋಪಿಯಾಗಿದ್ದಾನೆ. ತಮಿಳುನಾಡು ಪೊಲೀಸರ ದಾಳಿ ವೇಳೆ ಮುಸಾಬಿರ್ ಹುಸೇನ್ ಹಾಗೂ ಅಬ್ದುಲ್ ಮತೀನ್ ತಾಹಾ ನಾಪತ್ತೆಯಾಗಿದ್ದರು. ಗುರಪ್ಪನಪಾಳ್ಯದಲ್ಲಿ ಮನೆ ಮಾಡಿಕೊಂಡು ವಿದ್ವಂಸಕ ಕೃತ್ಯಗಳಿಗೆ ಪ್ಲಾನ್ ಮಾಡಿದ್ದರು. ಸದ್ಯ ಈತನೇ ಈಗ ರಾಮೇಶ್ವರಂ ಕೆಫೆ ಬ್ಲಾಸ್ಟ್ ನ ರೂವಾರಿಯಾಗಿದ್ದಾನೆ.
ಇದನ್ನೂ ಓದಿ: Rameshwaram Cafe Blast: ನಕಲಿ ಐಡಿ ಸೃಷ್ಟಿಸಿ ಕೋಲ್ಕತ್ತಾದಲ್ಲಿ ಅಡಗಿದ್ದ ಬಾಂಬರ್‌ಗಳನ್ನು ಸೆರೆ ಹಿಡಿದಿದ್ದೇ ರೋಚಕ!
ಒಟ್ಟು 6 ಆರೋಪಿಗಳಲ್ಲಿ ಸೈಯದ್ ಯಾಸಿನ್ ಶಿವಮೊಗ್ಗ ನಗರದವನು. ಈತನನ್ನು ಹೊತರುಪಡಿಸಿದರೆ ಇನ್ನುಳಿದ ಐವರು ತೀರ್ಥಹಳ್ಳಿ ಮೂಲದವರಾಗಿದ್ದಾರೆ.
ಟ್ರಾನ್ಸಿಸ್ಟ್ ವಾರೆಂಟ್ ಅನುಮತಿ ಕೇಳಿರುವ ಎನ್‌ಐಎ
ಬಂಧಿತ ಶಂಕಿತ ಉಗ್ರರಿಬ್ಬರಾದ ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಅಬ್ದುಲ್ ಮತೀನ್ ತಾಹಾನನ್ನು ವಶಕ್ಕೆ ತೆಗೆದುಕೊಳ್ಳುವ ಸಂಬಂಧ ಎನ್‌ಐಎ ತಂಡವು, ಮೂರು ದಿನಗಳ ಟ್ರಾನ್ಸಿಸ್ಟ್ ವಾರೆಂಟ್ ಅನುಮತಿಯನ್ನು ಕೇಳಿದೆ. ಪಶ್ವಿಮ ಬಂಗಾಳ ಕೋರ್ಟ್‌ನಲ್ಲಿ ಇನ್ನೂ ವಿಚಾರಣಾ ಪ್ರಕ್ರಿಯೆ ನಡೆಯುತ್ತಿದೆ. ಕೋರ್ಟ್ ಮೂರು ದಿನಗಳ ಟ್ರಾನ್ಸಿಸ್ಟ್ ವಾರಂಟ್ ನೀಡುತ್ತಿದ್ದಂತೆ ಎನ್‌ಐಎ ಅಧಿಕಾರಿಗಳು ಶಂಕಿತ ಉಗ್ರರನ್ನು ಇಂದು ತಡರಾತ್ರಿ ಅಥವಾ ನಾಳೆ (ಶನಿವಾರ – ಏಪ್ರಿಲ್ 13) ಬೆಳಗಿನ ಜಾವ ಉಗ್ರರನ್ನು ಕರೆತರುವ ಸಾಧ್ಯತೆ ಇದೆ.
ಯಾರು ಈ ಅಬ್ದುಲ್ ಮತೀನ್ ತಾಹ?
ಅಬ್ದುಲ್ ಮತೀನ್ ತಾಹ ಅಲ್ ಹಿಂದ್ ಸಂಘಟನೆಯ ಪ್ರಮುಖ ಸದಸ್ಯನಾಗಿದ್ದಾನೆ. ಮೂಲತಃ ಶಿವಮೊಗ್ಗ ಜಿಲ್ಲೆ ತೀರ್ಥಹಳ್ಳಿ ಸೊಪ್ಪುಗುಡ್ಡೆ ನಿವಾಸಿಯಾಗಿರುವ ಈತ 2020ರಿಂದ ನಾಪತ್ತೆ ಆಗಿದ್ದಾನೆ. ಕಳೆದ ಐದು ವರ್ಷಗಳಿಂದ ಉಗ್ರ ಚಟುವಟಿಕೆಯಲ್ಲಿ ಭಾಗಿಯಾಗಿದ್ದಾನೆ. ಆರಂಭದಲ್ಲಿ ಬ್ರಾಡ್‌ಬ್ಯಾಂಡ್ ಕಂಪನಿಯಲ್ಲಿ ಕೆಲಸ ಮಾಡಿಕೊಂಡಿದ್ದ ಈತ, ನಂತರ ಫುಟ್‌ಪಾತ್‌ನಲ್ಲಿ ಬಟ್ಟೆ ವ್ಯಾಪಾರ ಮಾಡಿಕೊಂಡಿದ್ದ.
ಡಾರ್ಕ್‌ವೆಬ್ ಬಳಕೆಯಲ್ಲಿ ಅಬ್ದುಲ್ ಎಕ್ಸ್‌ಪರ್ಟ್!
ಅಬ್ದುಲ್ ಮತೀನ್ ತಾಹ ಡಾರ್ಕ್‌ವೆಬ್ ಬಳಕೆ ಮಾಡುವುದರಲ್ಲಿ ಸಾಕಷ್ಟು ಪರಿಣಿತಿಯನ್ನು ಹೊಂದಿದ್ದ. ಆದರೆ, ಹೊರ ಜಗತ್ತಿಗೆ ಬಂದರೆ ತನಗೆ ಇದ್ಯಾವುದರ ಅರಿವೇ ಇಲ್ಲದಂತೆ ಇರುತ್ತಿದ್ದ. ಇದರ ಜತೆಗೆ ಕುಕ್ಕರ್ ಬಾಂಬ್ ತಯಾರಿಕೆ ಮಾಡುವುದರಲ್ಲೂ ನಿಪುಣನಾಗಿದ್ದ. ಮ್ಯಾಚ್‌ಸ್ಟಿಕ್‌ನಲ್ಲಿರುವ ಫಾಸ್ಪರಸ್ ಬಳಸಿ ಕುಕ್ಕರ್ ಬಾಂಬ್ ಅನ್ನು ಈತ ತಯಾರಿಸುತ್ತಿದ್ದ. ಈ ಟೆಕ್ನಿಕ್ ಅನ್ನೇ ಈಗ ಶಾಹೀರ್‌ಗೆ ಹೇಳಿಕೊಟ್ಟಿದ್ದ. ಸ್ಯಾಟ್‌ಲೈಟ್ ಫೋನ್ ಮೂಲಕ ಸೇರಿದಂತೆ ಇನ್ನಿತರ ಮಾರ್ಗವಾಗಿ ಶಾಹೀರ್‌ಗೆ ಕುಕ್ಕರ್ ಬಾಂಬ್ ತಯಾರು ಮಾಡುವುದು ಹೇಗೆ ಎಂದು ಹೇಳಿಕೊಟ್ಟಿದ್ದ. ಇವನ ಅಣತಿಯಂತೆ ಶಾಹೀರ್ ಕುಕ್ಕರ್ ಬಾಂಬ್ ಹಿಡಿದು ಮಂಗಳೂರಿನಲ್ಲಿ ಸ್ಫೋಟ ಮಾಡುವ ಸಂಚು ರೂಪಿಸಿದ್ದ. ಆದರೆ, ಅವರ ಪ್ಲ್ಯಾನ್ ಕೈಕೊಟ್ಟು, ಶಾಹೀರ್ ಆಟೋದಲ್ಲಿದ್ದಾಗಲೇ ಕುಕ್ಕರ್ ಬಾಂಬ್ ಬ್ಲಾಸ್ಟ್ ಆಗಿತ್ತು. ಆಗಲೂ ಮೊದಲು ಕೇಳಿಬಂದಿದ್ದೇ ಈ ಅಬ್ದುಲ್ ಮತೀನ್ ತಾಹ ಹೆಸರು!
ಇದಲ್ಲದೆ, ಅಲ್ ಹಿಂದ್ ಸಂಘಟನೆ ಸದಸ್ಯರಿಗೆ ಅಡಗುದಾಣ ಕಲ್ಪಿಸುವ ಜವಾಬ್ದಾರಿ ಅಬ್ದುಲ್ ಮತೀನ್ ತಾಹನದ್ದಾಗಿತ್ತು. ಈತನ ಬಗ್ಗೆ ಮಾಹಿತಿ ನೀಡಿದವರಿಗೆ 5 ಲಕ್ಷ ರೂಪಾಯಿ ಬಹುಮಾನ ನೀಡುವುದಾಗಿ ಎನ್‌ಐಎ ಘೋಷಣೆಯನ್ನೂ ಮಾಡಿತ್ತು. ಇದೀಗ ರಾಮೇಶ್ವರಂ ಕೆಫೆ ಬಾಂಬ್ ಬ್ಲಾಸ್ಟ್ ಮಾಡಿದ ಆರೋಪಿಯನ್ನು ಸೆರೆ ಹಿಡಿಯುವಾಗ ಈತನೂ ಸಹ ಸಿಕ್ಕಿಬಿದ್ದಿದ್ದಾನೆ.
ಹೇಗಿತ್ತು ಎನ್‌ಐಎ ಕಾರ್ಯಾಚರಣೆ?
ಈ ಇಬ್ಬರು ಬೆಂಗಳೂರಿನಲ್ಲಿ ಸ್ಫೋಟದ ಬಳಿಕ ಬೇರೆ ಬೇರೆ ಮಾರ್ಗವಾಗಿ ಅಸ್ಸಾಂ ಹಾಗೂ ಪಶ್ಚಿಮ ಬಂಗಾಳ ಕಡೆ ಹೋಗಿ ತಲೆಮರೆಸಿಕೊಂಡಿದ್ದರು. ಪಶ್ಚಿಮ ಬಂಗಾಳದ ಕೋಲ್ಕತ್ತಾದಲ್ಲಿ ಮನೆಯೊಂದರಲ್ಲಿ ಇವರು ವಾಸವಿದ್ದಾರೆ ಎಂಬ ಖಚಿತ ಮಾಹಿತಿಯನ್ನು ಅಲ್ಲಿನ ಸ್ಥಳೀಯ ಪೊಲೀಸರು ನೀಡಿದ್ದಾರೆ. ಈ ಮಾಹಿತಿಯನ್ವಯ ಎನ್‌ಐಎ ತಂಡ ದಾಳಿ ನಡೆಸಿದ್ದು, ಬಾಂಬರ್ ಸಹಿತ ಸ್ಫೋಟದ ಮಾಸ್ಟರ್ ಮೈಂಡ್ ಅನ್ನು ಸಹ ಬಂಧಿಸಿದೆ.
ನಕಲಿ ದಾಖಲೆ ಸೃಷ್ಟಿಸಿಕೊಂಡಿದ್ದರು!
ಪಾತಕಿ ಮುಸಾವೀರ್ ಶಾಜೀಬ್ ಹುಸೇನ್ ಹಾಗೂ ಅಬ್ದುಲ್ ಮತೀನ್ ತಾಹಾ ನಕಲಿ ದಾಖಲೆಗಳನ್ನು ಸೃಷ್ಟಿಸಿಕೊಂಡು ತಲೆಮರೆಸಿಕೊಂಡು ಓಡಾಡುತ್ತಿದ್ದರು ಎಂದು ತಿಳಿದು ಬಂದಿದೆ. ಕರ್ನಾಟಕ, ಪಶ್ಚಿಮ ಬಂಗಾಳ, ಕೇರಳ, ತೆಲಂಗಾಣ ಪ್ರದೇಶಗಳಲ್ಲಿ ಜಾಲಾಡಿದ್ದ ಎನ್‌ಐಎ, ಸ್ಥಳೀಯ ಪೊಲೀಸರ ನೆರವನ್ನು ಪಡೆದುಕೊಂಡಿತ್ತು. ಇವರ ಫೋಟೊಗಳನ್ನು ಹಂಚಿಕೊಂಡು ಎಲ್ಲ ಕಡೆ ಶೋಧ ಕಾರ್ಯ ನಡೆಸಲಾಗಿತ್ತು. ಕೊನೆಗೆ ಕೋಲ್ಕತ್ತದಲ್ಲಿ ಮನೆಯೊಂದರಲ್ಲಿ ಅಡಗಿ ಕುಳಿತಿದ್ದರು ಎಂಬ ಮಾಹಿತಿ ಸ್ಥಳೀಯ ಪೊಲೀಸರಿಗೆ ಲಭ್ಯವಾಗಿದೆ. ಅವರಿಂದ ಮಾಹಿತಿ ಪಡೆದ ಎನ್‌ಐಎ ಅಧಿಕಾರಿಗಳು ಬೆಳಗಿನ ದಾಳಿ ನಡೆಸಿ ಬಂಧಿಸಿದ್ದಾರೆ.
ಬಾಂಬ್ ಇಟ್ಟಿದ್ದ ಪಾತಕಿ ಉಗ್ರ ಮುಸಾವೀರ್ ಶಾಜೀಬ್ ಹುಸೇನ್‌ನನ್ನು ಈಗ ಕೋಲ್ಕತ್ತಾದಲ್ಲಿ ಬಂಧಿಸಲಾಗಿದೆ. ಬಾಂಬ್ ಇಟ್ಟಿದ್ದ ಉಗ್ರನ ಬೆನ್ನು ಹತ್ತಿ ತಮಿಳುನಾಡು, ಒಡಿಶಾ, ಅಸ್ಸಾಂ, ಪಶ್ಚಿಮ ಬಂಗಾಳ ಮುಂತಾದ ರಾಜ್ಯಗಳಲ್ಲಿ ಓಡಾಡಿದ್ದ ಎನ್‌ಐಎ, ಅವರ ಇರುವಿಕೆಯ ಸ್ಥಳಗಳನ್ನು ಪತ್ತೆ ಹಚ್ಚಿ ಹೋಗುವುದರೊಳಗೆ ಅವರು ಅಲ್ಲಿಂದ ಎಸ್ಕೇಪ್ ಆಗಿ ಬಿಡುತ್ತಿದ್ದರು. ಆದರೆ, ಇದಕ್ಕೂ ಮೊದಲೇ ಬಂಧಿಸಲಾಗಿದ್ದ ಶಾಜೀನ್ ಹುಸೇನ್‌ನಿಂದ ಕೆಲವೊಂದಿಷ್ಟು ಮಾಹಿತಿಯನ್ನು ಕಲೆ ಹಾಕಲಾಗಿತ್ತು. ಅದು ಸಹ ಕಾರ್ಯಾಚರಣೆಗೆ ಸಹಾಯಕ್ಕೆ ಬಂದಿದೆ ಎನ್ನಲಾಗಿದೆ.
ಚುರುಕಾಗಿ ಪತ್ತೆ ಹಚ್ಚಿದ್ದ NIA
“ಮುಸಾವೀರ್ ಹುಸೇನ್ ಶಾಜಿಬ್‌ನೇ (Mussavir Hussain Shazib) ರಾಮೇಶ್ವರಂ ಕೆಫೆಯಲ್ಲಿ ಸುಧಾರಿತ ಸ್ಫೋಟಕ ಸಾಧನ (IED) ಸ್ಫೋಟಿಸಿದ್ದು” ಎಂಬುದಾಗಿ ಎನ್‌ಐಎ ಪ್ರಕಟಣೆ ತಿಳಿಸಿತ್ತು. “ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯವನಾದ ಮುಸಾವೀರ್ ಹುಸೇನ್ ಶಾಜಿಬ್ ಬಾಂಬಿಟ್ಟವನು ಎಂದು ತನಿಖೆಯಿಂದ ಗೊತ್ತಾಗಿದೆ. ಅಬ್ದುಲ್ ಮಥೀನ್ ತಾಹಾ ಎಂಬುವವನು ಕೂಡ ಪ್ರಕರಣದಲ್ಲಿ ಪ್ರಮುಖ ಪಿತೂರಿದಾರನಾಗಿದ್ದಾನೆ. ಮುಜಾಮಿಲ್ ಷರೀಫ್‌ನು ಬಾಂಬ್ ತಯಾರಿಸಲು ಇವರಿಗೆ ಹಲವು ವಸ್ತುಗಳನ್ನು ಪೂರೈಕೆ ಮಾಡಿದ್ದಾನೆ ಎಂಬುದು ತನಿಖೆಯ ವೇಳೆ ಬಹಿರಂಗವಾಗಿದೆ. ಮುಜಾಮಿಲ್ ಷರೀಫ್‌ನನ್ನು ಪೊಲೀಸ್ ಕಸ್ಟಡಿಯಲ್ಲಿ ವಿಚಾರಣೆ ಮಾಡಲಾಗುತ್ತಿದೆ” ಎಂದು ಎನ್‌ಐಎ ಪ್ರಕಟಣೆ ತಿಳಿಸಿತ್ತು.
ಮಾರ್ಚ್ 1ರಂದು ಬೆಂಗಳೂರಿನ ವೈಟ್‌ಫೀಲ್ಡ್‌ನ ಬ್ರೂಕ್‌ಫೀಲ್ಡ್‌ನ ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟ ಸಂಭವಿಸಿತ್ತು. ಘಟನೆಯಲ್ಲಿ ಒಂಬತ್ತು ಜನರು ಗಾಯಗೊಂಡಿದ್ದರು. ಮತ್ತೊಂದೆಡೆ, ರಾಮೇಶ್ವರಂ ಕೆಫೆಯಲ್ಲಿ ಬಾಂಬ್ ಸ್ಫೋಟಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತೀರ್ಥಹಳ್ಳಿಯ ಮೊಬೈಲ್ ಅಂಗಡಿಯೊಂದಕ್ಕೆ ಕೆಲ ದಿನಗಳ ಹಿಂದೆ ಭೇಟಿ ನೀಡಿದ್ದ ಎನ್‌ಐಎ ಅಧಿಕಾರಿಗಳು, ಹಿಂದು ಕಾರ್ಯಕರ್ತ ಸೇರಿ ಇಬ್ಬರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು.
ಇದನ್ನೂ ಓದಿ: ರಾಮೇಶ್ವರಂ ಕೆಫೆಯಲ್ಲಿ ಬಾಂಬಿಟ್ಟವನಿಗೆ ವಿದೇಶದಿಂದ ಹಣ, ಸ್ಫೋಟಕ ಮಾಹಿತಿ ಬಯಲು!
ಸುದ್ಗುಂಟೆಪಾಳ್ಯದ ಗುರಪ್ಪನಪಾಳ್ಯದಲ್ಲಿ ಉಗ್ರ ಮುಜಾವೀರ್ ಹುಸೇನ್ ನೆಲಸಿದ್ದ. ಎನ್‌ಐಎ ದಾಳಿ ನಡೆಸಿದಾಗ 10ಕ್ಕೂ ಹೆಚ್ಚು ಜೀವಂತ ಗುಂಡುಗಳು, ಒಂದು ಗನ್, ಡಿಟೋನೇಟರ್ ಹಾಗೂ ಕಚ್ಚಾ ಬಾಂಬ್ ತಯಾರಿಕೆಗೆ ಬೇಕಾದ ವಸ್ತುಗಳನ್ನು ಸೀಜ್ ಮಾಡಲಾಗಿತ್ತು. 2020ರಂದು ಎನ್‌ಐಎ ದಾಳಿ ನಡೆಸಿತ್ತು. ಅಂದಿನಿಂದ ಮುಜಾವಿರ್ ಹುಸೇನ್ ತಲೆಮರೆಸಿಕೊಂಡಿದ್ದ. ಈತನಿಗೆ ಸಹಾಯ ಮಾಡಿರುವ ಹಿನ್ನೆಲೆಯಲ್ಲಿ ಮುಜಾಮಿಲ್ ಶರೀಫ್‌ನನ್ನು ಬಂಧನ ಮಾಡಲಾಗಿತ್ತು.
ಮುಜಾಮಿಲ್ ಶರೀಫ್ ಇದ್ದ ನಿವಾಸದ ಮೇಲೆ ದಾಳಿ ನಡೆಸಿ ಡಿಜಿಟಲ್ ಡಿವೈಸ್, ನಗದನ್ನು ವಶಕ್ಕೆ ಪಡೆಯಲಾಗಿತ್ತು. ಈತ ಭಯೋತ್ಪಾದಕ ಚಟುವಟಿಕೆಯಲ್ಲಿ ತೊಡಗಿದ್ದ ಮೋಸ್ಟ್ ವಾಂಟೆಡ್ ಅಬ್ದುಲ್ ಮತೀನ್ ಜತೆಗೆ ನಿರಂತರ ಸಂಪರ್ಕದಲ್ಲಿದ್ದ. ಅಬ್ದುಲ್ ಮತೀನ್ ನೇರವಾಗಿ ಹೊರದೇಶದ ಹ್ಯಾಂಡ್ಲರ್‌ಗಳ ಜತೆಗೆ ಸಂಪರ್ಕವನ್ನು ಹೊಂದಿದ್ದ. ಅಲ್ಲದೆ, ಶಾರೀಖ್, ಮಾಜ್ ಮುನೀರ್ ಅಹಮದ್ ಮತ್ತು ಸೈಯದ್ ಯಾಸಿನ್ ಜತೆಗೂ ಈತ ಸಂಪರ್ಕ ಸಾಧಿಸಿದ್ದ ಎಂದು ತಿಳಿದುಬಂದಿದೆ.